ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಲಸೆ ಬಂದ ಪಕ್ಷಿಗಳ ಮಾರಣಹೋಮ!

Mainashree
Updated On : 24 Apr 2014, 9:28 am

 ವಿಶೇಷ ವರದಿ
ಕುಶಾಲನಗರ: ಸರ್ಕಾರಿ ಕಟ್ಟಡ ಆವರಣದಲ್ಲಿದ್ದ ಮರಗಳ ಕೊಂಬೆಗಳನ್ನು ಕಡಿದು ಅಪರೂಪದ ಪಕ್ಷಿ ಸಂಕುಲದ ಮಾರಣ ಹೋಮ ನಡೆಸಿದ ಘಟನೆ ಕುಶಾಲನಗರ ಪಟ್ಟಣದ ಹೃದಯಭಾಗದಲ್ಲಿ ಇತ್ತೀಚೆಗೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.
ಕುಶಾಲನಗರ- ಮೈಸೂರು ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ಹಳೆಯ ಕಚೇರಿ ನವೀಕರಣ ಕಾಮಗಾರಿ ಸಂದರ್ಭ ಸ್ಥಳದಲ್ಲಿದ್ದ ಮೂರು ಹಲಸಿನ ಮರಗಳ ಕೊಂಬೆಗಳನ್ನು ಕಡಿಯಲಾಗಿತ್ತು. ಈ ವೇಳೆ ಅವುಗಳಲ್ಲಿ ವಲಸೆ ಬಂದು ನೆಲೆಸಿದ್ದನೂರಾರು ನೀರುಕಾಗೆ ಮರಿಗಳನ್ನು ಕೆಲಸಗಾರರು ಕೆಡವಿ, ನಂತರ ಸುಟ್ಟು ಹಾಕಿರುವ ಅಮಾನವೀಯ ವಿದ್ಯಮಾನ ಬೆಳಕಿಗೆ ಬಂದಿದೆ.
ಸ್ಥಳೀಯರ ಮನವಿಗೂ ಕಿವಿಗೊಡಲಿಲ್ಲ: ಘಟನೆ ವೇಳೆ ಸ್ಥಳೀಯರ ಮನವಿಗೂ ಓಗೊಡದೆ ಪಕ್ಷಿ ಮರಿಗಳನ್ನು ಕೆಡವಿ ನಾಶಗೊಳಿಸಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿವರ್ಷ ಮಳೆಗಾಲ ಸಂದರ್ಭ ಈ ಪಕ್ಷಿಗಳ ಗುಂಪು ಸಂತಾನೋತ್ಪತ್ತಿಗಾಗಿ ವಲಸೆ ಬರುವುದು ಹಲವು ವರ್ಷಗಳಿಂದ ನಡೆದು ಬಂದಿದೆ ಎನ್ನುತ್ತಾರೆ ನೆರೆಮನೆ ನಿವಾಸಿ ಶ್ರೀಶೈಲಾ. ಮರ ಕಡಿಯುವಾಗ ಕಾರ್ಮಿಕರು ತಮ್ಮ ಮಾತಿಗೆ ಸ್ಪಂದಿಸದೆ ಪಕ್ಷಿಗಳ ಮಾರಣಹೋಮ ಮಾಡಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.
ಬುದ್ಧಿಮಾತು ಹೇಳಿದ ಸ್ಥಳೀಯರಿಗೆ ಅವಾಚ್ಯ ಶಬ್ದಗಳಿಂದ ಕಾರ್ಮಿಕನೊಬ್ಬ ನಿಂದಿಸುವುದರೊಂದಿಗೆ ಪ್ರಾಣಿ ಹಿಂಸೆ ಮಾಡಿದ್ದು, ಅವರಿಗೆ ತಕ್ಕ ಶಾಸ್ತಿಯಾಗಬೇಕಿದೆ ಎನ್ನುವುದು ಸ್ಥಳೀಯ ನಿವಾಸಿ ಶಮೀರ್ ಅವರ ಆಕ್ರೋಶದ ಮಾತು.
ಅನಾಥ ಮರಿಗಳ ಆಕ್ರಂದನ: ಈ ಅಮಾನವೀಯ ಘಟನೆ ಬಳಿಕ ಬದುಕಿ ಉಳಿದಿರುವ ಪಕ್ಷಿ ಮರಿಗಳು ಅನಾಥವಾಗಿದ್ದು, ಸನಿಹದ ಮರವೊಂದರಲ್ಲಿ ಆಸರೆ ಪಡೆದಿರುವ ದೃಶ್ಯ ಗೋಚರಿಸಿದೆ. ಘಟನೆ ನಂತರ ದಿನಕ್ಕೆ ಎರಡರಂತೆ ಪಕ್ಷಿ ಮರಿಗಳು ಮರದಿಂದ ಸತ್ತು ಬೀಳುತ್ತಿವೆ ಎಂದು ಸ್ಥಳೀಯರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. 100ಕ್ಕೂ ಅಧಿಕ ಪಕ್ಷಿಗಳು ವಲಸೆ ಬಂದಿದ್ದು ಇದೀಗ ಮರಿಗಳು ತಾಯಿಯ ಪೋಷಣೆಯಿಲ್ಲದೆ ನೆಲೆ ಕಳೆದುಕೊಳ್ಳುವಂತಾಗಿದೆ.
ಇಬ್ಬರ ಬಂಧನ: ಈ ಬಗ್ಗೆ ಸ್ಥಳೀಯ ಅರಣ್ಯ ವಲಯಾಧಿಕಾರಿ ಎಂ.ಎಂ.ಅಚ್ಚಪ್ಪ ಪ್ರತಿಕ್ರಿಯಿಸಿ, ಪ್ರಕರಣದ ಬಗ್ಗೆ ಮಾಹಿತಿ ದೊರೆತ ತಕ್ಷಣ ಮೂವರನ್ನು ವಿಚಾರಣೆಗೆ ಒಳಪಡಿಸಿ ಅರಣ್ಯ ವನ್ಯಜೀವಿ ಕಾಯಿದೆ 9 ಮತ್ತು 51ರ ಪ್ರಕಾರ ಮೊಕದ್ದಮೆ ದಾಖಲಿಸಲಾಗಿದೆ ಹಾಗೂ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಒಬ್ಬ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಗುತ್ತಿಗೆದಾರ ಹಾಗೂ ಕಾರ್ಮಿಕರಿಬ್ಬರು ಆರೋಪಿಗಳಾಗಿದ್ದು, ರಾಜು ಹಾಗೂ ಮುರುಗೇಂದ್ರನ್ ಎಂಬವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement