ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ತಾಯಿ ಅಂತ್ಯಸಂಸ್ಕಾರ ಮಾಡುವವರು ಯಾರು?

Vishwanath S
Updated On : 23 Apr 2014, 12:31 pm

ಶಿವಮೊಗ್ಗ: ಬಂಗಾರಪ್ಪನವರ ಪತ್ನಿ ಶಕುಂತಲಾ ಬಂಗಾರಪ್ಪ ಅವರ ಅಂತ್ಯಸಂಸ್ಕಾರವನ್ನು ಯಾರು ಮಾಡುತ್ತಾರೆ? ರಾಜ್ಯ ಕಂಡ ವರ್ಣರಂಜಿತ ರಾಜಕಾರಣಿ ಸಾರೇಕೊಪ್ಪ ಬಂಗಾರಪ್ಪ ಅವರ ಕುಟುಂಬ ಕಲಹದೊಂದಿಗೆ ಈ ಪ್ರಶ್ನೆಯೂ ತಳುಕು ಹಾಕಿಕೊಂಡಿದೆ.
ಏಕೆಂದರೆ ಬಂಗಾರಪ್ಪ ನಿಧನರಾದ ಸಂದರ್ಭದಲ್ಲಿ ಹಿರಿಯ ಪುತ್ರ ಕುಮಾರ್ ಬಂಗಾರಪ್ಪ ಅವರಿಗೆ ಸಂಸ್ಕಾರ ಮಾಡಲು ಅವಕಾಶ ಕೊಟ್ಟಿರಲಿಲ್ಲ. ಎರಡನೇ ಪುತ್ರ ಮಧು ಬಂಗಾರಪ್ಪ ಅವರೇ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು. ಈಗ ತಾಯಿ ನಿಧನರಾಗಿದ್ದು ಯಾರು ಅವರ ಅಂತ್ಯಸಂಸ್ಕಾರ ಮಾಡುತ್ತಾರೆ ಎಂಬ ಪ್ರಶ್ನೆ ಮತ್ತೆ ಭುಗಿಲ್ಲೆದ್ದಿದೆ. ಈ ಪ್ರಶ್ನೆ ಉದ್ಭವವಾಗುವುದಕ್ಕೆ ಕಾರಣರಾಗಿದ್ದು, ಮಾಜಿ ಶಾಸಕ ಜಿ.ಡಿ. ನಾರಾಯಣಪ್ಪ. ಇವರು ಶಕುಂತಲಾ ಬಂಗಾರಪ್ಪ ಅವರ ತಂಗಿಯ ಪತಿ. 'ಬಂಗಾರಪ್ಪ ಅವರು ನಿಧನರಾಗಿದ್ದಾಗ ಸುಮ್ಮನೆ ಘರ್ಷಣೆಗೆ ಅವಕಾಶ ಕೊಡಬಾರದು ಎಂದು ಕುಮಾರ್ ಬಂಗಾರಪ್ಪ ಹಿಂದೆ ಸರಿದಿದ್ದರು. ಈ ಬಾರಿ ಕುಮಾರ್ ಅವರಿಗೇ ಅವಕಾಶ ಕೊಡಬೇಕು. ಇಲ್ಲದಿದ್ದರೆ ಜನರು ಆಕ್ರೋಶ ವ್ಯಕ್ತಪಡಿಸಬಹುದು' ಎಂದಿದ್ದಾರೆ.
ಏನಾಗಿತ್ತು: ಬಂಗಾರಪ್ಪ 2011ರ ಡಿ.26 ರಂದು ಬೆಂಗಳೂರಿನಲ್ಲಿ ನಿಧನರಾದರು. ಬೆಂಗಳೂರಿನಿಂದ ಅವರ ಪಾರ್ಥಿವ ಶರೀರವನ್ನು ಸೊರಬಕ್ಕೆ ತಂದು ಡಿ.27ರಂದು ಅಂತ್ಯಸಂಸ್ಕಾರ ಮಾಡಲಾಗಿತ್ತು. ಇಡೀ ಮೆರವಣಿಗೆಯಲ್ಲಿ ಕುಮಾರ್ ಬಂಗಾರಪ್ಪ ಜತೆಗಿದ್ದರು. ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರವನ್ನು ಪ್ರದರ್ಶನಕ್ಕೆ ಇರಿಸಿಲಾಗಿದ್ದ ಸಂದರ್ಭದಲ್ಲಿ ಮಧು ಹಾಗೂ ಕುಮಾರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ನೀನು ಹತ್ತಿರ ಬರಬೇಡ ಎಂದು ಮಧು ಕುಮಾರ್‌ಗೆ ಹೇಳಿದ್ದರು. ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡುವ ಸಂದರ್ಭದಲ್ಲಿ ಪೂಜೆಯನ್ನು ಮಧು ನೆರವೇರಿಸಿದ್ದರು. ಕುಮಾರ್ ಹತ್ತಿರಕ್ಕೂ ಹೋಗಲಿಲ್ಲ. ಕಾಗೋಡು ತಿಮ್ಮಪ್ಪ ಸಂಸ್ಕಾರದಲ್ಲಿ ಭಾಗವಹಿಸುವಂತೆ ಒತ್ತಾಯಿದ್ದರು. ಆದರೆ ಕುಮಾರ್ ದೂರವೇ ಉಳಿದಿದ್ದರು. ಮರುದಿನ ಡಿ.28ರಂದು ಬೆಳಗ್ಗೆ ಕುಮಾರ್ ಬಂಗಾರಪ್ಪ ಕುಟುಂಬ ಸಹಿತ ಪೂಜೆಗೆಂದು ಸಂಸ್ಕಾರ ಸ್ಥಳಕ್ಕೆ ಆಗಮಿಸಿದಾಗ ಅವರಿಗೆ ತಡೆಯೊಡ್ಡಲಾಗಿತ್ತು. ಅವತ್ತು ಇಡೀ ದಿನ ಮಾಧ್ಯಮಗಳಲ್ಲಿ ಸಹೋದರರು ಪರಸ್ಪರ ಬೈದಾಡಿಕೊಂಡಿದ್ದರು. ಅಂದಿನಿಂದ ಸಹೋದರರು ಒಂದಾಗಲಿಲ್ಲ.
ಸಂಪ್ರದಾಯ ಏನಿದೆ?: ದೀವ ಸಮುದಾಯದಲ್ಲಿ ಸಂಸ್ಕಾರ, ಮದುವೆ ಇತ್ಯಾದಿ ಸಂದರ್ಭದಲ್ಲಿ ವೈದಿಕ ಸಂಪ್ರದಾಯವನ್ನೇ ಪಾಲಿಸುತ್ತಾರೆ. ಅದರಂತೆ ಸಾಮಾನ್ಯವಾಗಿ ಹಿರಿಯ ಪುತ್ರನೇ ಅಂತ್ಯಸಂಸ್ಕಾರ ನಡೆಸಬೇಕು. ಆದರೆ ಬಂಗಾರಪ್ಪ ಅವರ ಅಂತ್ಯಸಂಸ್ಕಾರ ಸಂದರ್ಭದಲ್ಲಿ ಈ ಸಂಪ್ರದಾಯ ಪಾಲನೆ ಆಗಿರಲಿಲ್ಲ.
ಈಗಲಾದರೂ ಆಗುವುದೋ, ಇಲ್ಲವೋ- ಬುಧವಾರ ಮಧ್ಯಾಹ್ನ ಬಂಗಾರ ಧಾಮದಲ್ಲಿ ಉತ್ತರ ಸಿಗಲಿದೆ.
ಶಕುಂತಲಾ ಅವರನ್ನು ಚುನಾವಣೆ ಪ್ರಚಾರಕ್ಕೆ ಕರೆದುಕೊಂಡು ಬಂದಿದ್ದು ಸರಿಯಾದ ಕ್ರಮ ಅಲ್ಲ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಕೀಮೋಥೆರಪಿಗೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ರಕ್ತ ಕಡಿಮೆಯಾಗಿರುತ್ತದೆ. ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೇ ಇವರು (ಮಧು ಮತ್ತಿತರರು) ಚುನಾವಣೆಗೆ ಓಡಾಡಿಸಿದ್ದಾರೆ. ಕನಿಷ್ಠ  ಮಾನವೀಯತೆಯೂ ಇಲ್ಲದಂತೆ ವರ್ತಿಸಿದ್ದಾರೆ.
- ಡಾ. ಜಿ.ಡಿ. ನಾರಾಯಣಪ್ಪ, ಮಾಜಿ ಶಾಸಕ

-ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement