ಬ್ರಿಟನ್ ನಾಣ್ಯಕ್ಕೆ ಗೇರುಸೊಪ್ಪಾ ಹಡಗಿನ ಬೆಳ್ಳಿ!
ಲಂಡನ್: ಬ್ರಿಟನ್ನ ನಾಣ್ಯಗಳಲ್ಲಿ ಭಾರತದ ಬೆಳ್ಳಿ!
ಹೌದು. 70 ವರ್ಷಗಳ ಹಿಂದೆ ಐರಿಶ್ ಕರಾವಳಿಯಲ್ಲಿ ಮುಳುಗಿದ್ದ ಭಾರತದ ಗೇರುಸೊಪ್ಪಾ ಹಡಗಿನಲ್ಲಿದ್ದ ಬೆಳ್ಳಿಯನ್ನು ಬಳಸಿಕೊಂಡು ಬ್ರಿಟನ್ನ ರಾಯಲ್ ಮಿಂಟ್ ಈಗ ನಾಣ್ಯ ಮುದ್ರಿಸಲು ಆರಂಭಿಸಿದೆ. ನಾಣ್ಯಗಳಲ್ಲಿ 'ಎಸ್ಎಸ್ ಗೇರುಸೊಪ್ಪಾ' ಎಂಬ ಹೆಸರನ್ನೂ ಕೆತ್ತಲಾಗುತ್ತಿದೆ.
1941ರಲ್ಲಿ ಸುಮಾರು 2,800 ಬೆಳ್ಳಿ ಗಟ್ಟಿಗಳನ್ನು ಹೊತ್ತು ಕೋಲ್ಕತಾದಿಂದ ಲಂಡನ್ಗೆ ಹೊರಟಿದ್ದ ಗೇರುಸೊಪ್ಪಾ ಹಡಗು ಐರಿಶ್ ಕರಾವಳಿಯಲ್ಲಿ ಮುಳುಗಿತ್ತು. ಸುಮಾರು 70 ವರ್ಷಗಳ ಕಾಲ ಜಲಸಮಾಧಿಯಾಗಿದ್ದ ಹಡಗನ್ನು 2011ರಲ್ಲಿ ಅಮೆರಿಕದ ಕಂಪನಿಯೊಂದು ಪತ್ತೆ ಮಾಡಿತ್ತು. ನಂತರ ಸಮುದ್ರದಾಳದಲ್ಲಿ ಬಿದ್ದಿದ್ದ ಬೆಳ್ಳಿಗಟ್ಟಿಗಳನ್ನೂ ಹೊರತೆಗೆಯಲಾಗಿತ್ತು. ಅದರಲ್ಲಿ ಒಂದು ಭಾಗವನ್ನು ಬ್ರಿಟನ್ನ ರಾಯಲ್ ಮಿಂಟ್ಗೆ ಕಳುಹಿಸಲಾಗಿದ್ದು, ಅದು ಈ ಬೆಳ್ಳಿಯನ್ನು ಬಳಸಿ ನಾಣ್ಯ ಮುದ್ರಣ ಕಾರ್ಯವನ್ನು ಆರಂಭಿಸಿದೆ.