ಶಿಲ್ಪಾ ಕೊಲೆಗೆ ಗಂಡನೇ ಪ್ರೇರಣೆ?
ಮಂಡ್ಯ: ಪ್ರೀತಿಸಿ, ವಿರೋಧದ ನಡುವೆಯು ಮದುವೆಯಾದ ಶಿಲ್ಪಾಳ ಗಂಡ ಅಭಿಜಿತ್ ಆಕೆಯ ಕೊಲೆಗೆ ಪ್ರೇರಣೆ ನೀಡಿದ್ದನೇ ಎಂಬ ಸಂಶಯ ಆಕೆಯ ತಾಯಿ ಮತ್ತು ಹಲವರನ್ನು ಕಾಡುತ್ತಿದೆ.
ಕಳೆದ ಗುರುವಾರ ಬೆಳ್ಳಂಬೆಳಗ್ಗೆ ಮಳವಳ್ಳಿ ತಾಲೂಕಿನ ಕನ್ನಹಳ್ಳಿ ಬಳಿ ಶಿಲ್ಪಾಳನ್ನು ಸಜೀವವಾಗಿ ದಹಿಸಿ ಕೊಲೆಗೈದ ಆರೋಪಿಗಳಲ್ಲಿ ಮೂವರನ್ನು ಬಂಧಿಸಿರುವ ಪೊಲೀಸರು ವಿಚಾರಣೆಯಿಂದ ಕೆಲವು ಅಂಶಗಳು ಬಯಲಾಗುತ್ತಿವೆ. ಪ್ರಕರಣದಲ್ಲಿ ಅಭಿಜಿತ್ನ ಚಿಕ್ಕಮ್ಮ ಪ್ರಮೀಳಾ ಮತ್ತು ತಂದೆ ಬಾಲಯ್ಯ, ತಾಯಿ ನಾಗಮ್ಮರನ್ನು ಪೊಲೀಸರು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಚಿಕ್ಕಪ್ಪ ಪುಟ್ಟಸ್ವಾಮಿ ಇನ್ನು ಪತ್ತೆಯಾಗಿಲ್ಲ. ಅಭಿಜಿತ್ನನ್ನು ವಶಕ್ಕೆ ಪಡೆದಿರುವ ಪೊಲೀಸರು, ಈ ಪ್ರಕರಣದಲ್ಲಿ ಆತನ ಪಾತ್ರನ ಬಗ್ಗೆ ವಿಚಾರಣೆ ಪೂರ್ಣಗೊಂಡ ನಂತರವಷ್ಟೇ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೊಬೈಲ್ ತಂದಿರಲಿಲ್ಲ: ಅಭಿಜಿತ್ ಆಕೆಯನ್ನು ಏಕಾಂಗಿಯಾಗಿ ಮತ್ತು ಮೊಬೈಲ್ ರಹಿತವಾಗಿ ದೇವಸ್ಥಾನಕ್ಕೆ ಕಳುಹಿಸಿಕೊಟ್ಟ. ಮದುವೆಯಾದ ದಿನದಿಂದಲೂ ಶಿಲ್ಪ, ಅಭಿಜಿತ್ ಬೇರೆ ಬೇರೆಯಾಗಿ ತಿರುಗಾಡಿದ ಉದಾಹರಣೆ ಇಲ್ಲವೆಂದು ವಿಚಾರಣೆ ವೇಳೆ ಗೊತ್ತಾಗಿದೆ. ಆದರೂ ದೇವಸ್ಥಾನಕ್ಕೆ ಪೋಷಕರೊಂದಿಗೆ ಕಳುಸಿಕೊಟ್ಟಿದ್ದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಚಿಕ್ಕಪ್ಪನ ಪ್ರೇರಣೆ: ಸುಮಾರು 10 -15 ವರ್ಷದ ಕಳಗೆ ಪುಟ್ಟಸ್ವಾಮಿಯವರ ಹತ್ತಿರದ ಸಂಬಂಧಿಯೊಬ್ಬ ತನ್ನ ಹೆಂಡತಿಯನ್ನು ದೂರದ ಊರಿಗೆ ಕರೆದೋಯ್ದು ಕೊಲೆ ಮಾಡಿ ನಂತರ ಪೆಟ್ರೋಲ್ನಿಂದ ಸುಟ್ಟು ಹಾಕಿ ಪ್ರಕರಣವನ್ನೇ ಮುಚ್ಚಿ ಹಾಕಿದ ಘಟನೆಯನ್ನು ಪೊಲೀಸರ ಮುಂದೆ ಈಗ ಬಂಧಿತರು ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.
ಈ ನಡುವೆ ಹೆಂಡತಿ ಕೊಲೆಯಾಗಿರುವ ಸಂಗತಿ ತಿಳಿದರೂ ಆಸ್ಪತ್ರೆಗಾಗಲಿ, ಅಂತ್ಯಸಂಸ್ಕಾರದ ವೇಳೆಯೂ ಆತ ಆಗಮಿಸದೇ ಇರುವುದನ್ನು ನೋಡಿದರೆ ಶಿಲ್ಪಾಳ ತಾಯಿ ಹೇಳುವಂತೆ ತನ್ನ ಮಗಳ ಕೊಲೆಯ ಹಿಂದೆ ಗಂಡನ ಕೈವಾಡ ಇದೆ ಎಂಬ ಆರೋಪಗಳಿಗೆಲ್ಲ ಪೊಲೀಸರ ನಿಷ್ಪಕ್ಷಪಾತ ತನಿಖೆಯಿಂದಷ್ಟೇ ತೆರೆ ಬೀಳಲಿದೆ.
ತಾಲೂಕು ಆಡಳಿತದಿಂದ ಅಂತ್ಯ ಸಂಸ್ಕಾರ
ಶಿಲ್ಪಾಳ ಅಂತ್ಯಕ್ರಿಯೆ ಶುಕ್ರವಾರ ತಾಲೂಕು ಆಡಳಿತದ ವತಿಯಿಂದಲೇ ಹಾಲಹಳ್ಳಿಯ ಹರಿಶ್ಚಂದ್ರ ಘಾಟ್ನಲ್ಲಿ ಜರುಗಿತು. ಆಕೆಯ ತಂದೆ ಮುರುಗೇಶ್ ಮಗಳ ಅಂತ್ಯ ಸಂಸ್ಕಾರ ನೆರವೇರಿಸಿದರು. ತಹಸೀಲ್ದಾರ್ ಡಾ.ಮಮತಾ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಆಕೆಗಿದು ಎರಡನೇ ಮದುವೆ
ಶಿಲ್ಪಾಳಿಗೆ ಈ ಮೊದಲು 7ನೇ ವರ್ಷದಲ್ಲಿ ಬಾಲ್ಯವಿವಾಹ ವಾಗಿತ್ತು ಎಂದು ಗೊತ್ತಾಗಿದೆ. ನಂಜನಗೂಡು ತಾಲೂಕು ಹುರ ಗ್ರಾಮದ ಯುವಕನೊಬ್ಬ ಕಳೆದ 10-15 ವರ್ಷಗಳ ಹಿಂದೆ ವಿವಾಹವಾಗಿದ್ದನು. ಈ ವಿವಾಹ ತನಗೆ ಇಷ್ಟವಿಲ್ಲದ್ದರಿಂದ ಆಕೆ ಗಂಡನ ಮನೆಗೆ ಹೋಗಿರಲಿಲ್ಲ. ಅಭಿಜಿತ್ ಕೂಡ ಈಕೆಗಿಂತ 2 ವರ್ಷ ಕಿರಿಯವನು ಎನ್ನಲಾಗಿದೆ.