ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಭೂಮಾಪಕರಿಗೆ 'ಭಾರ'ವಾದ ಸಾಫ್ಟ್‌ವೇರ್

Mainashree
Updated On : 27 Apr 2014, 11:03 am

ಬೆಂಗಳೂರು: ರಾಜ್ಯದಲ್ಲಿರುವ ಸರ್ಕಾರಿ ಪರವಾನಗಿ ಭೂಮಾಪಕರ ಸಮಸ್ಯೆ ಮುಗಿಯದ ಕತೆಯಾಗಿದೆ. ಒಂದು ಸಮಸ್ಯೆ ಮುಗಿದರೆ ಮತ್ತೊಂದು ಕಾದು ಕುಳಿತಿರುತ್ತದೆ. ಇದರಿಂದ ಭೂಮಾಲೀಕರು ತೊಂದರೆಗೆ ಸಿಲುಕಿದ್ದಾರೆ. ಸುಮಾರು ಆರು ತಿಂಗಳಿಂದ ಭೂಮಿ ಸರ್ವೇ ಕಾರ್ಯ ಸ್ಥಗಿತಗೊಂಡಿದೆ.
ಇದಕ್ಕೆ ಕಾರಣ ಪರವಾನಗಿ ಭೂಮಾಪಕರ ಸಮಸ್ಯೆಯನ್ನು ಕಂದಾಯ ಇಲಾಖೆಗೆ ಸಂಪೂರ್ಣವಾಗಿ ನಿವಾರಿಸುವ ಆಸಕ್ತಿ ತೋರದಿರುವುದು. ಅಲ್ಲದೆ, ಮೋಜಿಣಿ ಆವೃತ್ತಿ-2ರ ಸಾಫ್ಟ್‌ವೇರ್ ಭೂಮಾಪಕರಿಗೆ ದುಬಾರಿಯಾಗಿದೆ. ಭೂಮಾಲೀಕರಿಗೆ ದುಸ್ಥಿತಿ ತಂದಿದೆ.
ಪರವಾನಗಿ ಭೂಮಾಪಕರು ಸರ್ವೇಗೆ ನೀಡುತ್ತಿರುವ ಶುಲ್ಕ ಕಡಿಮೆ ಎಂದು ಹೋರಾಟ, ಧರಣಿ, ಮುಷ್ಕರ ಎಲ್ಲವನ್ನೂ ಮಾಡಿ ಕೊನೆಗೆ ಅದರಲ್ಲಿ ಯಶ ಸಾಧಿಸಿದ್ದರು. ಆದರೆ, ಹೆಚ್ಚಿಸಿರುವ ಶುಲ್ಕ ಇರಲಿ, ಒಂದು ಪೈಸೆಯೂ ಕಳೆದ ಆರು ತಿಂಗಳಲ್ಲಿ ಅವರಿಗೆ ಲಭ್ಯವಾಗುತ್ತಿಲ್ಲ.
ಮೋಜಿಣಿ ಆವೃತ್ತಿ-2 ಎಂಬ ಸಾಫ್ಟ್‌ವೇರ್ ಅನುಷ್ಠಾನಕ್ಕೆ ತಂದು ಸರ್ವೇ ಪ್ರಕ್ರಿಯೆಯನ್ನು ಸಂಪೂರ್ಣ ಆನ್‌ಲೈನ್‌ನಲ್ಲಿ ಅಳವಡಿಸಲಾಯಿತು. ಇದು ನಿಜಕ್ಕೂ ಶ್ಲಾಘನೀಯ ಕಾರ್ಯ. ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಆಯುಕ್ತ ಪೊನ್ನುರಾಜು ನೇತೃತ್ವದಲ್ಲಿ ತಯಾರಾದ ಈ ಸಾಫ್ಟ್‌ವೇರ್, ಭೂಮಾಪಕರು ಸೇರಿದಂತೆ ಭೂಮಾಲೀಕರಿಗೆ ಅತ್ಯುತ್ತಮ ವ್ಯವಸ್ಥೆ ಆಗಿದೆ.


ಲಾಗಿನ್‌ಗೆ ಧಕ್ಕೆ
ಆದರೆ, ಕೆಲವೊಂದು ತಾಂತ್ರಿಕ ನ್ಯೂನತೆಗಳು ಪ್ರಕ್ರಿಯೆಯನ್ನು ಸಾಕಷ್ಟು ವಿಳಂಬ ಮಾಡುತ್ತಿರುವುದಲ್ಲದೆ, ಕೆಲವೇ ಕೆಲವು ಅಧಿಕಾರಿಗಳು ಲಾಗಿನ್ ವ್ಯವಸ್ಥೆಗೆ ಧಕ್ಕೆ ತಂದು ಪರವಾನಗಿ ಭೂಮಾಪಕರಿಗೆ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಭೂಮಾಲೀಕರು ತಮ್ಮ ಸರ್ವೇ ಕಾರ್ಯ ಮುಗಿಯದೆ ಪರಿತಪಿಸುತ್ತಿದ್ದಾರೆ. ಭೂಮಾಪಕರು ಅಳತೆ ನಿರ್ವಹಿಸಿದ್ದರೂ ಅವರಿಗೆ ಶುಲ್ಕ ನೀಡಿಲ್ಲ. ಆದರೆ, ಭೂಮಾಲೀಕರಿಗೆ ದುಪ್ಪಟ್ಟು ಹಣ ಅರ್ಜಿಯೊಂದಿಗೇ ವಸೂಲಿ ಮಾಡಿಕೊಳ್ಳಲಾಗಿದೆ. ಪರವಾನಗಿ ಭೂಮಾಪಕರು ಮಾತ್ರ ಮೋಜಿಣಿ ಆವೃತ್ತಿ-2 ಬಳಸಬೇಕು ಎಂದು ಇಲಾಖೆಯ ಕೆಳಮಟ್ಟದ ಅಧಿಕಾರಿಗಳು ಫರ್ಮಾನು ಹೊರಡಿಸಿಬಿಟ್ಟಿದ್ದಾರೆ. ಸರ್ಕಾರಿ ಭೂಮಾಪಕರು ಇದನ್ನು ಬಳಸುತ್ತಿಲ್ಲ. ಅವರಿಗೆ 'ಅನುಕೂಲ'ವಾಗುವ ವ್ಯವಸ್ಥೆಯನ್ನೇ ಮುಂದುವರಿಸಿದ್ದಾರೆ. ಇದರಲ್ಲಿ ಕಂದಾಯ ಇಲಾಖೆಯ ಸಾಕಷ್ಟು ಅಧಿಕಾರಿಗಳೂ ಸೇರಿಕೊಂಡಿದ್ದಾರೆ. ಖಾತೆ ಬದಲಾವಣೆಯ ಪ್ರಕ್ರಿಯೆಯಲ್ಲಂತೂ ಗ್ರಾಮ ಲೆಕ್ಕಾಧಿಕಾರಿಗಳು ಅವರದ್ದೇ 'ದಾಖಲೆ'ಗಳನ್ನು ಸೃಷ್ಟಿಸಿಕೊಂಡು ಭೂಮಾಲೀಕರಿಂದ ಸಾಕಷ್ಟು ಹಣ ವಸೂಲಿ ಮಾಡುತ್ತಿದ್ದಾರೆ.

ಪ್ರಕ್ರಿಯೆ ವಿಳಂಬ
ಆದರೆ, ಪರವಾನಗಿ ಭೂಮಾಪಕರಿಗೆ ಸರ್ಕಾರದಿಂದ ಲಭ್ಯವಾಗಬೇಕಾಗಿರುವ ಶುಲ್ಕ ಮಾತ್ರ ಪಾವತಿಯಾಗುತ್ತಿಲ್ಲ. ಕಳೆದ ನವೆಂಬರ್‌ನಿಂದ ಅಳತೆ ಶುಲ್ಕ ನೀಡಲಾಗಿಲ್ಲ. ಜತೆಗೆ ಮೋಜಿಣಿ ಆವೃತ್ತಿ-2ರ ಲಾಗಿನ್ ಕೋಡ್‌ಗಳನ್ನೂ ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ 11ಇ ಅರ್ಜಿ ವಿತರಣೆ, ನಕ್ಷೆ ನೀಡುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ. ಇದಕ್ಕೆಲ್ಲ ಪರವಾನಗಿ ಭೂಮಾಪಕರೇ ಕಾರಣ ಎಂದು ಬಿಂಬಿಸಲಾಗುತ್ತಿದ್ದು, ಭೂಮಾಲೀಕರು ಇವರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಾಸ್ತವದಲ್ಲಿ ಪರವಾನಗಿ ಭೂಮಾಪಕರ ಲಾಗಿನ್ ಅನ್ನು ಕಾರಣ ನೀಡದೆ ಕ್ಲೋಸ್ ಮಾಡಲಾಗುತ್ತಿದೆ. ಒಂದೊಂದು ಬಾರಿ ತಿಂಗಳಿಗೆ 43 ಅರ್ಜಿ ನೀಡಿ ಅವರು ಕಾರ್ಯನಿರ್ವಹಿಸಲೂ ಸಾಧ್ಯವಾಗದಂತೆ ಮಾಡಲಾಗುತ್ತದೆ. ಕೆಲವು ಬಾರಿ ಕೆಲವೇ ಕೆಲವು ಅರ್ಜಿಗಳನ್ನು ನೀಡಲಾಗುತ್ತದೆ. ಹೆಚ್ಚು ನೀಡಿ ಕಾರ್ಯ ಸಾಧ್ಯವಾಗದಿದ್ದಾಗ ಲಾಗಿನ್ ಕ್ಲೋಸ್ ಮಾಡಿ ಹಿಂಸಿಸಲಾಗುತ್ತಿದೆ. ಇ- ನಕ್ಷೆ ಹಾಗೂ ದಾಖಲೆಗಳನ್ನು ಅಪ್‌ಲೋಡ್, ಡೌನ್‌ಲೋಡ್ ಮಾಡಿಕೊಳ್ಳುವ ವ್ಯವಸ್ಥೆಯನ್ನೂ ಕಲ್ಪಿಸುತ್ತಿಲ್ಲ.  ಸಾಕಷ್ಟು ಬೇಸತ್ತ ಪರವಾನಗಿ ಭೂಮಾಪಕರು ಇದೀಗ ಈ ವಿಷಯವನ್ನು ಆಯುಕ್ತರ ಗಮನಕ್ಕೆ ತಂದು ಸಮಸ್ಯೆ ಇತ್ಯರ್ಥಪಡಿಸುವಂತೆ ಮನವಿ ಮಾಡಿದ್ದಾರೆ.

ಮೋಜಿಣಿ- 2ರಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲ. ಎಲ್ಲವೂ ಸರಿಯಾಗಿದೆ. ಪರವಾನಗಿ ಭೂಮಾಪಕರು ಮಾರ್ಚ್ ಅಂತ್ಯದವರೆಗೆ ಮಾಡಿರುವ ಅಳತೆಗೂ ಶುಲ್ಕ ವಿತರಿಸಲಾಗಿದೆ. ಅಲ್ಲದೆ, ಎಲ್ಲ ತಾಲೂಕು ಕೇಂದ್ರಗಳಲ್ಲಿ 'ಬ್ಯುಸಿನೆಸ್ ಸೆಂಟರ್‌' ತೆರೆಯಲಾಗಿದ್ದು, ಅಲ್ಲೇ ಹೋಗಿ ಇಂಟರ್‌ನೆಟ್, ಸ್ಕ್ಯಾನ್, ಡೌನ್‌ಲೋಡ್, ಅಪ್‌ಲೋಡ್ ಮಾಡುವ ವ್ಯವಸ್ಥೆ ಉಚಿತವಾಗಿ ನೀಡಲಾಗುತ್ತಿದೆ. ಇದನ್ನು ಅವರು ಬಳಸಿಕೊಳ್ಳಬಹುದಾಗಿದೆ. ಕೆಲವರು ಬೇಕೆಂದಲೇ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಇದು ಸರಿಯಲ್ಲ.
- ಪೊನ್ನುರಾಜು, ಆಯುಕ್ತ, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳು

ಪರವಾನಗಿ ಭೂಮಾಪಕರಿಗೆ ಉದ್ದೇಶಪೂರ್ವಕವಾಗಿ ತೊಂದರೆ ನೀಡಲಾಗುತ್ತಿದೆ. ಲಾಗಿನ್ ಕ್ಲೋಸ್ ಎಂಬ ಭೂತವು ಮಾನಸಿಕ ಕಿರುಕುಳ, ಮಾನಸಿಕ ಒತ್ತಡ ಹಾಗೂ ಹಿಂಸೆ ನೀಡುತ್ತಿದೆ. ಸ್ಕ್ಯಾನ್, ಅಪ್‌ಲೋಡ್, ಡೌನ್‌ಲೋಡ್ ಸೇರಿದಂತೆ ಪರವಾನಗಿ ಭೂಮಾಪಕರೇ ಸುಮಾರು 500 ವೆಚ್ಚ ಮಾಡಬೇಕಾಗಿದೆ.
- ಕೆ.ಬಿ. ಲೋಕೇಶ, ರಾಜ್ಯ ಸರ್ಕಾರಿ ಪರವಾನಗಿ ಭೂಮಾಪಕರ ಸಂಘ


ಕೆರೆ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement