ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಿರ್ಲಾ ವಿರುದ್ಧ ಸಿಬಿಐ ಬಿಸಿ

ಬಹುಕೋಟಿ ಕಲ್ಲಿದ್ದಲು ಬ್ಲಾಕ್ ಹಂಚಿಕೆ ಹಗರಣ ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ಅವರನ್ನು ಕಾಡತೊಡಗಿದೆ.

Vishwanath S
Updated On : 22 Apr 2014, 2:34 am

ನವದೆಹಲಿ: ಬಹುಕೋಟಿ ಕಲ್ಲಿದ್ದಲು ಬ್ಲಾಕ್ ಹಂಚಿಕೆ ಹಗರಣ ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ಅವರನ್ನು ಕಾಡತೊಡಗಿದೆ. ಸದ್ಯದಲ್ಲೇ ಹಗರಣಕ್ಕೆ ಸಂಬಂಧಿಸಿ ಕುಮಾರ ಮಂಗಲಂ ಬಿರ್ಲಾರನ್ನು ವಿಚಾರಣೆ ನಡೆಸುವುದಾಗಿ ಸಿಬಿಐ  ಸೋಮವಾರ ತಿಳಿಸಿದೆ.  ಇದಕ್ಕೂ ಮುನ್ನ ಕಲ್ಲಿದ್ದಲು ಖಾತೆ ಮಾಜಿ ಸಚಿವ ದಾಸರಿ ನಾರಾಯಣ ರಾವ್ ಅವರನ್ನೂ ಕೇಂದ್ರ ತನಿಖಾ ಸಂಸ್ಥೆ ವಿಚಾರಣೆಗೊಳಪಡಿಸಿತು. ಅಷ್ಟೇ ಅಲ್ಲದೆ, ಕಾಂಗ್ರೆಸ್ ಸಂಸದ ವಿಜಯ್ ದರ್ದಾ ಹಾಗೂ ಅವರ ಕಂಪನಿಗೆ ಕ್ಲೀನ್‌ಚಿಟ್ ನೀಡಿತು.
 ಕಳೆದ ವರ್ಷ ಎಫ್‌ಐಆರ್
ಹಿಂಡಾಲ್ಕೋ ಕಲ್ಲಿದ್ದಲು ಹಂಚಿಕೆ ಪ್ರಕರಣ ಸಂಬಂಧದ ಆರೋಪಪಟ್ಟಿಯಲ್ಲಿ ಈಗಾಗಲೇ ಕುಮಾರ ಮಂಗಲಂ ಬಿರ್ಲಾರ ಹೆಸರನ್ನು ಸಿಬಿಐ ಸೇರಿಸಿದೆ. ಸಿಬಿಐ ಹಿಂಡಾಲ್ಕೋದ ಹಲವು ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿದ್ದು, ಈ ವಾರಾಂತ್ಯದಲ್ಲಿ ಬಿರ್ಲಾರನ್ನೂ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಕ್ರಿಮಿನಲ್ ಸಂಚು, ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ 2013ರಲ್ಲಿ ಮಂಗಲಂ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಜತೆಗೆ, ಪಿ.ಸಿ. ಪಾರಖ್, ಕಲ್ಲಿದ್ದಲು ಸಚಿವಾಲಯವನ್ನೂ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿತ್ತು.
 ದಾಸರಿಗೆ ಸರಣಿ ಪ್ರಶ್ನೆ
ತಲಬಿರಾ-2 ಕಲ್ಲಿದ್ದಲು ಬ್ಲಾಕ್ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಮಾಜಿ ಸಚಿವ ದಾಸರಿ ನಾರಾಯಣ ರಾವ್ ಅವರನ್ನು ಸಿಬಿಐ ಸೋಮವಾರ ವಿಚಾರಣೆ ನಡೆಸಿತು. ಆಯ್ಕೆ ಸಮಿತಿಯು ಒಡಿಶಾದ ತಲಬಿರಾ-2 ಬ್ಲಾಕ್ ಅನ್ನು ಸಾರ್ವಜನಿಕ ವಲಯದ ಸಂಸ್ಥೆ ನೈವೇಲಿ ಲಿಗ್ನೈಟ್ ಲಿಮಿಟೆಡ್‌ಗೆ ಹಂಚಿಕೆ ಮಾಡಿದ್ದರೂ ನಂತರ ಅದೇ ಬ್ಲಾಕ್ ಅನ್ನು ಹಿಂಡಾಲ್ಕೋಗೆ ನೀಡಿದ್ದ ಬಗ್ಗೆ ರಾವ್‌ರನ್ನು ಸಿಬಿಐ ಪ್ರಶ್ನಿಸಿತು. ರಾವ್ 2004ರಿಂದ 06ರವರೆಗೆ, 2006ರಿಂದ 08ರವರೆಗೆ ಕಲ್ಲಿದ್ದಲು ಖಾತೆ ಸಹಾಯಕ ಸಚಿವರಾಗಿದ್ದರು. ಇದೇ ವೇಳೆ ಮತ್ತೊಬ್ಬ ಆರೋಪಿ ಪಿ. ಸಿ. ಪಾರಖ್ ಅವರನ್ನು ಈ ವಾರದಲ್ಲೇ ವಿಚಾರಣೆ ನಡೆಸುವುದಾಗಿ ಸಿಬಿಐ ತಿಳಿಸಿದೆ.
 ದರ್ದಾಗೆ ಕ್ಲೀನ್‌ಚಿಟ್: ಕಾಂಗ್ರೆಸ್‌ಗೆ ಸಿಹಿಸುದ್ದಿ
ಬರೋಬ್ಬರಿ 2 ವರ್ಷಗಳ ತನಿಖೆಯ ಬಳಿಕ ಎರಡು ಕಲ್ಲಿದ್ದಲು ಬ್ಲಾಕ್ ಹಂಚಿಕೆ ಪ್ರಕರಣಗಳಿಗೆ ಸಂಬಂಧಿಸಿ ಸಿಬಿಐ ಸೋಮವಾರ ಸಮಾಪ್ತಿ ವರದಿ ಸಲ್ಲಿಸಿದೆ. ಇದೇ ವೇಳೆ, ಕಾಂಗ್ರೆಸ್ ಸಂಸದ ವಿಜಯ್ ದರ್ದಾ ಹಾಗೂ ಅವರ ಕಂಪನಿ ಜೆಎಲ್‌ಡಿ ಯವತ್ಮಾಲ್ ಎನರ್ಜಿ ಲಿಮಿಟೆಡ್ ಕಂಪನಿಗೆ ಸಿಬಿಐ ಕ್ಲೀನ್‌ಚಿಟ್ ನೀಡಿದೆ. ದರ್ದಾ ಹಾಗೂ ಅವರ ಕಂಪನಿ ಕ್ರಿಮಿನಲ್ ಸಂಚು ಅಥವಾ ವಂಚನೆಯಲ್ಲಿ ತೊಡಗಿತ್ತು ಎನ್ನುವುದಕ್ಕೆ ಯಾವುದೇ ಸಾಕ್ಷ್ಯ ದೊರೆಯದ ಹಿನ್ನೆಲೆಯಲ್ಲಿ ಅವರಿಗೆ ಕ್ಲೀನ್‌ಚಿಟ್ ನೀಡಿರುವುದಾಗಿ ಸಿಬಿಐ ತಿಳಿಸಿದೆ. ಇದು ಕಲ್ಲಿದ್ದಲು ಹಗರಣದ ಸುಳಿಗೆ ಸಿಲುಕಿ ತೀವ್ರ ಮುಜುಗರಕ್ಕೀಡಾಗಿದ್ದ ಕಾಂಗ್ರೆಸ್‌ಗೆ ಸ್ವಲ್ಪ ಮಟ್ಟಿಗೆ ನಿರಾಳತೆ ಮೂಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement