ತಲೆ ಎತ್ತಲಿದೆ ಪ್ರಾಣಿ ಸಂತಾನ ವೃದ್ಧಿ ಕೇಂದ್ರ
ಮೈಸೂರು: ರಾಜ್ಯದಲ್ಲಿಯೇ ಮೊದಲ ಬಾರಿಗೆ ಇಲ್ಲಿನ ಚಾಮರಾಜೇಂದ್ರ ಮೃಗಾಲಯವು ಹುಲಿ, ಚಿರತೆ ಮತ್ತು ಆನೆಗಳ ಚಿಕಿತ್ಸಾ ಕೇಂದ್ರ ಮತ್ತು ಕಾಡೆಮ್ಮೆ, ಸಿಂಗಳೀಕ, ಕೆಂದಳಿಲಿನ ಸಂತಾನ ಅಭಿವೃದ್ಧಿ ಕೇಂದ್ರ ತೆರೆಯುತ್ತಿದೆ.
ನಗರದ ಹೊರ ವಲಯಕ್ಕೆ ಹೊಂದಿಕೊಂಡಂತೆ ಇರುವ ಕೂರ್ಗಳ್ಳಿ ಸಮೀಪದ 113 ಎಕರೆ ಪ್ರದೇಶದಲ್ಲಿ ಕೋಟ್ಯಂತರ ರು. ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸಮೀಪದಲ್ಲಿ ಅನೇಕ ಗ್ರಾಮಗಳಿದ್ದು, ಜನವಸತಿ ಪ್ರದೇಶ ಇರುವುದರಿಂದ ಸುಮಾರು 1.8 ಮೀಟರ್ ಎತ್ತರದ ಕಾಪೌಂಡ್ ನಿರ್ಮಿಸಲಾಗಿದೆ. ಎರಡು ಬೋರ್ವೆಲ್ ಮೂಲಕ ನೀರು ಪೂರೈಕೆ, ನೀರು ಸಂಗ್ರಹಿಸಲು ದೊಡ್ಡ ಸಂಪು ಮತ್ತು ಸಮಪರ್ಕಕ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಲಾಗಿದೆ.
ಮೈಸೂರು ಸುತ್ತಮುತ್ತ ನಾಗರಹೊಳೆ, ಬಂಡಿಪುರದಂತ ರಾಷ್ಟ್ರೀಯ ಅಭಯಾರಣ್ಯ ಇರುವುದರಿಂದ ಪ್ರಾಣಿಗಳ ದಾಳಿ ನಿರಂತರವಾಗಿ ಇರುತ್ತದೆ. ಅನೇಕ ಪ್ರಾಣಿಗಳು ರೋಗದಿಂದ ಬಳಲಿ ಕಾಡಂಚಲ್ಲಿ ಕಾಣಿಸಿಕೊಂಡು ಸೆರೆ ಸಿಗುತ್ತವೆ. ಮತ್ತೆ ಕೆಲವು ಬೇಟೆಯ ವೇಳೆ ಇತರೆ ಪ್ರಾಣಿಯಿಂದ ಗಾಯಗೊಂಡಿರುತ್ತವೆ. ಇಂತಹ ಪ್ರಾಣಿಗಳು ಸೆರೆಸಿಕ್ಕ ಕೂಡಲೆ ಅವುಗಳ ಚಿಕಿತ್ಸೆಗೆ ಮೈಸೂರಿನ ಮೃಗಾಲಯಕ್ಕೆ ಕರೆ ತರುವುದು ಸಾಮಾನ್ಯ. ಉದಾಹರಣೆಗೆ ಇತ್ತೀಚಿಗೆ ಎಚ್.ಡಿ. ಕೋಟೆ ಭಾಗದಲ್ಲಿ ಹುಲಿಯೊಂದು ನಾಲ್ವರನ್ನು ಬಲಿ ತೆಗೆದುಕೊಂಡಾಗ ಸಂಶಯದ ಮೇಲೆ ಸೆರೆ ಹಿಡಿದ ಹುಲಿ(ಶಿವ)ಗೆ ಇಲ್ಲಿಯೇ ಚಿಕಿತ್ಸೆ ಕೊಡಿಸಿ ಇರಿಸಿರುವುದನ್ನು ಸ್ಮರಿಸಬಹುದು.
ಹೀಗೆ ವನ್ಯ ಜೀವಿಗಳು ಸೆರೆ ಸಿಕ್ಕಾಗ ಅವುಗಳನ್ನು ನೋಡಲು ಮೃಗಾಲಯ ಸಿಬ್ಬಂದಿ, ಮಾಧ್ಯಮ ಹಾಗೂ ಸಾರ್ವಜನಿಕರು ಕುತೂಹಲದಿಂದ ಹತ್ತಿರ ಹೋಗುವುದು ಸಹಜ. ಇಂತಹ ಸಂದರ್ಭದಲ್ಲಿ ಪ್ರಾಣಿಗಳು ಗಾಬರಿಯಿಂದ ಬೋನಿನಿಂದ ಆಚೆ ಹೋಗಲು ಯತ್ನಿಸಿ ಮತ್ತಷ್ಟು ಗಾಯ ಮಾಡಿಕೊಳ್ಳುತ್ತಿವೆ. ಅಲ್ಲದೆ, ಸೆರೆಸಿಕ್ಕ ಪ್ರಾಣಿಗಳಲ್ಲಿನ ರೋಗ ಮೃಗಾಲಯದ ಪ್ರಾಣಿಗಳಿಗೂ, ಅಲ್ಲಿನ ಪ್ರಾಣಿಗಳಲ್ಲಿನ ಕೆಲವು ರೋಗದ ಸೋಂಕು ಸೆರೆಸಿಕ್ಕ ಪ್ರಾಣಿಗಳಿಗೆ ತಗಲುವ ಸಾಧ್ಯತೆಯೇ ಹೆಚ್ಚು.
ಮುಕ್ತ ವಾತಾವರಣ ಉದ್ದೇಶ: ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಸೆರೆಸಿಕ್ಕ ಪ್ರಾಣಿಗಳಿಗೆ ಸ್ವಾತಂತ್ರ್ಯ ಮತ್ತು ಮುಕ್ತ ವಾತಾವರಣ ಕಲ್ಪಿಸುವ ಉದ್ದೇಶದಿಂದ ಕೂರ್ಗಳ್ಳಿ ಬಳಿ ನಿರ್ಮಿಸುತ್ತಿರುವ ಚಿಕಿತ್ಸಾ ಕೇಂದ್ರದಲ್ಲಿ ಹುಲಿ, ಚಿರತೆ ಮತ್ತು ಆನೆಗೆ ಪ್ರತ್ಯೇಕ ಚಿಕಿತ್ಸಾ ಕೊಠಡಿ ಮತ್ತು ವಿಶ್ರಾಂತಿ ಕೊಠಡಿ ನಿರ್ಮಿಸಲಾಗುತ್ತಿದೆ. ಇಲ್ಲಿ ಸದಾ ಕಾಲ ವೈದ್ಯರು ಮತ್ತು ಪ್ರಾಣಿಗಳ ಪಾಲನೆಗೆ ಅಗತ್ಯ ಸಿಬ್ಬಂದಿ ಇರುತ್ತಾರೆ. ಮೈಸೂರು ಅಥವಾ ಯಾವುದೇ ಭಾಗದಲ್ಲಿ ಸೆರೆಸಿಕ್ಕ ಪ್ರಾಣಿಯನ್ನು ಇಲ್ಲಿಗೆ ಸುಲಭವಾಗಿ ತಂದು ಚಿಕಿತ್ಸೆ ಕೊಡಿಸಬಹುದು ಎಂಬುದು ಮೃಗಾಲಯ ನಿರ್ದೇಶಕರ ಉದ್ದೇಶ.
ರು. 2.81 ಕೋಟಿ ಯೋಜನೆ
ಉಳಿಕೆ ಪ್ರದೇಶದಲ್ಲಿ ಎರಡನೇ ಹಂತವಾಗಿ ಕಾಡೆಮ್ಮೆ, ಕೆಂದಳಿಲು, ಕಾಡುನಾಯಿ ಮತ್ತು ಸಿಂಗಳೀಕ ಸೇರಿದಂತೆ ಇತರೆ ಕೆಲವು ಪ್ರಾಣಿಗಳ ಸಂತಾನ ಅಭಿವೃದ್ಧಿ ಕೇಂದ್ರ ತೆರೆಯಲು ತೀರ್ಮಾನಿಸಲಾಗಿದೆ. ಮೃಗಾಲಯದ ಉದ್ದೇಶಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ಕಳೆದ ವರ್ಷ ರು.50 ಲಕ್ಷ ಅನುದಾನ ನೀಡಿದೆ. ಇದರ ಜೊತೆಗೆ ಮೃಗಾಲಯ ಪ್ರವೇಶ ಟಿಕೆಟ್ನಿಂತ ಸಂಗ್ರಹವಾಗುವ ಹಣದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಒಟ್ಟು 2.81 ಕೋಟಿ ಮೊತ್ತದ ಯೋಜನೆ ಇದಾಗಿದೆ. ಮೃಗಾಲಯ ಅಭಿವೃದ್ಧಿ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರವೂ ಇರಬೇಕು ಎಂಬುದು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ಅವರ ಆಶಯ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಮೃಗಾಲಯ ವೀಕ್ಷಣೆಗೆ ಬರುವಾಗ ರು.50 ನೀಡಿ ಪಡೆಯುವ ಪ್ರವೇಶ ಟಿಕೆಟ್ ಹಣವನ್ನೇ ಇಂತಹ ಉದ್ದೇಶಕ್ಕೆ ಬಳಸುವುದರಿಂದ ಸಾರ್ವಜನಿಕರೂ ವನ್ಯಜೀವಿ ಸಂರಕ್ಷಣೆಯಲ್ಲಿ ನೆರವಾದಂತೆ ಆಗುತ್ತದೆ ಎಂದು ಅವರು 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಡಿ.ಎನ್. ಮಹೇಂದ್ರ