ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೋದಿ ಟೀಕಿಸಿದ ಕಾಲೇಜು ಪ್ರಿನ್ಸಿಪಾಲ್

Mainashree
Updated On : 23 Apr 2014, 11:47 am

ಮುಂಬೈ: ಬಿಜೆಪಿಯನ್ನು ಪರೋಕ್ಷವಾಗಿ ಟೀಕಿಸಿ ಮುಂಬೈನ ಪ್ರತಿಷ್ಠಿತ ಸೇಂಟ್ ಕ್ಸೇವಿಯರ್ಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಕಳುಹಿಸಿದ ಇ-ಮೇಲ್ ಈಗ ಹೊಸ ವಿವಾದ ಸೃಷ್ಟಿಸಿದೆ.
ಚುನಾವಣೆಗಿನ್ನು ಒಂದೇ ದಿನ ಎನ್ನುವಾಗ ಪ್ರಾಂಶುಪಾಲ ಡಾ. ಫ್ರೇಜರ್ ಮಸ್ಕರೇನ್ಹಸ್ ಕಳುಹಿಸಿದ ಈ ಸಲಹೆ ರೀತಿಯ ಇ-ಮೇಲ್‌ಗೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ಮಾತ್ರ ಪ್ರಾಂಶುಪಾಲರ ಕ್ರಮವನ್ನು ಸ್ವಾಗತಿಸಿದೆ.

ಇ-ಮೇಲ್‌ನಲ್ಲಿ ಏನಿತ್ತು?
ದೇಶದ ಜಾತ್ಯತೀತ ರಚನೆಗೆ ಬೆದರಿಕೆಯೊಡ್ಡುವ ನಾಯಕರನ್ನು ಬೆಂಬಲಿಸಬೇಡಿ.
ಎಲ್ಲ ಮಾನವ ಅಭಿವೃದ್ಧಿ ಸೂಚ್ಯಂಕಗಳು ಹಾಗೂ ಜನರ ಸಾಂಸ್ಕೃತಿಕ ಧ್ರುವೀಕರಣಗಳು ಕಳೆದ 10 ವರ್ಷಗಳಲ್ಲಿ ಗುಜರಾತ್ ದಯನೀಯ ಪರಿಸ್ಥಿತಿ ಎದುರಿಸಿದೆ ಎನ್ನುವುದನ್ನು ಸೂಚಿಸುತ್ತವೆ.
ಕಳೆದ 10 ವರ್ಷಗಳಲ್ಲಿ ಗುಜರಾತ್‌ನಲ್ಲಿ ಶಾಲೆಯಿಂದ ಹೊರಗುಳಿಯುವ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟು ಹೆಚ್ಚಿದೆ.
ಗುಜರಾತ್‌ನಲ್ಲಿ ಶೇ.15ರಷ್ಟು ಆದಿವಾಸಿಗಳೇ ಇದ್ದಾರೆ. ಇವರಲ್ಲಿ ಶೇ.32ರಷ್ಟು ಮಂದಿಗಷ್ಟೆ ಈವರೆಗೆ ನೆಲೆ ಒದಗಿಸಲಾಗಿದೆ.
ಆಹಾರ ಭದ್ರತೆ, ಉದ್ಯೋಗದ ಹಕ್ಕು ಯೋಜನೆಗಳಿಗೆ ಅಮರ್ತ್ಯಸೇನ್ ಮತ್ತು ಜೀನ್ ಡ್ರೆಜ್‌ರಂಥ ಖ್ಯಾತ ಸಮಾಜ ವಿಜ್ಞಾನಿಗಳ ಬೆಂಬಲ ವ್ಯಕ್ತವಾಗಿದೆ.
ಸದ್ಯ ವಿಶ್ವ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಇಂಥ ಕ್ರಮಗಳ ಅಗತ್ಯವಿದೆ ಎಂದು ಸೇನ್‌ರಂಥವರು ಹೇಳಿದ್ದಾರೆ.
ಆದರೆ, ಈ ಮಹತ್ವದ ಯೋಜನೆಗಳನ್ನು ಚುನಾವಣಾ ಘೋಷಣೆಯೆನ್ನುವಂತೆ ನೋಡಲಾಗುತ್ತಿದೆ.

ನಿರ್ಧಾರ ಸಮರ್ಥನೆ
ಮತದಾನಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳಿಗೆ ಕಳುಹಿಸಿಕೊಟ್ಟಿರುವ ಇ-ಮೇಲ್ ಸಲಹೆಯನ್ನು ಪ್ರಾಂಶುಪಾಲ ಡಾ. ಫ್ರೇಜರ್ ಸಮರ್ಥಿಸಿಕೊಂಡಿದ್ದಾರೆ. ಇದೊಂದು ಮತದಾನಕ್ಕೆ ಸಂಬಂಧಿಸಿದ ಜಾಗೃತಿ ಪತ್ರವಾಗಿತ್ತು. ಅಲ್ಲದೆ, ಗುಜರಾತ್ ಮಾದರಿ ಈ ಬಾರಿಯ ಚುನಾವಣೆಯ ಪ್ರಮುಖ ಚರ್ಚಾ ವಿಚಾರವಾಗಿತ್ತು. ಈ ಹಿನ್ನೆಲೆಯಲ್ಲಿ ಈ ವಿಷಯವನ್ನು ಶೈಕ್ಷಣಿಕವಾಗಿ ಚರ್ಚಿಸಿದ್ದೇನೆ. ಇ-ಮೇಲ್‌ನಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಘಟನೆ ಹೆಸರನ್ನು ಪ್ರಸ್ತಾಪಿಸಿಲ್ಲ. ಮತದಾನದ ಹಕ್ಕನ್ನು ಚಲಾಯಿಸುವ ಮೊದಲು ವಿದ್ಯಾರ್ಥಿಗಳು ಸಾಕಷ್ಟು ಅವಲೋಕನ ನಡೆಸಬೇಕು ಎಂಬುದಷ್ಟೇ ನನ್ನ ಉದ್ದೇಶವಾಗಿತ್ತು ಎಂದು ಪ್ರಾಂಶುಪಾಲರು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಯಿಂದ ದೂರು
ಡಾ. ಫ್ರೇಜರ್ ವಿರುದ್ಧ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಪ್ರಾಂಶುಪಾಲರು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಾನು ನನ್ನ ಅಭಿವ್ಯಕ್ತಿಯ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸಿದ್ದೇನೆ. ಯಾವುದೇ ವ್ಯಕ್ತಿ ಅಥವಾ ಸಂಘಟನೆಯ ಹೆಸರನ್ನು ನನ್ನ ಇ-ಮೇಲ್‌ನಲ್ಲಿ ಉಲ್ಲೇಖಿಸಿಲ್ಲ.
-ಡಾ. ಫ್ರೇಜರ್ ಮಸ್ಕರೇನ್ಹಸ್, ಕಾಲೇಜು ಪ್ರಾಂಶುಪಾಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement