ರೈತರಿಗೆ ನೆರವಿನ 'ಹಸ್ತ' ಯಾವಾಗ?
ಗುಲ್ಬರ್ಗ: ಲೋಕ ಸಮರ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿಂದ ಅನುಷ್ಠಾನದಲ್ಲಿದ್ದ ನೀತಿ ಸಂಹಿತೆ ಸಡಿಲಾಗಿದೆ. ಆದರೂ ಸಂಕಷ್ಟದಲ್ಲಿರುವ ರೈತರತ್ತ ನೆರವಿನ ಹಸ್ತ ಚಾಚುವ ದಿಶೆಯಲ್ಲಿ ಸರ್ಕಾರ ಹೆಜ್ಜೆ ಹಾಕದ ಸಂಗತಿ ಇದೀಗ ಆತಂಕಕ್ಕೆ ಕಾರಣವಾಗಿದೆ.
ಸಂಹಿತೆ ಸಡಿಲಾದ ಮಾರನೇ ದಿನ ಸರ್ಕಾರದ ಸಚಿವರನೇಕರು ಯೋಜನೆಗಳ ಪ್ಯಾಕೇಜ್ ಘೋಷಣೆ ಮಾಡಿದ್ದರೂ ಸಹ ತೊಗರಿ, ಕಡಲೆ, ಶೇಂಗಾ ರೈತರತ್ತ ಯಾರೊಬ್ಬರೂ ಮಾತನಾಡಿಲ್ಲ. ಮೊದಲೇ ಖರೀದಿ ಸಂಕಷ್ಟ, ಬೆಲೆ ಕುಸಿತ, ಬಾರದ ಅನುದಾನ, ಕೈ ಸೇರುತ್ತಿಲ್ಲ ಹಣ... ಎಂದು ಕಂಗಾಲಾಗಿರುವ ತೊಗರಿ, ಶೇಂಗಾ ಹಾಗೂ ಕಡಲೆ ರೈತರು ಇದೀಗ ನೀತಿ ಸಂಹಿತೆ ಸಡಿಲಾದರೂ ಸರ್ಕಾರ ತಮ್ಮತ್ತ ನೋಡಲೂ ನಿಧಾನ ಮಾಡುತ್ತಿದೆ ಎಂದು ಕಂಗಾಲಾಗುವಂತಾಗಿದೆ.
ಸಂಹಿತೆ ಬಿಸಿಯಿಂದಾಗಿ ತೊಗರಿ ಕಣಜದಲ್ಲಿ ಖರೀದಿ ಕೇಂದ್ರಗಳು ಬಾಗಿಲು ಮುಚ್ಚಿಕೊಂಡಿವೆ, ಖರೀದಿಗೆ ಹೆಸರು ನೋಂದಣಿ ಮಾಡಿದ ರೈತರ ತೊಗರಿಯೂ ಮನೆಯಲ್ಲೇ ಉಳಿದಿದೆ. ಈಗಾಗಲೇ ಸರ್ಕಾರ ತೊಗರಿ ಖರೀದಿಸಿದ ರೈತರಿಗೂ ಹಣ ನೀಡಿಲ್ಲ. ಇಷ್ಟೇ ಅಲ್ಲ, ಶೇಂಗಾ, ಕಡಲೆ ಬಂಪರ್ ಬೆಳೆ ಬಂದರೂ ಬೆಲೆ ಪಾತಾಳ ಸೇರಿದೆ. ಉತ್ತಮ ಬೆಲೆ ಸಿಗದೆ ರೈತರು ಫಜೀತಿಗೊಳಗಾಗಿದ್ದಾರೆ.
ತೊಗರಿ ಕಣಜದಲ್ಲಿ ಹಾಹಾಕಾರ: 3.50 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ತೊಗರಿ ಈ ಬಾರಿ ಬಂಪರ್ ಬೆಳೆದಿದೆ. ಸರ್ಕಾರ 5 ಸಾವಿರ ಬೆಂಬಲ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿತ್ತು. 23 ಖರೀದಿ ಕೇಂದ್ರಗಳಲ್ಲಿ ರೈತರು ತೊಗರಿ ಮಾರುವಲ್ಲಿ ನಿರತರಾಗಿದ್ದರು. ಮಧ್ಯದಲ್ಲೇ ಚುನಾವಣೆ ಘೋಷಣೆಯಾಯ್ತು. ತೊಗರಿ ಬೆಳೆದ 3 ಲಕ್ಷ ರೈತರ ಪೈಕಿ 15 ಸಾವಿರ ರೈತರಿಂದ ಮಾತ್ರ ತೊಗರಿ ಖರೀದಿಸಲಾಯ್ತು. ನಂತರ ನೀತಿ ಸಂಹಿತೆ ನೆಪದಲ್ಲಿ ಖರೀದಿ ಕೇಂದ್ರಗಳೇ ಬಂದ್ ಆದವು.
ತೊಗರಿ ಮಾರುತ್ತೇವೆ ಎಂದು ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಕೊಂಡ 20 ಸಾವಿರ ರೈತರು, ಕೇಂದ್ರಗಳು ಬಂದ್ ಆಗಿದ್ದರಿಂದ ಮುಂದೇನು ಎಂದು ಕಂಗಾಲು. ಇದಲ್ಲದೆ ತೊಗರಿ ಈಗಾಗಲೇ ಸರ್ಕಾರಕ್ಕೆ ನೀಡಿದರೂ ಅದಕ್ಕೆ ಪ್ರತಿಯಾಗಿ ಹಣ ಪಡೆಯದೆ ರೈತರು ಕಂಗಾಲಾಗಿದ್ದಾರೆ. ಸರ್ಕಾರದಿಂದ ಹಣ ಬಿಡುಗಡೆಯಾಗಲಿಲ್ಲ. ಇತ್ತ ತೊಗರಿ ಮಂಡಳಿ ತಾನು ಖರೀದಿಸಿದ ತೊಗರಿಯನ್ನೇ ಬ್ಯಾಂಕಿನಲ್ಲಿ ಅಡಮಾನ ಇಟ್ಟು ಹಣ ಪಡೆಯಲೂ ಸಾಧ್ಯವಾಗಿಲ್ಲ. ಹೀಗಾಗಿ ತೊಗರಿ ಮಾರಿದ ರೈತರಿಗೆ ಸರ್ಕಾರದಿಂದ ಹಣ ಪಾವತಿಯಾಗಿಲ್ಲ. ಮೂಲಗಳ ಪ್ರಕಾರ, 15 ಕೋಟಿ ಪಾವತಿಯಾಗಬೇಕು. ಸರ್ಕಾರ ನೀಡಬೇಕೆಂದುಕೊಂಡಿದ್ದ ಹೆಚ್ಚುವರಿ ಅನುದಾನಕ್ಕೆ ನೀತಿ ಸಂಹಿತೆ ಅಡ್ಡಿಯಾಗಿದೆ. ಹೀಗಾಗಿ ಅತ್ತ ಅನುದಾನವೂ ಇಲ್ಲ, ಇತ್ತ ಖರೀದಿಯು ಬಂದ್. ತೊಗರಿ ಕೊಟ್ಟವರು ಕೋಡಂಗಿ, ಮಾರದೆ ಮನೆಯಲ್ಲಿಟ್ಟುಕೊಂಡವರು ಪರೇಶಾನ್.
ಶೇಂಗಾ- ಕಡಲೆ ಬೆಲೆ ಪಾತಾಳಕ್ಕೆ
ಶೇಂಗಾ ಬೆಳೆಯೂ ಬಂಪರ್ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಪಾಥಾಳಕ್ಕಿಳಿದಿದೆ. ಕ್ವಿಂಟಾಲ್ ಶೇಂಗಾಕ್ಕೆ 2,500 ಮಾರಾಟವಾಗುತ್ತಿದೆ. ಕಳೆದ ವರ್ಷ ಕ್ವಿಂಟಾಲ್ ಶೇಂಗಾ 5,500- 6 ಸಾವಿರಕ್ಕೆ ಮಾರಾಟವಾಗಿತ್ತು. ಈ ಬಾರಿ ಅರ್ಧಕ್ಕರ್ಧ ಬೆಲೆ ಕಡಿತಗೊಂಡಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಗುಲ್ಬರ್ಗ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬೆಲೆ ಚೆನ್ನಾಗಿ ಬರಬಹುದು ಎಂಬ ನಿರೀಕ್ಷೆಯೊಂದಿಗೆ ರೈತರು ಭಾರಿ ಪ್ರಮಾಣದಲ್ಲಿ ಬೇಸಾಯ ಮಾಡಿದ್ದರು. ಆದರೆ ಮಾರುಕಟ್ಟೆಯಲ್ಲಿ ಕಡಲೆ ಬೆಲೆ ಬಿದ್ದುಹೋಗಿದೆ.
ಸರ್ಕಾರ ರೈತರತ್ತ ನೋಡುವುದೇ?
ಲೋಕ ಸಮರದ ಹಿನ್ನೆಲೆ ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿತ್ತು. ತೊಗರಿ ರೈತರ ಬಾಕಿ ಹಣ ಪಾವತಿಗೆ ಸರ್ಕಾರ 100 ಕೋಟಿ ಬಿಡುಗಡೆಗೆ ಮುಂದಾಗಿದ್ದರೂ ಆಯೋಗ ಸಂಹಿತೆ ಹಿನ್ನೆಲೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅನುದಾನ ರಾಜಧಾನಿಯಿಂದ ತೊಗರಿ ಕಣಜಕ್ಕೆ ಬಂದಿಲ್ಲ ಎಂಬ ಹೇಳಿಕೆ ಹೊರಬಿದ್ದಿತ್ತು. ಇದೀಗ ಈ ಹಣ ಬೇಗ ತೊಗರಿ ಕಣಜ ತಲುಪಬೇಕಾಗಿದೆ. ಖರೀದಿ ಕೇಂದ್ರ ತೆರೆದು ಶೇಂಗಾ, ತೊಗರಿ ಖರೀದಿಗೆ ಸರ್ಕಾರ ಮುಂದಾಗಬೇಕಿದೆ. ರೈತರ ನೆರವಿಗೆ ಸರ್ಕಾರ ಅದಷ್ಟು ಬೇಗ ಧಾವಿಸುವುದೋ ಅಷ್ಟು ಬೇಗ ರೈತ ಕುಟುಂಬಗಳು ನೆಮ್ಮದಿಯಿಂದ ಬದುಕಲು ಸಾಧ್ಯ. ಕಾಲಹರಣವಾದಲ್ಲಿ ಕಷ್ಟ ಹೆಚ್ಚಲಿದೆ.
ರೈತರ ವಿಷಯದಲ್ಲಿ ಸರ್ಕಾರ ಈಗ ಕ್ರಿಯಾಶೀಲಗೊಳ್ಳಬೇಕು. ನೀತಿ ಸಂಹಿತೆಯಿಂದಾಗಿ ರೈತರ ಬವಣೆ ಬೆಟ್ಟವಾಗಿದೆ. ಮೇ 3ರಂದು ಹೈ-ಕ ಪಂಚ ಜಿಲ್ಲೆಗಳು, ಪಕ್ಕದ ಬಿಜಾಪುರಗಳಲ್ಲಿ ಹೋರಾಟ ಮಾಡುತ್ತೇವೆ. ರೈತರತ್ತ ಧಾವಿಸಿ ಎಂದು ಸರ್ಕಾರವನ್ನು ಆಗ್ರಹಿಸುತ್ತೇವೆ. ಸರ್ಕಾರಿ ನೌಕರರಿಗೆ ಶೇ.6ರಷ್ಟು ಡಿಎ ಹೆಚ್ಚಳ ಮಾಡಲಾಯ್ತು. ಅದು ಸಂಹಿತೆ ಇರುವಾಗಲೇ ಪ್ರಕಟವಾಯ್ತು. ಆದರೆ ರೈತರ ವಿಚಾರದಲ್ಲಿ ಯಾಕೆ ಈ ರೀತಿ ಬಿಗಿ ನಿಲುವು. ರೈತರ ಬಗ್ಗೆಯೇ ನಾವೆಲ್ಲರೂ ಹೆಚ್ಚು ಕಳಕಳಿ ಹೊಂದಿರಬೇಕು, ಆದರೆ ಇಲ್ಲಿ ಉಲ್ಟಾ ಆಗುತ್ತಿದೆ. ಇದು ಆತಂಕದ ವಿಚಾರ. ತೊಗರಿ, ಶೆಂಗಾ, ಕಡಲೆ ರೈತರ ಕಷ್ಟ-ನಷ್ಟಕ್ಕೆ ಸರ್ಕಾರ ನೆರವಿನ ಹಸ್ತ ಚಾಚಲೇಬೇಕು.
* ಮಾರುತಿ ಮಾನ್ಪಡೆ, ಪ್ರಾಂತ ರೈತ ಸಂಘ, ಅಧ್ಯಕ್ಷ
* ಬಸವರಾಜ ಇಂಗಿನ್, ತೊಗರಿ ಬೆಳೆಗಾರರ ಸಂಘ, ಅಧ್ಯಕ್ಷ
-ಶೇಷಮೂರ್ತಿ ಅವಧಾನಿ