ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಮ್ಮರಗಾಂವ ಮಂದಿಗೆ ಮೊದಲ ಮತ

Vishwanath S
Updated On : 22 Apr 2014, 12:20 pm

ಕಾರವಾರ: ಇಲ್ಲಿ ಎಂಬತ್ತರ ಅಜ್ಜಿ, ಹದಿನೆಂಟರ ಯುವತಿ ಇಬ್ಬರಿಗೂ ಮೊದಲ ಬಾರಿ ಮತದಾನ ಮಾಡಿದ ಸಂಭ್ರಮ!
ಇದು ತಾಲೂಕಿನ ಕಮ್ಮರಗಾಂವದ ಕಥೆ. ಅಭ್ಯರ್ಥಿ? ಕ್ಷೇತ್ರ? ಏನೂ ಗೊತ್ತಿಲ್ಲ. ಆದರೂ ಇತಿಹಾಸದಲ್ಲೇ ಪ್ರಥಮ ಬಾರಿಗೆ ಇಲ್ಲಿನ ಜನ ಸಾಮೂಹಿಕ ಮತ ಹಾಕಿದ್ದಾರೆ. ಯಾರ ಮನೆ ಎದುರು ಹೋದರೂ ಹೆಮ್ಮೆಯಿಂದ ಎಡಗೈ ಹೆಬ್ಬಟ್ಟು ಎತ್ತಿ ಶಾಯಿ ತೋರಿಸುತ್ತಾರೆ.
ಚುನಾವಣೆ ಇತಿಹಾಸದಲ್ಲಿ ಅಂದರೆ 1951ರಿಂದ ಈ ತನಕ ಈ ಊರಿಗೆ ಯಾವ ಅಭ್ಯರ್ಥಿಯೂ ಕಾಲಿಟ್ಟಿಲ್ಲ. ಮತ ಯಾಚನೆ, ಪ್ರಚಾರ ಏನೂ ಇಲ್ಲ. ದೂರದ ಗೋಯರ್‌ನ ಮತಗಟ್ಟೆಗೆ ಹೋಗುವುದು ದುಸ್ತರವಾದ್ದರಿಂದ ಮತದಿಂದ ದೂರವೇ ಉಳಿದಿದ್ದರು. ಈ ಬಾರಿ ಚುನಾವಣಾ ಆಯೋಗ, 100ಕ್ಕೂ ಹೆಚ್ಚು ಮತದಾರ ರಿಗಾಗಿ ಇಲ್ಲೇ ಮತಗಟ್ಟೆ ತೆರೆದಿತ್ತು.
ದಟ್ಟಡವಿ ಗ್ರಾಮ: ಕಾರವಾರದಿಂದ 30 ಕಿ.ಮೀ. ದೂರದಲ್ಲಿದೆ ಕಮ್ಮರಗಾಂವ. ಕಾರವಾರದಿಂದ 12 ಕಿ.ಮೀ. ದೂರದ ಗೋಟೆಗಾಳಿಗೆ ಸರಾಗ ಹೋಗಬಹುದು. ಆಮೇಲಿನ ಮಾರ್ಗ ತುಂಬ ಪ್ರಯಾಸ. ಗೋಯರ್ ಎಂಬಲ್ಲಿಂದ 8 ಕಿ.ಮೀ. ಕಡಿದಾದ ಗುಡ್ಡ, ಕಣಿವೆ ಏರಿ ದಟ್ಟಡವಿಯಲ್ಲಿ ನಡೆದೇ  ತಲುಪಬೇಕು. ಕರ್ನಾಟಕದಿಂದ ರಸ್ತೆ ಸಂಪರ್ಕವೇ ಇಲ್ಲ. ವಾಹನದಲ್ಲಿ ಹೋಗಿ ಬರಬೇಕೆಂದರೆ ಗೋವಾಕ್ಕೆ ತೆರಳಿ, ಕಡಿದಾದ ಗುಡ್ಡ, ಹಳ್ಳ ದಿಣ್ಣೆಗಳಿಂದ ಕೂಡಿದ ರಸ್ತೆಯಲ್ಲಿ 130 ಕಿ.ಮೀ. ಕ್ರಮಿಸಬೇಕು.
ಕಮ್ಮರಗಾಂವದಲ್ಲಿ 40ಕ್ಕೂ ಹೆಚ್ಚು ಮನೆಗಳಿವೆ. ಆದರೆ, ರಸ್ತೆಯೇ ಇಲ್ಲ. ವಿದ್ಯುತ್ ಕಂಡಿಲ್ಲ. ಆಸ್ಪತ್ರೆ, ಅಂಚೆ ಕಚೇರಿ, ದೂರವಾಣಿ ಯಾವುದೂ ಇಲ್ಲ. ಇಡೀ ಊರಲ್ಲಿ ರು. 10 ಇದ್ದರೆ ಪೈಸೆಯೂ ಖರ್ಚಾಗದು. ಖರ್ಚು ಮಾಡುವ ಮಾರ್ಗವೇ ಕಾಣದು. ಒಂದೇ ಒಂದು ಶೌಚಾಲಯ ಇಲ್ಲ. ಸ್ನಾನದ ಕೋಣೆ ಇಲ್ಲ. ಬಯಲಲ್ಲೇ ಸ್ನಾನ.
ಗೋವಾ ಅವಲಂಬನೆ: ವಿದ್ಯಾಭ್ಯಾಸ, ಕೂಲಿ, ದಿನಸಿ ಸಾಮಗ್ರಿ ಎಲ್ಲಕ್ಕೂ ಗೋವಾವನ್ನೇ ಅವಲಂಬಿಸುತ್ತಾರೆ. ಕರ್ನಾಟಕದ ಅನಿವಾರ್ಯವೇ ಇಲ್ಲ. ಗಡಿ ಪ್ರದೇಶದ ನಿರ್ಲಕ್ಷ್ಯದ ಪರಮಾವಧಿಯನ್ನು ಕಮ್ಮರಗಾಂವನಲ್ಲಿ ನೋಡಲು ಸಾಧ್ಯ. ಆದರೂ ಈ ಬಾರಿ ಮತದಾನ ಮಾಡಿದ್ದಾರೆ.
ಮೋದಿ ಮಾತ್ರ ಗೊತ್ತು
ಇವರಿಗೆ ತಮ್ಮ ಅಭ್ಯರ್ಥಿ ಗೊತ್ತಿಲ್ಲದಿದ್ದರೂ ಮೋದಿ ಗೊತ್ತು! ಗೋವಾದ ಲ್ಲಿರುವ ಗ್ರಾಮದ ಯುವಕರು ಮೋದಿ ಹೆಸರು ಜನಪ್ರಿಯಗೊಳಿಸಿದ್ದಾರೆ. ಆದರೆ, ಹೆಚ್ಚಿನ ವಿವರ ಗೊತ್ತಿಲ್ಲ. ಮೋದಿ ಬಂದರೆ ಸೌಲಭ್ಯ ಸಿಗುತ್ತದೆ ಎಂದು ಸ್ಥಳೀಯ ಸಂತೂವೇಳಿಪ್ ಹೇಳುತ್ತಾನೆ.


-ವಸಂತಕುಮಾರ್ ಕತಗಾಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement