ಅತಿಯಾದ ಓಡಾಟ ಮೃತ್ಯುವಿಗೆ ಕಾರಣವಾಯ್ತೆ?
ತುಮಕೂರು: ಅನಾರೋಗ್ಯವನ್ನು ಲೆಕ್ಕಿಸದೆ, ಗೆಲ್ಲಲೇಬೇಕೆಂಬ ಛಲ ಹೊತ್ತು, ಭರ್ತಿ ಒಂದು ತಿಂಗಳ ಕಾಲ ಎಡೆಬಿಡದೆ ಸುತ್ತಾಡಿದ್ದು ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪನವರ ಸಾವಿಗೆ ಕಾರಣವಾಯಿತೇ
ಜೆಡಿಎಸ್ ಮುಖಂಡರೂ, ಶಾಸಕರೂ ಹಾಗೂ ಕಾರ್ಯಕರ್ತರ ಹೌದು. 8 ತಾಲೂಕು, 30 ಹೋಬಳಿಯ ವ್ಯಾಪ್ತಿಗೆ ಬರುವ ನೂರಾರು ಹಳ್ಳಿಗಳನ್ನು ಎಡೆಬಿಡದೆ ಸುತ್ತಾಡಿದ್ದ ಕೃಷ್ಣಪ್ಪ ದಣಿದಿದ್ದರು. ಹೊರಗಿನವರು ಎಂಬ ಅವಕೃಪೆಗೆ ಪಾತ್ರರಾಗಿದ್ದ ಕೃಷ್ಣಪ್ಪನವರು ಸ್ವತಃ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದರಿಂದ ತುಮಕೂರು ಕ್ಷೇತ್ರವನ್ನು ಗೆಲ್ಲಲೇಬೇಕಾಗಿತ್ತು. ಸ್ವತಃ ಮಾಜಿ ಪ್ರಧಾನಿ ದೇವೇಗೌಡರೇ ಕೃಷ್ಣಪ್ಪ ನಾಮಪತ್ರ ಸಲ್ಲಿಸುವಾಗ ಖುದ್ದು ಹಾಜರಾಗಿದ್ದು ನೋಡಿದರೆ, ಇವರಿಬ್ಬರಿಗೆ ಈ ಚುನಾವಣೆ ಎಷ್ಚು ಮುಖ್ಯ ಎಂದು ವೇದ್ಯವಾಗುತ್ತದೆ.
ಗೌಡರ ಪ್ರಚಾರ: ಕೃಷ್ಣಪ್ಪನವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ತುಮಕೂರು ಜಿಲ್ಲೆಯ ಜೆಡಿಎಸ್ ಶಾಸಕರಿಂದ ವಿರೋಧವಿತ್ತು. ಆದರೆ ದೇವೇಗೌಡರೇ ಮುತುವರ್ಜಿ ವಹಿಸಿ, ಎಲ್ಲರನ್ನು ಒಪ್ಪಿಸಿ ಇವರನ್ನು ತುಮಕೂರು ಲೋಕಸಭಾ ಅಭ್ಯರ್ಥಿಯನ್ನಾಗಿಸಿದ್ದರು. ದೇವೇಗೌಡರ ಅಭ್ಯರ್ಥಿ ಎಂಬ ಕಾರಣಕ್ಕಾಗಿ ಗೌಡರು, ನಿರಂತರವಾಗಿ ತುಮಕೂರು ಲೋಕಸಭಾ ವ್ಯಾಪ್ತಿಗೆ ಭೇಟಿ ನೀಡಿ, ಪ್ರಚಾರ ಕಾರ್ಯ ಕೈಗೊಂಡಿದ್ದರು.
ಇತ್ತ ಕೃಷ್ಣಪ್ಪನವರು ಕೂಡ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದರು. ಒಂದು ವೇಳೆ ಪರಾಜಿತಗೊಂಡಿದ್ದರೆ, ನೈತಿಕ ಹೊಣೆ ಹೊತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುತ್ತಾರೆಂಬ ಸುದ್ದಿ ಕೂಡ ಹಬ್ಬಿತ್ತು. ಹೀಗಾಗಿ ಹಗಲು, ರಾತ್ರಿಯೆನ್ನದೆ, ಆರೋಗ್ಯವನ್ನು ಲೆಕ್ಕಿಸದೆ ಕ್ಷೇತ್ರ ಸುತ್ತಾಡಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ತುಮಕೂರಿನ ಸರಸ್ವತಿಪುರಂನಲ್ಲಿ ಮನೆ ಕೂಡ ಮಾಡಿದ್ದರು. ಬೆಳಗ್ಗೆ 7 ಕ್ಕೆಲ್ಲಾ ಚುನಾವಣಾ ಪ್ರಚಾರಕ್ಕೆ ನುಗ್ಗುತ್ತಿದ್ದ ಕೃಷ್ಣಪ್ಪ, ತಡರಾತ್ರಿ ಮನೆಗೆ ವಾಪಸ್ಸಾಗುತ್ತಿದ್ದರು.
ಪ್ರತಿಷ್ಠೆ ಪಣಕ್ಕೆ: ಒಂದು ತಿಂಗಳ ಅವಧಿಯಲ್ಲೇ, ಪ್ರತಿ ತಾಲೂಕಿಗೆ 3 ಬಾರಿ ಭೇಟಿ ನೀಡಿದ್ದನ್ನು ನೋಡಿದರೆ, ಅವರು ಈ ಚುನಾವಣೆಯನ್ನು ಎಷ್ಟು ಪ್ರತಿಷ್ಠೆಯಾಗಿ ಪರಿಗಣಿಸಿದ್ದರು ಎಂಬುದು ತಿಳಿಯುತ್ತದೆ.
ಸಕ್ಕರೆ ಕಾಯಿಲೆಯನ್ನು ಲೆಕ್ಕಿಸದೆ, ಇಡೀ ದಿನ ಸುತ್ತಿ-ಸುತ್ತಿ ಬಸವಳಿದು ಹೋಗಿದ್ದರು. ಎಷ್ಟೋ ಬಾರಿ ಪ್ರಚಾರದ ಹಿನ್ನೆಲೆಯಲ್ಲಿ ದಣಿವಾಗುತ್ತಿದ್ದ ಕೃಷ್ಣಪ್ಪ ಒಮ್ಮೊಮ್ಮೆ ರೇಗುತ್ತಿದ್ದರು. ತುಮಕೂರಿಗೆ ಪ್ರಚಾರಕ್ಕೆ ಕಾಲಿಟ್ಟಾಗಿನಿಂದ ಚುನಾವಣೆ ಮುಗಿಯುವವರೆಗೂ ಕೃಷ್ಣಪ್ಪ ವಿಶ್ರಾಂತಿಗೆ ಮೊರೆ ಹೋಗಲೇ ಇಲ್ಲ.
ಬೇಸಗೆಯ ಬಿರು ಬಿಸಿಲಲ್ಲಿ ನಿರಂತರ ಪಾದಯಾತ್ರೆ, ರೋಡ್ ಶೋ ಮೂಲಕ ಮತ್ತಷ್ಟು ದಣಿದಿದ್ದರು. ಚುನಾವಣೆ ನಡೆದ ಏ. 17 ರಂದು ಕೂಡ ಕೃಷ್ಣಪ್ಪ ಬೆಳಗ್ಗೆಯಿಂದ ಸಂಜೆವರೆಗೆ ಮತಗಟ್ಟೆಗಳಿಗೆ ಸುತ್ತುತ್ತಲೇ ಇದ್ದರು. ಈ ರೀತಿ ಬಿಡುವಿಲ್ಲದೆ, ಒತ್ತಡದಲ್ಲೇ ಚುನಾವಣಾ ಕಣದಲ್ಲಿ ಮುಳುಗಿದ್ದ ಕೃಷ್ಣಪ್ಪ ಆರೋಗ್ಯದ ಕಡೆ ಗಮನ ಕೊಡುವುದನ್ನೇ ಮರೆತುಬಿಟ್ಟಿದ್ದರು ಎಂಬುದು ಅವರ ಬೆಂಬಲಿಗರ ಅನಿಸಿಕೆ.
ಉಗಮ ಶ್ರೀನಿವಾಸ್