ಕಮರ್ಷಿಯಲ್ ಬೆಟ್ಟಿಂಗ್ನತ್ತ ಬೊಟ್ಟು
ಬಳ್ಳಾರಿ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮತದಾರರ ನಾಡಿಮಿಡಿತ ಅರಿಯಲು ಸಾಧ್ಯವಾಗದ ಕೆಲವು ರಾಜಕೀಯ ಮುಖಂಡರು ತಮ್ಮ ಸೋಲು-ಗೆಲವಿನ ಸುಳಿವು ಅರಿಯಲು ಕಮರ್ಷಿಯಲ್ ಬೆಟ್ಟಿಂಗ್ದಾರರತ್ತ ಚಿತ್ತ ನೆಟ್ಟಿದ್ದಾರೆ.
ಕಮರ್ಷಿಯಲ್ ಬೆಟ್ಟಿಂಗ್ ನಡೆಸುವವರು ಯಾವುದೇ ಪಕ್ಷದ ಪರವಾಗಿ ಇರುವುದಿಲ್ಲ. ದುಡ್ಡು ಗಳಿಸುವ ಉದ್ದೇಶದಿಂದ ಎಲ್ಲ ಮಾಹಿತಿ ಪಡೆದು ಬೆಟ್ಟಿಂಗ್ ವ್ಯವಹಾರ ನಡೆಸುತ್ತಾರೆ. ಈ ಕಾರಣಕ್ಕಾಗಿಯೇ ರಾಜಕೀಯ ಮುಖಂಡರು ಕಮರ್ಷಿಯಲ್ ಬೆಟ್ಟಿಂಗ್ ಬಗ್ಗೆ ಕುತೂಹಲ ಹೊಂದಿದ್ದಾರೆ. ಯಾರ ಪರ ಹೆಚ್ಚು ಬೆಟ್ಟಿಂಗ್ ನಡೆಸುತ್ತಾರೆ ಎಂಬ ಅಂಶದ ಆಧಾರದ ಮೇಲೆ ಸೋಲು-ಗೆಲವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಸದ್ಯದ ಮಟ್ಟಿಗೆ ರಾಜ್ಯದಲ್ಲಿ ಬಿಜೆಪಿ ಪರವಾಗಿಯೇ ಹೆಚ್ಚಿನ ಬೆಟ್ಟಿಂಗ್ ನಡೆಯುತ್ತಿದೆ.
ಕಮರ್ಷಿಯಲ್ ಬೆಟ್ಟಿಂಗ್ ನಡೆಸುವವರು ಸುಮ್ಮನೆ ಹಣ ಹೂಡಿಕೆ ಮಾಡುವುದಿಲ್ಲ. ಅವರು ಹತ್ತಾರು ಸಲ ಆಲೋಚನೆ ಮಾಡುತ್ತಾರೆ. ನಾನಾ ಮಜಲುಗಳನ್ನು ಅವಲೋಕಿಸುತ್ತಾರೆ. ಹತ್ತಾರು ಜನರಿಂದ ಮಾಹಿತಿ ಪಡೆಯುತ್ತಾರೆ. ಬಳಿಕ ಸೋಲು-ಗೆಲವಿನ ಲೆಕ್ಕಾಚಾರ ಹಾಕುತ್ತಾರೆ. ಇದು ಸಂಪೂರ್ಣ ವೈಜ್ಞಾನಿಕ, ನಿಖರ ಅಲ್ಲದಿದ್ದರೂ ರಾಜಕೀಯ ಮುಖಂಡರ ಬೆಟ್ಟಿಂಗ್ಗಿಂತ ಭಿನ್ನ. ರಾಜಕೀಯ ಮುಖಂಡರು, ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿಯೇ ಗೆಲ್ಲುತ್ತಾನೆ ಎಂದು ಬೆಟ್ ಕಟ್ಟುತ್ತಾರೆ. ಹೀಗಾಗಿಯೇ ಕಮರ್ಷಿಯಲ್ ಬೆಟ್ಟಿಂಗ್ ಮಹತ್ವ ಪಡೆದುಕೊಂಡಿದೆ.
ಸೋಲು-ಗೆಲವಿನ ಕುತೂಹಲ: ಬಳ್ಳಾರಿ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ತೀವ್ರ ಪೈಪೋಟಿ ಇದೆ. ಕ್ಷೇತ್ರದ ಮತದಾರರ ನಾಡಿಮಿಡಿತ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟ. ಈ ಹಿನ್ನೆಲೆಯಲ್ಲಿ ರಾಜಕೀಯ ಮುಖಂಡರಲ್ಲಿ ಕುತೂಹಲ ಹೆಚ್ಚಿದೆ. ಕಮರ್ಷಿಯಲ್ ಬೆಟ್ಟಿಂಗ್ ಯಾರ ಕಡೆ ಇದೆ ಎಂಬ ಮಾಹಿತಿ ಪಡೆಯುತ್ತಿದ್ದಾರೆ. ಸದ್ಯ ಐಪಿಎಲ್ ಪಂದ್ಯಾವಳಿ ನಡೆಯುತ್ತಿದ್ದರೂ ರಾಜಕೀಯ ಬೆಟ್ಟಿಂಗ್ ಹೆಚ್ಚು ಕಾವು ಪಡೆದಿದೆ. ದಿನದಿಂದ ದಿನಕ್ಕೆ ಬೆಟ್ಟಿಂಗ್ ನಾನಾ ಬಣ್ಣಗಳನ್ನು ಪಡೆದುಕೊಳ್ಳುತ್ತಿದೆ.
ಕಾಂಗ್ರೆಸ್ ಒಲವು ಕಡಿಮೆ: ಬೆಟ್ಟಿಂಗ್ ಬಗ್ಗೆ ತಿಳಿದಿರುವ, ಹೆಸರು ಹೇಳಲು ಇಚ್ಛಿಸದ ಒಬ್ಬರು 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಮೊದಲು ಬಿಜೆಪಿ ಪರವಾಗಿ ಯಾರಾದರೂ ಬೆಟ್ಟಿಂಗ್ ಆಡುತ್ತೀರಾ ಎಂದು ಕೇಳಿದಾಗ, ನಮ್ಮ ಸ್ನೇಹಿತ ರು. 10 ಲಕ್ಷ ಆಡುತ್ತೇನೆ ಎಂದ. ಆದರೆ 10 ನಿಮಿಷ ಬಿಟ್ಟು ಪಕ್ಕಾ ಹೇಳುತ್ತೇನೆ ಎಂದು ಹೇಳಿದವ ಇದುವವರೆಗೂ ಏನೂ ಹೇಳಿಲ್ಲ. ಇನ್ನು ಕಾಂಗ್ರೆಸ್ ಪರ ಬೆಟ್ಟಿಂಗ್ ಆಡಲು ಯಾರೂ ಮುಂದೆ ಬರುತ್ತಿಲ್ಲ. ಮುಂದೆ ಬಂದರೂ, ಬಿಜೆಪಿ ಪರವಾಗಿ ಲಕ್ಷ ರುಪಾಯಿ ಹಾಕಿದರೆ, ಕಾಂಗ್ರೆಸ್ ಗೆದ್ದರೆ ಒಂದೂವರೆ ಲಕ್ಷ ಕೊಡಬೇಕು. ಬಿಜೆಪಿ ಗೆದ್ದರೆ ರು. 1 ಲಕ್ಷ ಮಾತ್ರ ನೀಡುವ ಬೆಟ್ಟಿಂಗ್ ನಡೆಯುತ್ತಿದೆ. ಇದರಿಂದಾಗಿ ಕಾಂಗ್ರೆಸ್ ಬಗ್ಗೆ ಒಲವು ಅಷ್ಟಾಗಿ ಇಲ್ಲದಿರುವುದು ಕಂಡು ಬರುತ್ತಿದೆ ಎಂದು ತಿಳಿಸಿದರು.
ಬೆಟ್ಟಿಂಗ್ ಸಂಪೂರ್ಣ ಕಾನೂನು ಬಾಹಿರ, ಜತೆಗೆ ಅವೈಜ್ಞಾನಿಕ ಕೂಡ. ಆದರೆ, ಸೋಲು-ಗೆಲವಿನ ಗುಂಗಿನಲ್ಲೇ ಇರುವ ರಾಜಕೀಯ ಮುಖಂಡರು ಆ ಬಗ್ಗೆ ಚರ್ಚೆ ನಡೆದರೆ ಕಿವಿಗೊಡುತ್ತಾರೆ. ಹೀಗಾಗಿಯೇ ಕಮರ್ಷಿಯಲ್ ಬೆಟ್ಟಿಂಗ್ ಬಗ್ಗೆ ಆಸಕ್ತಿ ತಾಳಿದ್ದಾರೆ.
ಒಂದಕ್ಕೆ ಒಂದೂವರೆ ದುಡ್ಡು
ಆರಂಭದಲ್ಲಿ ಕಾಂಗ್ರೆಸ್ ಪರವಾಗಿ ಬೆಟ್ಟಿಂಗ್ ನಡೆದಿತ್ತು. ಆದರೆ, ಈಗ ಬೆಟ್ ಕಟ್ಟುವವರು ಕಾಂಗ್ರೆಸ್ ಬಗ್ಗೆ ನಿರಾಸಕ್ತಿ ತೋರಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಒಂದಕ್ಕೆ ಒಂದು (ಅಂದರೆ ರು. 1000 ಬೆಟ್ ಕಟ್ಟಿದರೆ ರು. 1000 ಕೊಡುವುದು) ಕೊಡುತ್ತಿದ್ದರು. ಉದಾಹರಣೆಗೆ ಬಿಜೆಪಿ ಪರವಾಗಿ 1000 ಕಟ್ಟಿದರೆ, ಕಾಂಗ್ರೆಸ್ ಗೆದ್ದರೆ ರು. 1500 ಕೊಡಬೇಕು. ಬಿಜೆಪಿ ಗೆದ್ದರೆ ರು. 1000 ಮಾತ್ರ ಕೊಡುತ್ತಾರೆ. ಹೀಗೆ ಬೆಟ್ಟಿಂಗ್ ಬಿಜೆಪಿ ಪರವಾಗಿ 1 : 1.5ರಷ್ಟು ನಡೆಯುತ್ತಿರುವುದರಿಂದ ಕಮರ್ಷಿಯಲ್ ಬೆಟ್ಟಿಂಗ್ ಮಾಡುವವರು ಬಿಜೆಪಿ ಪರವಾಗಿ ನಿಲ್ಲುತ್ತಿದ್ದಾರೆ. ಆರಂಭದಲ್ಲಿ ಕಾಂಗ್ರೆಸ್ ಪರವಾಗಿ ಬೆಟ್ಟಿಂಗ್ ಕೇಳುತ್ತಿದ್ದವರು, ಇದೀಗ ಕಡಿಮೆಯಾಗುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಶಶಿಧರ ಮೇಟಿ