ಆರ್ಥಿಕ ಸಂಕಷ್ಟ; ಕೇಂದ್ರೀಯ ಶಾಲೆಗೆ ಬೀಗ!
ಚಿಕ್ಕಮಗಳೂರು: ವಿದ್ಯಾರ್ಥಿಗಳಿಲ್ಲದೆ ಶಾಲೆಗಳು ಮುಚ್ಚಿರುವುದನ್ನು ಕೇಳಿದ್ದೇವೆ. ಇಲ್ಲಿನ ಶಾಲೆಯನ್ನು ಶಿಕ್ಷಕರಿಲ್ಲದಿದ ಕಾರಣ ಮುಚ್ಚಲಾಗಿದೆ.
ಹಾಗಾದರೆ, ಶಿಕ್ಷಕರು ಸಾಮೂಹಿಕವಾಗಿ ಕರ್ತವ್ಯಕ್ಕೆ ಗುಡ್ ಬೈ ಹೇಳಿದ್ರಾ, ಖಂಡಿತವಾಗಿಯೂ ಇಲ್ಲ. ಇಲ್ಲಿನ ವಿಷಯವೇ ಬೇರೆ. ಶಾಲೆ ನಡೆಸಲು ದುಡ್ಡಿಲ್ಲ ಎಂಬ ಕುಂಟುನೆಪವೊಡ್ಡಿ, ಇಲ್ಲಿದ್ದ ಶಿಕ್ಷಕರನ್ನು ಬೇರೆಗೆ ವರ್ಗಾವಣೆ ಮಾಡಿ, ಶಾಲಾ ಕೊಠಡಿಗಳಿಗೆ ಬೀಗ ಹಾಕಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿರುವ ಕುದುರೆಮುಖ ಅದಿರು ಸಂಸ್ಥೆಯ ಇನ್ನೊಂದು ರೂಪ ಇದಾಗಿದೆ.
ಹೈಕೋರ್ಟ್ ಆದೇಶ ನಿರ್ಲಕ್ಷ್ಯ: ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗಿನ 172 ವಿದ್ಯಾರ್ಥಿಗಳಿದ್ದಾರೆ. ಅವರ ಹಿತದೃಷ್ಟಿಯಿಂದ ಈ ಶಾಲೆಯನ್ನು ರಾಜ್ಯ ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡು ಮುಂದುವರಿಸಿಕೊಂಡು ಹೋಗಬೇಕೆಂದು ಏ.3ರಂದು ಹೈಕೋರ್ಟ್ ಹೇಳಿದೆ. ಇದು ವಿದ್ಯಾರ್ಥಿಗಳಲ್ಲಿ ಹೊಸ ಆಸೆ ಹುಟ್ಟಿಸಿತು. ಆದೇಶ ಮಾತ್ರ ಜಾರಿಗೆ ಬಂದಿಲ್ಲ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಏ.1 ರಿಂದ ಆರಂಭವಾಗಿದೆ. ಆದರೆ, ತರಗತಿಗಳು ಮಾತ್ರ ನಡೆಯುತ್ತಿಲ್ಲ, ವಿದ್ಯಾಲಯದ ಬಾಗಿಲು ಮುಚ್ಚಿದ್ದರೂ ವಿದ್ಯಾರ್ಥಿಗಳು ಎಂದಿನಂತೆ ಶಾಲೆಗಳಿಗೆ ಹೋಗುತ್ತಿದ್ದಾರೆ. ಸಂಜೆಯವರೆಗೆ ಅಲ್ಲಿನ ಮರದ ಕೆಳಗೆ ಕುಳಿತು ಶಾಲೆ ಬಿಡುವ ವೇಳೆಗೆ ಮನೆಗಳಿಗೆ ಬರುತ್ತಿದ್ದಾರೆ.
ಕುದುರೆಮುಖ ಅದಿರು ಸಂಸ್ಥೆ ಈ ಶಾಲೆಯಲ್ಲಿನ ಎಲ್ಲಾ ಶಿಕ್ಷಕರನ್ನು ಬೇರೆಗೆ ವರ್ಗಾವಣೆ ಮಾಡಿದ್ದರಿಂದ ವಿದ್ಯಾರ್ಥಿಗಳು ಇದೀಗ ಅಸಹಾಯಕರಾಗಿದ್ದಾರೆ. ಶಾಲೆ ಬಾಗಿಲು ಮುಚ್ಚಿದ್ದರಿಂದ ಈ ವರ್ಷದ ಪಾಠ, ಪ್ರವಚನಗಳು ಇಲ್ಲದಂತಾಗಿದೆ. ಕುದುರೆಮುಖ ಸಂಸ್ಥೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ನಡೆಸುತ್ತಿದೆ.
ಕುದುರೆಮುಖ ಅದಿರು ಸಂಸ್ಥೆ: ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಏಕೈಕ ಕೇಂದ್ರೀಯ ವಿದ್ಯಾಲಯ ಇದಾಗಿದೆ. ಇಲ್ಲಿ ಸಿಬಿಎಸ್ಇ ಪಠ್ಯ ಕ್ರಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಕಂಪನಿ ಇಲ್ಲಿ ಆರಂಭವಾದ ಹೊಸತರಲ್ಲಿಯೇ ಇಲ್ಲಿನ ಕಾಯಂ ನೌಕರರ ಹಾಗೂ ದಿನಗೂಲಿ ನೌಕರರ, ಆಸುಪಾಸಿನ ಗ್ರಾಮಸ್ಥರ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಶಾಲೆ ತೆರೆಯಲಾಗಿತ್ತು. ಕುದುರೆಮುಖ ಕಂಪನಿ 2005ಕ್ಕೆ ಗಣಿಗಾರಿಕೆ ಸ್ಥಗಿತಗೊಳಿಸಿದ ಸಂದರ್ಭ ಈ ಶಾಲೆ ಮುಂದೊಂದು ದಿನ ಬಾಗಿಲು ಹಾಕುತ್ತದೆ ಎಂದು ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳಾಗಲಿ, ಪೋಷಕರಾಗಲೀ ಅಂದುಕೊಂಡಿರಲಿಲ್ಲ.
ಈ ಶಾಲೆಯ ಶಿಕ್ಷಕರಿಗೆ ಕುದುರೆಮುಖ ಅದಿರು ಸಂಸ್ಥೆ ವೇತನ ನೀಡುತ್ತಿತ್ತು. ಆದರೆ, ಸಂಸ್ಥೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವುದರಿಂದ ಶಾಲಾ ಶಿಕ್ಷಕರಿಗೆ ವೇತನ ನೀಡಲು ಹಣ ಇಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ಶಾಲೆಯನ್ನು ಈ ಸಾಲಿನಿಂದ ಮುಚ್ಚಲು ಮುಂದಾಗಿತ್ತು. ಈ ಶಾಲೆ ಮುಚ್ಚುವುದರಿಂದ ತುಂಬಾ ತೊಂದರೆ ಆಗಲಿದೆ ಎಂದು ವಿದ್ಯಾರ್ಥಿಯೋರ್ವರು ಹೈಕೋರ್ಟ್ ಮೊರೆ ಹೋಗಿದ್ದರು.
ಕೇಂದ್ರೀಯ ವಿದ್ಯಾಲಯ ಸಂಘಟನೆ ಮಾನದಂಡದ ಪ್ರಕಾರ ಅರ್ಹ ಶಿಕ್ಷಕರನ್ನು ನೇಮಕ ಮಾಡಿ ಶಾಲೆಯನ್ನು ಮುಂದುವರಿಸಬೇಕೆಂದು ಮೂಡಿಗೆರೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಏ.15 ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಆರ್.ತಾರಾನಾಥ್