ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬದುಕಿನ ಹೊರೆ ಇಳಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ಇನ್ನಿಲ್ಲ

ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಹಾಗೂ...

Mainashree
Updated On : 24 Apr 2014, 3:18 am

ಕನ್ನಡಪ್ರಭ ವಾರ್ತೆ | ಬೆಂಗಳೂರು | ಏ.23
ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಹಾಗೂ ತುಮಕೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಎ.ಕೃಷ್ಣಪ್ಪ ಅವರು ಹೃದಯಾಘಾತದಿಂದ ಬುಧವಾರ ಸಂಜೆ ನಿಧನರಾದರು.
68 ವರ್ಷದ ಎ.ಕೃಷ್ಣಪ್ಪ ಅವರು ಕೆ.ಆರ್. ಪುರದಲ್ಲಿರುವ ಅವರ ಕಾಲೇಜಿನಲ್ಲಿ ಬುಧವಾರ ಸಂಜೆ 6ರಿಂದ 6.30 ರವರೆಗೆ ಬ್ಯಾಡ್ಮಿಂಟನ್ ಆಡುತ್ತಿದ್ದರು. ಎರಡು ಸುತ್ತು ಬ್ಯಾಡ್ಮಿಂಟನ್ ಆಡಿದ ನಂತರ ಸುಸ್ತು ಎಂದು ಅವರು ಕುಸಿದು ಬಿದ್ದರು. ಅವರನ್ನು ಕೆ.ಆರ್. ಪುರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕರೆದೊಯ್ಯಲಾಯಿತು. ಆಸ್ಪತ್ರೆಗೆ ಬರುವ ವೇಳೆಗೆ ಅವರು ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದರು. ನಂತರ ಅವರ ಪಾರ್ಥಿವ ಶರೀರವರನ್ನು ಅವರ ಮನೆಗೆ ಕೊಂಡೊಯ್ಯಲಾಯಿತು.
ಮೃತರಿಗೆ ಪತ್ನಿ ಮಂಜುಳಾ, ಪುತ್ರ ಹರಿಯಾದವ್ ಹಾಗೂ ಪುತ್ರಿಯರಾದ ಅನುಪಮಾ, ಪೂರ್ಣಿಮಾ ಇದ್ದಾರೆ.  ಚಿತ್ರದುರ್ಗ ಜಿಲ್ಲೆಯಲ್ಲಿ ಜನಿಸಿದ ಎ.ಕೃಷ್ಣಪ್ಪ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಕಾಂ, ಪದವಿ ಪಡೆದು, ನಂತರ ಕಾರ್ಮಿಕ ನಾಯಕಾರಾಗಿ ಗುರುತಿಸಿಕೊಂಡಿದ್ದರು. ಕೆ.ಆರ್.ಪುರದಲ್ಲಿರುವ ಐಟಿಐನಲ್ಲಿ ಕಾರ್ಮಿಕರಾಗಿದ್ದ ಎ. ಕೃಷ್ಣಪ್ಪ, ಕಾರ್ಮಿಕ ನಾಯಕರಾಗಿ ಹೋರಾಟಗಳನ್ನು ನಡೆಸಿದ್ದರು.
ರಾಜಕೀಯ ಹೆಜ್ಜೆಗಳು: ಐಟಿಐ ಉಳಿದುಕೊಳ್ಳಲು ಅವರು ಪ್ರಮುಖ ಪಾತ್ರ ವಹಿಸಿದ್ದರು. ಯಾದವ ಸಮುದಾಯಕ್ಕೆ ಸೇರಿದ ಎ.ಕೃಷ್ಣಪ್ಪ ಅವರು 1985ರಲ್ಲಿ ಕಾಂಗ್ರೆಸ್ ಸೇರಿ ರಾಜಕೀಯ ಪ್ರವೇಶಿಸಿದರು.
ವರ್ತೂರು ವಿಧಾನಸಭೆ ಕ್ಷೇತ್ರದಿಂದ 1985ರಲ್ಲಿ ಪ್ರಥಮ ಬಾರಿಗೆ ಶಾಸಕರಾದರು. ಒಟ್ಟಾರೆ, ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ತೋಟಗಾರಿಕೆ, ಸಕ್ಕರೆ, ಪಶುಸಂಗೋಪನೆ, ಸಮಾಜ ಕಲ್ಯಾಣ ಖಾತೆಗಳನ್ನೂ ನಿರ್ವಹಿಸಿದ್ದರು.                  
2008ರ ವಿಧಾನಸಭೆ ಚುನಾವಣೆಯಲ್ಲಿ ಕೆ.ಆರ್. ಪುರ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಕೆ.ಆರ್. ಪುರದಿಂದ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅಂತಿಮ ಹಂತದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದರು. ಹಿರಿಯೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಕಾಂಗ್ರೆಸ್‌ನ ಡಿ. ಸುಧಾಕರ್ ವಿರುದ್ಧ 1205 ಮತಗಳ ಕಡಿಮೆ ಅಂತರದಿಂದ ಸೋಲು ಅನುಭವಿಸಿದ್ದರು.
ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭೆ ಮರುಚುನಾವಣೆಯಲ್ಲಿ ಜೆಡಿಎಸ್ ಸೋತ ನಂತರ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಎ. ಕೃಷ್ಣಪ್ಪ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ್ದರು. 2013ರ ಸೆಪ್ಟೆಂಬರ್ 13ರಂದು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಎ. ಕೃಷ್ಣಪ್ಪ ಕಣಕ್ಕಿಳಿದಿದ್ದರು.


ರಾಜ್ಯಾದ್ಯಂತ ಶೋಕ, ಗಣ್ಯರ ಸಂತಾಪ
ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರು ಕೆ.ಆರ್.ಪುರದಲ್ಲಿರುವ ಕೃಷ್ಣಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
ಕೃಷ್ಣಪ್ಪ ಅವರು ಪಕ್ಷಾತೀತವಾಗಿ ಗೆಳೆಯರನ್ನು ಸಂಪಾದಿಸಿದ್ದರು. ಕಾರ್ಮಿಕ ಮುಖಂಡ, ಹಿಂದುಳಿದ ವರ್ಗದ ನಾಯಕರಾಗಿ ಹಾಗೂ ಸಚಿವರಾಗಿ ಸಮರ್ಥ ಕಾರ್ಯನಿರ್ವಹಣೆ ಮಾಡಿದ್ದರು. ಕೃಷ್ಣಪ್ಪ ನಿಧನದಿಂದ ಜನಪರ ಹಾಗೂ ಜನಪ್ರಿಯ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಕೇಂದ್ರದ ಸಚಿವ ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಉನ್ನತ ಶಿಕ್ಷಣ ಖಾತೆ ಸಚಿವ ಆರ್.ವಿ. ದೇಶಪಾಂಡೆ, ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಥಮ ಬಾರಿಗೆ ಪಕ್ಷೇತರ ಶಾಸಕ

1985ರಲ್ಲಿ ನಡೆದ ವರ್ತೂರು ವಿಧಾನಸಭೆ ಕ್ಷೇತ್ರದಲ್ಲಿ ಎ. ಕೃಷ್ಣಪ್ಪ ಅವರು ಪಕ್ಷೇತರ ಅಭ್ಯರ್ಥಿ ಅಶ್ವತ್ಥನಾರಾಯಣ ರೆಡ್ಡಿ ಅವರನ್ನು 98 ಮತಗಳಿಂದ ಸೋಲಿಸಿ ಪ್ರಥಮ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದ್ದರು.
ಎ. ಕೃಷ್ಣಪ್ಪ ಅವರು 30242 ಮತಗಳನ್ನು ಪಡೆದಿದ್ದರೆ, ಅಶ್ವತ್ಥನಾರಾಯಣ ಅವರು 30144 ಮತ ಪಡೆದಿದ್ದರು. ಸಿಪಿಎಂನ ಎಸ್. ಸೂರ್ಯನಾರಾಯಣರಾವ್ ಅವರು 17,871 ಮತ ಪಡೆದಿದ್ದರು. ಬಿಜೆಪಿಯ ತಿಮ್ಮಾರೆಡ್ಡಿ 7896 ಮತ ಪಡೆದಿದ್ದರು.
1989ರಲ್ಲಿ ನಡೆದ ಚುನಾವಣೆಯಲ್ಲಿ ಇದೇ ವರ್ತೂರು ವಿಧಾನಸಭೆ ಕ್ಷೇತ್ರದಿಂದ ಜನತಾದಳದ ಅಶ್ವತ್ಥನಾರಾಯಣರೆಡ್ಡಿ ಅವರನ್ನು ಎ. ಕೃಷ್ಣಪ್ಪ ಅವರು ಸೋಲಿಸಿದ್ದರು. ಆದರೆ 69586 ಮತ ಪಡೆದಿದ್ದ ಕೃಷ್ಣಪ್ಪ ಅವರು, ಈ ಬಾರಿ 7211 ಮತಗಳ ಅಂತರದಿಂದ ಗೆದ್ದಿದ್ದರು. 1994ರಲ್ಲಿ ಅಶ್ವತ್ಥನಾರಾಯಣ ರೆಡ್ಡಿ ವಿರುದ್ಧ ಸೋತಿದ್ದ ಕೃಷ್ಣಪ್ಪ ಅವರು, 1999ರಲ್ಲಿ ಜೆಡಿಯುನ ಅಶ್ವತ್ಥನಾರಾಯಣರೆಡ್ಡಿ ಅವರನ್ನು ಸೋಲಿಸಿ ಮೂರನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.
ಮುಖ್ಯಮಂತ್ರಿ ಎಸ್.ಎಂ. ಕೃಷ್ಣನೇತೃತ್ವದ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಕೆಲಸ ಮಾಡಿದ್ದರು. 2004ರಲ್ಲೂ ವರ್ತೂರು ಕ್ಷೇತ್ರದಿಂದ ಬಿಜೆಪಿಯ ಅಶ್ವತ್ಥನಾರಾಯಣ ರೆಡ್ಡಿ ಅವರನ್ನು ಸೋಲಿಸಿದ್ದರು. 2009ರಲ್ಲಿ ಕ್ಷೇತ್ರ ಮರುವಿಂಗಡಣೆಯಿಂದ ಕೆ.ಆರ್. ಪುರ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಬಿಜೆಪಿಯ ನಂದೀಶ್ ರೆಡ್ಡಿ ವಿರುದ್ಧ ಸೋಲು ಅನುಭವಿಸಿದ್ದರು.
2013ರಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತರಾಗಿ, ಜೆಡಿಎಸ್ ಸೇರಿ ಹಿರಿಯೂರು ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಲ್ಲಿ ಸೋಲು ಅನುಭವಿಸಿದರು. ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎ. ಕೃಷ್ಣಪ್ಪ ಗೆಲ್ಲುವ ಉತ್ಸಾಹದಲ್ಲಿದ್ದರು.

-ಹಿಂದೆಯೂ ಹೃದಯಾಘಾತ

ಎ. ಕೃಷ್ಣಪ್ಪ ಅವರಿಗೆ 3 ತಿಂಗಳ ಹಿಂದೆಯೂ ಹೃದಯಾಘಾತವಾಗಿತ್ತು. ಈ ಸಂದರ್ಭದಲ್ಲಿ ಅವರೇ ಆಟೋದಲ್ಲಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಎ. ಕೃಷ್ಣಪ್ಪ ಅವರು, ಮೂರು ತಿಂಗಳ ಹಿಂದೆ ಜೆಡಿಎಸ್  ಕಚೇರಿಗೆ ಆಗಮಿಸುವ ಸಂದರ್ಭದಲ್ಲಿ ರೇಸ್‌ಕೋರ್ಸ್ ರಸ್ತೆಯಲ್ಲಿ ಹೃದಯಾಘಾತವಾಗಿತ್ತು. ಆಗ ಯಾರಿಗೂ ವಿಷಯ ತಿಳಿಸದ ಅವರು, ಆಟೋದಲ್ಲಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ತೆಗೆದುಕೊಂಡಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement