9/11 ದಾಳಿಯೇ ಐಎಂ ಸ್ಥಾಪನೆಗೆ ಸ್ಫೂರ್ತಿ: ಭಟ್ಕಳ್
ನವದೆಹಲಿ: ನ್ಯೂಯಾರ್ಕ್ನಲ್ಲಿ ಅವಳಿ ಕಟ್ಟಡಗಳ ಮೇಲೆ ನಡೆದ ಸ್ಫೋಟವು ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆ ಸ್ಥಾಪಿಸಲು ಯಾಸೀನ್ ಭಟ್ಕಳ್ಗೆ ಸ್ಫೂರ್ತಿ ನೀಡಿತ್ತಂತೆ.
ಹೀಗೆಂದು ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ಪೊಲೀಸರು ದೆಹಲಿ ಕೋರ್ಟ್ಗೆ ಬುಧವಾರ ಮಾಹಿತಿ ನೀಡಿದ್ದಾರೆ. ವಿಚಾರಣೆ ವೇಳೆ ಭಟ್ಕಳ್ ಈ ವಿಚಾರ ಬಾಯಿಬಿಟ್ಟಿರುವುದಾಗಿ ಅವರು ತಿಳಿಸಿದ್ದಾರೆ. ಜತೆಗೆ ಭಟ್ಕಳ್ ವಿರುದ್ಧ 2 ಆರೋಪಪಟ್ಟಿಗಳನ್ನು ಸಲ್ಲಿಸಿದ್ದಾರೆ.
ದಾಳಿಯಿಂದ ಸಿಕ್ಕಿತು ಸ್ಫೂರ್ತಿ: 2001ರ ಸೆ.11ರಂದು ವಿಶ್ವ ವಾಣಿಜ್ಯ ಸಂಸ್ಥೆ ಮೇಲೆ ದಾಳಿ ನಡೆಯುವ ಮೊದಲೇ 'ಜಿಹಾದ್'ನತ್ತ ನಾನು ಆಕರ್ಷಿತನಾಗಿದ್ದೆ. ಆದರೆ ಅಂತಹ ಕೃತ್ಯಗಳನ್ನು ಎಸಗಲು ನನ್ನಿಂದ ಸಾಧ್ಯವಿಲ್ಲ ಎಂದು ತಿಳಿದಿದ್ದೆ. ಆದರೆ ನ್ಯೂಯಾರ್ಕ್ನಲ್ಲಿ ನಡೆದ ದಾಳಿ ಇಡೀ ವಿಶ್ವದಲ್ಲೇ ಸಂಚಲನ ಮೂಡಿಸಿದಾಗ ನನಗೆ ಹೊಸ ಸ್ಫೂರ್ತಿ ಸಿಕ್ಕಿತು ಎಂದೂ ಭಟ್ಕಳ್ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತದನಂತರ ಆತ ಗುಜರಾತ್ನ ಸೂರತ್ನಲ್ಲಿ ಸ್ಫೋಟ ನಡೆಸಲೆಂದು ಪಾಕಿಸ್ತಾನದಿಂದ ಅಣುಬಾಂಬ್ಗಳನ್ನು ಖರೀದಿಸುವ ಪ್ರಕ್ರಿಯೆ ಆರಂಭಿಸಿದ್ದ ಎಂದೂ ಹೇಳಿದ್ದಾರೆ ಪೊಲೀಸರು.
ಮಿನಿ ಸ್ಕರ್ಟ್ ಕಾರಣ: ಇದೇ ವೇಳೆ, ಮಿನಿ ಸ್ಕರ್ಟ್ಗಳನ್ನು ಧರಿಸಿ ವಿದೇಶೀಯರು ದೆಹಲಿಯ ಜಾಮಾ ಮಸೀದಿ ಪ್ರವೇಶಿಸುತ್ತಿದ್ದರು. ಇದೇ ಕಾರಣಕ್ಕಾಗಿ ಐತಿಹಾಸಿಕ ಮಸೀದಿ ಮೇಲೆ ದಾಳಿ ನಡೆಸಿದೆವು ಎಂದೂ ಭಟ್ಕಳ್ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸೆಪ್ಟೆಂಬರ್ 2010ರಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿ ಭಟ್ಕಳ್ ಹಾಗೂ ಆತನ ಸಹಚರ ಅಸಾದುಲ್ಲಾ ಅಖ್ತರ್ ವಿರುದ್ಧ ದೆಹಲಿ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಈ ವಿಚಾರವನ್ನು ಉಲ್ಲೇಖಿಸಲಾಗಿದೆ.
ಮಿನಿ ಸ್ಕರ್ಟ್ ಧರಿಸುವುದು ಇಸ್ಲಾಂ ವಿರೋಧಿಯಾಗಿದೆ. ಆದರೆ ವಿದೇಶೀಯರು ಅರೆಬರೆ ಬಟ್ಟೆ ಧರಿಸಿ ಮಸೀದಿ ಪ್ರವೇಶಿಸುತ್ತಿದ್ದರು. ಹಾಗಾಗಿ ಮಸೀದಿಯ 3ನೇ ಗೇಟ್ ಮೇಲೆ ದಾಳಿ ನಡೆಸಲು ಉಗ್ರರು ನಿರ್ಧರಿಸಿದರು ಎಂದು ಪೊಲೀಸರು ಕೋರ್ಟ್ಗೆ ಮಾಹಿತಿ ನೀಡಿದ್ದಾರೆ.