ಗುಂಡೂರಾವ್ ಕುಟುಂಬದಿಂದ 720 ಕೋಟಿ ಭೂ ಅಕ್ರಮ
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ದಿನೇಶ ಗುಂಡೂರಾವ್ ಹಾಗೂ ಅವರ...
ಧಾರವಾಡ: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ದಿನೇಶ ಗುಂಡೂರಾವ್ ಹಾಗೂ ಅವರ ಕುಟುಂಬ 720 ಕೋಟಿ ಮೌಲ್ಯದ ಭೂ ಕಬಳಿಕೆಯಲ್ಲಿ ಮಾಡಿದೆ ಎಂದು ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ ಆರೋಪಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ದಿನೇಶ ಗುಂಡೂರಾವ್ ಅವರ ಕುಟುಂಬ ಬೆಂಗಳೂರು ಉತ್ತರ ತಾಲೂಕಿನ ಜಾಲಹಳ್ಳಿಯ ನವರತ್ನ ಅಗ್ರಹಾರ ಬಳಿ 720 ಕೋಟಿ ಮೊತ್ತದ 64 ಎಕರೆ ಗೋಮಾಳ ಜಮೀನು ಕಬಳಿಕೆ ಮಾಡಿದೆ. ಸಚಿವ ದಿನೇಶ್, ಸಹೋದರರಾದ ರಾಜೇಶ್, ಮಹೇಶ ಹಾಗೂ ತಾಯಿ ವರಲಕ್ಷ್ಮಿ ಹೆಸರಿನಲ್ಲಿ 47.16 ಎಕರೆ ಜಮೀನು ಹಾಗೂ ದಿನೇಶ್ ಅವರ ಚಿಕ್ಕಮ್ಮ ಜಮುನಾ ಹೆಸರಿನಲ್ಲಿ 17.13 ಎಕರೆ ಗೋಮಾಳ ಜಮೀನು ಕಬಳಿಕೆ ಮಾಡಲಾಗಿದೆ ಎಂಬುದು ದಾಖಲೆಗಳಿಂದ ಸ್ಪಷ್ಟವಾಗುತ್ತಿದೆ ಎಂದರು.
ಶ್ರೀನಿವಾಸ್ರಿಂದಲೂ ಅಕ್ರಮ: ಇದೇ ಪ್ರಕಾರ, ಬೆಂಗಳೂರು ಉತ್ತರ ಶಾಸಕ ಎಂ. ಶ್ರೀನಿವಾಸ್ ಕೆಂಗೇರಿ ಬಳಿ ಬಿ.ಎಂ. ಕಾವಲಹಳ್ಳಿಯಲ್ಲಿ ಈ ಮುಂಚೆ ಅಕ್ರಮವಾಗಿ 18 ಎಕರೆ ಗೋಮಾಳ ಜಮೀನು ನುಂಗಿದ್ದಾರೆ. 2012ರ ನವೆಂಬರ್ ತಿಂಗಳಲ್ಲಿ ನ್ಯಾಯಮೂರ್ತಿ ಶೈಲೇಂದ್ರಕುಮಾರ್ ಆದೇಶಿಸಿದ್ದು, ನಿರ್ದಿಷ್ಟ ಉದ್ದೇಶಕ್ಕೆ ಇಟ್ಟ ಗೋಮಾಳ ಭೂಮಿ ಹಾಗೂ ಸಾಮೂಹಿಕ ಭೂಮಿಗಳನ್ನು ಸಕ್ರಮಗೊಳಿಸಿ ಕಾಣಿಕೆ ರೂಪದಲ್ಲಿ ಅರ್ಜಿದಾರರಿಗೆ ಕೊಟ್ಟು ಅಕ್ರಮ ಸಾಗುವಳಿಯನ್ನು ಸಕ್ರಮಗೊಳಿಸುವುದು ಕಾನೂನು ಬಾಹಿರ. ಇದರಲ್ಲಿ ಅಧಿಕಾರಿಗಳು ಶಾಮೀಲಿದ್ದು, ಅವರ ಮೇಲೆಯೂ ನ್ಯಾಯಮೂರ್ತಿಗಳು ಕಿಡಿಕಾರಿದ್ದರು ಎಂದು ಆದೇಶ ಪ್ರತಿ ಸಮೇತ ಸ್ಪಷ್ಟಪಡಿಸಿದರು.