ನೀತಿ ಸಡಿಲಾದ ಮೇಲೆ ಘೋಷಣೆ ಅರಳೀತು ಹೀಗೆ
ರಾಜ್ಯದಲ್ಲಿ ಐದು ವರ್ಷಗಳಲ್ಲಿ 1,800 ಕೋಟಿ ವೆಚ್ಚದ 11,500 ಪೊಲೀಸ್ ವಸತಿಗೃಹಗಳನ್ನು...
ಪೊಲೀಸರಿಗೆ ವಸತಿ
ರಾಜ್ಯದಲ್ಲಿ ಐದು ವರ್ಷಗಳಲ್ಲಿ 1,800 ಕೋಟಿ ವೆಚ್ಚದ 11,500 ಪೊಲೀಸ್ ವಸತಿಗೃಹಗಳನ್ನು ನಿರ್ಮಿಸಲಾಗುವುದು ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ಶಿವಾಜಿನಗರ ಹಾಗೂ ಹಲಸೂರು ಪೊಲೀಸ್ ವಸತಿಗೃಹಗಳಿಗೆ ಬುಧವಾರ ಭೇಟಿ ನೀಡಿದ ಬಳಿಕ ಬಳಿಕ ಮಾಧ್ಯಮಗಳ ಜತೆ ಮಾತನಾಡಿದರು.
ರಾಜ್ಯದ ಶೇ.60 ಪೊಲೀಸ್ ಸಿಬ್ಬಂದಿಗೆ ವಸತಿ ಕೊರತೆಯಿದೆ. ಇರುವ ವಸತಿಗೃಹಗಳ ಸಣ್ಣ ಪುಟ್ಟ ಸಮಸ್ಯೆಗಳನ್ನು ಕೂಡಲೇ ಪರಿಹರಿಸಲಾಗುತ್ತದೆ. ನಂತರ ನಿವಾಸಿಗಳ ಸ್ಥಳಾಂತರಿಸಿ ಹಳೇ ಕಟ್ಟಡ ಒಡೆದು ಹೊಸತು ನಿರ್ಮಿಸಲಾಗುತ್ತದೆ. 1,800 ಕೋಟಿ ಮೊತ್ತದ ಕಾಮಗಾರಿ ಟೆಂಡರ್ ಆರಂಭವಾಗಿದೆ. ಹೊಸದರ ಪೈಕಿ 2500 ಬೆಂಗಳೂರಿನಲ್ಲಿ, 9 ಸಾವಿರ ವಸತಿಗೃಹಗಳು ರಾಜ್ಯದ ಇತರೆಡೆ ನಿರ್ಮಾಣಗೊಳ್ಳಲಿವೆ. ಖಾಸಗಿ ಅಪಾ ರ್ಟ್ಮೆಂಟ್ಗಳಿಗೆ ಕಡಿಮೆ ಇಲ್ಲದಂತೆ ಅತ್ಯಾಧುನಿಕವಾಗಿ ಇವು ನಿರ್ಮಾಣಗೊಳ್ಳಲಿವೆ.
ಬೆಂಗಳೂರು ಸೇರಿ ಹಲವೆಡೆ ಸ್ಥಳಾಭಾವ ಇದೆ. ಹೀಗಾಗಿ 8 ಮಹಡಿ ನಿರ್ಮಿಸಲಾಗುತ್ತದೆ. ಲಿಫ್ಟ್, ಜಿಮ್, ಗ್ರಂಥಾಲಯ, ಟೆನ್ನಿಸ್ ಕೋರ್ಟ್, ಆಟದ ಮೈದಾನ ಸೌಲಭ್ಯಗಳಲ್ಲದೇ 24 ತಾಸು ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಸತಿಗೃಹ ವಾಸಿಗಳ ಸಂಘ ಮಾಡಿ ನಿರ್ವಹಣೆ ಹಾಗೂ ಸುರಕ್ಷೆಗೆ ಕ್ರಮ ಜರುಗಿಸಲಾಗುವುದು.
ಗುರಿ ಮೀರಿದ ಮನೆ
ಆರ್ಥಿಕ ಹಿಂದುಳಿದವರಿಗೆ ಒದಗಿಸುವ ಮನೆಗಳ ಗುರಿ 2013-14ನೇ ಸಾಲಿನಲ್ಲಿ ಮೀರಿದ್ದು, ಮುಂದಿನ ಸಾಲಿನಲ್ಲೂ ಗುರಿಗಿಂತ 70 ಸಾವಿರ ಅಧಿಕ ಮನೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ವಸತಿ ಸಚಿವ ಅಂಬರೀಷ್ ತಿಳಿಸಿದ್ದಾರೆ.
ಆರೋಗ್ಯ ಸುಧಾರಣೆ ಬಳಿಕ ಇದೇ ಮೊದಲು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸುದ್ದಿಗಾರರಿಗೆ ಬುಧವಾರ ಮಾಹಿತಿ ನೀಡಿದರು.
2013- 14ನೇ ಸಾಲಿನಲ್ಲಿ 3 ಲಕ್ಷ ಮನೆ ಗುರಿ ಹೊಂದಲಾಗಿತ್ತು. ಗುರಿ ಮೀರಿ 3,17,045 ಮನೆ ಒದಗಿಸಲಾಗಿದೆ. 14-15ರಲ್ಲಿ 3 ಲಕ್ಷ ಮನೆಗಳ ಗುರಿ ಇದೆ. ಈಗಾಗಲೇ 2.2 ಲಕ್ಷ ಫಲಾನುಭವಿಗಳ ಗುರುತಿಸಲಾಗಿದ್ದು, 3.70 ಲಕ್ಷ ಮನೆ ನೀಡುವ ಆಶಯವಿದೆ. ರಾಜ್ಯ ಗುಡಿಸಲು ಮುಕ್ತವಾಗಬೇಕಾದರೆ 13 ಲಕ್ಷ ಮನೆಗಳ ಅಗತ್ಯವಿದೆ. ಇದನ್ನು ಹಂತಹಂತ ಪೂರೈಸಲಾಗುತ್ತದೆ.
ಕೊಳೆಗೇರಿಗಳಲ್ಲಿ ರಾಜೀವ್ಗಾಂಧಿ ಆವಾಸ್ ಯೋಜನೆ ಸೇರಿ 26 ಯೋಜನೆಗಳನ್ನು ಕೇಂದ್ರ ಅನುಮೋದಿಸಿದೆ. ಒಟ್ಟು ವೆಚ್ಚ 1,347 ಕೋಟಿ. 26,845 ಮನೆಗಳನ್ನು ನಿರ್ಮಿಸಲಾಗುತ್ತದೆ. 26 ಯೋಜನೆ ಪೈಕಿ 2ಕ್ಕೆ ಟೆಂಡರ್ ಅಂತಿಮವಾಗಿದ್ದು, 20 ರ ಟೆಂಡರ್ ಮೇ 18ಕ್ಕೆ ಮುಕ್ತಾಯವಾಗಲಿದೆ. ಇನ್ನೂ 777 ಕೋಟಿಯ 23 ಯೋಜನೆಗಳಿಗೆ ಕೇಂದ್ರ ತಾತ್ವಿಕ ಒಪ್ಪಿಗೆ ನೀಡಿದೆ. 16,425 ಮನೆ ಒದಗಿಸಲಾಗುತ್ತದೆ.
ಬೆಳೆ ಹಾನಿಗೆ ಪ್ಯಾಕೇಜ್
ರಾಜ್ಯದಲ್ಲಿ ಆಲಿಕಲ್ಲು ಮಳೆಯಿಂದ ಬೆಳೆ ಹಾನಿಗೊಂಡ ಪ್ರದೇಶದ ರೈತರಿಗೆ ವಿಶೇಷ ಪ್ಯಾಕೇಜ್ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕೃಷಿ ಭೂಮಿ, ನೀರಾವರಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಪ್ರತ್ಯೇಕ ಪರಿಹಾರ ಪ್ರಮಾಣ ನಿಗದಿ ಮಾಡಿದ್ದು, ಒಟ್ಟಾರೆ 326 ಕೋಟಿ ನೆರವು ನೀಡಲಾಗುವುದು ಎಂದು ಕಂದಾಯ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಬುಧವಾರ ತಿಳಿಸಿದ್ದಾರೆ.
ಆಲಿಕಲ್ಲು ಮಳೆಯಿಂದ ರಾಜ್ಯದಲ್ಲಿ 960.44 ಕೋಟಿ ಹಾನಿಯಾಗಿದೆ. ಕೇಂದ್ರದ ಪರಿಶೀಲನಾ ತಂಡ ಪ್ರವಾಸ ಕೈಗೊಂಡಿದೆ. ಎನ್ಡಿಆರ್ಎಫ್ನಿಂದ 82.77 ಕೋಟಿ ಬಿಡುಗಡೆಯಾಗಿದೆ.
ಅಕಾಲಿಕ ಮಳೆಯಿಂದಾಗಿ 18415 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಮಹಾರಾಷ್ಟ್ರ ಮಾದರಿ ಪರಿಹಾರದಿಂದ ಹಾನಿ ಪ್ರಮಾಣ ಸರಿಗಟ್ಟಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ರಾಜ್ಯ ಸರ್ಕಾರವೇ ಪ್ರತ್ಯೇಕ ಪ್ಯಾಕೇಜ್ ಸಿದ್ದಪಡಿಸಿದೆ.
ಇದರ ಪ್ರಕಾರ ಕೃಷಿ ಬೆಳೆಗಳಿಗೆ ಪ್ರತಿ ಹೆಕ್ಟೇರ್ಗೆ 15000, ನೀರಾವರಿ ಬೆಳೆಗಳಿಗೆ 25 ಸಾವಿರ, ತೋಟಗಾರಿಕೆಗೆ 40000 ನಿಗದಿ ಯಾಗಿದೆ. ಎನ್ಡಿಆರ್ಎಫ್ ಪ್ರಕಾರ ಕ್ರಮವಾಗಿ 4500, 9000 ಹಾಗೂ 12000 ಪರಿಹಾರ. ಕೇಂದ್ರದ ನೆರವು ಸೇರಿದಂತೆ ಒಟ್ಟಾರೆ 326 ಕೋಟಿ ಬಿಡುಗಡೆಗೆ ಮುಖ್ಯಮಂತ್ರಿ ಒಪ್ಪಿ ದ್ದಾರೆ. ಮೇ ತಿಂಗಳಲ್ಲಿ ಪರಿಹಾರ ಧನ ಲಭ್ಯ.