ಹೆಸರಘಟ್ಟ ಫಿಲ್ಮ್ ಸಿಟಿ ರಾಮೋಜಿ ಮಾದರಿಯಲ್ಲೇ ಅಭಿವೃದ್ಧಿ: ಬೇಗ್
ಆಂಧ್ರದ ರಾಮೋಜಿ ರಾವ್ ಫಿಲ್ಮ್ ಸಿಟಿ ಮಾದರಿಯಲ್ಲೇ...
ಬೆಂಗಳೂರು: ಆಂಧ್ರದ ರಾಮೋಜಿ ರಾವ್ ಫಿಲ್ಮ್ ಸಿಟಿ ಮಾದರಿಯಲ್ಲೇ ಹೆಸರಘಟ್ಟ ಫಿಲ್ಮ್ ಸಿಟಿ ಅಭಿವೃದ್ಧಿಪಡಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ವಾರ್ತಾ ಮತ್ತು ಮೂಲಸೌಕರ್ಯ ಸಚಿವ ರೋಷನ್ ಬೇಗ್ ತಿಳಿಸಿದ್ದಾರೆ.
ಹೆಸರಘಟ್ಟದಲ್ಲಿರುವ ಫಿಲ್ಮ್ ಸಿಟಿಗೆ 300 ಎಕರೆಯಷ್ಟು ಸರ್ಕಾರಿ ಭೂಮಿ ನೀಡಲಾಗಿದೆ. ಆದರೆ ಇದು ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಾಗಿಲ್ಲ. ಈ ಜಾಗವನ್ನು ನಿವೇಶನ ರೂಪದಲ್ಲಿ ಹಂಚಲು ಕೆಲವರು ಪ್ರಯತ್ನ ನಡೆಸಿದ್ದರಿಂದ ವಿವಾದಗ್ರಸ್ಥವಾಗಿದೆ. ಈ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಜತೆ ಚರ್ಚೆ ನಡೆಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ಈ ಸಂಬಂಧ ಏ.29ರಂದು ಹೆಸರಘಟ್ಟಕ್ಕೆ ಅಧಿಕಾರಿಗಳ ಜತೆ ಸ್ಥಳ ಪರಿಶೀಲನೆಗೆ ತೆರಳುತ್ತೇನೆ. ಆಂಧ್ರ ವಿಭಜನೆಯಿಂದ ರಾಮೋಜಿರಾವ್ ಫಿಲ್ಮ್ ಸಿಟಿಯತ್ತ ಚಿತ್ರೋದ್ಯಮ ಆಕರ್ಷಣೆ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಹೆಸರುಘಟ್ಟ ಫಿಲ್ಮ್ ಸಿಟಿ ಅಭಿವೃದ್ಧಿಪಡಿಸುವುದರಿಂದ ರಾಜ್ಯಕ್ಕೆ ಹೆಚ್ಚು ಅನುಕೂಲವಾಗುತ್ತದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಹೆಸರಘಟ್ಟ ಹತ್ತಿರದಲ್ಲಿ ಇರುವುದರಿಂದ ಹೆಚ್ಚು ಲಾಭವಾಗುತ್ತದೆ ಎಂದು ಹೇಳಿದರು.
ಮಲ್ಟಿಫ್ಲೆಕ್ಸ್ ಬೆಲೆ ಇಳಿಕೆ : ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಟಿಕೆಟ್ ಬೆಲೆ ಇಳಿಕೆ ಮಾಡುವ ಬಗ್ಗೆ ನಾನು ಈ ಹಿಂದೆ ಪ್ರಸ್ತಾಪ ಮಾಡಿದ್ದು ನಿಜ. ಆದರೆ ಇದರಿಂದ ಉದ್ಯಮದ ಮೇಲೆ ಯಾವುದೇ ಪರಿಣಾಮವಾಗದಂತೆ ನೋಡಿಕೊಳ್ಳಬೇಕು. ಈ ಸಂಬಂಧ ತಮಿಳುನಾಡು, ಗುಜರಾತ್, ಮುಂಬೈ ಮಾದರಿಯ ಅಧ್ಯಯನ ನಡೆಸುತ್ತಿದ್ದೇನೆ. ಜನಪ್ರಿಯತೆಗಳಿಸಲು ತಮಿಳುನಾಡಿನಲ್ಲಿ ಮಲ್ಟಿಫ್ಲೆಕ್ಸ್ಗಳ ಮೊದಲನೇ ಸಾಲಿನ ದರವನ್ನು ರು. 10ಗೆ ನಿಗದಿ ಮಾಡಲಾಗಿದೆ. ಆದರೆ ರಾಜ್ಯದಲ್ಲಿ ಈ ರೀತಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.
ಮೂಲಸೌಕರ್ಯ ನೀತಿ : 2014ನೇ ಸಾಲಿನ ಮೂಲಸೌಕರ್ಯ ನೀತಿ ಜಾರಿಗೆ ಸರ್ಕಾರಿ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. 2007ರ ನೀತಿ ಇನ್ನೂ ಪರಿಷ್ಕರಣೆಯಾಗಿಲ್ಲ. ಈ ಸಂಬಂಧ ವಿವಿಧ ವಾಣಿಜ್ಯ ಸಂಘಟನೆಗಳು, ಇಲಾಖಾ ಮುಖ್ಯಸ್ಥರ ಜತೆ ಚರ್ಚೆ ನಡೆಯುತ್ತಿದೆ. ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದರು.
ಈ ಯೋಜನೆ ಅನ್ವಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಸುಸಜ್ಜಿತ ಸಮ್ಮೇಳನ ಸಭಾಂಗಣ ನಿರ್ಮಿಸಲು ನಿರ್ಧರಿಸಲಾಗಿದೆ. 35 ಎಕರೆ ಪ್ರದೇಶದಲ್ಲಿ ರು. 500 ಕೋಟಿ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಈ ಸಮ್ಮೇಳನ ಸಭಾಂಗಣ ತಲೆ ಎತ್ತಲಿದೆ. ಜತೆಗೆ ಕ್ರೀಡಾ ನಗರ ನಿರ್ಮಾಣದ ಪ್ರಸ್ತಾಪವೂ ಇದೆ ಎಂದು ಹೇಳಿದರು.
ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಭವಿಷ್ಯದಲ್ಲಿ ಮೈಸೂರು ದೇಶದ ಪ್ರಮುಖ ಪ್ರವಾಸೋದ್ಯಮ ತಾಣವಾಗಿ ಬೆಳೆಯಲಿದೆ. ಹೀಗಾಗಿ ವಿಮಾನ ನಿಲ್ದಾಣ ವಿಸ್ತರಣೆಗಾಗಿ 80 ಎಕರೆ ಜಾಗವನ್ನು ವಶಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಜತೆಗೆ ಬೀದರ್ ವಿಮಾನ ನಿಲ್ದಾಣ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ವಿಮಾನಯಾನ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ ಎಂದರು.
ಬುಲೆಟ್ ರೈಲಿಗೆ ಚರ್ಚೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿರುವ ಬುಲೆಟ್ ರೈಲು ಯೋಜನೆ ಆರಂಭಕ್ಕೆ ಚಾಲನೆ ದೊರೆತಿದೆ ಎಂದು ಮೂಲಸೌಕರ್ಯ ಸಚಿವ ರೋಷನ್ ಬೇಗ್ ತಿಳಿಸಿದ್ದಾರೆ. ಬಜೆಟ್ಪೂರ್ವ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿತ್ತು. ನಂತರ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಂದಿತಾ ಶರ್ಮಾ ಅವರು, ರೇಲ್ವೆ ಇಲಾಖೆ ಹೈಸ್ಪೀಡ್ ರೈಲು ವಿಭಾಗದ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ. ಸದ್ಯದಲ್ಲೇ ಇದಕ್ಕೆ ಚಾಲನೆ ದೊರೆಯುತ್ತದೆ ಎಂದು ಹೇಳಿದರು.