ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮುಳುಗಿದ ಸೇತುವೆ, ದ್ವೀಪವಾದ ಬದುಕು

Vishwanath S
Updated On : 23 Apr 2014, 12:30 pm

ಆಲಮೇಲ: ಭೀಮಾ ನದಿಗೆ ನಿರ್ಮಿಸಿರುವ ಬ್ಯಾರೇಜ್‌ನಿಂದ ಬಿಜಾಪುರ ಹಾಗೂ ಗುಲ್ಬರ್ಗ ಜಿಲ್ಲೆ ವ್ಯಾಪ್ತಿಯ 40 ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಹತ್ತಾರು ಕಿ.ಮೀ. ಅಂತರದಲ್ಲಿ ದೊರೆಯುತ್ತಿದ್ದ ಸೌಲಭ್ಯಕ್ಕೆ ಈಗ ನೂರಾರು ಕಿ.ಮೀ. ಸುತ್ತಬೇಕಾದ ದುಸ್ಥಿತಿ.
ಗುಲ್ಬರ್ಗ ಜಿಲ್ಲೆಗೆ ಕುಡಿಯುವ ನೀರು ಪೂರೈಕೆ ಉದ್ದೇಶದಿಂದ 2013ರಲ್ಲಿ ಕಡಣಿ ಹಾಗೂ ಭಾಸಗಿ ಗ್ರಾಮದ ನಡುವೆ ಇರುವ ದೇವಣಗಾಂವದ ಬಳಿ ಭೀಮಾ ನದಿಗೆ  ಬ್ಯಾರೇಜ್ ನಿರ್ಮಿಸಲಾಗಿದೆ.  ಸುಮಾರು 40 ಎಕರೆ ಪ್ರದೇಶದಲ್ಲಿ ನಿಂತ ಹಿನ್ನೀರಿನಿಂದ ಈ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಮುಳುಗಡೆಯಾಗಿದೆ. ಹೀಗಾಗಿ ಉಭಯ ಜಿಲ್ಲೆಯ 40ಕ್ಕೂ ಹೆಚ್ಚು ಹಳ್ಳಿಗಳು ಸಂಪರ್ಕ ಕಡಿತಗೊಂಡಿವೆ. ಸಣ್ಣಪುಟ್ಟ ಕೆಲಸಕ್ಕೂ ಹತ್ತಾರು ಕಿ.ಮೀ. ಸುತ್ತಿ ಬಳಸಿ ನಗರ ಸೇರುವ ಸಮಸ್ಯೆ ಎದುರಾಗಿದೆ.
ವ್ಯಾಪಾರ ವಹಿವಾಟು: ಗುಲ್ಬರ್ಗ ಜಿಲ್ಲೆ ಅಫಜಲ್ಪೂರ್ ಹಾಗೂ ಸಿಂದಗಿ ತಾಲೂಕಿನ ಅಲಮೇಲ ನಡುವೆ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯುತ್ತದೆ. ಅಲಮೇಲ ಹಾಗೂ ಅಫಜಲ್ಪೂರ್ ಜನತೆ ಶಿಕ್ಷಣಕ್ಕಾಗಿ ಇವೆರಡೂ ನಗರಗಳನ್ನು ಅವಲಂಬಿಸಿದ್ದಾರೆ. ಸೇತುವೆ ಮುಳುಗಿದ್ದರಿಂದ ಅಲಮೇಲ ಹಾಗೂ ಅಫಜಲ್ಪೂರ್ ನಡುವೆ ಸಂಪರ್ಕ ಕಡಿತಗೊಂಡಿದೆ.
ಕಡಣಿ ಗ್ರಾಪಂ ಕೇಂದ್ರ ಸ್ಥಾನ. ಸುಮಾರು 5ರಿಂದ 6 ಸಾವಿರ ಜನಸಂಖ್ಯೆ ಇದೆ. ಭೀಮಾ ತಟದ ಈ ಗ್ರಾಮದಿಂದ ಸೇತುವೆ ಇದ್ದಾಗ ಪಕ್ಕದ ಗುಲ್ಬರ್ಗ ಜಿಲ್ಲೆಯ ಭಾಸಗಿ, ಕರಜಗಿ, ಹಿರ್ಯಾಳ, ಹಟ್ಟಿ, ಉಡಚಣ, ಮಾಶ್ಯಾಳ, ಹೈದ್ರಾ, ಅಳ್ಳಗಿ, ಅಫಜಲಪುರ ಇತ್ಯಾದಿ ಹೆಚ್ಚು ಹಳ್ಳಿಗಳಿಗೆ ತಲುಪಲು ಒಂದೆರಡು ಗಂಟೆ ಸಾಕಿತ್ತು. ಈಗ ನೂರಾರು ಕಿ.ಮೀ. ಬಳಸಿ ಹಲವಾರು ಗಂಟೆ ಪ್ರಯಾಣ ಮಾಡಬೇಕಾಗಿದೆ. ಇದರಿಂದ ವ್ಯಾಪಾರ, ಉದ್ಯೋಗ, ಆಸ್ಪತ್ರೆ ಎಲ್ಲವೂ ದೂರವಾಗಿವೆ.
ಆಸ್ಪತ್ರೆಯೂ ದೂರ: ಬಿಜಾಪುರ ನಗರಕ್ಕಿಂತ ಸೊಲ್ಲಾಪುರದಲ್ಲಿರುವ ಅತ್ಯಾಧುನಿಕ ಸೌಲಭ್ಯಗಳಿರುವ ಆಸ್ಪತ್ರೆಗಳಿವೆ. ಸೇತುವೆ ಮುಳುಗಿರುವ ಪರಿಣಾಮ 50 ಕಿ.ಮೀ ಇದ್ದ ಸೊಲ್ಲಾಪುರ ಈಗ ಸುತ್ತು ಹಾಕಿ 120 ಕಿ.ಮೀ. ಕ್ರಮಿಸಬೇಕಿದೆ. ನಿತ್ಯ ಅಲ್ಲಿಗೆ ಹೋಗುವುದು ಅನಿವಾರ್ಯವಾಗಿದ್ದರಿಂದ ದ್ವಿಚಕ್ರ ವಾಹನಗಳನ್ನು ದೋಣಿಯಲ್ಲಿ ಹಾಕಿಕೊಂಡು ತೆರಳುವ ದುಸ್ಥಿತಿ ಎದುರಾಗಿದೆ ಎಂದು ಗ್ರಾಮದ ಭೋಗೇಶ ತೇಲಿ ತಮ್ಮ ಅಳಲು ತೋಡಿಕೊಂಡರು.
ಸೇತುವೆ ಎತ್ತರ ಹೆಚ್ಚಳಕ್ಕಾಗಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂಬರುವ ದಿನಗಳಲ್ಲಿ ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು.
- ರಮೇಶ ಭೂಸನೂರ. ಶಾಸಕ


-ಸಿದ್ದಲಿಂಗ ಕಿಣಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement