ಸಿಐಡಿ ಬಲೆಗೆ ಬಳ್ಳಾರಿ ಬಾಬು?
ಬಳ್ಳಾರಿ: ಶ್ರೀಮಂತರಿಗೆ ಸಾಲ ಕೊಡುತ್ತಿದ್ದ ಬಾಬುಲಾಲ್ ಪರಶುರಾಮ್ ಪುರಿಗೆ ಕಂಟಕ ಆರಂಭವಾಗಿದೆ. 4 ಇಲಾಖೆಗಳು ಬಾಬುಬೆನ್ನು ಬಿದ್ದಿರುವ ಹಿಂದೇ, ಸಿಐಡಿ ತನಿಖೆ ತೂಗುಕತ್ತಿಯೂ ನೇತಾಡುತ್ತಿದೆ.
ಹೆಚ್ಚು ದುಡ್ಡು ಹೊಂದಿದ್ದ ಕಾರಣ ಐಟಿ ಇಲಾಖೆ ತನಿಖೆ ನಡೆಸುತ್ತಿದೆ. ಒಂದೇ ಕಡೆ ರು. 8.57 ಕೋಟಿ ನಗದು ಸಿಕ್ಕಿರುವುದರಿಂದ ಇದು ಹವಾಲಾ ಹಣವೇ ಎಂದು ಜಾರಿ ನಿರ್ದೇಶನಾಲಯ ಪರಿಶೀಲಿಸುತ್ತಿದೆ. ಖೋಟಾ ನೋಟು ಹೊಂದಿರುವುದು, ಮೋಸ ಇತ್ಯಾದಿ ಕ್ರಿಮಿನಲ್ ಆರೋಪಗಳ ಬಗ್ಗೆ ಪೊಲೀಸರು ತನಿಖೆ ನಡೆಸಿದರೆ, ಕರ್ನಾಟಕ ಭೂ ಸುಧಾರಣೆ ಕಾಯಿದೆ ಉಲ್ಲಂಘಿಸಿ 150 ಎಕರೆ ಭೂಮಿ ಹೊಂದಿದ್ದಕ್ಕೆ ಕಂದಾಯ ಇಲಾಖೆ ತನಿಖೆ ನಡೆಸುತ್ತಿದೆ. ಅಲ್ಲದೆ, ವಿದೇಶದಿಂದ ಹಣ ಬಂದಿರುವ ಶಂಕೆ ವ್ಯಕ್ತವಾದರೆ, ಸಿಐಡಿಯಿಂದಲೂ ತನಿಖೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಬಾಬುಲಾಲ್ ಬಡ್ಡಿ ವ್ಯವಹಾರದಿಂದ ನೊಂದವರೇ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ಮಾಹಿತಿ ನೀಡಿ ಸಹಕರಿಸುತ್ತಿದ್ದಾರೆ.
ಬಾಬುಲಾಲ್ ಹಾಗೂ ಇತರ ಮೂವರ ಮೇಲೆ ಹಣ ಸಂಗ್ರಹ ಮುಂತಾದ ಪ್ರಕರಣ ದಾಖಲಿಸಿಕೊಂಡು, ಪೊಲೀಸ್ ಇಲಾಖೆಯಿಂದ ತನಿಖೆ ನಡೆಸಲಾಗುತ್ತಿದೆ. ಅಗತ್ಯ ಬಿದ್ದರೆ ತನಿಖೆಗೆ ಏಜೆನ್ಸಿಗಳ ಸಹಕಾರ ಪಡೆಯಲಾಗುವುದು.
- ಡಾ. ಚೇತನ್ ಸಿಂಗ್ ರಾಥೋರ್, ಬಳ್ಳಾರಿ ಎಸ್ಪಿ