ಕೋಮುಸೌ ಮುಖಂಡನ ಮುಖಕ್ಕೆ ಸೆಗಣಿ
ಮಂಗಳೂರು: ಗೋಸಾಗಣೆ ಮಾಡುತ್ತಿದ್ದವರ ಮೇಲೆ ನಕ್ಸಲ್ ನಿಗ್ರಹದಳ ಗುಂಡಿಕ್ಕಿದ್ದ ಪ್ರಕರಣ ಖಂಡಿಸಲು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದಿದ್ದ ಕೋಮುಸೌಹಾರ್ದ ವೇದಿಕೆ ಮುಖಂಡ ಸುರೇಶ್ ಭಟ್ ಬಾಕ್ರಬೈಲ್ ಮುಖಕ್ಕೆ ಇಬ್ಬರು ಸೆಗಣಿ ಮೆತ್ತಿದ್ದಾರೆ!
ಸುರೇಶ್ ಭಟ್ ನಗರದ ವುಡ್‌ಲ್ಯಾಂಡ್ ಹೊಟೇಲ್‌ನಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ್ದರು. ಬಳಿಕ ಆಪ್ತೇಷ್ಟರ ಜತೆ ಚಹಾ ಕುಡಿದು ಚರ್ಚಿಸುತ್ತಿರುವ ವೇಳೆ ಆಗಮಿಸಿದ ಇಬ್ಬರು ಯುವಕರು ಏಕಾಏಕಿ ನುಗ್ಗಿ ಸುರೇಶ್ ಭಟ್ ಬಾಕ್ರಬೈಲ್ ಮುಖಕ್ಕೆ ಸೆಗಣಿ ಬಳಿದರು. ಒಬ್ಬ ಯುವಕನನ್ನು ಹಿಡಿದ ವೇದಿಕೆ ಕಾರ್ಯಕರ್ತರು ಎರಡೇಟು ಬಿಗಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಸೆಗಣಿ ಬಳಿದ ಯುವಕನನ್ನು ಹರೀಶ್ ಎಂದು ಗುರುತಿಸಲಾಗಿದೆ.
'ಈ ಕೋಮುಸೌಹಾರ್ದ ವೇದಿಕೆಯವರು ಒಂದು ಸಮುದಾಯದ ಪರವಾಗಿ ಮಾತ್ರ ಮಾತನಾಡುತ್ತಾರೆ' ಎಂಬ ಕಾರಣಕ್ಕೆ ಯುವಕರು ಸುರೇಶ್ ಭಟ್ ಮುಖಕ್ಕೆ ಸೆಗಣಿ ಬಳಿದಿದ್ದಾರೆ ಎನ್ನಲಾಗಿದೆ. ಇದರ ಹಿಂದೆ ಹಿಂದೂ ಸಂಘಟನೆಗಳ ಕೈವಾಡ ಕುರಿತು ಬಂದರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸೆಗಣಿ ಪ್ರಕರಣ ವಿವರ: ಕೋಮು ಸೌಹಾರ್ದ ವೇದಿಕೆಯ ಸುರೇಶ್ ಭಟ್ ಬಾಕ್ರಬೈಲ್, ಮಾಂಸ ವ್ಯಾಪಾರ ಸಂಘಟನೆಯ ಅಲಿ ಹಸನ್, ಇಸ್ಮತ್ ಏಜೀರ್ ಮೊದಲಾದವರು ಸುದ್ದಿಗೋಷ್ಠಿ ಕರೆದಿದ್ದರು. ಕಬೀರ್ ಎನ್‌ಕೌಂಟರ್ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಆಗ್ರಹಿಸಿದ ಅವರು, ನಕ್ಸಲ್ ನಿಗ್ರಹ ದಳದ ಎಲ್ಲರನ್ನು ತನಿಖೆಗೆ ಒಳಪಡಿಸಬೇಕು. ಇದೊಂದು ದುರುದ್ದೇಶಪೂರಿತ ಅಮಾನವೀಯ ಕೃತ್ಯ ಎಂದು ಖಂಡಿಸಿದ್ದರು.
ಸುದ್ದಿಗೋಷ್ಠಿ ಮುಗಿದು ಕೋ.ಸೌ. ವೇದಿಕೆ ಮುಖಂಡರು ಚಹಾ ಸೇವಿಸುತ್ತ ಚರ್ಚೆಯಲ್ಲಿ ತೊಡಗಿದ್ದರು. ಆಗ ಗಂಟೆ 4 ಕಳೆದಿತ್ತು. ಇತ್ತ ಸುದ್ದಿಗೋಷ್ಠಿ ನಡೆಯುವ ವೇದಿಕೆ ಹೊರಗಡೆ ನಾಲ್ವರು ಯುವಕರು ಲಕೋಟೆ ಹಿಡಿದುಕೊಂಡು ಕಾಯುತ್ತಿದ್ದರು.
ಮಾಧ್ಯಮದವರು ಚಹಾ ಕುಡಿದು ಹೊರ ಹೋಗತೊಡಗಿದರು. ಅಷ್ಟರಲ್ಲಿ ಇಬ್ಬರು ಯುವಕರು ಸೆಗಣಿ ಹಿಡಿದುಕೊಂಡು ಚಹಾ ಕುಡಿಯುತ್ತಿದ್ದ ಸುರೇಶ್ ಭಟ್ ಮುಖಕ್ಕೆ ಸೆಗಣಿ ಬಳಿದರು. ಸೆಗಣಿ ಒಣಗಿ ಹೋಗಿದ್ದರಿಂದ ಮುಖಕ್ಕೆ ಅಂಟಲಿಲ್ಲ. ಆಗ ಇನ್ನೊಬ್ಬ ಮತ್ತೆ ಮುಖಕ್ಕೆ ಸೆಗಣಿ ಹಚ್ಚಿದ್ದಾನೆ. ಈ ವೇಳೆಗೆ ನೋಡಿ ದಂಗಾಗಿದ್ದ ಕಾರ್ಯಕರ್ತರು ಒಬ್ಬ ಯುವಕನನ್ನು ಹಿಡಿದು ಕೆನ್ನೆಗೆ ಎರಡು ಬಾರಿಸಿದರು.
ನೈತಿಕ ಪೊಲೀಸ್‌ಗಿರಿ!
ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು ಎಂದು ಸದಾ ವಾದ ಮಾಡುತ್ತಿದ್ದ ಕೋ.ಸೌ. ಮುಖಂಡರ ಎದುರೇ ಕಾರ್ಯಕರ್ತರು ಸೆಗಣಿ ಬಳಿದ ಯುವಕನ ಮೇಲೆ ಹಲ್ಲೆ ಮಾಡಿದರು. ಕೊರಳ ಪಟ್ಟಿ ಹಿಡಿದು ಕೆನ್ನೆಗೆ ಬಾರಿಸಿದರು. ಬಳಿಕ ಪೊಲೀಸರ ಕೈಗೆ ಕೊಟ್ಟರು.