ಸರ್ವೆ ಇಲಾಖೆಯ ಡಾಟಾ ಪ್ರೊಸೆಸಿಂಗ್ ಸಿಬ್ಬಂದಿ ಕಾಯಂಗೆ ಹೈಕೋರ್ಟ್ ಆದೇಶ
ಬೆಂಗಳೂರು: ರಾಷ್ಟ್ರೀಯ ಸರ್ವೆ ಇಲಾಖೆಯ ಡಾಟಾ ಪ್ರೊಸೆಸಿಂಗ್ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ಸಿಬ್ಬಂದಿಯನ್ನು ಕಾಯಂಗೊಳಿಸುವಂತೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ) ಮಾಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಜಯಪ್ರಕಾಶ್ ಸೇರಿದಂತೆ 27 ಸಿಬ್ಬಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೆ.ಎಲ್. ಮಂಜುನಾಥ್ ಹಾಗೂ ನ್ಯಾ. ರವಿ ಮಳಿಮಠ್ ಅವರಿದ್ದ ವಿಭಾಗೀಯ ಪೀಠ, ಸಿಬ್ಬಂದಿಯನ್ನು ಕಾಯಂಗೊಳಿಸುವಂತೆ ಸಾಂಖ್ಯಿಕ ಮತ್ತು ಕಾರ್ಯಕ್ರಮ ಆಯೋಜನಾ ಇಲಾಖೆಗೆ ಆದೇಶಿಸಿದೆ.
1996ರಿಂದ ಡಾಟಾ ಎಂಟ್ರಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ತಾವು ಕಾಯಂ ಸಿಬ್ಬಂದಿಗಿಂತ ಹೆಚ್ಚಿನ ಅನುಭವ ಹೊಂದಿದ್ದೇವೆ. ಆದ್ದರಿಂದ ತಮನ್ನು ಕಾಯಂಗೊಳಿಸಬೇಕು ಎಂದು ಸಿಬ್ಬಂದಿ ಸಿಎಟಿ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಸಿಎಟಿ, ಸಿಬ್ಬಂದಿಯನ್ನು ಕಾಯಂಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿದೆ. ಇದರಿಂದ ಇಲಾಖೆಯ 46 ಸಿಬ್ಬಂದಿ ಕಾಯಂ ನೌಕರಿಯ ಯೋಗ ದೊರೆತಿದೆ.