ಶಿಕ್ಷಕರ ಪರೀಕ್ಷೆಗೆ ಅಸ್ತು
ಬೆಂಗಳೂರು: ಅಂತು ಇಂತು, ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ರಾಷ್ಟ್ರಮಟ್ಟದಲ್ಲಿ ಅರ್ಹತಾ ಪರೀಕ್ಷೆಯು 2011ರಲ್ಲಿಯೇ ಜಾರಿಗೆ ಬಂದಿದ್ದರೂ ಬೆರಳೆಣಿಕೆಯ ರಾಜ್ಯಗಳು ಮಾತ್ರ ಇದನ್ನು ಜಾರಿಗೆ ತಂದಿದ್ದವು. ಮೊದಲ 3 ವರ್ಷದಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಕೇವಲ ಶೇ.1ರಿಂದ ಶೇ.14ಕ್ಕೆ ಸೀಮಿತವಾಗಿತ್ತು.
ಇದರಿಂದ ಸ್ವಲ್ಪ ಹಿಂಜರಿದಿದ್ದ ಕರ್ನಾಟಕ, ಮೊದಲ 3 ವರ್ಷದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ಅನುಷ್ಠಾನಗೊಳಿಸಲು ಮೀನಮೇಷ ಎಣಿಸಿತ್ತು. ಈಗ ಜೂ.1ರಂದು ಪರೀಕ್ಷೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದ್ದು, ಅರ್ಜಿ ಸಲ್ಲಿಸಲು ಮೇ 3 ಕೊನೆಯ ದಿನವಾಗಿದೆ.
ರಾಜ್ಯದಲ್ಲಿಯೂ ಶಿಕ್ಷಕರ ನೇಮಕಕ್ಕೆ ಟಿಇಟಿ ಕಡ್ಡಾಯಗೊಳಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಇದರಿಂದ ಶಿಕ್ಷಣ ಹಕ್ಕು ಕಾಯಿದೆ ಪ್ರಕಾರ ಶಿಕ್ಷಕರಾಗಿ ಕೆಲಸ ಮಾಡುವ ಪ್ರತಿ ವ್ಯಕ್ತಿಯೂ ಕಡ್ಡಾಯವಾಗಿ ಟಿಇಟಿಯಲ್ಲಿ ಉತ್ತೀರ್ಣರಾಗಿರಬೇಕಾಗುತ್ತದೆ. ರಾಜ್ಯದಲ್ಲಿ ಇನ್ನು ಮುಂದೆ ನಡೆಯುವ ನೇಮಕ ಪ್ರಕ್ರಿಯೆಯಲ್ಲಿ ಅರ್ಹತೆ ಪಡೆಯಲು ಇದು ಪ್ರಮುಖ ಮಾನದಂಡವಾಗಲಿದೆ.
ಈ ಸಂಬಂಧ ರಾಜ್ಯ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದ್ದು, ಏ.22ರಿಂದಲೇ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿದ್ದು ಬೆಳಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆ ಹಾಗೂ ಮಧ್ಯಾಹ್ನ 2ರಿಂದ 4.30ರವರೆಗೆ ನಡೆಯಲಿದೆ. ಪ್ರತಿ ಪ್ರಶ್ನೆ ಪತ್ರಿಕೆಯೂ ತಲಾ 150 ಅಂಕಗಳನ್ನು ಒಳಗೊಂಡಿರುತ್ತದೆ. ಈ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳ ಭಾಷೆ, ಗಣಿತ, ಪರಿಸರ ಅಧ್ಯಯನ, ಸಮಾಜ ವಿಜ್ಞಾನ ಹಾಗೂ ಶಿಶು ಮನೋವಿಜ್ಞಾನದ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ.
ಅರ್ಹತಾ ಪರೀಕ್ಷೆ ಎಂಬ ಕಬ್ಬಿಣದ ಕಡಲೆ:
ಎನ್ಸಿಟಿಇ ಮಾನದಂಡದಂತೆ ಪ್ರಶ್ನೆ ಪತ್ರಿಕೆ ರೂಪಿಸಲಾಗುತ್ತಿದೆ. ಪ್ರಶ್ನೆ ಪತ್ರಿಕೆ-1ರಲ್ಲಿ ಅಭ್ಯರ್ಥಿಗಳ ಸಾಮಾನ್ಯ ಜ್ಞಾನವನ್ನು ಪರೀಕ್ಷಿಸಿದರೆ, ಎರಡನೇ ಪತ್ರಿಕೆಯಲ್ಲಿ ಭಾವಿ ಶಿಕ್ಷಕರ ವಿಷಯ ಜ್ಞಾನವನ್ನು ಓರೆಕಲ್ಲಿಗೆ ಹಚ್ಚಲಾಗುತ್ತದೆ. ಇವೆರಡು ಪ್ರಶ್ನೆ ಪತ್ರಿಕೆಯಲ್ಲಿ ತಲಾ 5 ವಿಷಯಗಳಿರುತ್ತವೆ. ಪ್ರತಿ ವಿಷಯವು 30 ಅಂಕಗಳನ್ನು ಹೊಂದಿರುತ್ತದೆ. ಎನ್ಸಿಟಿಇಯಿಂದ ವಿಶೇಷ ಅನುಮತಿ ಪಡೆದಿರುವ ಕರ್ನಾಟಕ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ನಡೆಸಲು ಅನುಮತಿ ಪಡೆಯಲಾಗಿದೆ. ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆ ಇರುತ್ತದೆ. ಪ್ರಶ್ನೆ ಪತ್ರಿಕೆಯ ವ್ಯಾಪ್ತಿ ಕುರಿತ ಪಠ್ಯಕ್ರಮವು ಸಾರ್ವಜನಿಕ ಶಿಕ್ಷಣ ಇಲಾಖೆ (www.schooleducation.kar.nic.in)ಯ ವೆಬ್ಸೈಟ್ನಲ್ಲಿ ದೊರೆಯುತ್ತದೆ.
ಉತ್ತರ ಪತ್ರಿಕೆಗೆ ಒಎಂಆರ್ ಶೀಟ್ ಬಳಸುತ್ತಿರುವುದರಿಂದ ಅಭ್ಯರ್ಥಿಗಳು ಉತ್ತರಿಸುವಾಗ ಎಚ್ಚರ ವಹಿಸಬೇಕಾಗುತ್ತದೆ. ಕರ್ನಾಟಕದ ಅಭ್ಯರ್ಥಿಗಳು ಉತ್ತರ ಭಾರತದ ಕಳಪೆ ಫಲಿತಾಂಶದ ಕಹಿ ನೆನಪನ್ನು ಮರೆಸುತ್ತಾರೆಯೇ ಎಂದು ಕಾದು ನೋಡಬೇಕಿದೆ.
ಅರ್ಜಿ ಶುಲ್ಕ
ಪತ್ರಿಕೆ 1 ಅಥವಾ 2- 500 (250 ಪರಿಶಿಷ್ಟ ಜಾತಿ, ವರ್ಗ, ಪ್ರವರ್ಗ-1, ವಿಕಲಚೇತನರಿಗೆ)
ಪತ್ರಿಕೆ 1 ಮತ್ತು 2 ಸೇರಿ- 800 (400 ಪರಿಶಿಷ್ಟ ಜಾತಿ, ವರ್ಗ, ಪ್ರವರ್ಗ-1, ವಿಕಲಚೇತನರಿಗೆ)
* ಅರ್ಜಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್ಸೈಟ್ನಲ್ಲಿ ಏ.22ರಿಂದ ಲಭ್ಯ. ಇಲ್ಲಿಂದಲೇ ಚಲನ್ ಡೌನ್ಲೋಡ್ ಮಾಡಿಕೊಂಡು ಸ್ಟೇಟ್ ಬ್ಯಾಂಕ್ ಆಪ್ ಮೈಸೂರಿನಲ್ಲಿ ಶುಲ್ಕ ಪಾವತಿಸಬೇಕು.
* ಅರ್ಜಿ ಸಲ್ಲಿಸಲು ಮೇ 3 ಕೊನೆಯ ದಿನ.
* ಪರೀಕ್ಷೆ ನಡೆಯುವ ದಿನ ಜೂ.1
* ಪ್ರಶ್ನೆ ಪತ್ರಿಕೆ-1: ಶಿಶು ಮನೋವಿಜ್ಞಾನ ಮತ್ತು ವಿಕಸನ, ಭಾಷೆ-1(ಕನ್ನಡ/ಉರ್ದು/ಮರಾಠಿ/ತೆಲುಗು/ಮಲಯಾಳಂ), ಆಂಗ್ಲ ಭಾಷೆ, ಗಣಿತ, ಪರಿಸರ ಅಧ್ಯಯನ- ಎಲ್ಲವೂ ಕಡ್ಡಾಯ
* ಪ್ರಶ್ನೆ ಪತ್ರಿಕೆ-2: ಶಿಶು ಮನೋವಿಜ್ಞಾನ ಮತ್ತು ವಿಕಸನ(ಕಡ್ಡಾಯ), ಭಾಷೆ-1(ಕಡ್ಡಾಯ), ಆಂಗ್ಲ ಭಾಷೆ(ಕಡ್ಡಾಯ), ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ ಗಣಿತ-ವಿಜ್ಞಾನ ಪರೀಕ್ಷೆ ಕಡ್ಡಾಯ, ಸಮಾಜ ವಿಜ್ಞಾನ ಶಿಕ್ಷಕರಿಗೆ ಸಮಾಜ ವಿಜ್ಞಾನ ಕಡ್ಡಾಯ, ಇತರೆ ಶಿಕ್ಷಕರು ಗಣಿತ-ವಿಜ್ಞಾನ ಅಥವಾ ಸಮಾಜವಿಜ್ಞಾನಗಳಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬಹುದು.
ಸಹಾಯವಾಣಿ: 8904779508/8904765537