ಹೈಟೆನ್ಶನ್ ಮಾರ್ಗದಿಂದ ರಾಜ್ಯಕ್ಕೆ 500 ಮೆ.ವ್ಯಾ ವಿದ್ಯುತ್: ಡಿಕೆಶಿ
ಮಡಿಕೇರಿ: ಹೈಟೆನ್ಶನ್ ವಿದ್ಯುತ್ ಮಾರ್ಗದಿಂದಾಗಿ 2 ಸಾವಿರ ಮೆ.ವ್ಯಾ. ವಿದ್ಯುತ್ ಪೂರೈಕೆಯಾಗಲಿದ್ದು, ಇದರಿಂದ ರಾಜ್ಯಕ್ಕೆ 500 ಮೆ.ವ್ಯಾ. ವಿದ್ಯುತ್ ಲಭಿಸಲಿದೆ. ಹಾಗಾಗಿ ಹೈಟೆನ್ಶನ್ ವಿದ್ಯುತ್ ಮಾರ್ಗ ಪೂರ್ಣಕ್ಕೆ ಸ್ಥಳೀಯರು ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಟೆನ್ಶನ್ ವಿದ್ಯುತ್ ಮಾರ್ಗ ಕೇರಳದಲ್ಲಿ 90 ಕಿ.ಮೀ. ಹಾದುಹೋಗಲಿದೆ. ಕೊಡಗು ಜಿಲ್ಲೆಯಲ್ಲಿ 44 ಕಿ.ಮೀ. ಅರಣ್ಯ ಪ್ರದೇಶ, 12 ಕಿ.ಮೀ. ಕಾಫಿ ತೋಟದಲ್ಲಿ, 38 ಕಿ.ಮೀ. ಬತ್ತದ ಗದ್ದೆ ಪ್ರದೇಶದಲ್ಲಿ ಹಾದು ಹೋಗಲಿದೆ. ಕಾಫಿ ತೋಟಕ್ಕೆ 15 ರಿಂದ 18 ಲಕ್ಷ ಪರಿಹಾರ ಮತ್ತು ಬತ್ತದ ಗದ್ದೆಗೆ 1.6 ಲಕ್ಷ ಪರಿಹಾರ ನೀಡಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೊಡಗಿನ ಅರಣ್ಯ ಪ್ರದೇಶದಲ್ಲಿ ಹೈಟೆನ್ಶನ್ ವಿದ್ಯುತ್ ಮಾರ್ಗ ಅಳವಡಿಸುವ ಕಾಮಗಾರಿಗೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ಹಸಿರು ನ್ಯಾಯಾಧೀಕರಣ ಪೀಠ ತಡೆ ನೀಡಿರುವ ಬಗ್ಗೆ ಸಚಿವರ ಗಮನ ಸೆಳೆದಾಗ, ಕಾನೂನಿಗೆ ಎಲ್ಲರೂ ತಲೆಬಾಗಬೇಕಿದೆ ಎಂದು ಅವರು ಪ್ರತಿಕ್ರಿಯಿಸಿದರು. ವಿಧಾನ ಪರಿಷತ್ ಸದಸ್ಯ ಟಿ. ಜಾನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಅನುಚೇತ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಪವರ್ ಗ್ರಿಡ್ ಕಾರ್ಪೋರೇಶನ್‌ನ ಹೆಚ್ಚುವರಿ ಜನರಲ್ ಮ್ಯಾನೇಜರ್ ರವೀಂದ್ರ ಕುಮಾರ್ ಇದ್ದರು.