ರಾಜ್ಯದ 34 ಸೇರಿ 854 'ಪಾವತಿ ಸುದ್ದಿ' ಪ್ರಕರಣ
ನವದೆಹಲಿ: ಚುನಾವಣೆ ದಿನಾಂಕ ಘೋಷಣೆ ಆದಾಗಿನಿಂದ ಈವರೆಗೆ ಕರ್ನಾಟಕದ 34 ಸೇರಿದಂತೆ ದೇಶಾದ್ಯಂತ 854 'ಪಾವತಿ ಸುದ್ದಿ' ಪ್ರಕರಣಗಳು ದಾಖಲಾಗಿವೆ. ಚುನಾವಣಾ ಆಯೋಗ ಬುಧವಾರ ಈ ಮಾಹಿತಿ ನೀಡಿದೆ. 45 ದಿನಗಳ ಅವಧಿಯಲ್ಲಿ ದೇಶಾದ್ಯಂತ 854 ಪ್ರಕರಣಗಳು ಪತ್ತೆಯಾಗಿದ್ದು, ಇವುಗಳಲ್ಲಿ 326 ಪ್ರಕರಣಗಳು ನಿಜವೆಂದು ಸಾಬೀತಾಗಿವೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.
ಕರ್ನಾಟಕದಲ್ಲಿ 34: ಕರ್ನಾಟಕದಲ್ಲಿ 34 'ಕಾಸಿಗಾಗಿ ಸುದ್ದಿ' ಪ್ರಕರಣಗಳು ದಾಖಲಾಗಿದ್ದು, 15 ಪ್ರಕರಣಗಳಿಗೆ ಸಂಬಂಧಿಸಿ ನೋಟಿಸ್ ಕಳುಹಿಸಲಾಗಿದೆ. ಇದೇ ವೇಳೆ ದೇಶದಲ್ಲೇ ಅತಿ ಹೆಚ್ಚು ಅಂದರೆ 208 ಪ್ರಕರಣ ದಾಖಲಾಗಿರುವುದು ಆಂಧ್ರಪ್ರದೇಶದಲ್ಲಿ. ರಾಜಸ್ಥಾನದಲ್ಲಿ 89, ಉತ್ತರಪ್ರದೇಶ 98, ಪಂಜಾಬ್ 73, ಗುಜರಾತ್ನಲ್ಲಿ 61 ಕೇಸುಗಳು ದಾಖಲಾಗಿವೆ ಎಂದೂ ಆಯೋಗ ತಿಳಿಸಿದೆ.
240 ಕೋಟಿ ನಗದು ವಶ: ಇದೇ ವೇಳೆ, ಆಯೋಗ ಈವರೆಗೆ ದೇಶಾದ್ಯಂತ ಬರೋಬ್ಬರಿ 240 ಕೋಟಿ ನಗದನ್ನು ವಶಪಡಿಸಿಕೊಂಡಿದೆ. ಜತೆಗೆ, ಕೋಟಿಗಟ್ಟಲೆ ಲೀಟರ್ಗಳಷ್ಟು ಮದ್ಯ ಹಾಗೂ ಡ್ರಗ್ಗಳನ್ನು ಜಪ್ತಿ ಮಾಡಿದೆ. ಆಂಧ್ರದಲ್ಲಿ 102 ಕೋಟಿ, ತಮಿಳುನಾಡಿನಲ್ಲಿ 39 ಕೋಟಿ, ಕರ್ನಾಟಕದಲ್ಲಿ 20.53 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ.