ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಜಗತ್ತಿನ ಮೊದಲ ಜಾನಪದ ವಿವಿಗೆ ಸಂಪನ್ಮೂಲ ಕೊರತೆ

Mainashree
Updated On : 24 Apr 2014, 9:30 am

ಕನ್ನಡಪ್ರಭ ವಾರ್ತೆ  ಹಾವೇರಿ  ಏ.23
ಜಗತ್ತಿನ ಮೊದಲ ಜಾನಪದ ವಿಶ್ವವಿದ್ಯಾಲಯ ಎಂಬ ಅಭಿದಾನಕ್ಕೆ ಪಾತ್ರವಾಗಿರುವ ಶಿಗ್ಗಾಂವಿಯ ಕರ್ನಾಟಕ ಜಾನಪದ ವಿವಿ, ಸಂಪನ್ಮೂಲ ಕೊರತೆ ಎದುರಿಸುತ್ತಿದೆ. ಮೂಲಸೌಲಭ್ಯ ಇಲ್ಲದ್ದರಿಂದ ಸ್ನಾತಕೋತ್ತರ ವಿದ್ಯಾರ್ಥಿಗಳು ತಗಡಿನ ಶೆಡ್‌ನಲ್ಲಿ ಉಪನ್ಯಾಸ ಕೇಳುವಂತಾಗಿದೆ.
ಹೌದು, ಮೂರು ವರ್ಷಗಳ ಹಿಂದೆ ಶಿಗ್ಗಾಂವಿಯ ಗೊಟಗೋಡಿಯಲ್ಲಿ ಸ್ಥಾಪನೆಯಾದ ವಿಶ್ವದ ಪ್ರಥಮ ಜಾನಪದ ವಿವಿಯ ಸ್ಥಿತಿಯಿದು. ಇನ್ನೂ ಯುಜಿಸಿ ಮನ್ನಣೆ ಪ್ರಾಪ್ತವಾಗದ್ದರಿಂದ ರಾಜ್ಯ ಸರ್ಕಾರದ ಅನುದಾನವನ್ನೇ ವಿವಿ ಸಂಪೂರ್ಣವಾಗಿ ನೆಚ್ಚಿಕೊಂಡಿದೆ. ಆದರೆ, ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗದ್ದರಿಂದ ಕೆಲಸ ಆರಂಭವಾಗಿದ್ದರೂ ಕಟ್ಟಡಗಳು ಮೇಲೇಳುತ್ತಿಲ್ಲ. 2012ರ ಸಚಿವ ಸಂಪುಟದಲ್ಲೇ ರು. 20.37 ಕೋಟಿ ಅನುದಾನಕ್ಕೆ ಒಪ್ಪಿಗೆ ದೊರೆತಿದ್ದರೂ ಇದುವರೆಗೆ ನಯಾ ಪೈಸೆ ಬಿಡುಗಡೆಯಾಗಿಲ್ಲ. ಆದ್ದರಿಂದ ಬಾಡಿಗೆ ಕಟ್ಟಡ, ತಗಡಿನ ಶೆಡ್‌ನಲ್ಲೇ ತರಗತಿಗಳನ್ನು ನಡೆಸಲಾಗುತ್ತಿದೆ.
6 ವಿಭಾಗ, 120 ವಿದ್ಯಾರ್ಥಿಗಳು: ಜಾನಪದ ವಿವಿಯಲ್ಲಿ ಸದ್ಯ 6 ವಿಭಾಗಗಳಿದ್ದು, 120 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಬಾಡಿಗೆ ಕಟ್ಟಡದಲ್ಲಿ ಆಡಳಿತ ಕಚೇರಿ ಹಾಗೂ 3 ತರಗತಿ ನಡೆಯುತ್ತಿವೆ. ಮತ್ತೆ ಮೂರು ವಿಭಾಗದ ತರಗತಿಗಳನ್ನು ಶೆಡ್‌ನಲ್ಲಿ ನಡೆಸಲಾಗುತ್ತಿದೆ. ಇದೇ ಶೆಡ್‌ನಲ್ಲಿ ಸಭೆ, ಸಮಾರಂಭಗಳೂ ನಡೆಯಬೇಕು. ಗೊಟಗೋಡಿ, ಶಿಗ್ಗಾಂವಿ, ಹಾವೇರಿ, ಬೀದರ್ ಹಾಗೂ ಮಲೆಮಹದೇಶ್ವರ ಬೆಟ್ಟದಲ್ಲಿ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರಗಳಿದ್ದು, ಅಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಟಿಫಿಕೇಟ್ ಹಾಗೂ ಡಿಪ್ಲೊಮಾ ಕೋರ್ಸ್ ಕಲಿಯುತ್ತಿದ್ದಾರೆ.
ಇದುವರೆಗೆ ನೀಡಿದ್ದು ರು. 17 ಕೋಟಿ: 2011ರಲ್ಲಿ ವಿವಿ ಸ್ಥಾಪನೆಯಾಗಿದ್ದು, ಸರ್ಕಾರ 160 ಎಕರೆ ಜಮೀನು ನೀಡಿದೆ. ಆದರೆ, ಅನುದಾನ ನೀಡಿಕೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಮೂಲಸೌಲಭ್ಯ ಇಲ್ಲಿ ಮರೀಚಿಕೆಯಾಗಿದೆ.
2010-11ರಲ್ಲಿ ರು. 1 ಕೋಟಿ, 11-12ನೇ ಸಾಲಿನಲ್ಲಿ ರು. 2.5 ಕೋಟಿ, 12-13ರಲ್ಲಿ ರು. 8.5 ಕೋಟಿ ಹಾಗೂ 13-14ನೇ ಸಾಲಿನಲ್ಲಿ ರು. 4.93 ಕೋಟಿ ಸೇರಿದಂತೆ ಸುಮಾರು ರು. 17 ಕೋಟಿ ಅನುದಾನವನ್ನು ಸರ್ಕಾರ ನೀಡಿದೆ. ಆದರೆ, ಕಟ್ಟಡ ಕಾಮಗಾರಿಗಾಗಿ 2012ರಲ್ಲಿ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದ್ದ ರು. 20.37 ಕೋಟಿ ಇನ್ನೂ ಬಿಡುಗಡೆಯಾಗಿಲ್ಲ. ಬಿಡುಗಡೆಯಾದ ಅನುದಾನದ ಉಳಿಕೆ ಹಣದಿಂದಲೇ ಕೆಲ ಕಾಮಗಾರಿ ಆರಂಭಿಸಲಾಗಿದೆ. ಆಡಳಿತ ಭವನ, ವಿದ್ಯಾರ್ಥಿ ಭವನ ಹಾಗೂ ಶೈಕ್ಷಣಿಕ ಭವನದ ನಿರ್ಮಾಣ ಕಾಮಗಾರಿ ಶುರುವಾಗಿದ್ದು, ಅನುದಾನದ ಕೊರತೆಯಿಂದ ಆಮೆ ಗತಿಯಲ್ಲಿ ನಡೆಯುತ್ತಿದೆ.
ಕುಲಪತಿಯೊಬ್ಬರೇ ಕಾಯಂ: ಈ ವಿಶ್ವವಿದ್ಯಾಲಯಕ್ಕೆ ಕುಲಪತಿಯೊಬ್ಬರೇ ಕಾಯಂ ಸಿಬ್ಬಂದಿ. ಬೇರೆ ವಿವಿಗಳಿಂದ ನಿಯೋಜನೆ ಮೇಲೆ ಇಬ್ಬರು ರಜಿಸ್ಟ್ರಾರ್, ಒಬ್ಬರು ಪ್ರಾಧ್ಯಾಪಕರು ಹಾಗೂ ಒಬ್ಬರು ಕಾರ್ಯನಿರ್ವಾಹಕ ಎಂಜಿನಿಯರ್ ಇದ್ದಾರೆ. ಉಳಿದ ಕಚೇರಿ ಸಿಬ್ಬಂದಿ, ಉಪನ್ಯಾಸಕ ವರ್ಗದವರೆಲ್ಲ ಗೌರವ ಸಂಭಾವನೆ ಮೇಲೆ ಕೆಲಸ ಮಾಡುತ್ತಿದ್ದಾರೆ. ವಾರ್ಷಿಕ ಅನುದಾನದಲ್ಲೇ ಸಿಬ್ಬಂದಿ ವೇತನ, ಇತರೆ ಯೋಜನೆಗಳಿಗೂ ಬಳಕೆ ಮಾಡಿಕೊಳ್ಳಬೇಕಿದೆ. ಆದ್ದರಿಂದ ಕಟ್ಟಡ, ಇನ್ನಿತರ ಸೌಲಭ್ಯ ಕಲ್ಪಿಸುವ ಯೋಜನೆಗಳಿಗೆ ಅನುದಾನದ ಕೊರತೆ ಎದುರಾಗಿದೆ.
ಈ ಸಲ 2 ಹೊಸ ವಿಭಾಗ: ಇದುವರೆಗೆ ವಿವಿ 6 ವಿಭಾಗಗಳನ್ನು ಹೊಂದಿತ್ತು. ಈ ಶೈಕ್ಷಣಿಕ ಸಾಲಿನಿಂದ ಮತ್ತೆರಡು ಹೊಸ ವಿಭಾಗಗಳನ್ನು ಆರಂಭಿಸಲಾಗುತ್ತಿದೆ. ಗ್ರಾಮೀಣ ಬುಡಕಟ್ಟು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ವಿಷಯದಲ್ಲಿ ಎಂಎ, ಪಾರಂಪರಿಕ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ಎಂಎಸ್ಸಿ ಪದವಿ ಆರಂಭಿಸಲಾಗುತ್ತಿದೆ. 45 ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಜಾನಪದ ವಿಶ್ವಕೋಶ ಹೊರತರುವ ಕಾರ್ಯ ನಡೆದಿದ್ದು, ಇದು ಒಟ್ಟು 10 ಸಂಪುಟಗಳನ್ನು ಒಳಗೊಂಡಿರುತ್ತದೆ. ಈ ಬಾರಿ ಮೊದಲ 4 ಸಂಪುಟ ಸಿದ್ಧಗೊಳ್ಳಲಿದೆ. ಇದಲ್ಲದೇ ಗ್ರಾಮ ಚರಿತ್ರಾ ಕೋಶ, ದೇಸಿ ವಿಜ್ಞಾನ ಕೋಶ, ಕನ್ನಡ ನಿಘಂಟು ಸೇರಿದಂತೆ ಅನೇಕ ಮಹತ್ವದ ಯೋಜನೆಗಳನ್ನು ವಿಶ್ವವಿದ್ಯಾಲಯ ಕೈಗೆತ್ತಿಕೊಂಡಿದೆ.
ಜಾನಪದ ವಿವಿಯು ಶೂನ್ಯದಿಂದ ಆರಂಭವಾಗಿದ್ದು, ಇತಿಮಿತಿಯಲ್ಲೇ ಅನೇಕ ಮಹತ್ವದ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಕಟ್ಟಡ ಕಾಮಗಾರಿಗಳು ಆರಂಭವಾಗಿದ್ದು, ಅನುದಾನದ ಕೊರತೆಯಿಂದ ಎಲ್ಲ ಕಾಮಗಾರಿಗಳನ್ನು ಹೊರಗುತ್ತಿಗೆ ನೀಡಿದ್ದೇವೆ. ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ಶೀಘ್ರದಲ್ಲಿ ಸಿಗುವ ನಿರೀಕ್ಷೆಯಿದೆ. ಪಾಶ್ಚಾತ್ಯ ಸಂಸ್ಕೃತಿಯಿಂದ ದೇಸಿ ಪರಂಪರೆಗೆ ಧಕ್ಕೆಯಾಗುತ್ತಿರುವ ಬಗ್ಗೆ ಎಲ್ಲರಲ್ಲಿ ಈಗ ಅರಿವು ಮೂಡಿದೆ. ಆದ್ದರಿಂದ ಜಾನಪದ ವಿವಿಗೆ ಮುಂದೆ ಉತ್ತಮ ಬೇಡಿಕೆ ಬರಲಿದೆ. ವಿದ್ಯಾರ್ಥಿಗಳು ವಿವಿ ಸದ್ಬಳಕೆ ಮಾಡಿಕೊಳ್ಳಬೇಕು.
- ಪ್ರೊ. ಅಂಬಳಿಕೆ ಹಿರಿಯಣ್ಣ, ಜಾನಪದ ವಿವಿ ಕುಲಪತಿ

ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement