ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಿಇಟಿ ಸೀಟು, ಶುಲ್ಕದಲ್ಲಿ ಬದಲಿಲ್ಲ

Mainashree
Updated On : 24 Apr 2014, 10:34 am

ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್‌ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಬಂದಿದ್ದು, ಶುಲ್ಕ ಹಾಗೂ ಸೀಟು ಹಂಚಿಕೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಒತ್ತಡಕ್ಕೆ ಮಣಿದಿದ್ದು, ಶುಲ್ಕ ಹಾಗೂ ಸೀಟು ಹಂಚಿಕೆಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ಸರ್ಕಾರಕ್ಕೆ ಒಪ್ಪಿಗೆ ಸೂಚಿಸಿವೆ. ಇದಲ್ಲದೇ ಹೈಕೋರ್ಟ್‌ನಲ್ಲಿ ಜಂಟಿ ಪ್ರಮಾಣಪತ್ರ ಸಲ್ಲಿಸಿ ವೃತ್ತಿ ಶಿಕ್ಷಣ ಸಂಸ್ಥೆಗಳ ನಿಯಂತ್ರಣ ಕಾಯಿದೆಯನ್ನು ಜಾರಿಗೆ ತರದಿರುವ ಬಗ್ಗೆ ಸ್ಪಷ್ಟನೆ ನೀಡಲು ನಿರ್ಧರಿಸಿವೆ.
ರಾಜ್ಯ ಸರ್ಕಾರದೊಂದಿಗೆ ನಡೆದ ಮಾತುಕತೆಯಲ್ಲಿ ಸಮಾನ ಶುಲ್ಕ ಮುಂದುವರಿಸಲು ಧಿಕ್ಕರಿಸಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳು, ಅಂತಿಮವಾಗಿ 2013-14ನೇ ಶೈಕ್ಷಣಿಕ ವರ್ಷದ ಪ್ರಕ್ರಿಯೆಯನ್ನೇ 2014-15ನೇ ಸಾಲಿನಲ್ಲೂ ಪಾಲಿಸಲು ನಿರ್ಧರಿಸಿವೆ.
ಬೆಂಗಳೂರಿನಲ್ಲಿ ಗುರುವಾರ ಸಂಜೆ ನಡೆದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಒಕ್ಕೂಟದ ಸಭೆಯಲ್ಲಿ ಒಮ್ಮತದ ನಿರ್ಣಯಕೈಗೊಳ್ಳಲಾಗಿದೆ. ಈ ಸಂಬಂಧ ಸರ್ಕಾರಕ್ಕೆ ಒಪ್ಪಿಗೆ ಪತ್ರವನ್ನು ರವಾನಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಪಾಂಡುರಂಗ ಶೆಟ್ಟಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಇದರೊಂದಿಗೆ ಕಳೆದ 4 ತಿಂಗಳಿಂದ ನಡೆಯುತ್ತಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ರಾಜ್ಯ ಸರ್ಕಾರವೂ ಕಾನೂನು ಇಕ್ಕಟ್ಟಿನಿಂದ ಪಾರಾಗಿದೆ. 2006ರ ಕಾಯಿದೆ ಅನುಷ್ಠಾನ ಮಾಡುವ ಅನಿವಾರ್ಯದಿಂದ ರಾಜ್ಯ ಸರ್ಕಾರ ತಪ್ಪಿಸಿಕೊಂಡಿದೆ. ಪಾಲಕರು ಹಾಗೂ ವಿದ್ಯಾರ್ಥಿಗಳ ಗೊಂದಲಕ್ಕೂ ತೆರೆಬಿದ್ದಂತಾಗಿದೆ. ಮತ್ತೊಂದು ಧನಾತ್ಮಕ ವಿಚಾರವೆಂದರೆ ಇದೇ ಮೊದಲ ಬಾರಿಗೆ ಏಪ್ರಿಲ್ ತಿಂಗಳಲ್ಲಿಯೆ ವೃತ್ತಿ ಶಿಕ್ಷಣ ಕೋರ್ಸ್‌ಗಳ ಶುಲ್ಕ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆ ಕುರಿತಂತೆ ಅಂತಿಮ ನಿರ್ಣಯ ಹೊರಬಿದ್ದಿದೆ.


ಸರ್ಕಾರದ ಮನವಿಗೆ ಸ್ಪಂದಿಸಿದ ಆಡಳಿತ ಮಂಡಳಿ
ಸರ್ಕಾರದ ವಿರುದ್ಧ ತೊಡೆತಟ್ಟಿ ಕಾನೂನು ಹೋರಾಟ ಪ್ರಾರಂಭಿಸಿದ್ದ ಶಿಕ್ಷಣ ಸಂಸ್ಥೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರ ಮನವಿಗೆ ಸ್ಪಂದಿಸಿವೆ. ಇದೊಂದು ಶೈಕ್ಷಣಿಕ ವರ್ಷಕ್ಕೆ ಕಾಯಿದೆ ಅನುಷ್ಠಾನಕ್ಕೆ ವಿನಾಯಿತಿ ನೀಡಲು ಒಪ್ಪುತ್ತೇವೆ. ಆದರೆ 2015-16ನೇ ಶೈಕ್ಷಣಿಕ ವರ್ಷದಿಂದ ಕಡ್ಡಾಯವಾಗಿ 2006ರ ಕಾಯಿದೆ ಜಾರಿ ಮಾಡಲೇಬೇಕು ಎಂಬ ಷರತ್ತನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ವಿಧಿಸಿವೆ. ಇದಕ್ಕೆ ರಾಜ್ಯ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿದೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement