ಬೀದಿನಾಯಿ ಹಾವಳಿಯಿಂದ ಕುರಿ,ಮೇಕೆ ಸತ್ತರೂ ಸಿಗುತ್ತೆ ಪರಿಹಾರ
ಮೈಸೂರು: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕುರಿ, ಮೇಕೆಗಳು ಸತ್ತರೆ ತಲಾ ಮೂರು ಸಾವಿರ ರು. ಪರಿಹಾರ ಘೋಷಿಸಲಾಗಿತ್ತು. ಆದರೆ ಈ ಪರಿಹಾರ ನೀಡುವುದರ ಸಂಬಂಧ ಕೆಲವೊಂದು ತಾಂತ್ರಿಕ ತೊಡಕುಗಳಿದ್ದವು. ಈಗ ಅವುಗಳನ್ನು ನಿವಾರಿಸಿರುವ ರಾಜ್ಯ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಸುಮಾರು 95.65 ಲಕ್ಷ ಕುರಿಗಳು, 61.57 ಲಕ್ಷ ಮೇಕೆಗಳು ಇವೆ. ರಾಜ್ಯದಲ್ಲಿ ಕುರಿ ಸಾಕಾಣಿಕೆಯನ್ನು ಪರಂಪರಾನುಗತವಾಗಿ ಕೈಗೊಳ್ಳಲಾಗುತ್ತಿದೆ. ವಲಸೆ, ಅರೆವಲಸೆ ಪದ್ಧತಿ ಹಾಗೂ ಸ್ಥಳೀಯವಾಗಿ ಮೇಯಿಸುವ ಪದ್ಧತಿ ಕೂಡ ಇದೆ. ಕುರಿಗಾಹಿಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಮೇವನ್ನು ಅರಸಿ ವಲಸೆ ಹೋಗುವಾಗ ವನ್ಯಜೀವಿಗಳ ಹಾವಳಿಗೆ ತುತ್ತಾಗುವುದು, ಅತಿವೃಷ್ಟಿ ಸಂದರ್ಭಗಳಲ್ಲಿ ಪ್ರವಾಹದಲ್ಲಿ ಕೊಚ್ಚಿ ಹೋಗುವುದು, ಸಿಡಿಲಿಗೆ ಬಲಿಯಾಗುವುದು, ವಾಹನಗಳಡಿ ಸಿಲುಕಿ ಸಾವಿಗೀಡಾಗುವ ಸಂಭವ ಇರುತ್ತದೆ. ಅಲ್ಲದೆ ಸಾಂಕ್ರಾಮಿಕ ರೋಗಗಳಿಂದಲೂ ಸಾವಿಗೀಡಾಗುತ್ತವೆ. ಇದರಿಂದ ಕುರಿಗಾಹಿಗಳು ಹೆಚ್ಚಿನ ಆರ್ಥಿಕ ನಷ್ಟಕ್ಕೆ ಗುರಿಯಾಗುತ್ತಾರೆ. ಕುರಿ ಮತ್ತು ಕುರಿಗಾಹಿಗಳಿಗೆ ವಿಮಾ ಯೋಜನೆ ಜಾರಿಯಲ್ಲಿದ್ದರೂ ವಿಮೆ ಮಾಡಿಸಿದ ಕುರಿ, ಮೇಕೆಗಳು ಮೃತಪಟ್ಟಲ್ಲಿ ಮಾತ್ರ ಪರಿಹಾರ ನೀಡಲಾಗುತ್ತದೆ. ಆದ್ದರಿಂದ ಪ್ರಕೃತಿ ವಿಕೋಪ ಪರಿಹಾರ ವ್ಯಾಪ್ತಿಯಲ್ಲಿ ಬರುವ ಹಾಗೂ ವಿಮೆ ಮಾಡಿಸಿದ ಪ್ರಕರಣಗಳನ್ನು ಹೊರತುಪಡಿಸಿ, ಇತರೆ ಸಂದರ್ಭಗಳಲ್ಲಿ ಕುರಿ, ಮೇಕೆಗಳು ಆಕಸ್ಮಿಕ ಮರಣ ಹೊಂದಿದದಲ್ಲಿ ಹಾಗೂ ದೃಢೀಕೃತ ಸಾಂಕ್ರಾಮಿಕ ರೋಗಗಳಿಂದ ಮರಣ ಹೊಂದಿದಲ್ಲಿ ಪ್ರತಿ ಕುರಿ, ಮೇಕೆಗೆ 3000 ಪರಿಹಾರ ನೀಡುವ ಆದೇಶವನ್ನು 2013ರ ಸೆ.18 ರಂದು ಹೊರಡಿಸಿತ್ತು.
ಆದರೆ ಇದರಿಂದ ಹೆಚ್ಚಿನ ಕುರಿಗಾಹಿಗಳಿಗೆ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಇತ್ತೀಚೆಗೆ ತಿದ್ದುಪಡಿ ಆದೇಶ ಹೊರಡಿಸಿದೆ.
ಯಾವಾಗ ಪರಿಹಾರ?
- ಪ್ರವಾಹ, ಭೂಕಂಪ, ಸಿಡಿಲು ಬಡಿದಾಗ, ಭೂಕುಸಿತ, ಆಲಿಕಲ್ಲು ಮಳೆ
- ವಿದ್ಯುತ್ ಪ್ರವಾಹ, ಬೆಂಕಿ ಅನಾಹುತ, ರೈಲು, ರಸ್ತೆ ಅಪಘಾತ
- ಮೇಯುವ ಸಮಯದಲ್ಲಿ ಅಥವಾ ದ್ಘೊಜ್ಘಜಿಗಳಲ್ಲಿ ಇದ್ದಾಗ ಕಾಡು ಪ್ರಾಣಿಗಳ ದಾಳಿಯಿಂದ ಸಾವಿಗೀಡಾದಾಗ, ಬೀದಿನಾಯಿಗಳ ಹಾವಳಿಯಿಂದ ಮೃತಪಟ್ಟಲ್ಲಿ
- ಕರಳುಬೇನೆ, ಗಳಲೆಬೇನೆ, ಧನುರ್ವಾಯು, ಮೈಕೋ ಪ್ಲಾಸ್ಮಾಸಿಸ್, ನರಡಿ ರೋಗ, ಕಂದು ರೋಗ, ಸಿಡುಬು, ನೀಲಿ ನಾಲಿಗೆ, ಪಿಪಿಆರ್, ಕಾಲುಬಾಯಿ ಜ್ವರ, ಓಆರ್ಎಫ್, ಸಿಸಿಪಿಪಿ, ಫುಟ್ರಾಟ್
- ವಿಷಪೂರಿತ ಆಹಾರ ಸೇವನೆ, ವಿಷಪೂರಿತ ಗಿಡಮರಗಳ ಸೊಪ್ಪು ಸೇವನೆ
ಷರತ್ತುಗಳು ಅನ್ವಯ
- ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಪರಿಹಾರ ಪಡೆಯುವಾಗ ಕುರಿ, ಮೇಕೆ ಶವದ ಫೋಟೋ, ಸರ್ಕಾರಿ ಪಶುವೈದ್ಯರಿಂದ ಮರಣೋತ್ತರ ವರದಿ ಸಲ್ಲಿಸಬೇಕು. ಇವೆರಡೂ ಇಲ್ಲದಿದ್ದಲ್ಲಿ ಗ್ರಾಮ ಲೆಕ್ಕಿಗರು ಅಥವಾ ಪಿಡಿಒ ಮಹಜರ್ ಪಡೆಯುವುದು ಅಗತ್ಯ
-ಅಪಘಾತ ಸಂದರ್ಭದಲ್ಲಿ ಪರಿಹಾರ ಪಡೆಯುವಾಗ ಕುರಿ, ಮೇಕೆ ಫೋಟೋ, ಎಫ್ಐಆರ್, ಸರ್ಕಾರಿ ಪಶುವೈದ್ಯರಿಂದ ಮರಣೋತ್ತರ ವರದಿ ಸಲ್ಲಿಸಬೇಕು
- ಕಾಡು ಪ್ರಾಣಿ, ಬೀದಿ ನಾಯಿಗಳ ಹಾವಳಿಯಿಂದ ಸತ್ತಲ್ಲಿ ಪರಿಹಾರ ಪಡೆಯುವಾಗ ಕುರಿ, ಮೇಕೆ ಶವಗಳ ಫೋಟೋ, ಸರ್ಕಾರಿ ಪಶುವೈದ್ಯರು ನೀಡಿರುವ ಮರಣೋತ್ತರ ವರದಿ ಸಲ್ಲಿಸಬೇಕು
- ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಪರಿಹಾರ ಪಡೆಯಲು ಕುರಿ, ಮೇಕೆ ಶವಗಳ ಫೋಟೋ, ಸರ್ಕಾರಿ ಪಶುವೈದ್ಯರಿಂದ ಮರಣೋತ್ತರ ವರದಿ, ಪ್ರಯೋಗಾಲಯದ ದೃಢೀಕೃತ ಪ್ರಮಾಣಪತ್ರ ಸಲ್ಲಿಸಬೇಕು
-ವಿಷ ಆಹಾರ, ಸೊಪ್ಪು ಸೇವನೆಯಿಂದ ಮೃತಪಟ್ಟ ಕುರಿ, ಮೇಕೆಗಳ ಸಂಖ್ಯೆ 10ಕ್ಕಿಂತ ಕಡಿಮೆ ಇದ್ದರೂ ಪ್ರಯೋಗಾಲಯ ದೃಢೀಕೃತ ಪ್ರಮಾಣಪತ್ರ ಇಲ್ಲದಿದ್ದರೂ ಸರ್ಕಾರಿ ಪಶುವೈದ್ಯರು ನೀಡುವ ಮರಣೋತ್ತರ ವರದಿಯ ಆಧಾರದ ಮೇಲೆ ಪರಿಹಾರ ಧನ ನೀಡಲು ಪರಿಗಣಿಸುವಂತೆ ಪಶುಸಂಗೋಪನಾ ಮತ್ತು ಮೀನುಗಾರಿಕೆ ಇಲಾಖೆಯ ಅಧೀನ ಕಾರ್ಯದರ್ಶಿ ಸೂಚಿಸಿದ್ದಾರೆ.
ಅಂಶಿ ಪ್ರಸನ್ನಕುಮಾರ್