'ಬಂಗಾರಧಾಮ'ದಲ್ಲಿ ಶಕುಂತಲಾ ಲೀನ
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಸಮಾಧಿ ಸ್ಥಳ ಬಂಗಾರಧಾಮದಲ್ಲಿ ಮಧು ಬಂಗಾರಪ್ಪ ಅವರು ಬುಧವಾರ...
ಸೊರಬ: ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಸಮಾಧಿ ಸ್ಥಳ ಬಂಗಾರಧಾಮದಲ್ಲಿ ಮಧು ಬಂಗಾರಪ್ಪ ಅವರು ಬುಧವಾರ ಸಂಜೆ ಸರಿಯಾಗಿ 4 ಗಂಟೆ 10 ನಿಮಿಷಕ್ಕೆ ಅಗ್ನಿಸ್ಪರ್ಶ ಮಾಡುವುದರೊಂದಿಗೆ ಸಾರೇಕೊಪ್ಪ ಬಂಗಾರಪ್ಪ ಅವರ ಪತ್ನಿ ಶಕುಂತಲಾ ಬಂಗಾರಪ್ಪ ಅವರ ಪಾರ್ಥಿವ ಶರೀರವು ಪಂಚಭೂತಗಳಲ್ಲಿ ಲೀನವಾಯಿತು.
ಕಿರಿಯ ಪುತ್ರ ಮಧು ಬಂಗಾರಪ್ಪ ಅವರು ಅಗ್ನಿಸ್ಪರ್ಶ ಮಾಡುವ ಕ್ಷಣದಲ್ಲಿಯೇ ಹಿರಿಯ ಪುತ್ರ ಕುಮಾರ್ ಬಂಗಾರಪ್ಪ ಅವರು ಕರ್ಪೂರವನ್ನು ಚಿತೆಯ ಮೇಲೆ ಹತ್ತಿಸಿ ಇಡುವ ಮೂಲಕ ತಮ್ಮ ಕರ್ತವ್ಯವನ್ನೂ ಮಾಡಿದರು. ಆರ್ಶೆಯ ವಿಧಿವಿಧಾನದ ಅಂತ್ಯಸಂಸ್ಕಾರದ ನೇತೃತ್ವವನ್ನು ಪಟ್ಟಣದ ವಿದ್ವಾನ್ ನಾರಾಯಣ ಭಟ್ ಸಂಗಡಿಗರು ವಹಿಸಿದ್ದರು.
ಬೆಳಗ್ಗೆ ಕುಬಟೂರು ಗ್ರಾಮದಲ್ಲಿ ಶಕುಂತಲಮ್ಮ ಅವರ ಪಾರ್ಥಿವ ಶರೀರದ ದರ್ಶನ ಪಡೆಯಲು ಕುಮಾರ್ ಬಂಗಾರಪ್ಪ ಆಗಮಿಸಿದ ಸಂದರ್ಭದಲ್ಲಿ ಆದ ಕೆಲವು ನಿಮಿಷಗಳ ತಳ್ಳಾಟ ಹೊರತುಪಡಿಸಿದರೆ ಇಡೀ ಪ್ರಕ್ರಿಯೆ ಶಾಂತಿಯುತವಾಗಿಯೇ ನಡೆಯಿತು.
ಸ್ವಲ್ಪ ಗೊಂದಲ: ಕುಬಟೂರಿನಲ್ಲಿ ಅಂತಿಮ ವಿಧಿವಿಧಾನ ಆರಂಭಿಸುವ ಮೊದಲು ಕುಮಾರ್ ಬಂಗಾರಪ್ಪನವರ ಆಗಮನಕ್ಕೆ ಕಾಯಲಾಯಿತು. ಕುಮಾರ್ ಬಂಗಾರಪ್ಪ ಆಗಮಿಸುತ್ತಿದ್ದಂತೆ ಸ್ಥಳದಲ್ಲಿದ್ದ ಮಧು ಬಂಗಾರಪ್ಪ ಕದಲದೇ ನಿಂತಿದ್ದರು. ಅವರ ಹಿಂದೆಯೇ ಬಂಗಾರಪ್ಪನವರ ಅಕ್ಕನ ಮಗ ಪಾಲಾಕ್ಷಪ್ಪ ಹಾಗೂ ಕುಟುಂಬದವರು ಆಗಮಿಸುತ್ತಿದ್ದಂತೆಯೇ ಅವರು ಹಾಗೂ ಸಂಬಂಧಿಗಳ ನಡುವೆ ವಾಗ್ವಾದ ಆರಂಭಗೊಂಡು ಪರಸ್ಪರ ಕೈ ಮಿಲಾಯಿಸುವ ಹಂತ ತಲುಪಿತು. ಕುಮಾರ್ ಮತ್ತು ಮಧು ಪರಸ್ಪರ ತಮ್ಮ ಬೆಂಬಲಿಗರನ್ನು ಶಾಂತಗೊಳಿಸಲು ಪ್ರಯತ್ನಿಸಿದರು.
ಪೊಲೀಸರು ಕೂಡ ಮಧ್ಯ ಪ್ರವೇಶಿಸಿ, ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೇ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಶಿವರಾಜ್ ಕುಮಾರ್ ಅವರ ಮಧ್ಯಸ್ಥಿತಿಕೆಯಿಂದ ಎಲ್ಲರೂ ಒಟ್ಟಾಗಿ ಶಾಂತಿಯುತವಾಗಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲು ಮುಂದಾದರು. ಪರಿಸ್ಥಿತಿ ತಿಳಿಗೊಂಡ ನಂತರ ಕುಮಾರ್ ಮತ್ತು ಮಧು ಒಟ್ಟಾಗಿಯೇ ಪೂಜಾ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದರು. ನಂತರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.