ದೇವರ ಮತ ಯಾರಿಗೆ?
ಚುನಾವಣೆಯಲ್ಲಿ ಜನತೆ ತಮಗೆ ಬೇಕಾದ ಅಭ್ಯರ್ಥಿಗೆ ಯಾವುದೇ ತಳಮಳ ಇಲ್ಲದೆ ಮತ ಹಾಕಿದ್ದಾರೆ.
ಕಾರವಾರ: ಚುನಾವಣೆಯಲ್ಲಿ ಜನತೆ ತಮಗೆ ಬೇಕಾದ ಅಭ್ಯರ್ಥಿಗೆ ಯಾವುದೇ ತಳಮಳ ಇಲ್ಲದೆ ಮತ ಹಾಕಿದ್ದಾರೆ. ಆದರೆ 'ದೇವರ ಮತ' ಯಾರಿಗೆ ಎನ್ನುವುದು ದೇವರಲ್ಲೂ ಗೊಂದಲ ಸೃಷ್ಟಿಸಿದೆ. ಉತ್ತರ ಕನ್ನಡದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರೂ ಒಂದೇ ದೇವರೆದುರು ಪೂಜೆ, ಹರಕೆ, ಹೇಳಿಕೆ ಮಾಡಿಕೊಂಡಿದ್ದಾರೆ!
ಗೋಕರ್ಣ ಮಹಾಬಲೇಶ್ವರ, ಇಡಗುಂಜಿ ವಿನಾಯಕ, ಮುರ್ಡೇಶ್ವರ ಈಶ್ವರ, ಯಲ್ಲಾಪುರ ಘಂಟೆ ಗಣಪತಿ, ಕಾರವಾರದ ಮಹಾದೇವ, ಅಮದಳ್ಳಿಯ ವೀರ ಗಣಪತಿ, ಬಾಡದ ಕಾಂಚಿಕಾಂಬಾ, ಭಟ್ಕಳದ ದುರ್ಗಾಪರಮೇಶ್ವರಿ, ಶಿರಸಿಯ ಮಾರಿಕಾಂಬೆ... ಈ ಎಲ್ಲ ದೇವರ ಎದುರು ಅನಂತಕುಮಾರ್ ಹೆಗಡೆ, ಪ್ರಶಾಂತ ದೇಶಪಾಂಡೆ ಹರಕೆ ಹೊತ್ತಿದ್ದಾರೆ. ಒಂದೆರಡು ಕಡೆಗಳಲ್ಲಿ ಇಬ್ಬರಿಗೂ ಪ್ರಸಾದ ಆಗಿದೆ!
ಪ್ರಜಾಪ್ರಭುತ್ವದಲ್ಲಿ ಮತದಾರರೇ ದೇವರು. ಈ ಇಬ್ಬರೂ ಮತದಾರರ ಮೇಲೆ ಗರಿಷ್ಠ ಪ್ರಭಾವ ಬೀರಿದ್ದಾರೆ. ಆದರೂ ದೇವರನ್ನು ಅತಿಯಾಗಿ ನಂಬಿದ್ದಾರೆ. ಹೀಗಾಗಿ ಯಾರನ್ನು ಗೆಲ್ಲಿಸಬೇಕು ಎಂಬ ಗೊಂದಲ ದೇವರಲ್ಲೂ ಉಂಟಾಗಿದೆ.
ಜಾತಿಗೊಂದು ದೇವರು: ಭಟ್ಕಳದಲ್ಲಿ ಜಾತಿಗೊಂದು ದೇವಾಲಯ. ಅಭ್ಯರ್ಥಿಗಳು ದೇವರ ಮೂಲಕ ಆಯಾ ಜಾತಿಯ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ. ಅಭ್ಯರ್ಥಿಗಳು ಭಟ್ಕಳದ ಪ್ರತಿ ದೇವಾಲಯಕ್ಕೂ ಮೂರು ಸುತ್ತು ಹಾಕಿದ್ದಾರೆ. ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟಿರುವ ಪ್ರಶಾಂತ ದೇಶಪಾಂಡೆ ದರ್ಗಾ, ಮಸೀದಿ ಹಾಗೂ ಚರ್ಚ್ಗಳಿಗೂ ಭೇಟಿ ನೀಡಿದ್ದಾರೆ. ದೇವರು ಒಲಿಯಲಿ, ಬಿಡಲಿ, ತೀರ್ಮಾನವನ್ನಂತೂ ಮತದಾರ ದೇವರು ಕೊಟ್ಟೇ ಕೊಡುತ್ತಾನೆ ಮೇ16ಕ್ಕೆ.
ದೇವರ ಶಕ್ತಿ ಪ್ರದರ್ಶನಕ್ಕಿಲ್ಲ ಅವಕಾಶ
ಇಬ್ಬರೂ ಬೇರೆ ಬೇರೆ ದೇವರಿಗೆ ಪೂಜೆ, ಹರಕೆ, ಪ್ರಾರ್ಥನೆ ಮಾಡಿಕೊಂಡಿದ್ದರೆ ದೇವರ ಶಕ್ತಿಯ ಪ್ರದರ್ಶನದ ಅಖಾಡವಾಗಿಯೂ ಮಾರ್ಪಡುತ್ತಿತ್ತು. ಆದರೆ ಇಲ್ಲಿ ಹಾಗಾಗಿಲ್ಲ. ಒಂದೇ ದೇವರಿಗೆ ಇಬ್ಬರೂ ತಲೆಬಾಗಿಸಿದ್ದರಿಂದ ಅದಕ್ಕೆ ಅವಕಾಶವೇ ಇಲ್ಲದಂತಾಗಿದೆ. ಇದಕ್ಕೇನು ಉಪಾಯ?
-ವಸಂತಕುಮಾರ್ ಕತಗಾಲ