ಅನಂತ ಸಂಪತ್ತಿನ ಬೀಗದ ಕೈ ಕೋರ್ಟ್ಗೆ
ಕೇರಳದ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಆಡಳಿತಲೋಪದ ಸುತ್ತ...
ನವದೆಹಲಿ: ಕೇರಳದ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಆಡಳಿತಲೋಪದ ಸುತ್ತ ಸುತ್ತಿಕೊಂಡಿರುವ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಬುಧವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು ಗುರುವಾರ ಮಧ್ಯಂತರ ಆದೇಶ ನೀಡು ವುದಾಗಿ ಪ್ರಕಟಿಸಿದೆ.
ಜತೆಗೆ, ದೇವಸ್ಥಾನದ ನೆಲಮಾಳಿಗೆಯಲ್ಲಿರುವ ಎಲ್ಲ 6 ಕೊಠಡಿಗಳ ಕೀಲಿಕೈಯನ್ನು ತಕ್ಷಣವೇ ತಿರುವನಂತಪುರ ಜಿಲ್ಲಾ ನ್ಯಾಯಾಲಯಕ್ಕೆ ಒಪ್ಪಿಸುವಂತೆ ದೇಗುಲದ ಆಡಳಿತ ಮಂಡಳಿಗೆ ಕೋರ್ಟ್ ಆದೇಶಿಸಿದೆ. ದೇಗುಲದ ಆಡಳಿತಕ್ಕೆ ಸಂಬಂಧಿಸಿ ಕೆಲವು ಆತಂಕಕಾರಿ ಹಾಗೂ ಅತ್ಯಂತ ಗಂಭೀರ ವಿಚಾರಗಳು ಬಹಿರಂಗವಾಗಿವೆ. ಇವುಗಳನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳಬೇಕಾದ ಅಗತ್ಯವಿದೆ ಎಂದೂ ಕೋರ್ಟ್ ಹೇಳಿದೆ.
ಹಿರಿಯ ನ್ಯಾಯವಾದಿ ಗೋಪಾಲ ಸುಬ್ರಹ್ಮಣ್ಯಂ ಅವರು ತಮ್ಮ ವರದಿಯಲ್ಲಿ ದೇಗುಲ ಹಾಗೂ ಸಂಪತ್ತು ನಿರ್ವಹಣೆಯಲ್ಲಿ ಆಡಳಿತಮಂಡಳಿ ಮಾಡುತ್ತಿರುವ ಲೋಪಗಳು, ಅವ್ಯವಹಾರಗಳನ್ನು ವಿವರಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಬಗ್ಗೆ ಎಲ್ಲ ಕಕ್ಷಿದಾರರ ವಾದವನ್ನು ಆಲಿಸುತ್ತೇವೆ ಎಂದಿದೆ. ಜತೆಗೆ ಅಮಿಕಸ್ ಕ್ಯೂರಿ ಶಿಫಾರಸುಗಳನ್ನು ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಬೇಕು ಎಂದಿದೆ.