ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಾಮಮಂದಿರ, ಮದರಸಾದತ್ತ ಮೋದಿ

ರಾಮ'ನ ಜೊತೆ ಇದೇ ಮೊದಲ ಬಾರಿಗೆ 'ರಹೀಮ'ನ ಮೇಲೂ ಪ್ರೀತಿ ತೋರಿರುವ ಬಿಜೆಪಿ...

Mainashree
Updated On : 8 Apr 2014, 3:01 am

- ಬಿಜೆಪಿಯ ಬ್ಯಾಲೆನ್ಸ್ ಬ್ಯಾಲೆಟ್ ಮುನ್ನ ಭರವಸೆ | ಏಕ ಭಾರತ, ಶ್ರೇಷ್ಠ ಭಾರತ ಪಕ್ಷದ ಘೋಷವಾಕ್ಯ|370ನೇ ವಿಧಿ ರದ್ದು |  ಏಕರೂಪ ಸಂಹಿತೆ ಜಾರಿ
ಮಂದಿರ, ಮದರಸಾದತ್ತ ಮೋದಿ

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
'ರಾಮ'ನ ಜೊತೆ ಇದೇ ಮೊದಲ ಬಾರಿಗೆ 'ರಹೀಮ'ನ ಮೇಲೂ ಪ್ರೀತಿ ತೋರಿರುವ ಬಿಜೆಪಿ, 'ಏಕ ಭಾರತ - ಶ್ರೇಷ್ಠ ಭಾರತ' ಘೋಷಣೆಯೊಂದಿಗೆ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ತಾನಿಟ್ಟಿರುವ ನಂಬಿಕೆಯೇ ಶ್ರೇಷ್ಠ ಎಂಬ ಧ್ಯೇಯದೊಂದಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮತ್ತು ಶಾಂತಿದೂತನಾಗುವ ಸಾಧ್ಯತೆ ತೋರಿರುವ ಬಿಜೆಪಿ, ಮದರಸಾಗಳ ಮೇಲೂ ಗಮನ ಹರಿಸಿದೆ.
ಜೊತೆಗೆ ಸಂವಿಧಾನದ 370ನೇ ವಿಧಿ ರದ್ದು, ಏಕರೂಪ ನಾಗರಿಕ ಸಂಹಿತೆ, ಮಹಿಳೆಯರಿಗೆ ಶೇ.33 ಮೀಸಲು, ಅಲ್ಪಸಂಖ್ಯಾತರ ರಕ್ಷಣೆ, ಅಂತರ ಧರ್ಮೀಯ ಸೌಹಾರ್ದಕ್ಕೆ ಶಾಶ್ವತ ವ್ಯವಸ್ಥೆ ಭರವಸೆ ನೀಡಿದೆ.
ಇವು ಬಿಜೆಪಿ ಪ್ರಣಾಳಿಕೆಯ ಮುಖ್ಯಾಂಶಗಳು. ಆಡಳಿತ ಸುಧಾರಣೆ, ಆರ್ಥಿಕ ಚೇತರಿಕೆ, ಸರ್ವರಿಗೂ ಶಿಕ್ಷಣ, ಉದ್ಯೋಗ, ಮಹಿಳಾ ಸಬಲೀಕರಣ, ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡಿದೆ. ಬೆಲೆ ಏರಿಕೆ ನಿಯಂತ್ರಣ, ಹಣದುಬ್ಬರಕ್ಕೆ ಕಡಿವಾಣ, ಭ್ರಷ್ಟಾಚಾರ ತಡೆ ಮತ್ತು ವಿದೇಶಗಳಲ್ಲಿರುವ ಕಪ್ಪು ಹಣ ವಾಪಸ್ ತರಲು ಮಾರ್ಗೋಪಾಯಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಿದೆ.
ಉದ್ಯೋಗ ಮತ್ತು ಸಂಪತ್ತು ಸೃಷ್ಟಿಸುವ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಉತ್ತೇಜನ, ಕೃಷಿ ಆಧುನೀಕರಣ, ಮೂಲಭೂತ ಸೌಕರ್ಯ ಕ್ಷೇತ್ರ ಉನ್ನತೀಕರಣ, ಸರ್ವರಿಗೂ ಆರೋಗ್ಯ, ಇ-ಗ್ರಾಮ ವಿಶ್ವಗ್ರಾಮ, ಸಾರ್ವಜನಿಕ ಸ್ಥಳಗಳಲ್ಲಿ ವೈ-ಫೈ ವ್ಯವಸ್ಥೆ ಒದಗಿಸುವ ಭರವಸೆ ನೀಡಿರುವ ಬಿಜೆಪಿ, ಸರ್ವಾಂಗೀಣ, ಸುಸ್ಥಿರ ಅಭಿವೃದ್ಧಿ ತನ್ನ ಗುರಿ, ಜನಪರ ಮತ್ತು ಕ್ರಿಯಾಶೀಲ ಆಡಳಿತ ತನ್ನ ಧ್ಯೇಯ ಎಂದು ಹೇಳಿಕೊಂಡಿದೆ. ಮುರಳಿ ಮನೋಹರ ಜೋಷಿ ತಂಡ ಸಿದ್ಧಪಡಿಸಿರುವ 52 ಪುಟಗಳ ಪ್ರಣಾಳಿಕೆಯನ್ನು ಆಡ್ವಾಣಿ, ಮೋದಿ, ಸುಷ್ಮಾ, ರಾಜನಾಥ್ ಸಿಂಗ್ ಬಿಡುಗಡೆ ಮಾಡಿದರು.
ರಾಮ ಮಂದಿರ ನಿರ್ಮಾಣ, 370ನೇ ವಿಧಿ ರದ್ದು, ಏಕರೂಪ ನಾಗರಿಕ ಸಂಹಿತೆ ಜಾರಿ ಪ್ರಸ್ತಾಪ ಮಾಡುತ್ತಲೇ ಅಲ್ಪಸಂಖ್ಯಾತರ ಹಿತ ಕಾಯುವ ಘೋಷಣೆಗಳನ್ನೂ ಮಾಡಿದೆ. ಜನವರಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಮೋದಿ ಭಾಷಣದಲ್ಲಿ ಪ್ರಸ್ತಾಪವಾಗಿದ್ದ ಪಂಚ- ಟಿ ಸೂತ್ರ (ಪ್ರತಿಭೆ, ಪ್ರವಾಸ, ಸಂಪ್ರದಾಯ, ತಾಂತ್ರಿಕತೆ, ವ್ಯಾಪಾರ)ವೂ ಪ್ರಣಾಳಿಕೆಯಲ್ಲಿವೆ. ಪ್ರಣಾಳಿಕೆ ಸಮಿತಿ ಅಧ್ಯಕ್ಷ ಮುರಳಿ ಮನೋಹರ ಜೋಷಿ, ಇದು ಎಲ್ಲರ ನಿರೀಕ್ಷೆಗಳ ಪ್ರತಿಬಿಂಬ ಎಂದರು.

ನಾನು ವೈಯಕ್ತಿಕವಾಗಿ 3 ಭರವಸೆ ನೀಡುವೆ. ಅವೆಂದರೆ, ಪರಿಶ್ರಮದ ಜತೆ ರಾಜಿ ಮಾಡಿಕೊಳ್ಳುವುದಿಲ್ಲ, ನನಗಾಗಿ ನಾನು ಏನನ್ನೂ ಮಾಡಿಕೊಳ್ಳುವುದಿಲ್ಲ, 'ದುರುದ್ದೇಶ'ದ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ. 'ಉತ್ತಮ ಆಡಳಿತ ಮತ್ತು ಅಭಿವೃದ್ಧಿ'ಯೇ ನನ್ನ ಮುಖ್ಯ ಗುರಿ.
-ನರೇಂದ್ರ ಮೋದಿ,
ಬಿಜೆಪಿ ಪ್ರಧಾನಿ ಅಭ್ಯರ್ಥಿ




ಬಿಜೆಪಿಯ ಅಜೆಂಡಾವನ್ನು ಅದರ ಪ್ರಣಾಳಿಕೆಯೇ ಹೊರಹಾಕಿದೆ. ಇದು ದೇಶದ ಏಕತೆ ಮತ್ತು ಸಮಗ್ರತೆಗೆ ಗಂಡಾಂತರ ತಂದೊಡ್ಡಲಿದೆ.
-ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ

ನೇರ ಪ್ರಸಾರ: ಆಯೋಗ ಪರಿಶೀಲನೆ
ಪ್ರಣಾಳಿಕೆ ಬಿಡುಗಡೆಯನ್ನು ನೇರ ಪ್ರಸಾರ ಮಾಡಬಾರದು ಎಂದು ಸುದ್ದಿವಾಹಿನಿಗಳಿಗೆ ಸೂಚಿಸಿದ್ದರೂ ಕೆಲ ವಾಹಿನಿಗಳು ಅದನ್ನು ನೇರ ಪ್ರಸಾರ ಮಾಡಿದ್ದವು. ಚಾನೆಲ್‌ಗಳ ಕ್ರಮದ ಬಗ್ಗೆ ಆಯೋಗ ಅಸಂತೋಷಗೊಂಡಿದೆ. ವಿಶೇಷವಾಗಿ ಮತದಾನ ನಡೆದ ಅಸ್ಸಾಂ ಮತ್ತು ತ್ರಿಪುರಾದಲ್ಲಿ ಪ್ರಸಾರ ಮಾಡದಂತೆ ಸೂಚಿಸಲಾಗಿತ್ತು. ಇದರ ಹೊರತಾಗಿಯೂ ಆ ಎರಡು ರಾಜ್ಯಗಳಲ್ಲಿ ಪ್ರಣಾಳಿಕೆ ಬಿಡುಗಡೆ ಜನರು ವೀಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಚಾನೆಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿದೆಯೇ ಎಂಬ ಬಗ್ಗೆ ಪರಿಶೀಲಿಸುತ್ತಿದೆ.

ಬಿಜೆಪಿ ಪ್ರಣಾಳಿಕೆ
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಉತ್ಪಾದನಾ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದೆ. ಭ್ರಷ್ಟಾಚಾರ ನಿರ್ಮೂಲನೆಗೆ ಕ್ರಮ, 100 ಹೊಸ ನಗರಗಳ ನಿರ್ಮಾಣ, ಶಾಂತಿಯುತ ಹಾಗೂ ಸುರಕ್ಷತೆಯ ವಾತಾವರಣ ನಿರ್ಮಿಸುವ ಭರವಸೆಯನ್ನೂ ನೀಡಿದೆ. ವಿಶೇಷವೆಂದರೆ, ಮದರಸಾಗಳ ಆಧುನೀಕರಣಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಬಹು ಬ್ರ್ಯಾಂಡ್ ಚಿಲ್ಲರೆ ಮಾರುಕಟ್ಟೆಯಲ್ಲಿ ಎಫ್‌ಡಿಐ ವಿರೋಧಿಸಿರುವ ಬಿಜೆಪಿ ಉಳಿದ ಕ್ಷೇತ್ರಗಳಲ್ಲಿ ವಿದೇಶಿ ಬಂಡವಾಳಕ್ಕೆ ಅವಕಾಶ ನೀಡುವುದಾಗಿ ಹೇಳಿದೆ.

ಕಾಂಗ್ರೆಸ್ ಪ್ರಣಾಳಿಕೆ
ಎಫ್‌ಡಿಐ ವಿಚಾರದಲ್ಲಿ ಮಾತ್ರವೇ ಕಾಂಗ್ರೆಸ್ ಮತ್ತು ಬಿಜೆಪಿ ನಿಲುವು ವಿಭಿನ್ನವಾಗಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ, ಎಲ್ಲ ಕ್ಷೇತ್ರಗಳಲ್ಲೂ ಎಫ್‌ಡಿಐಗೆ ಅವಕಾಶ ನೀಡುವುದಾಗಿ ತಿಳಿಸಿದೆ. ಜತೆಗೆ, ಮುಂದಿನ 10 ವರ್ಷಗಳಲ್ಲಿ ಉತ್ಪಾದನಾ ಕ್ಷೇತ್ರವೊಂದರಲ್ಲೇ 10 ಕೋಟಿ ಉದ್ಯೋಗ ಕಲ್ಪಿಸುವ ಭರವಸೆ ನೀಡಿದೆ. ಜತೆಗೆ, ಕೈಗಾರಿಕಾ ಕಾರಿಡಾರ್ ನಿರ್ಮಾಣ, 100 ಹೊಸ ನಗರಗಳ ನಿರ್ಮಾಣ, ಕೋಮು ಹಿಂಸಾಚಾರ ತಡೆ ಮಸೂದೆ ಅಂಗೀಕಾರ, ಭ್ರಷ್ಟಾಚಾರ ಸಂಬಂಧದ ಹೊಸ ಕಾನೂನು ರಚನೆ, ಅಭಿವೃದ್ಧಿಗೆ ಆದ್ಯತೆ ನೀಡುವ ಆಶ್ವಾಸನೆಯನ್ನೂ ನೀಡಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement