ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಕ್ಕರೆ ಉತ್ಪಾದನೆಯಲ್ಲಿ ರಾಜ್ಯ ಹೊಸ ದಾಖಲೆ

Vishwanath S
Updated On : 23 Apr 2014, 12:31 pm

ಬೆಳಗಾವಿ: ಸಕ್ಕರೆ ಉದ್ಯಮದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ರಾಜ್ಯ, ಅತಿಹೆಚ್ಚು 370 ಲಕ್ಷ ಟನ್ ಕಬ್ಬು ನುರಿಸಿ 40.66 ಲಕ್ಷ ಟನ್ ಸಕ್ಕರೆ ಉತ್ಪಾದಿಸಿ ಹೊಸ ದಾಖಲೆ ನಿರ್ಮಿಸಿದೆ.
ಕಳೆದ ವರ್ಷ ಇದೇ ಅವಧಿಗೆ 33.50 ಲಕ್ಷ ಟನ್ ಸಕ್ಕರೆ ಉತ್ಪಾದಿಸಲಾಗಿತ್ತು. ಪ್ರಸಕ್ತ ಹಂಗಾಮಿನಲ್ಲಿ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳ ಸಕ್ಕರೆ ಸರಾಸರಿ ಇಳುವರಿ ಶೇ.10.98ರಷ್ಟಿದೆ.
ದೇಶದ ಸಕ್ಕರೆ ಹಂಗಾಮು ಮುಕ್ತಾಯವಾಗಿದ್ದು, ದೇಶದಾದ್ಯಂತ ಆಗಿರುವ ಸಕ್ಕರೆ ಉತ್ಪಾದನೆ ಅವಲೋಕಿಸಿ  ದರೆ ಪ್ರಸಕ್ತ ಸಾಲಿನಲ್ಲಿ ದೇಶಾದ್ಯಂತ ಏ.15ರ ವರೆಗೆ 231.5 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಹಂಗಾಮಿನಲ್ಲಿ 10 ಲಕ್ಷ ಟನ್‌ನಷ್ಟು ಕಡಿಮೆ ಸಕ್ಕರೆ ಉತ್ಪಾದನೆಯಾಗಿದೆ. ದೇಶದಲ್ಲಿ 2013ರಲ್ಲಿ ಇದೇ ಅವಧಿಗೆ 241.5 ಲಕ್ಷ ಟನ್ ಸಕ್ಕರೆ ಉತ್ಪಾದಿಸಲಾಗಿತ್ತು. ಕಬ್ಬಿನ ಬೆಲೆಗಾಗಿ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ನಡೆದ ಪ್ರತಿಭಟನೆಯಿಂದಾಗಿ ವಿಳಂಬವಾಗಿ ಸಕ್ಕರೆ ಉತ್ಪಾದನೆ ಆರಂಭವಾಗಿದ್ದೇ ಸಕ್ಕರೆ ಉತ್ಪಾದನೆಯಲ್ಲಿ ಈ ಬಾರಿ ಕುಸಿತ ಉಂಟಾಗಲು ಕಾರಣ.
ಮಹಾರಾಷ್ಟದಲ್ಲಿ ಏ.15ವರೆಗೆ 74.7 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಲಾಗಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ಪಾದನೆ ಶೇ.6ರಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಈ ಅವಧಿಗೆ 79.1 ಲಕ್ಷ ಟನ್ ಸಕ್ಕರೆ ಉತ್ಪಾದಿಸಲಾಗಿತ್ತು. ಶೇ.11.4 ಸಕ್ಕರೆ ಇಳುವರಿ ಇದೆ. ಉತ್ತರ ಪ್ರದೇಶ ಇಲ್ಲಿಯವರೆಗೆ 62.6 ಲಕ್ಷ ಟನ್ ಸಕ್ಕರೆ ಉತ್ಪಾದಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 10 ಲಕ್ಷ ಟನ್ ಕಡಿಮೆ ಸಕ್ಕರೆ ಉತ್ಪಾದನೆಯಾಗಿದ್ದು, ಸಕ್ಕರೆ ಇಳುವರಿ ಶೇ. 9.26ರಷ್ಟು ಇದೆ.
ಕಳೆದ ವರ್ಷದಷ್ಟೇ ಈ ವರ್ಷವೂ ಆಂಧ್ರ ಪ್ರದೇಶ 9.8 ಲಕ್ಷ ಟನ್ ಸಕ್ಕರೆ ಉತ್ಪಾದಿಸಿದೆ. ತಮಿಳುನಾಡು ಇಲ್ಲಿಯವರೆಗೆ ಒಟ್ಟು 10.25 ಲಕ್ಷ ಟನ್ ಸಕ್ಕರೆ ಉತ್ಪಾದಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ತಮಿಳುನಾಡಿನಲ್ಲಿ ಉತ್ಜಾದನೆ ಶೇ.30ರಷ್ಟು ಕಡಿಮೆಯಾಗಿದೆ.
ಬೆಳಗಾವಿ ಜಿಲ್ಲೆಯೇ ನಂ.1
ರಾಜ್ಯದಲ್ಲಿ ಸಕ್ಕರೆ ಉತ್ಪಾದಿಸುವ 24 ಜಿಲ್ಲೆಗಳ ಪೈಕಿ 'ಸಕ್ಕರೆ ಜಿಲ್ಲೆ' ಎಂದೇ ಖ್ಯಾತಿಯಾಗಿರುವ ಬೆಳಗಾವಿ ಜಿಲ್ಲೆ ಅತಿಹೆಚ್ಚು 1.37 ಕೋಟಿ ಟನ್ ಕಬ್ಬು ನುರಿಸಿ, 122 ಲಕ್ಷ ಕ್ವಿಂಟಾಲ್ ಸಕ್ಕರೆ ಉತ್ಪಾದಿಸುವ ಮೂಲಕ ನಂ. 1 ಸ್ಥಾನದಲ್ಲಿದೆ.  ಕಾರ್ಖಾನೆಗಳ ಪೈಕಿ ಬಾಗಲಕೋಟ ಜಿಲ್ಲೆಯ ಗೋದಾವರಿ ಶುಗರ್ಸ್ ಅತಿಹೆಚ್ಚು 20.45 ಲಕ್ಷ ಟನ್ ಕಬ್ಬು ನುರಿಸಿ, 2.33 ಲಕ್ಷ ಟನ್ ಸಕ್ಕರೆ ಉತ್ಪಾದಿಸುವ ಮೂಲಕ ನಂ.1 ಸ್ಥಾನದಲ್ಲಿದೆ. ಆದರೆ, ಇಳುವರಿಯಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ವೆಂಕಟೇಶ್ವರ ಶುಗರ್ಸ್ ಮೊದಲ ಸ್ಥಾನದಲಿದ್ದು, ಶೇ.12.56 ಇಳುವರಿ ಪಡೆದಿದೆ. ರಾಜ್ಯದ ಸಹಕಾರಿ ಸಕ್ಕರೆ ಕಾರ್ಖಾನೆಗಳಲ್ಲಿ ಚಿಕ್ಕೋಡಿ ದೂಧ್‌ಗಂಗಾ ಶುಗರ್ಸ್ ಅತಿಹೆಚ್ಚು 8.36 ಲಕ್ಷಟನ್ ಕಬ್ಬು ನುರಿಸುವುದರ ಮೂಲಕ ನಂ.1 ಸ್ಥಾನದಲ್ಲಿದೆ. ಆದರೆ, ಸಕ್ಕರೆ ಇಳುವರಿಯಲ್ಲಿ ನಿಪ್ಪಾಣಿಯ ಹಾಲಸಿದ್ಧನಾಥ ಸಹಕಾರಿ ಕಾರ್ಖಾನೆ ಪ್ರಥಮ ಸ್ಥಾನದಲ್ಲಿದ್ದು, ಶೇ.12.52ರಷ್ಟು ಇಳವರಿ ಹೊಂದಿದೆ.
ಕಬ್ಬಿಗೆ ಯೋಗ್ಯ ದರ ನೀಡಬೇಕು ಎಂಬ ರೈತರ ಹೋರಾಟದಿಂದಾಗಿ ಈ ಬಾರಿ ಒಂದೂವರೆ ತಿಂಗಳ ವಿಳಂಬವಾಗಿ ಸಕ್ಕರೆ ಹಂಗಾಮು ಆರಂಭವಾಗಿದ್ದರಿಂದ ಕಬ್ಬಿನ ತೂಕದಲ್ಲಿ ಹೆಚ್ಚಾಗಿದ್ದು, ಇಳುವರಿಯ ಪ್ರಮಾಣವೂ ಹೆಚ್ಚಾಗಿದ್ದರಿಂದ ಇದೇ ಮೊದಲ ಬಾರಿಗೆ ರಾಜ್ಯದ ಸಕ್ಕರೆ ಉದ್ಯಮದ ಇತಿಹಾಸದಲ್ಲಿಯೇ ಅತಿಹೆಚ್ಚು ಸಕ್ಕರೆ ಉತ್ಪಾದಿಸಲು ಸಾಧ್ಯವಾಗಿದೆ.
-ಎಸ್.ಎಸ್.ಪಟ್ಟಣಶೆಟ್ಟಿ, ಸಕ್ಕರೆ ಆಯುಕ್ತ  


-ರಾಯಣ್ಣ ಆರ್.ಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement