ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪ್ರೀತಿಗೆ ಜಾತಿ ದ್ವೇಷ, ಯುವತಿ ದಹನ

ಅನ್ಯ ಜಾತಿಯ ಯುವತಿಯನ್ನು ಪ್ರೀತಿಸಿ ವಿವಾಹವಾಗಿರುವುದಕ್ಕೆ ವಿರೋಧ ವ್ಯಕ್ತ..

Mainashree
Updated On : 25 Apr 2014, 10:28 am

ಮಂಡ್ಯ/ಮಳವಳ್ಳಿ, ಏ.24
ಅನ್ಯ ಜಾತಿಯ ಯುವತಿಯನ್ನು ಪ್ರೀತಿಸಿ ವಿವಾಹವಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಯುವಕನ ಪೋಷಕರು ನವವಿವಾಹಿತೆ ಶಿಲ್ಪಾ(19)ಳನ್ನು ಅಮಾನುಷವಾಗಿ ಸಜೀವ ದಹನ ಮಾಡಿದ್ದಾರೆ.
ಮಳವಳ್ಳಿ ತಾಲೂಕಿನ ಕನ್ನಹಳ್ಳಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಈ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಯುವಕನ ತಂದೆ ಬಿಲ್ಲಯ್ಯ, ತಾಯಿ ನಾಗಮ್ಮನನ್ನು ಬಂಧಿಸಲಾಗಿದೆ. ಅಲ್ಲದೇ ಚಿಕ್ಕಪ್ಪ ಪುಟ್ಟಸ್ವಾಮಿ, ಚಿಕ್ಕಮ್ಮ ಪ್ರಮೀಳಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಂಡ್ಯ ತಾಲೂಕಿನ ನೆಲಮಾಕನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಯ ಬಿಲ್ಲಯ್ಯ ಮತ್ತು ನಾಗಮ್ಮ ದಂಪತಿ ಪುತ್ರ ಅಭಿಜಿತ್ ಮೈಸೂರಿನ ಮೇಟಗಳ್ಳಿಯಲ್ಲಿ ಗ್ಯಾರೇಜ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಗಂಗಾಮತಸ್ಥ ಜಾತಿಯ ಮಂಗಳಮ್ಮ ಅವರ ಪುತ್ರಿ ಶಿಲ್ಪಾ ನಡುವೆ ಪ್ರೇಮಾಂಕುರವಾಗಿದೆ.
 ಯುವಕನ ಕುಟುಂಬದ ವಿರೋಧದ ನಡುವೆಯೂ, ಜ. 2ನೇ ವಾರ ಇಬ್ಬರೂ ವಿವಾಹ ಮಾಡಿಕೊಂಡಿದ್ದಾರೆ. ಆದರೆ ಶಿಲ್ಪಾ ತನ್ನ ಗಂಡನ ಮನೆಗೆ ಬಂದಿರಲೇ ಇಲ್ಲ.  

ತನ್ನ ಮಗ ಬೇರೆ ಜಾತಿಯ ಯುವತಿಯನ್ನು ಪ್ರೀತಿಸಿ ವಿವಾಹವಾಗಿರುವುದನ್ನು ವಿರೋಧಿಸಿದ ಯುವಕನ ಪೋಷಕರು ಹೇಗಾದರೂ ಮಾಡಿ ಆಕೆಯನ್ನು ಕೊಲೆಗೈದು ತಮದೇ ಜಾತಿಗೆ ಸೇರಿದ ಬೇರೆ ಯುವತಿಯನ್ನು ಅಭಿಜಿತ್‌ಗೆ ಮದುವೆ ಮಾಡಲು ನಿರ್ಧರಿಸಿದ್ದರು.
ಪೂರ್ವ ನಿಯೋಜನೆಯಂತೆ ದೇವರಿಗೆ ಪೂಜೆ ಮಾಡಿಸುವ ನೆಪದಲ್ಲಿ ಶಿಲ್ಪಾಳನ್ನು ಅಭಿಜಿತ್‌ನ ಚಿಕ್ಕಮ್ಮ, ಚಿಕ್ಕಪ್ಪ ಬುಧವಾರ ಮೇಟಗಳ್ಳಿಯಿಂದ ತಲಕಾಡು ಮತ್ತು ಮುಡುಕುತೊರೆ ದೇವಸ್ಥಾನಕ್ಕೆ ಕರೆದುಕೊಂಡು ಬಂದು ಪೂಜೆ ಸಲ್ಲಿಸಿ ಸಂಜೆ ನೆಲಮಾಕನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ತಂಗಿದ್ದರು. ಜೊತೆಯಲ್ಲಿ ಅತ್ತೆ ನಾಗಮ್ಮ, ಮಾವ ಬಿಲ್ಲಯ್ಯ ಕೂಡ ಇದ್ದರು. ಗುರುವಾರ ಬೆಳಗಿನ ಜಾವ ಶಿಲ್ಪಾಳನ್ನು ಕರೆದುಕೊಂಡು ಮೈಸೂರಿಗೆ ತೆರಳುತ್ತಿದ್ದಾಗ ಕನ್ನಹಳ್ಳಿ ಗ್ರಾಮದ ಬಳಿ ಬರುತ್ತಿದ್ದಂತೆ ಆಕೆಯೊಂದಿಗೆ ಜಗಳ ಮಾಡಿ ಉಸಿರುಗಟ್ಟಿ ಸಾಯಿಸಲು ಯತ್ನಿಸಿದ್ದಾರೆ. ನಂತರ ಅರೆ ಬೆತ್ತಲೆ ಮಾಡಿ ಪೆಟ್ರೋಲ್ ಸುರಿದು ಸಜೀವವಾಗಿ ಬೆಂಕಿ ಹಚ್ಚಿದ್ದಾರೆ. ಇನ್ನೇನು ಶಿಲ್ಪಾ ಸತ್ತಿರಬಹುದೆಂದು ಭಾವಿಸಿ ಜಾಗ ಖಾಲಿ ಮಾಡಿದ್ದಾರೆ. ಆದರೆ, ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಶಿಲ್ಪಾ ಕೆಲವು ಹೊತ್ತಿನಲ್ಲೇ ಎಚ್ಚೆತ್ತುಕೊಂಡು ಕೂಗಿಕೊಂಡಿದ್ದಾಳೆ. ಆ ವೇಳೆಗೆ ಕನ್ನಹಳ್ಳಿ ಗ್ರಾಮಸ್ಥರು ಧಾವಿಸಿ ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತುರ್ತು ಚಿಕಿತ್ಸೆ ಕೊಡಿಸಿದ ನಂತರ ಮಂಡ್ಯಕ್ಕೆ ವರ್ಗಾಯಿಸಿದಾಗ ಮಂಡ್ಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಸಾಯುವ ಮುನ್ನ ಘಟನೆಯನ್ನು ಪೊಲೀಸರ ಎದುರು ಶಿಲ್ಪಾ ವಿವರಿಸಿದ್ದಾಳೆ.
ಕಿರುವಾಗಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಡಿವೈಎಸ್ಪಿ ಅಪ್ಪಣ್ಣನಾಯಕ್, ಇನ್ಸ್‌ಪೆಕ್ಟರ್ ಶಿವಸ್ವಾಮಿ, ಪಿಎಸ್‌ಐ ದೇವರಾಜು ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು.

ಮದುವೆ ಮಾಡಿಸಿದವರೆ ಕೊಲೆಗೆ ಸಹಕರಿಸಿದರು
ಅನ್ಯಜಾತಿಗೆ ಸೇರಿದ ಯುವತಿ ಶಿಲ್ಪಾಳನ್ನು ಮದುವೆಯಾಗುತ್ತೇನೆ ಎಂದು ಅಭಿಜಿತ್ ತನ್ನ ತಂದೆ, ತಾಯಿ ಮುಂದೆ ಹೇಳಿದಾಗ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಕಂಗಾಲಾದ ಅಭಿಜಿತ್ ತನ್ನ ಚಿಕ್ಕಮ್ಮ ಪ್ರಮೀಳಾ, ಚಿಕ್ಕಪ್ಪ ಪುಟ್ಟಸ್ವಾಮಿ ಸಹಾಯ ಕೇಳಿದ್ದ. ಅವರೇ ಮುಂದೆ ನಿಂತು ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದರು. ಮದುವೆಯಾದ ನಂತರ ಅಭಿಜಿತ್ ಮತ್ತು ಶಿಲ್ಪಾಳನ್ನು ಪೋಷಕರು ಮನೆಗೆ ಸೇರಿಸದಿದ್ದಾಗ ತಮ್ಮ ಮನೆಯಲ್ಲೇ ಇರಿಸಿಕೊಂಡಿದ್ದರು. ವಿಪರ್ಯಾಸವೆಂದರೆ ಅವರೇ ಶಿಲ್ಪಾಳ ಕೊಲೆಗೆ ಸಹಕಾರ ನೀಡಿದ್ದಾರೆ.

ಹೇಳಿಕೆಯಲ್ಲಿ ಗಂಡನ ಹೆಸರು ಹೇಳಲೇ ಇಲ್ಲ!
ಶಿಲ್ಪಾ ಸಾಯುವ ಮುನ್ನ ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ್ದಾಳೆ. ಅತ್ತೆ, ಮಾವ, ಚಿಕ್ಕಮಾವ, ಚಿಕ್ಕತ್ತೆ ನನ್ನ ಸಾವಿಗೆ ಕಾರಣರಾಗಿದ್ದಾರೆ ಎಂದು ತಿಳಿಸಿದ್ದಾಳೆ. ಆದರೆ, ನಿರ್ದಿಷ್ಟವಾಗಿ ತಾನೇ ಬಯಸಿ ಪ್ರೀತಿಸಿ ವಿವಾಹವಾದ ಪತಿ ಅಭಿಜಿತ್ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಇದು ಕುತೂಹಲ ಮೂಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement