ಕೈದಿಗಳಿಗೆ ಶಿಕ್ಷಣ ಭಾಗ್ಯ
ಕನ್ನಡಪ್ರಭ ವಾರ್ತೆ |ಬಳ್ಳಾರಿ | ಏ.24
ಇದೇನಿದು! ಕಾರಾಗೃಹದಲ್ಲಿ ಇರಬೇಕಾದ ಕೈದಿಗಳು, ಪುಸ್ತಕ ಹಿಡಿದುಕೊಂಡು ಎಲ್ಲಿಗೆ ಹೋಗುತ್ತಿದ್ದಾರೆ ಎಂದು ಆಶ್ಚರ್ಯಪಡಬೇಡಿ. ಕೈದಿಗಳೀಗ ಸದ್ಯದ ಮಟ್ಟಿಗೆ ಕಾಲೇಜು ವಿದ್ಯಾರ್ಥಿಗಳು. ಪರೀಕ್ಷೆ ಬರೆದು ಪದವಿ ಪಡೆಯಲು ಕಾಲೇಜಿಗೆ ಹೊರಟಿದ್ದಾರೆ. ಬಳ್ಳಾರಿ ಕಾರಾಗೃಹದಲ್ಲಿರುವ 750 ಕೈದಿಗಳ ಪೈಕಿ 200ಕ್ಕೂ ಹೆಚ್ಚು ಕೈದಿಗಳು ಪದವಿ, ಸರ್ಟಿಫಿಕೇಟ್ ಪಡೆಯುವ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಳ್ಳಾರಿ ಕಾರಾಗೃಹದ ಕೈದಿಗಳು ಪದವಿ ಪಡೆಯುತ್ತಿದ್ದಾರೆ. ಏ.23 ರಂದು ಪರೀಕ್ಷೆ ಆರಂಭವಾಗಿರುವುದರಿಂದ ಬುಧವಾರ ಕೈದಿಗಳು ಪೊಲೀಸ್ ಭದ್ರತೆ ನಡುವೆ ವೀರಶೈವ ಕಾಲೇಜಿಗೆ ತೆರಳಿ ಮೊದಲನೆ ವರ್ಷದ ಪದವಿ ಪರೀಕ್ಷೆ ಬರೆದಿದ್ದಾರೆ. ದ್ವಿತೀಯ ವರ್ಷದ ಪರೀಕ್ಷೆಯನ್ನು 5 ವಿದ್ಯಾರ್ಥಿಗಳು ಏ.24ರಂದು ಬರೆಯಲಿದ್ದಾರೆ. ಎರಡು ವರ್ಷಗಳಿಂದ ಜೈಲಿನಲ್ಲಿರುವ ಕೈದಿಗಳಿಗೆ ಶಿಕ್ಷಣದ ಭಾಗ್ಯ ಸಿಕ್ಕಂತಾಗಿದೆ. ಮೇ 30ರ ವರೆಗೆ ನಡೆಯಲಿವೆ.
ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಮಾತ್ರ ಕೈದಿಗಳು ಓದುತ್ತಿಲ್ಲ. ಬಳ್ಳಾರಿ ಕಾರಾಗೃಹದ 750 ಕೈದಿಗಳ ಪೈಕಿ, 200ಕ್ಕೂ ಹೆಚ್ಚು ಮಂದಿ ಹಲವು ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಓದುತ್ತಿದ್ದಾರೆ. ಇಗ್ನೋದಲ್ಲಿ 53 ಕೈದಿಗಳು ನಾನಾ ತರಬೇತಿ ಕೋರ್ಸ್ಗಳಿಗೆ, ಡಿಪ್ಲೊಮಾ, ಎಂಎ, ಪದವಿ ಓದುತ್ತಿದ್ದಾರೆ. ಕೇವಲ ಪದವಿ ಮಾತ್ರವಲ್ಲ, ವಯಸ್ಕರ ಶಿಕ್ಷಣಕ್ಕೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಲಕ್ನೋದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ನಲ್ಲೂ ವಯಸ್ಕರ ಶಿಕ್ಷಣ ಪಡೆಯುತ್ತಿದ್ದಾರೆ. ನಾನಾ ವೃತ್ತಿಪರ ತರಬೇತಿಗೂ ಸೇರಿದ್ದಾರೆ. ತಾವು ಮಾಡಿರುವ ತಪ್ಪಿನ ಬಗ್ಗೆ ಕೊರಗುತ್ತಾ ಕೂಡುವ ಬದಲಾಗಿ, ಶಿಕ್ಷಣದತ್ತ ಬಳ್ಳಾರಿ ಕಾರಾಗೃಹದ ಕೈದಿಗಳು ಗಮನಹರಿಸಿರುವುದು ಉತ್ತಮ ಬೆಳವಣಿಗೆಗೆ ನಾಂದಿ ಹಾಡಲಿದೆ.
ಜೈಲಿನಲ್ಲಿ ಕೊಠಡಿ ವ್ಯವಸ್ಥೆ
ಜೈಲಿನಲ್ಲಿ ಓದುವ ಕೈದಿಗಳಿಗೆ ಪರೀಕ್ಷೆ ಸಂದರ್ಭ ವಿದ್ಯಾಭ್ಯಾಸ ಮಾಡಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಹಗಲು ಹೊತ್ತಿನಲ್ಲಿ ಈ ಕೊಠಡಿಗಳಲ್ಲಿ ಓದುವ ವ್ಯವಸ್ಥೆ ಇದೆ. ಪದವಿ ಪಡೆದ ಕೈದಿಗಳು ಈಗ ಓದುತ್ತಿರುವ ಕೈದಿಗಳಿಗೆ ಶಿಕ್ಷಕರಾಗಿದ್ದಾರೆ. ಪರೀಕ್ಷೆ ಬರೆಯಲು ಹೋಗುವಾಗ ಡಿಎಆರ್ ಬೆಂಗಾವಲು ಪಡೆ ಇರುತ್ತದೆ. ಪರೀಕ್ಷೆ ಮುಗಿದ ಮೇಲೆ ಜೈಲಿಗೆ ಮರಳಿ ಸೇರುತ್ತಾರೆ.
ಕೈದಿಗಳು ಓದುವುದಕ್ಕೆ ಅಗತ್ಯ ಸಹಕಾರ ನೀಡಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಓದುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕೈದಿಗಳು ಸುಶಿಕ್ಷತರಾಗುವುದರಿಂದ ಆಡಳಿತ ನಡೆಸುವುದು ಸುಲಭ. ಕೈದಿಗಳ ಮನಃಪರಿವರ್ತನೆಗೆ ಶಿಕ್ಷಣ ಸಹಕಾರಿಯಾಗುತ್ತದೆ.
- ಆನಂದ್ ರೆಡ್ಡಿ, ಬಳ್ಳಾರಿ ಕೇಂದ್ರ ಕಾರಾಗೃಹದ ಅಧೀಕ್ಷಕ
ಶಶಿಧರ ಮೇಟಿ