ನೋಟಾ ನೋಡ್ತೇವೆ...
ಎರಡು ದಿನಗಳ ಕಾಲ ರಾಜ್ಯದ 18 ರಿಂದ 19 ವರ್ಷ ವಯೋವಾನದ ವಿದ್ಯಾರ್ಥಿಗಳು ಮೊದಲ ಮತ...
ಎರಡು ದಿನಗಳ ಕಾಲ ರಾಜ್ಯದ 18 ರಿಂದ 19 ವರ್ಷ ವಯೋವಾನದ ವಿದ್ಯಾರ್ಥಿಗಳು ಮೊದಲ ಮತದಾನವನ್ನು ಖುಷಿಯಿಂದ, ಜಾಗ್ರತೆಯಿಂದ ಚಲಾಯಿಸುತ್ತೇವೆ ಎಂದಿದ್ದಾರೆ.
ಪ್ರಥಮ ಬಾರಿಗೆ ಮತದಾನ ಮಾಡುತ್ತಿರುವುದು ಹೆಚ್ಚಿನ ಸಂತಸ ತಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಪವಿತ್ರವಾದ ಸ್ಥಾನವಿದೆ. ದೇಶವನ್ನು ಸಮರ್ಥವಾಗಿ ಮುನ್ನಡೆಸುವ, ನಿರುದ್ಯೋಗ, ರೈತರಿಗೆ ನೆಮ್ಮದಿಯ ಬದುಕನ್ನು ಕಲ್ಪಿಸುವವರಿಗೆ ಮತ ಹಾಕುತ್ತೇನೆ.
-ಮಂಜುನಾಥ ಅಚ್ಚಳ್ಳಿ, ಬೆಟಗೇರಿ
ನನಗೂ ಮತದಾನಕ್ಕೆ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ. ಯುವಕರಿಂದಲೇ ದೇಶ ಎನ್ನುವ ಭಾವನೆ ಎಲ್ಲರಲ್ಲಿಯೂ ಇದೆ. ಆದರೆ ಯುವ ಶಕ್ತಿಯನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುವತ್ತ ಎಲ್ಲ ಪಕ್ಷಗಳು ಗಮನ ನೀಡಬೇಕು. ಅಂಥವರಿಗೆ ಮತ ಹಾಕುತ್ತೇನೆ.
- ಇಲಿಯಾಸ್ ಹುಬ್ಬಳ್ಳಿ, ಗದಗ
ಮತ ಚಲಾಯಿಸಬೇಕೆಂಬ ಬಹಳ ದಿನಗಳ ಹಂಬಲ ಈಗ ಈಡೇರುತ್ತಿದೆ. ಎಲೆಕ್ಟ್ರಾನಿಕ್ ಯಂತ್ರದ ಮೂಲಕ ಮತದಾನ ಮಾಡುವುದು ಒಂದು ರೀತಿಯಲ್ಲಿ ಖುಷಿ. ನಾನು ಈ ದೇಶದ ಪ್ರಜೆ ಎಂಬುದನ್ನು ಹೇಳಿಕೊಳ್ಳಲು ಸಿಕ್ಕಿರುವ ಅವಕಾಶವನ್ನು ಬಳಸಿಕೊಳ್ಳುತ್ತೇನೆ.
- ಶ್ರೀಧರ್, ಕೋಲಕಾರನದೊಡ್ಡಿ, ಮಂಡ್ಯ ತಾ.
ಚುನಾವಣಾ ಆಯೋಗ ಯುವ ಜನಾಂಗಕ್ಕೆ ಮತದಾನದ ಹಕ್ಕು ನೀಡಿರುವುದು ನಿಜಕ್ಕೂ ಪ್ರಶಂಸನೀಯ. ಭವ್ಯ ಭಾರತದ ಭವಿಷ್ಯದ ದೃಷ್ಟಿಯಿಂದ ಭ್ರಷ್ಟಾಚಾರ ತೊಲಗಿಸಿ ಪ್ರಜಾ ಪರವಾದ ಸುಸ್ಥಿರ, ಜನೋಪಯೋಗಿ ಸರ್ಕಾರ ಸ್ಥಾಪನೆ ಮಾಡುವ ಪಕ್ಷಕ್ಕೆ ನನ್ನ ಬೆಂಬಲ ಇರುತ್ತದೆ.
- ಎಂ.ಪಿ. ಗಾಯಿತ್ರಿ, ನೆಹರು ನಗರ, ಮಂಡ್ಯ
ಮೊದಲ ಬಾರಿ ಮತದಾನ ಚಲಾಯಿಸುವ ಹಕ್ಕು ಬಂದಿರುವುದು ಅತ್ಯಂತ ಖುಷಿಯಾಗಿದೆ. ದೇಶದ ಪ್ರಧಾನಿ ಆಯ್ಕೆಯಲ್ಲಿ ನನ್ನದೂ ಪಾತ್ರವಿರುವುದು ಜವಾಬ್ದಾರಿ ಹೆಚ್ಚಿಸಿದೆ. ಏನೇ ಆದರೂ ಬದಲಾವಣೆಯತ್ತ ನನ್ನ ಚಿತ್ತ.
- ದಿನೇಶ ಬಟಕುರ್ಕಿ, ಬಾಗಲಕೋಟೆ
ಭಾರತದಲ್ಲಿಂದು ಹಿಂದೂಗಳ ಪರಿಸ್ಥಿತಿ ಅತ್ಯಂತ ಭೀಕರವಾಗಿದೆ. ಗಡಿಯಲ್ಲಿ ಸೈನಿಕರ ಕತ್ತು ಕೊಯ್ಯಲಾಗುತ್ತಿದೆ. ಹಿಂದೂಗಳ ಮಾನ ಕಾಪಾಡುವವರಿಗೆ ಮತ ಹಾಕುತ್ತೇನೆ. ಪ್ರಥಮ ಬಾರಿಗೆ ಮತದಾನ ಹಾಕುವ ಅವಕಾಶ ಕುತೂಹಲತೆ ಉಂಟು ಮಾಡಿದೆ.
- ಬಾಲನಗೌಡ ಪಾಟೀಲ್, ಬಾಗಲಕೋಟೆ
ದೇಶದ ಹಿತದೃಷ್ಟಿಯಿಂದ ಮತದಾನ ಮಾಡುವುದು ಅತ್ಯವಶ್ಯಕ. ಯುವಕ-ಯುವತಿಯರಿಗೆ ಶಿಕ್ಷಣ ಮತ್ತು ಉದ್ಯೋಗವನ್ನು ಕಲ್ಪಿಸುವ ಸರ್ಕಾರ ಬರಬೇಕು ಎನ್ನವುದು ನನ್ನ ಉದ್ದೇಶ. ಆದ್ದರಿಂದ ನಾನು ಪ್ರಥಮ ಬಾರಿಗೆ ಮತ ಚಲಾವಣೆ ಮಾಡುತ್ತಿದ್ದೆನೆ.
- ತಪಸ್ವೀನಿ ಕುಪೇಂದ್ರ ವಠಾರ್, ಯಾದಗಿರಿ
ಇಂದಿನ ರಾಜಕೀಯ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ. ಸ್ವಸ್ತ ಹಾಗೂ ಸ್ವಚ್ಛ ಭಾರತದ ನಿರ್ಮಾಣಕ್ಕಾಗಿ ಉತ್ತಮ ವ್ಯಕ್ತಿಗೆ ಮತ ಹಾಕುತ್ತೇನೆ. ಮೊದಲ ಮತದಾನ ಅವಕಾಶ ತುಂಬಾ ಖುಷಿ ತಂದಿದೆ.
- ಸಾಹೇಬ್ಗೌಡ್ ಕಲಾಲ್, ಯಾದಗಿರಿ
ಒಳ್ಳೆಯ ನೇತಾರನನ್ನೇ ಆರಿಸುವ ಜವಾಬ್ದಾರಿ ನಿಭಾಯಿಸುವೆ. ಯಾವುದೇ ಆಸೆ- ಆಮಿಷಗಳಿಗೆ ಬಲಿಯಾಗದೆ ಮತ ಹಕ್ಕು ಚಲಾಯಿಸುವೆ. ಜಾತಿ- ಮತಗಳನ್ನೇ ಮುಂದೆ ಮಾಡಿಕೊಂಡು ಆಟ ಆಡುವುದು ಸಾಕು.
- ಸಂಗೀತಾ ಅಪ್ಪಾರಾವ ಕುಂಬಾರ, ಗುಲ್ಬರ್ಗ
ನಮ್ಮ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಆಗಬೇಕು. ಯುವಕರಿಗೆ ಹೆಚ್ಚು ಉದ್ಯೋಗಾವಕಾಶ ಬೇಕು. ಅದಕ್ಕಾಗಿ ಮೂಲ ಸೌಕರ್ಯ ಹೆಚ್ಚಾಗಬೇಕು. ಇವನ್ನೆಲ್ಲಾ ಯಾರು ನೀಡುತ್ತಾರೆ ಎಂದು ನನಗನ್ನಿಸುತ್ತದೆಯೋ ಅವರಿಗೇ ಮತೆ.
- ಶಶಿಕುಮಾರ್ ಎಸ್.ಡಿ., ವಿದ್ಯಾರ್ಥಿ, ಶಿವಮೊಗ್ಗ
ಮೊದಲ ಬಾರಿಗೆ ಮತದಾನ ಮಾಡುತ್ತಿರುವುದಕ್ಕೆ ಖುಷಿಯಾಗಿದೆ. ಮತದಾನ ಪ್ರಕ್ರಿಯೆ ಅರಿಯುವ ಕುತೂಹಲವೂ ಇದೆ. ದೇಶಕ್ಕೆ ಒಳ್ಳೆಯ ಆಡಳಿತ ನೀಡುವವರು ಬರಬೇಕು. ಸಮಗ್ರ ಚಿಂತನೆ ಇರಬೇಕು.
- ಪ್ರಮೋದ್ ಕುಮಾರ್
ಮತದಾನ ಮಾಡದೆ ಇರುವುದು ಅಥವಾ ಮತದಾನ ಮಾಡಲು ಹಣ-ಹೆಂಡ, ಉಡುಗೋರೆ ಪಡೆಯುವುದು ದೇಶ ದ್ರೋಹದ ಕೆಲವೇ ಆಗಿದೆ. ಬದಲಾವಣೆ ನನ್ನಿಂದಲೇ ಆಗಲಿ. ಮತದಾನ ಮಾಡಲಿರುವ ನಾನು ಮತಗಟ್ಟೆಗೆ ನನ್ನಂತಹವರಿಬ್ಬರನ್ನು ಕರೆದೊಯ್ಯುತ್ತೇನೆ.
- ಎಂ.ವಿ. ಗುರುಪ್ರಸಾದ್, ಕೋಲಾರ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಾಮಾಣಿಕತೆಯಿಂದ, ಯಾವುದೇ ಆಮಿಷಕ್ಕೆ ಒಳಗಾಗದೇ ಉತ್ತಮ ವ್ಯಕ್ತಿಯನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸುವ ಜವಾಬ್ದಾರಿ ಮತದಾರರ ಮೇಲಿದೆ. ನನ್ನ ಮೊದಲ ಮತವನ್ನು ಉತ್ತಮ ವ್ಯಕ್ತಿಗೆ ನೀಡುವೆ.
- ಕಿರಣಕುಮಾರ ಜೈನ್, ಕೊಪ್ಪಳ
ದೇಶದ ಬಗ್ಗೆ ಕಾಳಜಿ ಇರುವ, ಜನಪರ ನಿಲುವು ಹೊಂದಿರುವಂತಹ ಪಕ್ಷ, ಅಭ್ಯರ್ಥಿಗಳನ್ನೇ ನಾನು ನನ್ನ ಈ ಮೊದಲ ಮತದಾನದಲ್ಲಿ ಬೆಂಬಲಿಸಲು ನಿರ್ಧರಿಸಿರುವೆ. ರಾಷ್ಟ್ರವಾದ ನಮ್ಮಲ್ಲಿ ಇರಲೇಬೇಕು.
- ಆಕಾಶ ಎನ್. ರಾಠೋಡ, ವಿದ್ಯಾರ್ಥಿ, ಗುಲ್ಬರ್ಗ
ಪ್ರಪಂಚದ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ನನಗೆ ಮತದಾನದ ಹಕ್ಕು ಸಿಕ್ಕಿರುವುದಕ್ಕೆ ಹೆಮ್ಮೆ ಅನಿಸುತ್ತದೆ. ಯೋಚಿಸಿ ಮತದಾನ ಮಾಡುತ್ತೇನೆ. ಹಕ್ಕನ್ನು ಖಂಡಿತಾ ಚಲಾಯಿಸುತ್ತೇನೆ.
-ಇಂದ್ರಮ್ಮ ಎಂ.ಕೆ., ವಿದ್ಯಾರ್ಥಿನಿ, ಶಿವಮೊಗ್ಗ
ಇಂದು ದೇಶದ ಪ್ರಗತಿಯಷ್ಟೇ ನನಗೆ ಆದ್ಯತೆಯ ವಿಚಾರ. ರಾಜಕೀಯ ವ್ಯವಸ್ಥೆ ಸುಧಾರಿಸುವುದೂ ಆಗಬೇಕು. ಆಗ ಮಾತ್ರ ಸರ್ವಾಂಗೀಣ ಪ್ರಗತಿಯ ಕನಸು ನನಸಾಗಲು ಸಾಧ್ಯ. ಮತದಾನ ದಿನಕ್ಕಾಗಿ ಕಾಯುತ್ತಿರುವೆ.
- ಅಭಿಷೇಕ್ ಗವಾಯಿ
ಇದೇ ಮೊದಲ ಬಾರಿಗೆ ನನಗೆ ಲೋಕಸಭಾ ಚುನಾವಣೆಯ ಅಭ್ಯರ್ಥಿಗೆ ಮತದಾನ ಮಾಡಲು ಹಕ್ಕು ದೊರೆತಿದೆ. ಹೀಗಾಗಿ, ಕ್ಷೇತ್ರದಲ್ಲಿ ಯಾವ ವ್ಯಕ್ತಿ ಉತ್ತಮ ಕೆಲಸ ಮಾಡಿದ್ದಾನೋ ಅಂಥ ವ್ಯಕ್ತಿಗೆ ಮತದಾನ ಮಾಡುತ್ತೇನೆ.
- ಶಂಕರ ಜುಟ್ಲದ್, ಕೊಪ್ಪಳ
ಯುವಕರು ದೇಶ ರಕ್ಷಣೆಗಾಗಿ ಯುವಶಕ್ತಿಯನ್ನು ಸದ್ಬಳಕೆ ಮಾಡಬೇಕಾಗಿದೆ. ಐದು ವರ್ಷಕ್ಕೆ ಒಮ್ಮೆ ಬರುವ ಚುನಾವಣೆಯನ್ನು ನಿರ್ಲಕ್ಷಿಸದೆ, ದೇಶಕ್ಕೆ ಶಕ್ತಿ ತುಂಬಲು ಹಾಗೂ ನಮ್ಮನ್ನು ಆಳುವವರಿಗೆ ಎಚ್ಚರಿಕೆ ಮೂಡಿಸಲು ಮತವೆಂಬ ಆಸ್ತ್ರವನ್ನು ಬಳಕೆ ಮಾಡುವುದು ಒಳ್ಳೆಯದು.
- ಬಿ.ವಿ. ಪವನ್ ಕುಮಾರ್, ವಿದ್ಯಾರ್ಥಿ, ಕೋಲಾರ
ಈ ಬಾರಿ ನನಗೆ ಮತದಾನ ಮಾಡಲು ಚುನಾವಣಾ ಆಯೋಗ ಮಾನ್ಯತೆ ನೀಡಿರುವುದು ನನಗೆ ಹಕ್ಕನ್ನು ನೀಡಿದಂತಾಗಿದೆ. ಇದರಿಂದ ಬಹಳ ಸಂತೋಷವಾಗಿದ್ದು, ನನಗೆ ಮತದಾನ ಮಾಡುವುದು ಹೇಗೆ ಅಂತ ತಿಳಿದಿಲ್ಲ. ಆದ್ದರಿಂದ ಸ್ವಲ್ಪ ಮತದಾನದ ಬಗ್ಗೆ ಭಯ ಇದೆ.
- ರವಿ, ಹಾಸನ
ಹೊಸದಾಗಿ ಮತದಾನ ಮಾಡುತ್ತಿರುವುದರಿಂದ ಹೆಚ್ಚಿನ ಸಂತಸವಿದೆ. ಮತದಾನದ ಹಕ್ಕು ದೇಶದ ಪ್ರಜೆಗೆ ಮುಖ್ಯವಾಗಿದ್ದು, ಅದಕ್ಕೆ ನಾನು ಭಾಜನನಾಗಿರುವುದು ಖುಷಿ ಎನಿಸುತ್ತಿದೆ. ದೇಶದ ರಾಜಕಾರಣಕ್ಕೆ ಉತ್ತಮ ಆಭ್ಯರ್ಥಿಯ ಆಯ್ಕೆಗೆ ಮತದಾನವನ್ನು ಮಾಡುತ್ತೇನೆ.
- ಧನುಷ್, ಹಾಸನ
ವಿಶ್ವದಲ್ಲಿ ಭಾರತ ಬಲಿಷ್ಠ ದೇಶವಾಗಬೇಕು. ಅದಕ್ಕಾಗಿ ಅಭಿವೃದ್ಧಿ ಆಗಬೇಕು ಅದಕ್ಕೆ ಬದಲಾವಣೆ ಬೇಕು. ನನ್ನ ವಯಸ್ಸಿನವರೆಲ್ಲ ಸುಮ್ಮನೆ ಮನೆಯಲ್ಲಿ ಕುಳಿತು ಮಾತನಾಡಿದರೆ ಆಗದು. ಎಲ್ಲರೂ ಮತದಾನ ಮಾಡಬೇಕು.
- ಸುಪ್ರಿಯ, ಅಶ್ವತ್ಥಪುರ
ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಹೋದಂದಿನಿಂದ ನಾನು ದೇಶದ ಚುನಾವಣೆ ಬಗ್ಗೆ ಗಮನಹರಿಸತೊಡಗಿದೆ. ಆದರೆ ದೇಶ ಬಲಿಷ್ಠ ಆಗಬೇಕು ಎಂಬ ಕಾರಣಕ್ಕೆ ಮತದಾನ ಮಾಡಲು ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ನನ್ನಂಥ ಹೊಸಬರಿಂದ ಆದರೂ ಮುಂದೆ ಒಳ್ಳೆ ಆಡಳಿತ ಬರಲಿ.
- ದೀಪ್ತಿ, ಮೂಡುಬಿದರೆ
ಕಡ್ಡಾಯ ಮತದಾನ ಜಾರಿಯಾಗಬೇಕು. ದೇಶದ ಆಡಳಿತ ವ್ಯವಸ್ಥೆ ಬದಲಾಗಬೇಕಾಗಿದೆ. ಈ ಬಾರಿ ಮತ ಚಲಾವಣೆಗೆ ತೆರಳುವ ಸಂದರ್ಭ ನನ್ನ ಆಯ್ಕೆ ಪಕ್ಷವಲ್ಲ. ಯಾರೂ ಇಷ್ಟವಾಗದಿದ್ದರೆ ಚುನಾವಣೆ ಆಯೋಗ ಕಲ್ಪಿಸಿದ ಮತದಾರರ ಅಧಿಕಾರ 'ನೋಟಾ' ಉಪಯೋಗಿಸಲು ಹಿಂಜರಿಯುವುದಿಲ್ಲ.
-ಸಿಂಚನಾ ಚಂದ್ರಮೋಹನ್
ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಉತ್ತಮ ಆಡಳಿತ ನೀಡುವ ಸರ್ಕಾರದ ಅವಶ್ಯಕತೆ ಇದೆ. ಜನಪ್ರತಿನಿಧಿಗಳು ಆಯ್ಕೆ ನಂತರ ಸ್ವಾರ್ಥ ಸಾಧನೆ ಬಿಟ್ಟು ದೇಶದ ಅಭಿವೃದ್ಧಿಯತ್ತ ಮನಸು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಯ ಆಯ್ಕೆ ಸಂದರ್ಭ ಚಿಂತಿಸಿ ಮತದಾನ ಮಾಡಲು ಇಚ್ಛಿಸುತ್ತೇನೆ.
- ಸಿ.ಎಸ್.ರಜಿಶ್, ಕುಶಾಲನಗರ