ಬರಗೆಟ್ಟ ರಾಜ್ಯದ ಬದುಕು
ರಾಜ್ಯದಲ್ಲಿ ಚುನಾವಣಾ ಕಾವಿನಲ್ಲಿ ಮರೆತು ಹೋಗಿದ್ದ ನೀರಿನ ಸಮಸ್ಯೆಗೆ ಇದೀಗ ಜೀವ ಬಂದಿದೆ. ಹನಿ ನೀರಿಗೂ ಪರದಾಟದ ಸ್ಥಿತಿ ಅರಿವಾಗುತ್ತಿದೆ. ಮಲೆನಾಡ ಸೆರಗನ್ನು ಹೊದ್ದಂಥ ಶಿವಮೊಗ್ಗ..
ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಕಾವಿನಲ್ಲಿ ಮರೆತು ಹೋಗಿದ್ದ ನೀರಿನ ಸಮಸ್ಯೆಗೆ ಇದೀಗ ಜೀವ ಬಂದಿದೆ. ಹನಿ ನೀರಿಗೂ ಪರದಾಟದ ಸ್ಥಿತಿ ಅರಿವಾಗುತ್ತಿದೆ. ಮಲೆನಾಡ ಸೆರಗನ್ನು ಹೊದ್ದಂಥ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಅಭಾವ ಹೆಚ್ಚಾಗಿದೆ.
ಬೆಂಗಳೂರಿನಿಂದಲೇ ನೀರಿನ ಸಮಸ್ಯೆ ಶುರು. ಇಲ್ಲಿ ಕಾವೇರಿ ಬರದೆಡೆ ಟ್ಯಾಂಕರ್ ಬಂದರಷ್ಟೇ ನೀರು. ಕಾವೇರಿ ತಟದಲ್ಲಿದ್ದರೂ, ಮೈಸೂರು, ಮಂಡ್ಯದಲ್ಲೂ ಕುಡಿಯಲೂ ನೀರು ಸಿಗುತ್ತಿಲ್ಲ. ಮೈಸೂರಿಗೆ ಕಾವೇರಿ, ಕಬಿನಿಯಿಂದ ನೀರು ಪೂರೈಸುತ್ತಿದ್ದರೂ, ಕೆಲವೊಂದು ಬಡಾವಣೆಗಳಿಗೆ ಬೋರ್ವೆಲ್ಗಳೇ ಗತಿಯಾಗಿದೆ.
ರಾಯಚೂರು ಮತ್ತು ಕೊಡಗಿನಲ್ಲಿ ವಿದ್ಯುತ್ ಸಮಸ್ಯೆ. ಕೊಪ್ಪಳದಲ್ಲಿ ಮನೆಗೊಬ್ಬ ವ್ಯಕ್ತಿ ನೀರು ತರಲು ಮೀಸಲು! ಹುಬ್ಬಳ್ಳಿ, ಬಳ್ಳಾರಿ, ಬೆಳಗಾವಿಯ ಗ್ರಾಮೀಣ ಭಾಗದಲ್ಲಿ ಅಭಾವ ಹೆಚ್ಚಾಗಿದೆ. ಚಾಮರಾಜನಗರದಲ್ಲಿ ನೀರು ಎಲ್ಲಿ ಸಿಗುತ್ತದೆ ಎಂಬುದೇ ಗೊತ್ತಿಲ್ಲ. ಗುಂಡಿಗಳಲ್ಲಿ ನೀರು ತುಂಬಿದ್ದರೂ ಅದನ್ನೇ ತೆಗೆದುಕೊಂಡು ಹೋಗುತ್ತಾರೆ. ಇದರಲ್ಲಿ ಹುಳುವಿದ್ದರೂ ಅಷ್ಟೇ. ಹಾಸನದಲ್ಲಿ ಅಂತರ್ಜಲ ಸಮಸ್ಯೆ ಏರಿಕೆಯಾಗಿದ್ದು, ನೀರು ಸಿಗುತ್ತಿಲ್ಲ. ಹೀಗಾಗಿ ಟ್ಯಾಂಕರ್ಗಳ ಮೂಲಕವೇ ನೀರನ್ನು ಸರಬರಾಜು ಮಾಡಲಾಗುತ್ತದೆ.
ಬಾಗಲಕೋಟೆ ಜಿಲ್ಲೆಯಲ್ಲಿ 471 ಗ್ರಾಮಗಳಲ್ಲಿ ನೀರಿನ ಬವಣೆ ಇದೆ. ಇಲ್ಲಿ ನೀರು ಒದಗಿಸಲು ಜಿಲ್ಲಾಡಳಿತ ಕೆಲವೊಂದು ಕ್ರಮ ತೆಗೆದುಕೊಂಡಿದ್ದರೂ ಇನ್ನೂ ಸಮಸ್ಯೆ ಬಗೆಹರಿಸಲಾಗಿಲ್ಲ. ಹಾವೇರಿ, ಕೋಲಾರ, ಕಾರವಾರದಲ್ಲೂ ಟ್ಯಾಂಕರ್ಗಳೇ ನೀರಿಗೆ ಗತಿಯಾಗಿವೆ. ಗದಗದಲ್ಲಿ 25 ದಿನಕ್ಕೊಮ್ಮೆ ಕುಡಿಯುವ ನೀರು ಬರುತ್ತದೆ. ಜಿಲ್ಲೆಯಲ್ಲಿರುವ ನದಿಗಳು ಬತ್ತಿದ್ದು ನೀರಿನ ಹಾಹಾಕಾರ ಹೆಚ್ಚಾಗಿದೆ. ತುಮಕೂರು ಜಿಲ್ಲೆಯಲ್ಲಿ ನೀರು ಸಿಗದೇ ಇರುವುದರಿಂದ ಹಣ ತೆತ್ತು ಕೊಳ್ಳಬೇಕಾದ ಪರಿಸ್ಥಿತಿ ಇದೆ.
* ಕೋಲಾರಕ್ಕೆ ಟ್ಯಾಂಕರ್ಗಳೇ ಗತಿ
* ಬಾಗಲಕೋಟೆಯ 471 ಹಳ್ಳಿಗಳಲ್ಲಿ ಸಮಸ್ಯೆ
* ಚಾಮರಾಜನಗರದಲ್ಲಿ ನೀರ ಹುಡುಕಾಟ
* ಮಂಡ್ಯಕ್ಕೆ ದುಡ್ಡಿದ್ದರೂ ಸಿಗುತ್ತಿಲ್ಲ ನೀರು
* ಶಿವಮೊಗ್ಗದ 100 ಹಳ್ಳಿಗಳಲ್ಲಿ ತತ್ವಾರ
* ಬಳ್ಳಾರಿಯಲ್ಲಿ ಜಲಾಶಯವಿದ್ರೂ ಜಲಕ್ಷಾಮ
* ಕೊಡಗಿಗೆ ನೀರಿಗಿಂತ ಕರೆಂಟೇ ಬರೆ
* ಕಾರವಾರದಲ್ಲಿ ನೀರಿಲ್ಲದ ಕೊಡಗಳ ಅಬ್ಬರ
* ಮೈಸೂರಿನಲ್ಲಿ ನೀರಿಗಾಗಿ ಎಡತಾಕುತ್ತಿರುವ ಜನ
* ಹುಬ್ಬಳ್ಳಿಗೆ ಟ್ಯಾಂಕರ್ ಬಂದರಷ್ಟೇ ನೀರು
* ಗದಗದಲ್ಲಿ 25 ದಿನಕ್ಕೊಮ್ಮೆ ನೀರು
* ತುಮಕೂರಲ್ಲಿ ದುಡ್ಡು ಕೊಟ್ಟರಷ್ಟೇ ನೀರು
* ಗುಲ್ಬರ್ಗದ 300 ಗ್ರಾಮಗಳಲ್ಲಿ ನೀರೇ ಇಲ್ಲ
* ಯಾದಗಿರೀಲೂ ನೀರ ಬವಣೆ, ಟ್ಯಾಂಕರ್ ಮೊರೆ
* ಬೀದರ್ನಲ್ಲಿ ಚಿಕ್ಕಮಕ್ಕಳೂ ಬೀದಿಗೆ ಬರಬೇಕು
* ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಡಳಿತದ್ದೇ ಸಮಸ್ಯೆ
* ರಾಮನಗರದಲ್ಲಿ 1000 ಅಡಿ ಕೊರೆದರೂ ನೀರಿಲ್ಲ
* ಚಿತ್ರದುರ್ಗದ 317 ಗ್ರಾಮಗಳಲ್ಲಿ ಬರ ಪರಿಸ್ಥಿತಿ
* ಹಾವೇರಿಯಲ್ಲಿ ಅಂತರ್ಜಲ ಕ್ಷೀಣ
* ಬೆಳಗಾವಿಯಲ್ಲಿ ಹೊಲಗದ್ದೆಗಳ ಬಾವಿಗಳೇ ಆಧಾರ
* ಹಾಸನದಲ್ಲಿ ಟ್ಯಾಂಕರ್ ಅವಲಂಬನೆ
ಬೆಂಗಳೂರು
ಮಹಾನಗರಕ್ಕೆ ಮಹಾಸಮಸ್ಯೆ
ಬೆಂಗಳೂರು ಜನಸಂಖ್ಯೆ ಬೆಳೆದಂತೆ ಕುಡಿಯುವ ನೀರಿನ ಸಮಸ್ಯೆಯೂ ಉಲ್ಬಣಿಸುತ್ತಿದೆ. ಇದಕ್ಕಾಗಿ ಯಾವ ಮಾರ್ಗ ಅನುಸರಿಸಿದರೂ ನೀರಿನ ಪೂರೈಕೆ ಮಾತ್ರ ಅಷ್ಟಕ್ಕಷ್ಟೆ ಎಂಬಾತಾಗಿದೆ.
ಬೆಂಗಳೂರು ಮಹಾನಗರದ ಒಂದು ಕೋಟಿ ಜನರಲ್ಲಿ 25 ಲಕ್ಷ ನಿವಾಸಿಗಳಿಗೆ ಕಾವೇರಿ ನೀರು ಕನಸಿನ ಮಾತು. ಇವರಿಗೆ ಬೋರ್ವೆಲ್ ನೀರೂ ಇಲ್ಲ. ಟ್ಯಾಂಕರ್ ನೀರೇ ಗತಿ. ಬೆಂಗಳೂರಿನ ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಕೆಲವು ಬಡಾವಣೆಗಳು ಹಾಗೂ 110 ಗ್ರಾ.ಪಂ.ಗಳ ಜನವಸತಿ ಪ್ರದೇಶಗಳಲ್ಲಿ ದಶಕಗಳಿಂದಲೂ ಕಾವೇರಿ ನೀರಿನ ಸೌಲಭ್ಯವಿಲ್ಲ. ಆ ಪ್ರದೇಶಗಳು ಬೋರ್ವೆಲ್ ಅಥವಾ ಟ್ಯಾಂಕರ್ ನೀರನ್ನೇ ನಂಬಿದ್ದವು. ಆದರೆ ಈ ಬೇಸಿಗೆಯಲ್ಲಿ ಅದಕ್ಕೂ ತತ್ವಾರ. ಜಲಮಂಡಳಿಯಾಗಲಿ, ಬಿಬಿಎಂಪಿ ನೀರೊದಿಗಿಸುವ ವ್ಯವಸ್ಥೆ ಮಾಡಿಲ್ಲ.
ಜಲಮಂಡಳಿಯಿಂದ ಸಂಪೂರ್ಣ ನಗರಕ್ಕೆ ಕಾವೇರಿ ನೀರು ನೀಡಲು ಸಾಧ್ಯವಾಗುತ್ತಿಲ್ಲ. 1,400 ದಶಲಕ್ಷ ಲೀಟರ್ ಕಾವೇರಿ ನೀರಿನ ಬೇಡಿಕೆ ಇದ್ದರೆ, ಪೂರೈಕೆಯಾಗುತ್ತಿರುವುದು 1,200 ದಶಲಕ್ಷ ಲೀಟರ್ ಮಾತ್ರ. ಹೀಗಾಗಿ ಟ್ಯಾಂಕರ್ ನೀರೆ ಇವರಿಗೆ ಜೀವಜಲ. ಈ ಪ್ರದೇಶಗಳಿಗೆ ಜಲಮಂಡಳಿ ಟ್ಯಾಂಕರ್ ನೀರೂ ಪೂರೈಸುತ್ತಿಲ್ಲ. ಏಕೆಂದರೆ, ಈ ಪ್ರದೇಶಗಳು ಇನ್ನೂ ಮಂಡಳಿ ವ್ಯಾಪ್ತಿಗೆ ಸೇರಿಲ್ಲ ಎನ್ನುವುದು ಅಧಿಕಾರಿಗಳ ವಾದ. ಹೀಗಾಗಿ ಮಹದೇವಪುರ, ಯಲಹಂಕ ಹಾಗೂ ರಾಜರಾಜೇಶ್ವರಿನಗರ ವಲಯಗಳ ಭಾಗಶಃ ಪ್ರದೇಶಗಳಲ್ಲಿ ಈಗ ಬಿಬಿಎಂಪಿ ನೀರು ಪೂರೈಸಬೇಕಿದೆ. ಕಾರಣ ಈ ಪ್ರದೇಶಗಳೆಲ್ಲಾ ಬಿಬಿಎಂಪಿಗೆ ಸೇರುತ್ತದೆ. ಆದರೆ ಇಲ್ಲಿ ಬೋರ್ವೆಲ್ ಬಿಟ್ಟರೆ ಬೇರೆ ನೀರಿನ ಮೂಲವಿಲ್ಲ. ಬಹುತೇಕ ಬೋರ್ವೆಲ್ಗಳು ಬತ್ತಿರುವುದರಿಂದ ನೀರಿನ ಸಮಸ್ಯೆ ವಿಪರೀತ. ಟ್ಯಾಂಕರ್ ನೀರು ದುಬಾರಿ.
-ಶಿವಕುಮಾರ್ ಬೆಳ್ಳಿತಟ್ಟೆ
ಉತ್ತರ ಕನ್ನಡ
ಉತ್ತರ ಕಾಣದ ನೀರ ಸಮಸ್ಯೆ
ಕರಾವಳಿಯ ಬಾವಿಯಲ್ಲಿ ಉಪ್ಪು ನೀರು, ಮಲೆನಾಡಿನಲ್ಲಿ ನೀರಿಲ್ಲ, ಬಯಲು ಸೀಮೆಯಲ್ಲಿ ಪರದಾಟ. ಇಲ್ಲಿನ ಸಾಮಾನ್ಯ ಸಮಸ್ಯೆ ಬೇಸಿಗೆಯಲ್ಲಿ ನೀರಿನ ಕೊರತೆ.
ಉತ್ತರ ಕನ್ನಡದ ಬಹುತೇಕ ಕಡೆಗಳಲ್ಲಿ ನೀರಿನ ಬರ ಇದೆ. ಊರಿನಲ್ಲಿರುವ ಬಾವಿ ಮತ್ತಿತರ ನೀರಿನ ಮೂಲವನ್ನು ಅರಸುತ್ತ ಜನತೆ ನೀರಿನ ಬವಣೆ ನೀಗಿಸಿಕೊಳ್ಳುತ್ತಿದ್ದಾರೆ. ಆದರೆ ಜಿಲ್ಲಾಡಳಿತ ಜಿಲ್ಲೆಯ ನಾಲ್ಕು ತಾಲೂಕುಗಳ 7 ಗ್ರಾಪಂಗಳ 8 ಮಜರೆಗಳಲ್ಲಿ ಟ್ಯಾಂಕರ್ಗಳ ಮೂಲಕ ಕೆಲ ದಿನಗಳಿಂದ ನೀರು ಪೂರೈಕೆ ಆರಂಭಿಸಿದೆ. ಜೋಯಿಡಾ ತಾಲೂಕಿನ ಅಖೇತಿ ಹಾಗೂ ಸಿಂಗರಗಾಂವ, ಕುಮಟಾ ತಾಲೂಕಿನ ಗೋಕರ್ಣ ಹಾಗೂ ತೊರ್ಕೆ, ಹೊನ್ನಾವರ ತಾಲೂಕಿನ ಕಡತೋಕಾ, ಭಟ್ಕಳ ತಾಲೂಕಿನ ಮಾವಳ್ಳಿ ಹಾಗೂ ಮಾವಿನಕುರ್ವಾ ಪಂಚಾಯಿತಿಗಳ 8 ಮಜರೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಕರಾವಳಿಯ ಕೆಲವೆಡೆ ಪ್ರತಿವರ್ಷ ಮಾರ್ಚ್ ತಿಂಗಳು ಬಂತೆಂದರೆ ಸಿಹಿ ನೀರಿನ ಬಾವಿಯೆಲ್ಲ ಉಪ್ಪು ನೀರಾಗಿ ಪರಿವರ್ತನೆಯಾಗುತ್ತವೆ. ಇಲ್ಲೆಲ್ಲ ಪೈಪ್ಲೈನ್ ಮೂಲಕ ನೀರು ಸರಬರಾಜಿನ ವ್ಯವಸ್ಥೆ ಮಾಡಬೇಕಿದೆ. ಬಯಲುಸೀಮೆ ಹಾಗೂ ಮಲೆನಾಡಿನಲ್ಲೂ ಕುಡಿಯುವ ನೀರಿನ ಯೋಜನೆಗಳನ್ನು ಕೈಗೊಳ್ಳುವ ಅಗತ್ಯ ಇದೆ. ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗುವ ನೀರನ್ನು ಬಳಸಿಕೊಂಡು ಕುಡಿಯುವ ನೀರಿನ ಯೋಜನೆ ರೂಪಿಸುವ ವಿಪುಲ ಅವಕಾಶಗಳಿದ್ದರೂ ಅಂತಹ ಯೋಜನೆ ರೂಪಿಸದೆ ಇರುವುದು ದುರ್ದೈವದ ಸಂಗತಿ. ಜಿಲ್ಲೆಯ ಯಾವುದೇ ಮೂಲೆಯಲ್ಲಿ ಹೋಗಿ ನೋಡಿ, ಮಹಿಳೆಯರು, ಪುರುಷರು, ವೃದ್ಧರು, ಬಾಲಕರು ನೀರಿನ ಕೊಡ ಹಿಡಿದು ಅಲೆಯುತ್ತಿರುವುದು ಸಾಮಾನ್ಯ ನೋಟವಾಗಿದೆ.
ಟ್ಯಾಂಕರ್ ಮೂಲಕ ನೀರಿಗಾಗಿ ಆರಂಭಿಕವಾಗಿ 50 ಲಕ್ಷ ಬಿಡುಗಡೆ
ಹಳಿಯಾಳ, ಮುಂಡಗೋಡ, ಯಲ್ಲಾಪುರ ತಾಲೂಕುಗಳು ಬರಪೀಡಿತ
ಈ ತಾಲೂಕುಗಳಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದೇವೆ: ವಿಜಯ ಮಹಾಂತೇಶ, ಜಿಲ್ಲಾಧಿಕಾರಿ
- ವಸಂತಕುಮಾರ್ ಕತಗಾಲ
ಚಾಮರಾಜನಗರ
ಬತ್ತುತ್ತಿದೆ ಜಲ, ಸಿಗುತ್ತಿಲ್ಲ ಸೆಲೆ
ಜಿಲ್ಲೆಯ ಬಹುತೇಕ ಕಡೆ ಅಂತರ್ಜಲ ಕುಸಿದಿದೆ. ಅದರಲ್ಲೂ ಜಿಲ್ಲೆಯಲ್ಲಿ ಪ್ರಮುಖವಾಗಿ ಚಾಮರಾಜನಗರ ತಾಲೂಕಿನ ಕುದೇರು, ಹರವೆ, ಉಮ್ಮತ್ತೂರು, ಮರಿಯಾಲ, ಕೆಲ್ಲಂಬಳ್ಳಿ, ಗುಂಡ್ಲುಪೇಟೆ ತಾಲೂಕಿನ ಅಣ್ಣೂರು ಕೇರಿ, ಹಂಗಳ ಬೀಮನಬೀಡು, ಕೊಳ್ಳೇಗಾಲ ತಾಲೂಕಿನ ಪಿ.ಜಿ. ಪಾಳ್ಯ, ಲೊಕ್ಕನಹಳ್ಳಿ, ಕೌದಳ್ಳಿ, ಇಕ್ಕಡಹಳ್ಳಿ ಗ್ರಾಮಗಳಲ್ಲಿ ವಾರಕ್ಕೊಮ್ಮೆ ನೀರುಪೂರೈಕೆಯೂ ಕಷ್ಟವಾಗಿದೆ. ಕೊಳ್ಳೇಗಾಲ ತಾಲೂಕಿನ ಕೆಲವು ಕಾಡಂಚಿನ ಗ್ರಾಮಗಳಲ್ಲಿ, ಗುಂಡ್ಲುಪೇಟೆ ತಾಲೂಕಿನ ಮಗುವಿನಹಳ್ಳಿ ಹಾಡಿ ಸೇರಿದಂತೆ ಹಲವೆಡೆಯೂ ಸಮಸ್ಯೆ ತೀವ್ರವಾಗಿದೆ. ಜತೆಗೆ ಕೆಲವು ಗ್ರಾಮಗಳಲ್ಲಿ ತೊರೆ ಹಳ್ಳ-ಕೊಳ್ಳಗಳು ಬತ್ತಿವೆ. ಸಿಕ್ಕ ನೀರನ್ನೇ ಸೋಸಿ ಕುಡಿಯುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ. 750ರಿಂದ 850 ಅಡಿ ಆಳ ಕೊರೆದರೂ ಸಿಗುತ್ತಿಲ್ಲ. ವಿದ್ಯುತ್ ಸಮಸ್ಯೆ ಎದುರಾಗಿ, ಟ್ಯಾಂಕ್ ತುಂಬಲು ಮೂರು ನಾಲ್ಕು ದಿನ ಕಾಯ್ಬೇಕು.
2013ರ ಎಪ್ರಿಲ್ನಿಂದ
ಇದುವರಗೆ 850ಕ್ಕೂ
ಹೆಚ್ಚು ಬೋರ್ವೆಲ್
ನೀರಿನ ಸಮಸ್ಯೆ ಮಾತ್ರ ನೀಗಿಲ್ಲ
ಸತ್ತೇಗಾಲ ಸಮೀಪದ ಹಳೇ ಕೋಟೆಗೆ ಟ್ಯಾಂಕರ್ ಮೂಲಕ ನೀರು
- ದೇವರಾಜು ಕಪ್ಪಸೋಗೆ
ಬಳ್ಳಾರಿ
ಕೆರೆಗಳಿಲ್ಲದ ನಾಡು
ಬಳ್ಳಾರಿ ಜಿಲ್ಲೆಯಲ್ಲಿ ಮಳೆಯಾಶ್ರಿತ ಹಾಗೂ ಕಾಲುವೆ ಹರಿಯದ ಪ್ರದೇಶದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಬಳ್ಳಾರಿ ವಿಭಾಗದ ವ್ಯಾಪ್ತಿಯಲ್ಲಿ 38 ಕೆರೆಗಳಿದ್ದು, 35ರಲ್ಲಿ ನೀರಿದೆ. ಒಟ್ಟಾರೆ ಸಮಸ್ಯೆ ವಿಪರೀತ.
ಬಳ್ಳಾರಿ ಜಿಲ್ಲೆಯಲ್ಲಿ ತುಂಗಭದ್ರಾ ಜಲಾಶಯವಿದ್ದರೂ, ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಪ್ಪಿಲ್ಲ. ಜಿಲ್ಲೆಯ 1012 ಜನವಸತಿ ಪ್ರದೇಶಗಳಲ್ಲಿ 300ಕ್ಕೂ ಹೆಚ್ಚು ಪ್ರದೇಶಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ಕಾಲುವೆ ನೀರು ಬಾರದೆ ಸಮಸ್ಯೆ ಉಲ್ಬಣಿಸಿದೆ. ಬಳ್ಳಾರಿ ಮಹಾನಗರಕ್ಕೆ ಅಲ್ಲೀಪುರ ಕೆರೆ ಆಧಾರವಾದರೆ, ಜಿಲ್ಲೆಯ ಇತರೆಡೆ ಬೋರ್ವೆಲ್ಗಳೇ ಗತಿ. ಅಂತರ್ಜಲ ಮಟ್ಟ ಕುಸಿತದಿಂದ ಮತ್ತಷ್ಟು ಸಮಸ್ಯೆಯಾಗಿದೆ. ಹೊಸಪೇಟೆಯ ಮರಿಯಮ್ಮನಹಳ್ಳಿ ಭಾಗದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಪ್ಲೋರೈಡ್ಯುಕ್ತ ನೀರಿನ ಸಮಸ್ಯೆ ಕೆಲವು ಗ್ರಾಮಗಳನ್ನು ಕಾಡುತ್ತಿದೆ. ಹೂವಿನಹಡಗಲಿ ವಿಭಾಗದ ತಾಲೂಕುಗಳಲ್ಲಿ ಕುಡಿಯುವ ನೀರಿಗೆ ಕೆರೆಗಳೇ ಇಲ್ಲ, ಇಲ್ಲಿ ಕುಡಿಯುವ ಹಾಗೂ ಬಳಕೆ ನೀರಿಗೆ ಬೋರ್ವೆಲ್ ಆಶ್ರಯ. ಕೈ ಪಂಪ್ಗಳು ನಿಷ್ಕ್ರಿಯವಾಗಿವೆ.
30ರ್ ರಷ್ಟು ಪ್ರಮಾಣದಲ್ಲಿ ಬೋರ್ವೆಲ್ ಪೋಲು
3.85 ಮೀಟರ್ ಅಲ್ಲೀಪುರ ಕೆರೆಯಲ್ಲಿ ನೀರಿದೆ
ಜು.15 ವರೆಗೆ ಲಭ್ಯ. ಇದರ ಮಿತಯೋಜನೆಯಾದರೆ
-ಶಶಿಧರ ಮೇಟಿ
ಬೆಳಗಾವಿ
ಟ್ಯಾಂಕರ್ ನೀರೇ ಆಸರೆ
ಭೀಕರ ಬರಗಾಲದಿಂದ ನಲುಗುತ್ತಿರುವ ಬೆಳಗಾವಿ ಜಿಲ್ಲೆಯಲ್ಲಿ ಜಲ ಮೂಲಗಳೆಲ್ಲವೂ ಬತ್ತಿ ಬರಿದಾಗಿವೆ. ಸಪ್ತನದಿಗಳಿದ್ದರೂ ಜಿಲ್ಲೆಯಾದ್ಯಂತ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ.
ಜಿಲ್ಲೆಯ ಬಹುತೇಕ ಗ್ರಾಮಗಳಿಗೆ ಜಿಲ್ಲಾಡಳಿತ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಬರದಿಂದ ಕೆರೆಗಳು ಬತ್ತಿ ಹೋಗಿವೆ. ಜಾನುವಾರುಗಳಿಗೆ ತೀವ್ರ ತೊಂದರೆ ಎದುರಾಗಿದೆ. ರಾಯಬಾಗ ತಾಲೂಕಿನಲ್ಲಿ ನೀರಿನ ಸಮಸ್ಯೆ ಸ್ವಲ್ಪ ಗಂಭೀರ ಸ್ವರೂಪ ಪಡೆದಿದೆ. ಇಲ್ಲಿ ಸುಮಾರು 30 ಸಾವಿರ ಜನರು ಪ್ರತಿ ದಿನವೂ ಟ್ಯಾಂಕರ್ ನೀರನ್ನು ಅವಲಂಬಿಸಿದ್ದಾರೆ. ಕಟಕಬಾವಿ, ಮಾವಿನಹೊಂಡ, ಸವಸುದ್ದಿ, ಮಾರಡಿ, ಭೆಂಡವಾಡ, ಗಿರಿನಾಯಕವಾಡಿ, ಬ್ಯಾಕೂಡ, ದೇವನಕಟ್ಟಿ ಮತ್ತು ಗೋಕಾಕ, ಸವದತ್ತಿ ತಾಲೂಕಿನ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿದರೂ ಅದು ಒಂದರ್ಥದಲ್ಲಿ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಾದಂತಾಗುತ್ತಿದೆ.
ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು
8-10 ಗ್ರಾಮಗಳಿಗೆ ಜಲಮೂಲವೇ ಇಲ್ಲ
22-24 ಕಿ.ಮೀ. ದೂರದಿಂದ ನೀರು ಪೂರೈಕೆ
- ಶ್ರೀಶೈಲ ಮಠದ
ಹುಬ್ಬಳ್ಳಿ
ಜನತೆ ದೃಷ್ಟಿ ಮಲಪ್ರಭೆಯತ್ತ
ಇಲ್ಲಿ ಕಾಡುತ್ತಿದೆ ಕುಡಿಯುವ ನೀರಿನ ಸಮಸ್ಯೆ. ಬೆಣ್ಣಿಹಳ್ಳದ ದಂಡೆಯುದ್ದಕ್ಕೂ ಇರುವ ಗ್ರಾಮಗಳಂತೂ ಕುಡಿಯುವ ನೀರಿನ ಬೇಗೆಯಿಂದ ಕಂಗೆಟ್ಟಿವೆ.
ಹುಬ್ಬಳ್ಳಿ, ಧಾರವಾಡ, ನವಲಗುಂದ, ಕಲಘಟಗಿ, ಕುಂದಗೋಳ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮಾಮೂಲು.
ಅದರಲ್ಲೂ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿರುವ ಹಳ್ಳಿಗಳಿಗೆ ಜಲಮಂಡಳಿ ಹುಬ್ಬಳ್ಳಿಯಿಂದ ನಿತ್ಯ ಟ್ಯಾಂಕರ್ ನೀರು ಪೂರೈಸುತ್ತಿದೆ. ಕುಂದಗೋಳ ತಾಲೂಕಿನ ಕುಡಿಯುವ ನೀರು ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಜಿಲ್ಲಾಡಳಿತ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಹೆಬಸೂರಿನಲ್ಲಿ ಪ್ರಾರಂಭಿಸಿದೆ. ಈ ಯೋಜನೆ ಜಾರಿಗೊಂಡಲ್ಲಿ ಮಲಪ್ರಭಾ ನದಿಯಿಂದ ನೀರು ಪೂರೈಸಿ, ಸುಮಾರು 16 ಗ್ರಾಮಗಳಿಗೆ ಒದಗಿಸಬಹುದು. ಹುಬ್ಬಳ್ಳಿ-ಧಾರವಾಡದ ಕೆಲವೆಡೆ ನಿರಂತರ ನೀರು ಪೂರೈಕೆ ಇದ್ದರೆ ಉಳಿದ ಪ್ರದೇಶಗಳಲ್ಲಿ ಮೂರರಿಂದ ಐದು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ.
ಟ್ಯಾಂಕರ್ ನೀರು ಸಾಕಾಗುತ್ತಿಲ್ಲ: ಗ್ರಾಮಸ್ಥರ ಆರೋಪ
ನಗರ ಪ್ರದೇಶದಲ್ಲೂ ನೀರಿಗೆ ತೀವ್ರ ಅಭಾವ
-ಆನಂದ ಅಂಗಡಿ
ಮಂಡ್ಯ
ಇಲ್ಲಿ ಹಣಕ್ಕಲ್ಲ, ನೀರಿಗೆ ಕೊರತೆ
ಅಂತರ್ಜಲ ಪಾತಾಳ ಸೇರಿದೆ. ಕಾವೇರಿ ಮತ್ತು ಹೇಮಾವತಿ ನದಿ ಹರಿದರೂ ಕುಡಿಯುವ ನೀರಿನ ಹಾಹಾಕಾರ ಮಾತ್ರ ತಪ್ಪಿಲ್ಲ.
ಜಿಲ್ಲೆಯ 57 ಗ್ರಾಮಗಳಲ್ಲಿ ಕುಡಿಯುವ ನೀರಿನ ಬವಣೆ ಹೇಳತೀರದ್ದಾಗಿದೆ. ನಾಗಮಂಗಲ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಕೆ.ಆರ್.ಪೇಟೆ ತಾಲೂಕಿನಲ್ಲಿ ಎರಡು, ಮದ್ದೂರು ತಾಲೂಕಿನಲ್ಲಿ ಐದು ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ನಿತ್ಯ ಬಳಕೆಯ ನೀರಿಗಾಗಿ ಜನ ಕಿ.ಮೀ. ಗಟ್ಟಲೆ ನಡೆದು ಹೋಗಿ ನೀರನ್ನು ತರುವಂತಾಗಿದೆ. ದಿನದ ಸಮಯವನ್ನೆಲ್ಲಾ ನೀರು ಸಂಗ್ರಹಿಸುವುದಕ್ಕೆ ಮೀಸಲಿಡುವಂತಹ ಸ್ಥಿತಿ ಎದುರಾಗಿದೆ. ಜಿಲ್ಲಗೆ ಬರ ಪರಿಹಾರ ಯೋಜನೆಯಡಿ ಕುಡಿಯುವ ನೀರು ಸರಬರಾಜು ಯೋಜನೆಗೆ 1589.64 ಲಕ್ಷ ರೂ. ಬಿಡುಗಡೆಯಾಗಿದೆ. ಒಟ್ಟು 939 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರಲ್ಲಿ 815 ಕಾಮಗಾರಿಗಳಿಗೆ 1571.18 ಲಕ್ಷ ರೂ. ಹಣ ವೆಚ್ಚ ಮಾಡಲಾಗಿದೆ.
ಪ್ರತಿ ದಿನ 2-3 ಬಾರಿ ಟ್ಯಾಂಕರ್ ನೀರು ಸರಬರಾಜು
1000 ಆಡಿ ಆಳ ಬೋರ್ ಕೊರೆಸಿದರೂ ನೀರು ಸಿಗದ ಪರಿಸ್ಥಿತಿ
-ಕೆ. ಎನ್ .ರವಿ
ಶಿವಮೊಗ್ಗ
ಕೆರೆ ಇದ್ದರೇನು ಶಿವ?
ಕುಡಿಯುವ ನೀರಿನ ಸಮಸ್ಯೆ ಹೆಚ್ಚು ಕಾಣಿಸಿಕೊಂಡಿರುವುದು ಬಯಲುಸೀಮೆ ತಾಲೂಕುಗಳಲ್ಲಿಯೇ. ಆದರೆ, ಸಮಸ್ಯೆ ತೀವ್ರವಾಗಿಲ್ಲ. ಇನ್ನು ಮಲೆನಾಡು ತಾಲೂಕುಗಳಲ್ಲಿ ಸ್ಥಿತಿ ಪರವಾಗಿಲ್ಲ.
ಈ ಜಿಲ್ಲೆ ಈಗ ಹೆಸರಿಗಷ್ಟೇ ಮಲೆನಾಡಾಗಿದೆ. ಹಲವೆಡೆ ಬೇಸಿಗೆ ಶುರುವಲ್ಲೇ ಕುಡಿಯುವ ನೀರಿನ ಬವಣೆ ಎದುರಾಗಿದೆ. ವಿಚಿತ್ರ ಎಂದರೆ 100ಕ್ಕೂ ಹೆಚ್ಚು ಹಳ್ಳಿಗಳ ದಾಹ ತೀರಿಸುವುದು ಕಷ್ಟವಾಗಿದೆ. ಇಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಪರಿಸ್ಥಿತಿ ಇಲ್ಲ. ಆದರೆ ಪಟ್ಟಣದ ಕೆಲವೆಡೆ ಅಂದರೆ ಶಿವಮೊಗ್ಗ, ಸಾಗರ ಸೇರಿ ಹಲವೆಡೆ ಟ್ಯಾಂಕರ್ ಮೂಲಕ ನೀರು ಸಾಗಿದೆ. ನೀರಿನ ಗುಣಮಟ್ಟ ಕಡಿಮೆ ಇರುವ ತಾಲೂಕು ಎಂದರೆ ಸೊರಬ. ಆದರೆ ಇದಕ್ಕೆ ಏಷ್ಯಾದಲ್ಲೇ ಹೆಚ್ಚು ಕೆರೆ ಇರುವ ತಾಲೂಕು ಎಂಬ ಖ್ಯಾತಿ ಇದೆ. ಒಟ್ಟಾರೆ ಜಿಲ್ಲೆಯಲ್ಲಿ ಫ್ಲೋರೈಡ್ ಸಮಸ್ಯೆಯ 12, ಕಬ್ಬಿಣದ ಅಂಶ ಹೆಚ್ಚಾಗಿರುವ 5, ನೈಟ್ರೇಟ್ ಅಂಶವಿರುವ 7 ಜಲಮೂಲ ಗುರುತಿಸಲಾಗಿದೆ. ತುಂಗಾ, ಭದ್ರಾ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ.
ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಎರಡು, 3 ದಿನಕ್ಕೊಮ್ಮೆ ನಲ್ಲಿ ನೀರು
ಬತ್ತಿದ ಕೆರೆ, ಅಂತರ್ಜಲ ಮಟ್ಟ ಕುಸಿತ
ಪರಿಶೀಲನೆಗೆ ಸಹಾಯವಾಣಿ ಸ್ಥಾಪನೆ
ದೂರು ಬಂದ ತಕ್ಷಣ ಕ್ರಮ: ಸಸಿಕಾಂತ ಸೆಂಥಿಲ್, ಜಿಪಂ ಸಿಇಓ
- ಹೊನ್ನಾಳಿ ಚಂದ್ರಶೇಖರ್
ಮಡಿಕೇರಿ
ಇಲ್ಲಿ ವಿದ್ಯುತ್ತೇ ಶತ್ರು!
ಕಳೆದ ಕೆಲವು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿತ್ತು. ಆದರೆ ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ಅಂತರ್ಜಲ ಏರಿದೆ. ಹೀಗಾಗಿ ಈ ಬಾರಿ ನೀರಿನ ಸಮಸ್ಯೆ ಅಷ್ಟಾಗಿಲ್ಲ.
ಎಲ್ಲರದ್ದೂ ಒಂದು ಸಮಸ್ಯೆ ಆದ್ರೆ ಇವರದ್ದೇ ಮತ್ತೊಂದು. ಇಲ್ಲಿ ನೀರಿದೆ. ನೀರೆತ್ತಲು ವಿದ್ಯುತ್ತೇ ಇಲ್ಲ. ವಿದ್ಯುತ್ ಇದ್ದರೂ ವೋಲ್ಟೇಜ್ ಇಲ್ಲ. ಹೀಗಾಗಿ ಸೋಮವಾರಪೇಟೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕೊಳವೆ ಬಾವಿ ಮೋಟಾರುಗಳು ನಿಷ್ಕ್ರಿಯಗೊಂಡಿವೆ. ಜಿಲ್ಲೆಗೆ ವಿದ್ಯುತ್ ಎಂಬ ಪದವೇ ಶತ್ರುವಾಗಿದೆ!
ಆನೆಕೆರೆ ಸೇರಿದಂತೆ ಜಿಲ್ಲೆಯ ಕೆಲವು ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ಇದರಿಂದ ಸುತ್ತಮುತ್ತಲಿನ ಅನೇಕ ತೆರೆದ ಬಾವಿ ಸೇರಿ ಕೊಳವೆ ಬಾವಿಗಳಲ್ಲಿ ನೀರಿದೆ. ಆದರೆ ಈ ನೀರನ್ನು ಮೇಲೆತ್ತಿ ಸಂಗ್ರಹಣಾ ತೊಟ್ಟಿಗೆ ಸರಬರಾಜು ಮಾಡಲು ವಿದ್ಯುತ್ ಕಡಿತ ಸಮಸ್ಯೆ ಆಗಿದೆ. ಹಾರಂಗಿಯಿಂದ ಸೋಮವಾರಪೇಟೆ ನಗರಕ್ಕೆ ನೀರು ಸರಬರಾಜು ಮಾಡಲು ಅಳವಡಿಸಿರುವ ಪೈಪ್ಲೈನ್ನ ಹಲವು ಜಂಕ್ಷನ್ಗಳಲ್ಲಿ ನೀರು ಪೋಲಾಗುತ್ತಿದೆ. ಸಂಬಂಧಪಟ್ಟವರು ಇದನ್ನು ಗಮನಿಸಬೇಕಿದೆ.
ಹಾರಂಗಿ ಕುಡಿವ ನೀರಿನ ಯೋಜನೆ ಹೆಸರಿಗಷ್ಟೇ ಪೂರ್ಣ
ಯಡವನಾಡಿನಲ್ಲಿ ಹಾರಂಗಿ ನೀರನ್ನು ಪಂಪ್ ಮಾಡುವುದು
ನಂತರ ಬೇಳೂರಲ್ಲಿ ಶುದ್ಧೀಕರಿಸಿ ಸೋಮವಾರಪೇಟೆಗೆ ಸರಬರಾಜು
-ಬಿ.ಎ. ಭಾಸ್ಕರ್
ಚಿಕ್ಕಬಳ್ಳಾಪುರ
ನೀರು ಸಿಕ್ಕರೆ ಅದುವೆ ಅದೃಷ್ಟ
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಹಣದ ಕೊರತೆ ಏನಿಲ್ಲ. ಆದರೆ, ಜಿಲ್ಲಾಡಳಿತ ಬಗೆಹರಿಸಬೇಕು ಅಷ್ಟೇ.
ಈಗಾಗಲೇ 450 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಇದರಲ್ಲಿ ಇನ್ನೂ ಅನೇಕ ಹಳ್ಳಿಗಳ ಸೇರ್ಪಡೆ ದಿನೇ ದಿನೇ ಹೆಚ್ಚಾಗುತ್ತಿರುವುದು ಸತ್ಯ ಸಂಗತಿ. ಒಂದು ಗ್ರಾಮದಲ್ಲಿ 4 ಕಡೆ ಕೊಳವೆ ಬಾವಿಗಳನ್ನು ಕೊರೆಸಿದರೆ ಕೇವಲ 1 ಕಡೆ ಮಾತ್ರ ಅಲ್ಪಪ್ರಮಾಣದಲ್ಲಿ ನೀರು ಲಭ್ಯವಾಗಿ, ಉಳಿದ ಕಡೆ ಕೊಳವೆ ಬಾವಿಗಳು ವಿಫಲವಾಗುತ್ತಿವೆ. ಇನ್ನೂ ನೀರು ಸಿಕ್ಕ ಕೊಳವೆ ಬಾವಿಗಳು ಒಂದು ತಿಂಗಳೊಳಗೆ ಸಂಪೂರ್ಣವಾಗಿ ಬತ್ತಿ ಹೋಗುತ್ತಿರುವುದು ಸಮಸ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಗ್ರಾ.ಪಂ.ಮಟ್ಟದಲ್ಲಿ ಸ್ಥಾಪಿಸಲಾಗಿರುವ ನೀರು ಶುದ್ದೀಕರಣ ಘಟಕಗಳೇ ನೀರಿಲ್ಲದೇ ಕಾರ್ಯ ನಿರ್ವಹಿಸದ ದುಸ್ಥಿತಿಗೆ ಬಂದಿವೆ. ಇನ್ನೂ ಮಿತಿ ಮೀರಿದ ಕೊಳವೆ ಬಾವಿಗಳ ವೈಪಲ್ಯವು ಎಲ್ಲರ ಕೈ ಕಟ್ಟಿ ಹಾಕುತ್ತಿರುವುದರ ಮಧ್ಯೆ ಹಲವೆಡೆ ಸ್ವತ- ಅಧಿಕಾರಿಗಳು ಕೊಳವೆ ಬಾವಿಗಳಿಗೆ ಸಕಾಲದಲ್ಲಿ ಪಂಪ್ ಮೋಟಾರ್ ಅಳವಡಿಸುವ, ಜೊತೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಖಾಸಗಿ ಟ್ಯಾಂಕರ್ಗಳ ಮೂಲಕ ಸರಬರಾಜು
450ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಹಾಹಾಕಾರ
ಕೊಳವೆಬಾವಿಗಳಲ್ಲೂ ನೀರಿಲ್ಲದೇ ಸಂಕಟ
-ಎನ್. ವೆಂಕಟೇಶ್
ಹಾಸನ
ಬೇಕು ನೀರು, ತರೋದು ಹೇಗೆ?
ಹಾಸನ ನಗರಕ್ಕೆ ಕುಡಿಯುವ ನೀರು ಒದಗಿಸುವ ಹೇಮೆಯ ಒಡಲಿಗೂ ನೀರು ಹರಿಯುತ್ತಿಲ್ಲ. ಸಮಸ್ಯೆ ನೀಗಿಸಲು ಹರಸಾಹಸ ಪಡಲಾಗುತ್ತಿದೆ.
ಹಾಸನ ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಮಿತಿ ಮೀರಿದೆ. ಸಮಸ್ಯೆ ಬಗೆಹರಿಸಲು ಜಿಲ್ಲಾ ಪಂಚಾಯಿತಿ ವತಿಯಿಂದ ಸಹಾಯವಾಣಿ ತೆರೆಯಲಾಗಿದೆ. ಈಗಾಗಲೇ ಹಲವು ಗ್ರಾಮಗಳ ಗ್ರಾಮಸ್ಥರು ಪಂಚಾಯ್ತಿಗಳ ಕಚೇರಿಗಳಿಗೆ ನೀರಿಗಾಗಿ ಬೀಗ ಜಡಿದು, ಪ್ರತಿಭಟನೆಯನ್ನೂ ನಡೆಸಿದ್ದಾರೆ. ಜಿಲ್ಲೆಯ ಸಾಲಗಾಮೆ ಹೋಬಳಿ, ಬೇಲೂರಿನ ಹಳೇಬೀಡು ಮಾದಿಹಳ್ಳಿ, ಅರಸೀಕೆರೆ ತಾಲೂಕಿನ ಜಾವಗಲ್ ಹೋಬಳಿ ಮತ್ತು ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರಿನ ಹೋಬಳಿಯಲ್ಲಿ ರೈತರು ತರಕಾರಿ ಬೆಳೆಯುತ್ತಾರೆ. ಆದರೆ ಬೋರ್ವೆಲ್ಗಳಲ್ಲಿ ನೀರು ಬರುತ್ತಿಲ್ಲ. ಇದರಿಂದಾಗಿ ತರಕಾರಿ ಬೆಳೆಯಲು ಕಷ್ಟವಾಗಿದೆ. ವಿದ್ಯುತ್ ತೊಂದರೆಯಿಂದ ಕಿರು ನೀರು ಸರಬರಾಜು ಯೋಜನೆಯಡಿ ಮತ್ತು ಓವರ್ ಹೆಡ್ಟ್ಯಾಂಕ್ಗಳಿಗೆ ನೀರನ್ನು ಭರ್ತಿ ಮಾಡಿ ವಿವಿಧ ಬಡಾವಣಿಗಳಿಗೆ ಸರಬರಾಜು ಮಾಡಲು ಕಷ್ಟವಾಗುತ್ತಿದೆ.
21 ಮಿಲಿಯನ್ ಲೀಟರ್ ದಿನ ಹಾಸನಕ್ಕೆ ಬೇಕು
3.32 ಟಿಎಂಸಿ ನೀರು ಮಾತ್ರ ಈಗ ಹೇಮಾವತಿಯಲ್ಲಿ
ವಿದ್ಯುತ್ ಸಮಸ್ಯೆಹಾಸನ ನಗರಕ್ಕೆ ಒದಗಿಸಲು ಸಾಧ್ಯವಾಗುತ್ತಿಲ್ಲ
- ದಯಾಶಂಕರ ಮೈಲಿ
ಹಾವೇರಿ
ನದಿ ಬರಿದು ತಂದ ಬರ
ಹಾವೇರಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡೂ ಕಡೆ ನೀರಿನ ತುಟಾಗ್ರತೆ ಹೆಚ್ಚಿದ್ದು, ಅಂತರ್ಜಲ ಮಟ್ಟ 10ರಿಂದ 15 ಮೀಟರ್ವರೆಗೆ ಇಳಿದಿದೆ.
ಜಿಲ್ಲೆಯ 261 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಹಾವೇರಿ ತಾಲೂಕಿನ 38, ಹಾನಗಲ್ಲ ತಾಲೂಕಿನ 32, ಹಿರೇಕೆರೂರು ತಾಲೂಕಿನ 40, ರಾಣಿಬೆನ್ನೂರು ತಾಲೂಕಿನ 47, ಬ್ಯಾಡಗಿಯ 27, ಸವಣೂರಿನ 38 ಹಾಗೂ ಶಿಗ್ಗಾಂವಿ ತಾಲೂಕಿನ 39 ಗ್ರಾಮಗಳಲ್ಲಿ ಸಮಸ್ಯೆ ಎದುರಾಗಿದೆ. ಜಿಲ್ಲೆಯ 47 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಬೋರ್ವೆಲ್ಗಳೂ ವಿಫಲವಾಗುತ್ತಿವೆ.
ವರದಾ ಹಾಗೂ ಇತರ ನದಿಗಳು ಜನವರಿಯಲ್ಲೇ ಬರಿದಾಗಿದ್ದು, ತುಂಗಭದ್ರಾದಲ್ಲೂ ಹರಿವು ಕಡಿಮೆಯಾಗಿದೆ. ಇದರಿಂದ ನದಿ ನೀರು ಅವಲಂಬಿಸಿರುವ ಗ್ರಾಮಗಳು ಹಾಗೂ ಹಾವೇರಿ, ರಾಣಿಬೆನ್ನೂರು, ಹಿರೇಕೆರೂರು ನಗರಗಳಲ್ಲೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ.
ಜಿಲ್ಲೆಯ 6 ತಾಲೂಕು ಬರ ಪೀಡಿತ
ಈ ತಾಲೂಕುಗಳಲ್ಲಿ ಹೆಚ್ಚಿನ ಸಮಸ್ಯೆ
ಬೋರ್ವೆಲ್ಗಳಲ್ಲಿ ಕುಡಿವ ನೀರಿಲ್ಲ
ತೊಂದರೆಯಾಗದಂತೆ ಕ್ರಮ: ಮಂಜುನಾಥ ನಾಯಕ, ಜಿಲ್ಲಾಧಿಕಾರಿ
- ನಾರಾಯಣ ಹೆಗಡೆ
ಕೊಪ್ಪಳ
ಫ್ಲೋರೈಡ್ಗೆ ಬೆಂಡು
ಕೊಪ್ಪಳ ಜಿಲ್ಲೆಯಲ್ಲಿ ಮಳೆಗಾಲದಲ್ಲೂ ಕುಡಿವ ನೀರಿನ ಸಮಸ್ಯೆ ಇರುತ್ತದೆ. ಕುಷ್ಟಗಿ ತಾಲೂಕಿನಾದ್ಯಂತ ಫ್ಲೋರೈಡ್ಯುಕ್ತ ನೀರನ್ನೇ ಜನತೆ ಕುಡಿದು, ರೋಗಗಳಿಗೆ ತುತ್ತಾಗುತ್ತಿದ್ದಾರೆ.
ರಾಜೀವ್ ಗಾಂಧಿ ಸಬ್ಮಿಶನ್ ಕುಡಿಯುವ ನೀರು ಯೋಜನೆ ಇದೆ. ಇದಕ್ಕಾಗಿ ಕೋಟಿ ಕೋಟಿ ಸುರಿಯಲಾಗಿದೆ. ವಿಪರ್ಯಾಸವೆಂದರೆ ಇನ್ನೂ ಅನೇಕ ಹಳ್ಳಿಗಳ ದಾಹ ತೀರಿಲ್ಲ. ಯಲಬುರ್ಗಾದ ಚಿಕ್ಕೆಕೊಪ್ಪ, ಸಿದ್ನೆಕೊಪ್ಪ, ಬಿನ್ನಾಳ, ಯರೆಹಂಚಿನಾಳ, ತೊಂಡಿಹಾಳ, ಬಂಡಿಹಾಳ, ಅಡವಿಹಳ್ಳಿ, ಮನ್ನಾಪುರ, ಸೋಂಪುರ ಮಾಳೆಕೊಪ್ಪ, ಮಂಡ್ಲಮರಿ, ಹೊಸೂರು, ಸಿಡ್ಲಬಾವಿ ಮುಂತಾದ ಹತ್ತಾರು ಹಳ್ಳಿಗಳ ಜನಕ್ಕೆ ಕುಡಿಯಲು ಕೆರೆ ನೀರೇ ಗತಿ. ಅದು ಬತ್ತಿದರೆ ದೇವರೇ ಗತಿ. ಲಿಂಗನಬಂಡಿ, ಹುಲಿಗುಡ್ಡ, ಗುಳೆ, ರಾಜೂರು ಮುಂತಾದ ಗ್ರಾಮಗಳ ಜನ ಹುಳು, ಕ್ರಿಮಿಕೀಟ ಬಿದ್ದ ನೀರನ್ನೆ ಸೋಸಿ ಕುಡಿಯುತ್ತಿದ್ದಾರೆ. ಕನಕಗಿರಿ ವ್ಯಾಪ್ತಿಯ ನವಲಿ, ಕಲಕೇರಿ, ನಿಲೋಟಗಿ, ಹೋಬಳಬಂಡಿ, ಬೊಮ್ಮಸಾಗರ ತಾಂಡಾ, ದೊಡ್ಡ ತಾಂಡಾ ಮತ್ತಿತರ ಗ್ರಾಮಗಳಲ್ಲಿ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲಿರುತ್ತದೆ.
ಹೊಲ, ಗದ್ದೆ, ಕೆರೆ, ಬಾವಿ, ತೋಟಗಳಿಗೆ ತೆರಳಿ ನೀರು ಸಂಗ್ರಹ
ಬೆರಳೆಣಿಕೆ ಗ್ರಾಮಗಳಲ್ಲಿ ಮಾತ್ರ ಸಮಸ್ಯೆ; ಜಿಲ್ಲಾಡಳಿತ ಷರಾ
ಪ್ರತಿ ಕುಟುಂಬದಲ್ಲಿ ನೀರು ತರಲೆಂದೇ ಒಬ್ಬ ಮೀಸಲು
-ದತ್ತು ಕಮ್ಮಾರ
ಬಿಜಾಪುರ
15 ದಿನದಲ್ಲಿ ಉಲ್ಬಣ ಸಾಧ್ಯತೆ
ಬಿಜಾಪುರ ಜಿಲ್ಲೆಯಲ್ಲಿ ಬೇಸಿಗೆ ಆರಂಭದಲ್ಲೇ 18 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.
ಬಿಜಾಪುರ ಜಿಲ್ಲೆ ಇಂಡಿ ತಾಲೂಕಿನಲ್ಲಿ ಕುಡಿಯುವ ನೀರಿನ ಭೀಕರತೆ ಹೆಚ್ಚಿದೆ. ಈ ತಾಲೂಕಿನೊಂದರಲ್ಲೇ 14 ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಮುದ್ದೇಬಿಹಾಳ ತಾಲೂಕಿನಲ್ಲಿ 4 ಹಳ್ಳಿಗಳು ಕುಡಿಯುವ ನೀರಿನ ಸಮಸ್ಯೆಗೆ ಒಳಗಾಗಿವೆ. 4 ಜನವಸತಿ ಸೇರಿ ಒಟ್ಟು 18 ಹಳ್ಳಿಗಳಲ್ಲಿ ಜಿಲ್ಲಾಡಳಿತ ನಿತ್ಯ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ. ಒಂದು ಟ್ಯಾಂಕರ್ಗೆ ರು. 400 ಬಾಡಿಗೆ ನಿಗದಿಪಡಿಸಲಾಗಿದೆ. ಜಿಲ್ಲೆಯ 18 ಹಳ್ಳಿಗಳಿಗೆ ಏ. 11ರಿಂದ ಟ್ಯಾಂಕರ್ ನೀರು ಪೂರೈಕೆಯಾಗುತ್ತಿದೆ. 18 ಹಳ್ಳಿಗಳಿಗೆ ಪ್ರತಿ ಹಳ್ಳಿಗೆ ದಿನಕ್ಕೆ 3 ಇಲ್ಲವೆ 2 ಟ್ರಿಪ್ಗಳಲ್ಲಿ 34 ಟ್ಯಾಂಕರ್ಗಳು ಕುಡಿಯುವ ನೀರು ಪೂರೈಕೆ ಮಾಡುತ್ತಿವೆ. ಬಿಸಿಲಿನ ತಾಪದಿಂದಾಗಿ ನದಿ, ಹಳ್ಳ, ಕೊಳ್ಳಗಳು ಬತ್ತುತ್ತಿವೆ. ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕಳೆದ ತಿಂಗಳು 300 ಅಡಿ ವರೆಗೆ ಇದ್ದ ಅಂತರ್ಜಲ ಈಗ 700ರಿಂದ 800 ಅಡಿವರೆಗೆ ಕುಸಿದಿದೆ.
ಈಗ ಲಭ್ಯವಿರುವ ನೀರು 15 ದಿನಗಳಿಗೆ ಮಾತ್ರ ಸಾಕು
ಕೆಲವೇ ದಿನದಲ್ಲಿ ಅಂತರ್ಜಲ ಮಟ್ಟ ಕುಸಿಯುವ ಭೀತಿ
ದನ, ಕರುಗಳಿಗೆ ಕುಡಿವ ನೀರು ಉಲ್ಬಣ ಸಾಧ್ಯತೆ
- ರುದ್ರಪ್ಪ ಆಸಂಗಿ
ಚಿಕ್ಕಮಗಳೂರು
ಪಂಚ ನದಿಗಳ ನಾಡಲ್ಲಿ ತತ್ವಾರ
ಚಿಕ್ಕಮಗಳೂರು ಜಿಲ್ಲೆ, ತುಂಗಾ, ಭದ್ರಾ, ಹೇಮಾವತಿ, ವೇದಾವತಿ ಹಾಗೂ ನೇತ್ರಾವತಿ ನದಿಗಳ ಉಗಮ ಸ್ಥಾನ. ಆದರೂ ಇಲ್ಲಿ ಕುಡಿವ ನೀರಿಗೆ ತತ್ವಾರ.
ಜಿಲ್ಲೆಯ 7 ತಾಲೂಕುಗಳ ಪೈಕಿ, 4 ತಾಲೂಕುಗಳು ಪೂರ್ಣ ಪ್ರಮಾಣದಲ್ಲಿ ಮಲೆನಾಡು ಪ್ರದೇಶ. ಇನ್ನುಳಿದಂತೆ ಚಿಕ್ಕಮಗಳೂರು ಹಾಗೂ ತರೀಕೆರೆ ತಾಲೂಕುಗಳೆರಡಲ್ಲಿ ಮಲೆನಾಡು ಹಾಗೂ ಅರೆಮಲೆನಾಡು, ಬಯಲುಸೀಮೆ ಪ್ರದೇಶಗಳಿವೆ. ಇನ್ನುಳಿದಂತೆ ಕಡೂರು ತಾಲೂಕು ಪೂರ್ಣ ಪ್ರಮಾಣದಲ್ಲಿ ಬಯಲುಸೀಮೆ ಪ್ರದೇಶ.
3ಕಡೂರೂ, ತರೀಕೆರೆ ಹಾಗೂ ಚಿಕ್ಕಮಗಳೂರು ತಾಲೂಕುಗಳಲ್ಲಿ 700 ಅಡಿಗಳಷ್ಟು ಬೋರ್ ಕೊರೆಸಿದರೂ ನೀರು ಸಿಗುತ್ತಿಲ್ಲ. ಇದರ ಜೊತೆಗೆ ಆಗಾಗಾ ಕೈ ಕೊಡುವ ವಿದ್ಯುತ್. ಜಿಲ್ಲೆಯ ಬಯಲುಸೀಮೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಬೇಕಾದರೆ ಮುಂಗಾರಿನಲ್ಲಿ ಸಮರ್ಪಕ ಮಳೆ ಬರಬೇಕು. ಕಳೆದ ನಾಲ್ಕೈದು ವರ್ಷಗಳಿಂದ ಜಿಲ್ಲೆಯ ಸಮರ್ಪಕವಾಗಿ ಮಳೆ ಕಾಣದೆ ಜತೆಗೆ ಕುಡಿಯುವ ನೀರಿನ ಹಾಹಾಕಾರ ಎದುರಿಸುತ್ತಿದ್ದಾರೆ.
3 ತಾಲೂಕಿನ 30 ಹಳ್ಳಿಗಳಲ್ಲಿ ಪರಿಸ್ಥಿತಿ ಗಂಭೀರ
ಕೆಲವೆಡೆ ವಾರಕ್ಕೆರಡು ದಿನ ನೀರು
ತಾತ್ಕಾಲಿಕ, ಪರ್ಯಾಯ ವ್ಯವಸ್ಥೆಗೆ ಹಣ ಕೊರತೆ ಇಲ್ಲ
- ಆರ್. ತಾರಾನಾಥ್
ಗದಗ
10 ದಿನ ಕಳೆದರೆ ಕಷ್ಟ
ಗದಗ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ 25 ದಿನಕ್ಕೊಮ್ಮೆ ನೀರು ಬರುತ್ತದೆ. ಗ್ರಾಮೀಣ ಹಾಗೂ ಕೆಲ ಪಟ್ಟಣಗಳಲ್ಲಿ ಸಂಗ್ರಹ 10 ದಿನಗಳಿಗಾಗುವಷ್ಟು ಮಾತ್ರವಿದೆ.
ಜಿಲ್ಲೆಯಲ್ಲಿ ಹರಿಯುವ ತುಂಗಭದ್ರಾ ಮತ್ತು ಮಲಪ್ರಭಾ ನದಿಗಳು ಸಂಪೂರ್ಣ ಬತ್ತಿವೆ. ಭದ್ರಾ ಜಲಾಶಯದಿಂದ ನೀರು ಬಿಡುವವರೆಗೂ ಗದಗ, ಬೆಟಗೇರಿ, ಲಕ್ಷ್ಮೇಶ್ವರ, ಮುಂಡರಗಿ ಹಾಗೂ ಮುಳಗುಂದ ಪಟ್ಟಣದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ನರಗುಂದದ ಕೆರೆಯಲ್ಲಿನ ನೀರು 10 ದಿನಗಳಿಗೆ ಸಾಕು. ಆ ಮೇಲೆ ಮಲಪ್ರಭಾ ಜಲಾಶಯದಿಂದ ನೀರು ಪಡೆಯಬೇಕಾದ ಅನಿವಾರ್ಯತೆ ಇದೆ. ಅಲ್ಲೂ ನೀರಿಲ್ಲದೆ, ಆತಂಕ ಹೆಚ್ಚಿದೆ. ಜಿಲ್ಲೆಯಲ್ಲಿ 106 ಗ್ರಾಪಂಗಳಿದ್ದು, ಅದರಲ್ಲಿ 84 ಗ್ರಾಪಂ ವ್ಯಾಪ್ತಿಯ ಹಳ್ಳಿಗಳು ಕುಡಿವ ನೀರಿಗಾಗಿ ಕೊಳವೆಬಾವಿಯನ್ನೇ ಆಶ್ರಯಿಸಿವೆ. ಅಂತರ್ಜಲ ಕುಸಿದು ಒಂದು ತಿಂಗಳಲ್ಲಿ 124 ಕೊಳವೆಬಾವಿ ಬತ್ತಿವೆ. ಹೊಸದಾಗಿ ಕೊರೆಸಲಾಗಿದ್ದ 145 ಕೊಳವೆಬಾವಿಗಳಲ್ಲಿ 28ರಲ್ಲಿ ನೀರು ಸಿಕ್ಕಿಲ್ಲ.
ಗ್ರಾಮಗಳ 56 ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ
ಇದಕ್ಕಾಗಿ 60 ಲಕ್ಷ ವಿಶೇಷ ಅನುದಾನ ಬಿಡುಗಡೆ
ನೀರಿನ ಸಮಸ್ಯೆಗೆ ವಿಶೇಷ ಹೆಲ್ಪ್ಲೈನ್ ಪ್ರಾರಂಭ
-ಶಿವಕುಮಾರ ಕುಷ್ಟಗಿ
ದಕ್ಷಿಣ ಕನ್ನಡ
ಸದ್ಯಕ್ಕೆ ನೀರಿಗಿಲ್ಲ ಸಮಸ್ಯೆ
ದ.ಕ.ಜಿಲ್ಲೆಯಲ್ಲಿ ಬಿಸಿಲಿನ ತೀವ್ರತೆ ಇದ್ದರೂ ಟ್ಯಾಂಕರ್ನಲ್ಲಿ ಪೂರ್ಣ ಪ್ರಮಾಣದ ನೀರು ಪೂರೈಕೆ ಶುರುವಾಗಿಲ್ಲ. ನಗರ ಪ್ರದೇಶಗಳಲ್ಲೂ ಸದ್ಯಕ್ಕೆ ನೀರಿನ ಅಭಾವ ತಲೆದೋರಿಲ್ಲ.
ಜಿಲ್ಲೆಯ ಐದು ತಾಲೂಕುಗಳಲ್ಲಿ ನೀರಿನ ಕೊರತೆ ಉಂಟಾದರೆ ತಕ್ಷಣ ಪರ್ಯಾಯ ಕ್ರಮ ಕೈಗೊಳ್ಳುವಂತೆ ಆಯಾ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯ್ತಿ ಸೂಚಿಸಿದೆ. ಈ ಬಾರಿ ಬೇಸಿಗೆಯಲ್ಲೂ ಮಳೆಯಾದ ಕಾರಣ ನೀರಿನ ಕೊರತೆ ಅಷ್ಟಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಕಾಣಿಸಿಲ್ಲ. ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎರಡು ಟ್ಯಾಂಕರ್ ಪೈಕಿ ಒಂದು ಟ್ಯಾಂಕರ್ನಲ್ಲಿ ಅಗತ್ಯವಿರುವಲ್ಲಿಗೆ ನೀರು ಪೂರೈಸಲಾಗುತ್ತಿದೆ. ಅಂದರೆ ನಿರಂತರವಾಗಿ ಅಲ್ಲ, ನೀರು ತಲುಪದ ಕಡೆಗಳಿಗೆ ಟ್ಯಾಂಕರ್ನಿಂದ ನೀರು ಭರ್ತಿ ಮಾಡುತ್ತಾರೆ. ಮಹಾನಗರಕ್ಕೆ ನೀರು ಪೂರೈಸುವ ತುಂಬೆ ಅಣೆಕಟ್ಟೆಯಲ್ಲಿ ಇನ್ನು 75 ದಿನಕ್ಕೆ ಮಳೆ ಬಾರದಿದ್ದರೂ ನೀರು ಪೂರೈಕೆಗೆ ಅಡಚಣೆಯಾಗದು.
ಸಮಸ್ಯೆ ಉಂಟಾದರೆ ಪರ್ಯಾಯ ಕ್ರಮಕ್ಕೆ ಸೂಚನೆ
ಅಗತ್ಯ ಇರುವಲ್ಲಿಗೆ ಟ್ಯಾಂಕರ್ನಲ್ಲಿ ನೀರು ಪೂರೈಕೆ
-ಆತ್ಮಭೂಷಣ್
ಕೋಲಾರ
ಕೊಳವೆಯಲ್ಲಿ ನೀರಿನ ಹುಡುಕಾಟ
87 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದು, 65 ಹಳ್ಳಿಗಳಿಗೆ ಗ್ರಾಪಂ ಮೂಲಕ ಟ್ಯಾಂಕರ್ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ.
ಕೋಲಾರ ತಾಲೂಕಿನಲ್ಲಿ ಅತಿ ಹೆಚ್ಚು ಎಂದರೆ 29 ಗ್ರಾಮಗಳಲ್ಲಿ ನೀರಿನ ಅಭಾವ ಕಾಣಿಸಿಕೊಂಡಿದೆ. ಮಾಲೂರು ಮತ್ತು ಶ್ರೀನಿವಾಸಪುರದಲ್ಲಿ ತಲಾ 10 ಗ್ರಾಮಗಳಲ್ಲಿ, ಉಳಿದಂತೆ ಬಂಗಾರಪೇಟೆ ಮತ್ತು ಮುಳಬಾಗಿಲು ತಾಲೂಕಿನಲ್ಲಿ ತಲಾ 19 ಗ್ರಾಮಗಳಲ್ಲಿ ಟ್ಯಾಂಕರ್ಗಳ ಮೂಲಕ ನೀರು ಸರಬರಾಜಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ನೀರಿನ ಸಮಸ್ಯೆ ಇರುವ ಗ್ರಾಮಗಳ ಸಂಖ್ಯೆ ಕಡಿಮೆ ಆಗಿದೆ. ಆದರೂ ಮಳೆ ಬಾರದಿದ್ದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಜಿಪಂ ಮುಂಜಾಗ್ರತಾ ಕ್ರಮವಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರದಿಂದ ಅಗತ್ಯ ಅನುದಾನ ಪಡೆಯದು ಕಾಮಗಾರಿ ಕೈಗೊಳ್ಳಬೇಕು. ಇಲ್ಲದಿದ್ದರೆ ಸಮಸ್ಯೆ ಉಲ್ಬಣ ನಿಚ್ಚಳ. ನೀರಿನ ಅಭಾವ ನೀಗಿಸಲು ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸಲು ಜಿಪಂ ಎಂಜನಿಯರಿಂಗ್ ವಿಭಾಗಕ್ಕೆ ಸೂಚಿಸಲಾಗಿದೆ.
ಗ್ರಾ.ಪಂ. ವಾರು ನೀರಿನ ಸಮಸ್ಯೆ ನಿವಾರಣೆಗೆ ಸೂಚನೆ
ಶೀಘ್ರ ಕೆಲಸ ಆರಂಭಕ್ಕೆ ನಿರ್ಧಾರ
-ಪಾ.ಶ್ರೀ. ಅನಂತರಾಮ್
ಬಾಗಲಕೋಟೆ
ಇಲ್ಲಿ ಅನುದಾನದ ಪ್ರವಾಹ
ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲೂ ಕುಡಿವ ನೀರಿನ ತತ್ವಾರವಿದೆ. 471 ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ತಾತ್ಕಾಲಿಕವಾಗಿದೆ.
ಮೊದಲು ಅಂತರ್ಜಲ ಮಟ್ಟ 475 ಅಡಿ ಆಳದಲ್ಲಿತ್ತು. ಅದೀಗ ಅದು 675ಕ್ಕೆ ಕುಸಿದಿದೆ. ಆರು ತಾಲೂಕುಗಳ ಪೈಕಿ ಹುನಗುಂದ ಮತ್ತು ಬಾದಾಮಿ ತಾಲೂಕುಗಳಲ್ಲಿ ಕುಡಿವ ನೀರಿನ ಅಭಾವದ ತೀವ್ರತೆ ಜಾಸ್ತಿ ಇದೆ. ಸರ್ಕಾರದ ಮೊದಲ ಹಂತದ ಅನುದಾನದಲ್ಲಿ ಹೆಚ್ಚಿನ ಪ್ರಮಾಣ ಈ ತಾಲೂಕುಗಳಿಗೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 329 ಜನ ವಸತಿ ಪ್ರದೇಶ ಗುರುತಿಸಲಾಗಿದೆ. 6,45,922 ಜನರು ಇಲ್ಲಿ ವಾಸವಾಗಿದ್ದು ಪ್ರತಿಯೊಬ್ಬರಿಗೂ ನಿತ್ಯ 55 ಲೀಟರ್ ನೀರು ಪೂರೈಕೆ ಮಾಡಲಾಗುತ್ತಿದೆ. ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ಮಾಡಿ ಆದ್ಯತೆ ಮೇಲೆ ಕುಡಿವ ನೀರಿನ ಕೆಲಸಗಳನ್ನು ಅಧಿಕಾರಿಗಳು ಕೈಗೆತ್ತಿಕೊಳ್ಳುತ್ತಿದ್ದಾರೆ. ಬೇಸಿಗೆ ಸಮಸ್ಯೆ ಬಗ್ಗೆ ಗ್ರಹಿಸಿದ್ದ ಜಿಲ್ಲಾಡಳಿತ, ಸುಮಾರು 471 ಹಳ್ಳಿಗಳ ಪಟ್ಟಿ ಮಾಡಿ 11.95 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಮೊದಲ ಹಂತದಲ್ಲಿ 61 ಹಳ್ಳಿಗಳಿಗೆ 2.92 ಕೋಟಿ ಬಿಡುಗಡೆಯಾಗಿದೆ.
ಹಿಡಕಲ್ ಜಲಾಶಯದಿಂದ ಘಟಪ್ರಭಾಕ್ಕೆ ನೀರು
ಇನ್ನೆರೆಡು ದಿನದಲ್ಲಿ ನೀರು ಜಿಲ್ಲೆಗೆ ಪ್ರವೇಶ
ಇದರಿಂದ ಅಲ್ಪಮಟ್ಟಿನ ನೀರಿನ ಅಭಾವ ಕಡಿಮೆ
-ಚಿಕ್ಕಪ್ಪನಹಳ್ಳಿ ಷಣ್ಮುಖ
ತುಮಕೂರು
ಟ್ರ್ಯಾಕ್ಟರ್ ಶಬ್ದವೇ ಸಿಗ್ನಲ್
ತುಮಕೂರು, ಕುಣಿಗಲ್, ಗುಬ್ಬಿ, ತುರುವೇಕೆರೆ ತಾಲೂಕಗಳಿಗೆ ಹೇಮಾವತಿ ನೀರು ಪೂರೈಕೆಯಾದರೂ ವಾಡಿಕೆ ನೀರು ಪೂರೈಕೆಯಾಗಿಲ್ಲ. ಹೀಗಾಗಿ ಆ ಭಾಗದಲ್ಲೂ ನೀರಿಗೆ ತೀವ್ರ ಸಮಸ್ಯೆ ಉಂಟಾಗಿದೆ.
ತುಮಕೂರು ನಗರದಲ್ಲಿ ಹೇಮಾವತಿಯಿಂದ 25 ಟಿಎಂಸಿ ನೀರು ಬೇಕು. ಆದರೆ ಈಗ ಪೂರೈಕೆಯಾಗಿರುವುದು 22 ಟಿಎಂಸಿ ನೀರು. 3 ಟಿಎಂಸಿ ಕಡಿಮೆಯಾಗಿದೆ. ಬಳಕೆ ಜಾಸ್ತಿಯಾಗುದ್ದು, ಪೂರೈಕೆಯೇ ತಲೆನೋವಾಗಿದೆ. ಮಹಾನಗರಪಾಲಿಕೆಯಾಗಿರುವ ತುಮಕೂರಿನ ಬಹುತೇಕ ಕಡೆ ನಲ್ಲಿ ಸಂಪರ್ಕವೇ ಇಲ್ಲ. ಹೀಗಾಗಿ ಇಲ್ಲ ಟ್ರ್ಯಾಕ್ಟರ್ ಮೂಲಕ ನೀರು ಪೂರೈಸಲಾಗುತ್ತಿದೆ. ಗಡಿ ಭಾಗದ ಪಾವಗಡ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಗೆ ಜನ ಹಣ ಕೊಡಬೇಕಾಗಿದೆ. ಮಳೆಯಾಶ್ರಿತ ಪ್ರದೇಶಗಳಾದ ಮಧುಗಿರಿ, ಪಾವಗಡ, ಕೊರಟಗೆರೆಗಳಲ್ಲೂ ಕುಡಿಯುವ ನೀರಿಗೆ ಜನ ಪರದಾಡುವಂತಾಗಿದೆ. ನೀರು ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದೆ. ಕೆಲವು ಕಡೆ ವಾರ್ಡ್ವಾರು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದರೂ ಜನರ ಅಗತ್ಯತೆಯಷ್ಟು ಪೂರೈಕೆ ಸಾಧ್ಯವಾಗುತ್ತಿಲ್ಲ.
ಹೇಮಾವತಿ ನೀರು ಎಲ್ಲೆಡೆ ಲಭ್ಯವಿಲ್ಲ
ಕೆಲವು ಕಡೆ ನೀರು ಶುದ್ಧೀಕರಣ ಘಟಕ ಕೈಕೊಟ್ಟಿವೆ
250 ನೀಡಿ ಖಾಸಗಿ ಟ್ಯಾಂಕ್ರ್ನಿಂದ ಖರೀದಿ
- ಉಗಮ ಶ್ರೀನಿವಾಸ್
ರಾಯಚೂರು
ದಿನ ಬಿಟ್ಟು ದಿನ ನೀರು
ಅಂತರ್ಜಲ ತಳಕಚ್ಚಿದೆ. ತುಂಗಭದ್ರಾ ಮತ್ತು ಕೃಷ್ಣಾ ನದಿಗಳಿದ್ದರೂ ಬೇಸಿಗೆಗೆ ನೀರಿನ ಅಭಾವ. ನಗರ, ಪಟ್ಟಣ ಸೇರಿ ಎಲ್ಲೆಡೆ ಅಲೆದಾಟ. ವಿದ್ಯುತ್ ಕಡಿತದಿಂದ ಕೃತಕ ಅಭಾವವಾಗಿದ್ದರಿಂದ ಎಲ್ಲೆಡೆ ನೀರಿಗಾಗಿ ಹಪಾಹಪಿ.
ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದಲ್ಲಿನ ವೈಫಲ್ಯದಿಂದ ಬಹುತೇಕ ಕಡೆ ನೀರಿಗಾಗಿ 2 ರಿಂದ 3 ಕಿಮೀವರೆಗೆ ಅಲೆದಾಟ ತಪ್ಪಿಲ್ಲ. ದಿನದ ಬಹುತೇಕ ಭಾಗ ವಿದ್ಯುತ್ ಕಡಿತದಿಂದ ಜನತೆ ನೀರಿಲ್ಲದೇ ಕಷ್ಟಪಡುವಂತಾಗಿದೆ. ಶುದ್ಧ ಕುಡಿಯುವ ನೀರಿಗಾಗಿ ಜಿಲ್ಲಾದ್ಯಂತ ಗ್ರಾಮೀಣರು ಗ್ರಾಮಗಳ ಸಮೀಪದ ತೋಟದಲ್ಲಿನ ಕೊಳವೆ ಬಾವಿ, ಕೆರೆಯ ನೀರನ್ನೇ ನೆಚ್ಚಿಕೊಂಡಿದ್ದು, ಅಲ್ಲಿನ ನೀರಿನ ಮಟ್ಟ ಕುಸಿತ ಆತಂಕ ತಂದಿದೆ. ಕುಡಿಯುವ ನೀರು ಪೂರೈಕೆ ಯೋಜನೆಗಳ ರೂಪಿಸುವಿಕೆ ಮತ್ತು ಅನುಷ್ಠಾನ ಹಂತದ ವೈಫಲ್ಯದಿಂದ ಜನ ಮತ್ತು ಜಾನುವಾರು ಹಾಹಾಕಾರಕ್ಕೆ ಸಿಲುಕಿದ್ದಾರೆ. ಜಿಲ್ಲಾಡಳಿತದ ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಕಳೆದ ವರ್ಷದಂತೆ ಪ್ರಸಕ್ತ ವರ್ಷವೂ ಸುಮಾರು 299 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರ ಕಾಡುವ ಸಾಧ್ಯತೆಯಿದೆ.
ಕೊಳವೆ ಬಾವಿ; ಅಂತರ್ಜಲ ಕುಸಿತ
ತೋಟಗಾರಿಕೆ, ಬೆಳೆಗೆ ಅಭಾವ
ಲಭ್ಯ ನೀರು ಬಳಕೆಗೆ ವಿದ್ಯುತ್ ಬಿಸಿ
ರಾಯಚೂರು ನಗರದ ಕೆಲವೆಡೆ ದಿನಬಿಟ್ಟು ದಿನ ನೀರು
- ಜಗನ್ನಾಥ ಆರ್. ದೇಸಾಯಿ
ಬೀದರ್
ನೀರಿಗಾಗಿ ಮದುವೆ ಮುಂದಕ್ಕೆ...
ನೀರಿನ ಸಮಸ್ಯೆ ತಾರಕಕ್ಕೇರಿದ್ದು, ಅದರಲ್ಲೂ ಜಿಲ್ಲಾ ಕೇಂದ್ರದ ಹಳೆ ಭಾಗದಲ್ಲಿ 5 ವರ್ಷ ದಾಟದ ಮಕ್ಕಳೂ ಕೊಡ ಹಿಡಿದು ಸರದಿ ಸಾಲಿನಲ್ಲಿ ನಿಲ್ಲಬೇಕು.
ನೀರ ಸಮಸ್ಯೆ ಕಣ್ಣಮುಂದಿದ್ದರೂ, ಈಗೇನೂ ಜಾಸ್ತಿ ಇಲ್ಲ ಬಿಡಿ ಎಂಬ ಉತ್ತರ ಜಿಲ್ಲಾಡಳಿತದ್ದು. ಇವರ ಪ್ರಕಾರ ನೀರಿನ ಸಮಸ್ಯೆ ಎದುರಾಗುವುದು ಮೇ ನಲ್ಲಿ ಮಾತ್ರವಂತೆ. ಸದ್ಯ ಜಿಲ್ಲೆಯ ಯಾವ ಗ್ರಾಮದಲ್ಲೂ ನೀರ ಬವಣೆಯೇ ಇಲ್ಲವಂತೆ.
ಜಿಲ್ಲಾ ಕೇಂದ್ರ ಬೀದರ್ ನಗರದಲ್ಲಿಯೇ ಸಾಕಷ್ಟು ನೀರಿನ ಹಾಹಾಕಾರ ಇದ್ದರೆ ಇನ್ನು ಭಾಲ್ಕಿ ಪಟ್ಟಣ, ಗ್ರಾಮೀಣ ಭಾಗ, ಔರಾದ್ ಸುತ್ತಮುತ್ತಲಿನ ಪ್ರದೇಶ, ಬಸವಕಲ್ಯಾಣ, ಹುಮನಾಬಾದ್ನ ಕೆಲವೆಡೆ ನೀರಿನ ಕೊರತೆ ಅತಿಯಾಗಿದೆ. ಔರಾದ್ ಗಡಿಭಾಗಗಳಲ್ಲಿ ಗಟ್ಟಿ ಮೇಳಗಳೂ ಮುಂದೂಡಲ್ಪಟ್ಟಿವೆ. ಕೆಲವು ವಿವಾಹಗಳು ಗಡಿಯಾಚೆಗಿನ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದೂ ಇವೆ. ಇದಷ್ಟೇ ಅಲ್ಲ, 5 ವರ್ಷಕ್ಕಿಂತ ಚಿಕ್ಕ ಮಕ್ಕಳೂ ತಾಸುಗಟ್ಟಲೆ ಸರದಿ ಸಾಲಲ್ಲಿ ನಿಲ್ಲಬೇಕಾದ ಸ್ಥಿತಿ ಇದೆ.
ನೀರ ಸಮಸ್ಯೆ ಎದುರಿಸಲು ಜಿಲ್ಲಾಡಳಿತ ಸನ್ನದ್ಧ
ಮಹಾರಾಷ್ಟ್ರಕ್ಕೆ ಸ್ಥಳಾಂತರವಾದ ಮದುವೆಗಳು
ಭಾಲ್ಕಿಯಲ್ಲಿ ನೀರಿಗೆ ಬರ, ಯಾರಿಗೂ ಕಂಡಿಲ್ಲ
-ಅಪ್ಪಾರಾವ್ ಸೌದಿ
ರಾಮನಗರ
ನೀರಿಗೆ ಬೇಕು ಸಾವಿರ ಅಡಿ ಆಳ
ರಾಮನಗರ ಜಿಲ್ಲೆಯ 21 ಗ್ರಾಮಗಳಲ್ಲಿ ಕುಡಿಯುವ ನೀರ ಸಮಸ್ಯೆ ಗಂಭೀರ. ಬೆಂಗಳೂರು ಪಕ್ಕದಲ್ಲೇ ಇದ್ದರೂ ಸಮಸ್ಯೆ ಸಾಮಾನ್ಯ.
ಸಾವಿರ ಅಡಿಯಾಚೆ ಕೊರೆದರೂ ಕೊಳವೆ ಬಾವಿಗಳಲ್ಲಿ ನೀರಿಲ್ಲ. ಸಮಸ್ಯಾತ್ಮಕ ಗ್ರಾಮ, ವಾರ್ಡ್ಗಳ ಜನತೆಗೆ ಟ್ಯಾಂಕರ್ ನೀರೇ ಗತಿ. ಜಿಲ್ಲೆಯಲ್ಲಿ ಈ ಬಾರಿ ಬೇಸಿಗೆಗೆ ಮುನ್ನವೇ ನೀರಿಗೆ ತತ್ವಾರ. ಬೇಸಿಗೆಯ ಬಿಸಿಲ ಝಳ ಹೆಚ್ಚಿದಂತೆಲ್ಲಾ ನೀರಿನ ಸಮಸ್ಯೆ ಉಲ್ಬಣಿಸುತ್ತಲೇ ಇದೆ. ಜಿಲ್ಲಾ ಕೇಂದ್ರ ರಾಮನಗರದ ನಲ್ಲಿಗಳಲ್ಲಿ ನೀರು ಕಾಣುವುದೇ 8-10 ದಿನಕ್ಕೊಮ್ಮೆ ಎಂದಾದರೆ, ಇತರೆಡೆಯ ಪರಿಸ್ಥಿತಿ ಮತ್ತಷ್ಟು ದಯನೀಯ ಎನ್ನುವುದು ವೇದ್ಯವಾಗುತ್ತದೆ. ಜಿಲ್ಲೆಯಲ್ಲಿರುವ 878 ಗ್ರಾಮಗಳ ಪೈಕಿ 21 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಗಂಭೀರವಾಗಿದೆ. ಇಷ್ಟೂ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಪೌರ ಸಂಸ್ಥೆಗಳ ಕೆಲ ವಾರ್ಡ್ಗಳಲ್ಲೂ ಸಮಸ್ಯೆ ಜಠಿಲಗೊಂಡಿದೆ. 6 ಗ್ರಾಮಗಳಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಬೇಸಾಯಕ್ಕಾಗಿ ಕೊರೆಸಿರುವ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದುಕೊಂಡು, ಗ್ರಾಮಸ್ಥರಿಗೆ ನೀರು ಪೂರೈಕೆ ಮಾಡಲಾಗುತ್ತಿದೆ.
ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ
21 ಗ್ರಾಮಗಳಲ್ಲಿ ತೀರಾ ಸಮಸ್ಯೆ
ವಿದ್ಯುತ್ಗಾಗಿ ಕಾದು ಕುಳಿತ ಜನ
- ಮತ್ತೀಕೆರೆ ಜಯರಾಮ್
ಗುಲ್ಬರ್ಗ
ಜಲಮೂಲ ಎಲ್ಲಿ?
ಗುಲ್ಬರ್ಗದಲ್ಲಿ ಅಕ್ಷರಶಃ ಜನ ನೀರಿಲ್ಲದೇ ಬೆಂಡಾಗಿದ್ದಾರೆ. ಕುಡಿಯುವ ನೀರೂ ಇಲ್ಲದೇ ಸಂಕಷ್ಟ ಅನುಭವಿಸುತ್ತಿರುವ ಗ್ರಾಮಗಳಲ್ಲಿ ಬೋರ್ವೆಲ್ ಹಾಕಿಸುವ ಎಂದರೆ ಜಲಮೂಲವೇ ಸಿಗುತ್ತಿಲ್ಲ!
ಜಿಲ್ಲೆಯ 1250 ಹಳ್ಳಿಗಳ ಪೈಕಿ, 300 ಹಳ್ಳಿಗಳಲ್ಲಿ ನೀರು ಸಿಗುತ್ತಿಲ್ಲ. ಈಗಾಗಲೇ 4 ಕಡೆಗಳಲ್ಲಿ ಟ್ಯಾಂಕರ್ಗಳಲ್ಲಿ ನೀರು ಪೂರೈಸಲಾಗುತ್ತಿದೆ. 30ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜಲಮೂಲವೇ ಸಿಗುತ್ತಿಲ್ಲ. ಹೀಗಾಗಿ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ. ಜಿಲ್ಲಾಡಳಿತಕ್ಕೆ ಏನು ಮಾಡಬೇಕು ಎಂಬುದೇ ತೋಚುತ್ತಿಲ್ಲ. ಭೀಮಾ, ಅಮರ್ಜಾ, ಮುಲ್ಲಾಮಾರಿ, ಬೆಣ್ಣೆತೊರಾ ನದಿಗಳು ಬತ್ತಿವೆ. ಕೊಳವೆಬಾವಿಗಳಲ್ಲಿ ನೀರು ಸಿಗಬೇಕು ಎಂದರೆ 400 ಅಡಿ ಕೊರೆಯಬೇಕು. ನೀರು ಸಿಕ್ಕರೆ ಅದೃಷ್ಟವಷ್ಟೇ. ಸಿಗದ ನೀರಿನ ಜೊತೆಗೆ ಕಾಣದ ಕರೆಂಟ್ ಕೂಡ ಇಲ್ಲಿ ಜನರ ಜೊತೆ ಹುಡುಗಾಟವಾಡುತ್ತಿದೆ. ಆಳಂದದಲ್ಲಿ 5 ದಿನಕ್ಕೊಮ್ಮೆ ನೀರು ಬರುತ್ತೆ. ನೀರಿಗಾಗಿ ಮೈಲುಗಟ್ಟೆಲೇ ಅಲೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಎತ್ತಿನ ಗಾಡಿ ಕಟ್ಟಿಕೊಂಡು ಹೋದರೂ ನೀರು ಸಿಗುತ್ತಿಲ್ಲ.
ಆಳಂದದಲ್ಲಿ 5 ದಿನಕ್ಕೊಮ್ಮೆ ನೀರು
ಕೆಲವೆಡೆ ಟ್ಯಾಂಕರ್ ಮೂಲಕ ನೀರು
ಗ್ರಾಮೀಣ ಪ್ರದೇಶದಲ್ಲಿ ವಿಷಮ ಸ್ಥಿತಿ
-ಶೇಷಮೂರ್ತಿ ಅವಧಾನಿ
ಯಾದಗಿರಿ
ಮುಂದಿವೆ ಕಷ್ಟದ ದಿನಗಳು
ಬೇಸಿಗೆ ಪ್ರಾರಂಭದಲ್ಲೇ ಇಂಥ ಸ್ಥಿತಿ ಎದುರಾಗಿರುವುದು ಯಾದಗಿರಿ ಜಿಲ್ಲೆಯ ಜನರಿಗೆ ನುಂಗಲಾರದ ತುತ್ತು. ಜಿಲ್ಲೆಯ 106 ಗ್ರಾಮಗಳಲ್ಲಿ ನೀರ ಪರಿಸ್ಥಿತಿ ವಿಷಮವಾಗಿದೆ.
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಸರ್ಕಾರ ಈಗಾಗಲೇ 5.9 ಕೋಟಿ ಬಿಡುಗಡೆ ಮಾಡಿದೆ. ಆದರೆ ಯಾವ ಪ್ರಯೋಜನವೂ ಆಗಿಲ್ಲ. ಜಿಲ್ಲೆಯ 389 ಗ್ರಾಮಗಳಲ್ಲಿ ಹಾಹಾಕಾರವೆದ್ದಿದೆ. ಆರಂಭದಲ್ಲೇ ಇಂಥ ಸ್ಥಿತಿ ಎದುರಾಗಿರುವುದರಿಂದ ಮುಂದಿನ ದಿನಗಳನ್ನು ಹೇಗೆ ಎದುರಿಸುವುದು ಎಂಬ ಚಿಂತೆ ಇಲ್ಲಿನ ಜನರಲ್ಲಿ ಕಾಡುತ್ತಿದೆ. ಜಿಲ್ಲೆಯ 19 ಗ್ರಾಮಗಳಿಗೆ ಟ್ಯಾಂಕರ್ಗಳ ಮೂಲಕ ನೀರು ಸರಬರಾಜಾಗುತ್ತಿದೆ. ಯಾದಗಿರಿ ತಾಲೂಕಿನಲ್ಲಿ 58, ಶಹಾಪುರ ತಾಲೂಕಿನಲ್ಲಿ 126, ಸುರಪುರ ತಾಲೂರಿನಲ್ಲಿ 85 ಗ್ರಾಮಗಳಲ್ಲಿ ನೀರ ಸಮಸ್ಯೆ ಇದೆ. ಈ ಸಮಸ್ಯೆಗಳನ್ನು ಹೇಗೆ ನಿವಾರಿಸುವುದು ಎಂಬ ಚಿಂತೆ ಜಿಲ್ಲಾಡಳಿತವನ್ನು ಕಾಡುತ್ತಿದೆ. ಜನ ಕೂಡ ನೀರ ಬವಣೆ ಎಂದು ನೀಗುವುದು ಎಂಬ ಚಿಂತೆಯಲ್ಲಿದ್ದಾರೆ.
ನೀರಿನ ಕಾಮಗಾರಿಗಳಿಗೆ 5.9 ಕೋಟಿ
ಕೆಲ ಕಾಮಗಾರಿಗಳು ಆರಂಭವಾಗಿಲ್ಲ
ಮುಂದಿನ ದಿನಗಳಲ್ಲಿ ಇನ್ನೂ ಸಂಕಷ್ಟ
-ಮಂಜುನಾಥ ಸ್ವಾಮಿ
ದಾವಣಗೆರೆ
ಟ್ಯಾಂಕರ್ ನೀರು ಸದ್ಯಕ್ಕಿಲ್ಲ
ದಾವಣಗೆರೆ ಜಿಲ್ಲೆಯಲ್ಲೂ ನೀರ ಬರ ಬಿಟ್ಟಿಲ್ಲ. ಇಲ್ಲಿ ಸರಿಸುಮಾರು 159 ಗ್ರಾಮಗಳಿವೆ. ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಎದ್ದಿದೆ.
ದಾವಣಗೆರೆ ಜಿಲ್ಲೆಯ 159 ಗ್ರಾಮಗಳಲ್ಲಿ ಕುಡಿಯುವ ನೀರಿನ ತತ್ವಾರ ಹೆಚ್ಚಿದೆ. ಆದರೆ ಒಂದು ಸಮಾಧಾನಕರ ಸಂಗತಿ ಎಂದರೆ ಸದ್ಯಕ್ಕೆ ಟ್ಯಾಂಕರ್ನಲ್ಲಿ ನೀರು ಪೂರೈಸುವ ಪರಿಸ್ಥಿತಿ ಜಿಲ್ಲೆಯ ಯಾವುದೇ ಭಾಗದಲ್ಲೂ ಎದುರಾಗಿಲ್ಲ. ಜಗಳೂರು ತಾಲೂಕಿನ 70 ಗ್ರಾಮ, ಹರಪನಹಳ್ಳಿಯ 42ಕ್ಕೂ ಹೆಚ್ಚು ಗ್ರಾಮಗಳಲ್ಲಿ ತೀವ್ರ ಅಭಾವ ತಲೆದೋರಿದೆ. ದಾವಣಗೆರೆ, ಚನ್ನಗಿರಿ, ಹೊನ್ನಾಳಿ ತಾಲೂಕಿನಲ್ಲಿ 47ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಹರಪನಹಳ್ಳಿ ತಾ. ನಾಗತಿಹಟ್ಟಿ ತಾಂಡಾ, ನಂದಿಬೇವೂರು ಇತರೆ ಕಡೆ ಅಂತರ್ಜಲ ಸಂಪೂರ್ಣ ಬತ್ತಿ ಹೋಗಿದೆ. ಗ್ರಾಮಸ್ಥರಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಜಗಳೂರು ತಾಲೂಕಿನ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಜಿಲ್ಲೆಯಲ್ಲಿ ಒಟ್ಟು 252 ಗ್ರಾಮಗಳನ್ನು ಫ್ಲೋರೈಡ್ಯುಕ್ತ ಗ್ರಾಮವೆಂದು ಗುರುತಿಸಿದೆ.
ಕೆರೆ- ಕಟ್ಟೆಗಳು ಸಂಪೂರ್ಣ ಬತ್ತಿ ಹೋಗಿವೆ
ಬರಪೀಡಿತ ಜಗಳೂರು, ಹರಪನಹಳ್ಳಿ ತಾಲೂಕಿನಲ್ಲಿ ಸಮಸ್ಯೆ ತೀವ್ರ
- ನಾಗರಾಜ್ ಬಡದಾಳ್
ಮೈಸೂರು
ಜಲಮೂಲ ಎಲ್ಲಿ ಹೋಯ್ತು?
ಜಿಲ್ಲೆಯ ಅಕ್ಕಪಕ್ಕ ಕೆಆರ್ಎಸ್ ಹಾಗೂ ಕಬಿನಿ ಜಲಾಶಯಗಳಿದ್ದರೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇವತ್ತಿಗೂ ಬೋರ್ವೆಲ್ ನೀರು ಕುಡಿಯುವ ಹಲವು ಬಡಾವಣೆಗಳಿವೆ.
ನಂಜನಗೂಡು ತಾಲೂಕಿನ ಕವಲಂದೆ, ಮೈಸೂರು ತಾಲೂಕಿನ ಜಯಪುರ ಹಾಗೂ ಇಲವಾಲ ಹೋಬಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುವುದು ಸಹಜ. ಹಿಂದಿನ ವರ್ಷಗಳಲ್ಲೂ ಕೆಲವೊಂದು ಗ್ರಾಮಗಳಿಗೆ ಟ್ಯಾಂಕರ್ಗಳ ಮೂಲಕ ನೀರು ಪೂರೈಸಲಾಗಿತ್ತು. ಆದರೆ ಇಷ್ಟೊಂದು ಗ್ರಾಮಗಳಲ್ಲಿ, ಸದೀರ್ಘ ಕಾಲದಿಂದ ನೀರಿಗೆ ತತ್ವಾರ ಇರುವುದು ಇದೇ ಮೊದಲು ಎನ್ನಲಾಗಿದೆ. ಮೈಸೂರಿನ 13 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತತ್ವಾರ. ಅಂತರ್ಜಲ ಮಟ್ಟದ ತೀವ್ರ ಕುಸಿತದಿಂದಾಗಿ ಸಮಸ್ಯೆ ಬಿಗಡಾಯಿಸಿದ್ದು, ಬಹುತೇಕ ಗ್ರಾಮಗಳಲ್ಲಿ ಜಲಮೂಲಗಳೆಲ್ಲ ಬತ್ತಿ ಹೋಗಿವೆ. ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಮತ್ತು ಇತರೆ 55 ಗ್ರಾಮಗಳಿಗೆ ನೀರೊದಗಿಸುವ ಜಾಕ್ವೆಲ್ನ ಮೋಟಾರ್ ದುರಸ್ತಿಗೆ ಬಂದಿದ್ದರಿಂದ, ಪರ್ಯಾಯ ವ್ಯವಸ್ಥೆಗಳು ಪದೇ ಪದೆ ವಿಫಲವಾಗುತ್ತಿವೆ. ಹೀಗಾಗಿ ಪ್ರತಿನಿತ್ಯ ಟ್ಯಾಂಕರ್ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ.
ಇದೆ ಮೊದಲ ಬಾರಿಗೆ ಇಷ್ಟೊಂದು ಸಮಸ್ಯೆ
ಹಲವು ಹಾಡಿಗಳಲ್ಲೂ ನೀರಿನ ಸಮಸ್ಯೆ ಇದೆ
ನೀರಿನ ಸೆಲೆ ಬಳಸಿಕೊಂಡು ಸಾಧ್ಯವಾದಷ್ಟು
- ಅಂಶಿ ಪ್ರಸನ್ನಕುಮಾರ್
ಉಡುಪಿ
ಟ್ಯಾಂಕರ್ ನೀರು ಪೂರೈಕೆ ಶುರು
ಉಡುಪಿ ಜಿಲ್ಲೆಯಲ್ಲೂ ಸಾಮಾನ್ಯವಾಗಿ ಬೇಸಿಗೆ ತೀವ್ರಗೊಂಡಂತೆ ನೀರಿನ ಅಭಾವ ತಲೆದೋರುತ್ತದಾರೂ, ಜಿಲ್ಲಾದ್ಯಂತ ಕಳೆದ ವಾರ ಧಾರಾಕಾರ ಮಳೆಯಾದ ಹಿನ್ನೆಲೆಯಲ್ಲಿ ನೀರು ಪೂರೈಕೆ ಸಮಸ್ಯೆ ಅಷ್ಟಾಗಿ ಬಾಧಿಸಿಲ್ಲ.
ಕುಂದಾಪುರ ತಾಲೂಕಿನ 25 ಗ್ರಾ.ಪಂ.ಗಳಿಗೆ ಈಗಾಗಲೇ ಕುಡಿಯುವ ನೀರನ್ನು ಟ್ಯಾಂಕರ್ಗಳ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಕಳೆದ ವರ್ಷವೂ ಇದೇ ಪರಿಸ್ಥಿತಿ ಎದುರಾಗಿತ್ತು. ಆದರೆ ಮೇನಲ್ಲಿ ಮಳೆಗಾಲ ಆರಂಭವಾಗಿ ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿತ್ತು. ಆದರೆ ಈ ಬಾರಿ ಮಳೆಯಾಗುವ ಸಾಧ್ಯತೆ ಸದ್ಯಕ್ಕಂತೂ ಕಾಣುತ್ತಿಲ್ಲ. ಆದ್ದರಿಂದ ಜಿಲ್ಲಾಡಳಿತ ಪೇಚಿಗೆ ಸಿಲುಕಿಕೊಂಡಿದೆ. ಮಳೆಯಾಗದಿದ್ದರೆ ಪರಿಸ್ಥಿತಿ ತೀರಾ ಕಷ್ಟ ಎಂಬುದು ಈಗ ಜನರಿಗೂ ಅರಿವಾಗಿದೆ. ಆದರೆ ಪರ್ಯಾಯ ಏನು ಎಂಬುದೇ ಮುಂದಿನ ಪ್ರಶ್ನೆಯಾಗಿದೆ. ನೀರಿನ ಸಮಸ್ಯೆ ಪರಿಹಾರಕ್ಕೆ ಈಗಾಗಲೇ ಜಿಲ್ಲಾಡಳಿತ ರು. 2.50 ಕೋಟಿಗಳನ್ನು ಬಿಡುಗಡೆ ಮಾಡಿದೆ. ಆದರೂ ಸಹ ಕೆಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡುಬರುತ್ತಿದೆ.
- ಸುಭಾಶ್ಚಂದ್ರ ವಾಗ್ಳೆ
ಚಿತ್ರದುರ್ಗ
ಇದು ನಿಲ್ಲದ 'ನೀರಂತರ' ಕ್ರಿಯೆ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಹೊಳಲ್ಕೆರೆ, ಚಳ್ಳಕೆರೆ, ಹೊಸದುರ್ಗ, ಮೊಳಕಾಲ್ಮೂರು, ಚಿತ್ರದುರ್ಗ ತಾಲೂಕಿನಲ್ಲಿ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ.
ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 1633 ಊರುಗಳಿವೆ. ಇವುಗಳಲ್ಲಿ 317 ಗ್ರಾಮಗಳನ್ನು ಸಮಸ್ಯಾತ್ಮಕ ಎಂದು ಗುರುತಿಸಲಾಗಿದೆ. ಇಲ್ಲಿ ಕುಡಿಯುವ ನೀರಿನ ಗುಣಮಟ್ಟದಿಂದ ಹಿಡಿದು ಪೂರೈಕೆಯಲ್ಲೂ ಸಹ ಸಾಕಷ್ಟು ವ್ಯತ್ಯಯವಾಗಿದೆ. ಇದು ಈ ಭಾಗದ ಗ್ರಾಮಸ್ಥರನ್ನು ಹೈರಾಣಾಗಿಸಿದೆ. ಈ ಬಗ್ಗೆ ಕೆಲವೆಡೆ ಪ್ರತಿಭಟನೆಗಳೂ ನಡೆದಿವೆ. ಆದರೆ ಸಮಸ್ಯೆ ಸರಿಪಡಿಸುತ್ತೇವೆಂಬ ಉತ್ತರ ಮಾತ್ರ ಲಭ್ಯವಾಗುತ್ತಿದೆ. ಈ ಗ್ರಾಮಗಳಿಗೆ ಕೊಳವೆ ಬಾವಿ ಕೊರೆಯಿಸಲು 14.75 ಕೋಟಿ ವೆಚ್ಚ ಮಾಡಲಾಗುತ್ತಿದೆ. ಯಾವುದೇ ಗ್ರಾಮಗಳಿಗೂ ನಿರಂತರವಾಗಿ ಟ್ಯಾಂಕರ್ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿಲ್ಲ. ತೀವ್ರ ಸಮಸ್ಯೆ ಕಂಡು ಬಂದಾಗ ಮಾತ್ರ ಟ್ಯಾಂಕರ್ಗಳನ್ನು ಬಳಸಲಾಗುತ್ತಿದೆ.
ತಾಲೂಕುವಾರು ಸಮಸ್ಯೆಗಳು: ಚಳ್ಳಕೆರೆ 18, ಚಿತ್ರದುರ್ಗ 5, ಹಿರಿಯೂರು 19, ಹೊಳಲ್ಕೆರೆ 7, ಹೊಸದುರ್ಗ 4, ಮೊಳಕಾಲ್ಮೂರು 6 ಸೇರಿ ಒಟ್ಟು 59 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ.
ತೀರಾ ಕಳಪೆ ಗುಣಮಟ್ಟ ಇರುವ ಗ್ರಾಮ 59
ಈ ನೀರೇ ಜನರಿಂದ ಸೇವನೆ
ಇದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಜನ