ಮೋದಿಗಿಂತಲೂ ಕೇಜ್ರಿ ಶ್ರೀಮಂತ!
ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ...
ವಾರಾಣಸಿ: ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗಿಂತ ಶ್ರೀಮಂತ! ಹೌದು. ಕೇಜ್ರಿ ಹಾಗೂ ಅವರ ಪತ್ನಿಯ ಹೆಸರಲ್ಲಿ ಒಟ್ಟು 2.14 ಕೋಟಿ ಆಸ್ತಿಯಿದೆ. ವಾರಾಣಸಿಯಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದ ಕೇಜ್ರಿವಾಲ್ ಅಫಿಡವಿಟ್ನಲ್ಲಿ ಈ ವಿಚಾರ ಘೋಷಿಸಿದ್ದಾರೆ. ಜತೆಗೆ, ತಮ್ಮ ವಿರುದ್ಧ ವಿವಿಧ ಕೋರ್ಟ್ಗಳಲ್ಲಿ 6 ಪ್ರಕರಣಗಳಿವೆ ಎಂಬುದನ್ನೂ ಅವರು ಬಹಿರಂಗಪಡಿಸಿದ್ದಾರೆ. ಇತ್ತೀಚೆಗಷ್ಟೇ ವಡೋದರಾದಲ್ಲಿ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ತಮಗೆ 1.50 ಕೋಟಿ ಆಸ್ತಿಯಿದೆಯೆಂದು ಘೋಷಿಸಿದ್ದರು.
ಆಸ್ತಿಯೆಷ್ಟು?: ಕೇಜ್ರಿವಾಲ್ ಅವರು ಹರ್ಯಾಣ ಮತ್ತು ಗಾಜಿಯಾಬಾದ್ನಲ್ಲಿ ಎರಡು ಫ್ಲ್ಯಾಟ್ಗಳನ್ನು ಹೊಂದಿದ್ದಾರೆ. ಅವರ ಹೆಸರಿನಲ್ಲಿ 4.25 ಲಕ್ಷ ಮೌಲ್ಯದ ಚರ ಆಸ್ತಿಯಿದ್ದರೆ, ಪತ್ನಿ ಹೆಸರಲ್ಲಿ 17.41 ಲಕ್ಷ ಮೌಲ್ಯದ ಚರ ಆಸ್ತಿಯಿದೆ. ತಮ್ಮ ಕೈಯಲ್ಲಿ 15 ಸಾವಿರ ನಗದು ಇದ್ದು, ಪತ್ನಿಯ ಕೈಯಲ್ಲಿ 10 ಸಾವಿರ ನಗದು ಇರುವುದಾಗಿಯೂ ಅವರು ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.
ನಾನೊಬ್ಬ ಫಕೀರ, ಜೇಬಲ್ಲಿರುವುದು 500!
'ನಾನೊಬ್ಬ ಫಕೀರ. ಚುನಾವಣೆಯಲ್ಲಿ ಸ್ಪರ್ಧಿಸಲು ನನ್ನಲ್ಲಿ ಹಣವಿಲ್ಲ. ನನ್ನ ಜೇಬಲ್ಲಿರುವುದು 500 ಮಾತ್ರ. ನೋಡಿ, ಈ ಹಳೇ ಜೀಪಿನಲ್ಲಿ ನಾನು ನಾಮಪತ್ರ ಸಲ್ಲಿಸಲು ತೆರಳುತ್ತಿದ್ದೇನೆ...' ಇದು ನಾಮಪತ್ರ ಸಲ್ಲಿಸುವ ಮುನ್ನ ಕೇಜ್ರಿವಾಲ್ ಆಡಿದ ಮಾತುಗಳು. ಅಫಿಡವಿಟ್ನಲ್ಲಿ 2.14 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ ಕೇಜ್ರಿವಾಲ್ ಬೆಂಬಲಿಗರಲ್ಲಿ ತಾನೊಬ್ಬ ಫಕೀರ ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಟೀಕಿಸಲೂ ಕೇಜ್ರಿ ಮರೆಯಲಿಲ್ಲ. ಮೋದಿ, ರಾಹುಲ್ರದ್ದು 'ಹೆಲಿಕಾಪ್ಟರ್ ಪ್ರಜಾಪ್ರಭುತ್ವ.' ನಾಳೆ ಮೋದಿ ನಾಮಪತ್ರ ಸಲ್ಲಿಸುವಾಗ ಹೆಲಿಕಾಪ್ಟರ್ನಲ್ಲಿ ಬಂದು, ಅದರಲ್ಲೇ ಹೋಗುತ್ತಾರೆ ನೋಡುತ್ತಿರಿ ಎಂದಿದ್ದಾರೆ.
ಮಾನಹಾನಿ ಪ್ರಕರಣ: ಕೇಜ್ರಿಗೆ ಸಮನ್ಸ್
ಕ್ರಿಮಿನಲ್ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಮಾಜಿ ಸಿಎಂ ಕೇಜ್ರಿವಾಲ್ ಹಾಗೂ ಆಪ್ನ ಇಬ್ಬರು ನಾಯಕರ ವಿರುದ್ಧ ದೆಹಲಿ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಜೂ 4ರಂದು ಕೋರ್ಟ್ಗೆ ಹಾಜರಾಗುವಂತೆ ಕೇಜ್ರಿ, ಮನೀಷ್ ಸಿಸೋಡಿಯಾ ಹಾಗೂ ಯೋಗೇಂದ್ರ ಯಾದವ್ಗೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುನೀಶ್ ಗಾರ್ಗ್ ಸೂಚಿಸಿದ್ದಾರೆ.