ವಾರಾಂತ್ಯ ಪ್ರಯಾಣಿಕರ ಕಿಸೆಗೆ ಕೆಎಸ್ಆರ್ಟಿಸಿ ಕನ್ನ!
ಮಂಗಳೂರು: ವಾರಾಂತ್ಯಕ್ಕೆ ಬೆಂಗಳೂರಿನಿಂದ ಊರಿಗೆ ತೆರಳುವ ಹಾಗೂ ವಾರಾರಂಭ ಭಾನುವಾರ ರಾತ್ರಿ ಬೆಂಗಳೂರಿಗೆ ಮರಳುವ ಪ್ರಯಾಣಿಕರ ಜೇಬಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಭರ್ಜರಿ ಕತ್ತರಿ ಪ್ರಯೋಗ ಮಾಡುತ್ತಿದೆ.
ಎರಡು ಟ್ರಿಪ್ಗೆ ದರ ಹೆಚ್ಚಳವನ್ನು ಬಹಿರಂಗವಾಗಿ ಎಲ್ಲಿಯೂ ಪ್ರಕಟಿಸಿಲ್ಲ. ಅದೂ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಮಾ.28ರಿಂದ ಜಾರಿಗೆ ತಂದಿದೆ. ಕೇವಲ ವಿಭಾಗೀಯ ಕಚೇರಿಗಳಿಗೆ ಆದೇಶ ಪ್ರತಿ ಕಳುಹಿಸಿ ದುಬಾರಿ ದರ ವಸೂಲಿ ಮಾಡುತ್ತಿದೆ.
ಮುಖ್ಯವಾಗಿ ಐಟಿ, ಬಿಟಿ ನೌಕರರು ಸೇರಿದಂತೆ ಹೆಚ್ಚಿನ ಪ್ರಯಾಣಿಕರು ಎರಡು ದಿನ ರಜೆ ಹಿನ್ನೆಲೆಯಲ್ಲಿ ಶುಕ್ರವಾರವೇ ಊರಿಗೆ ತೆರಳುತ್ತಾರೆ. ಇದೇ ಸಮಯವನ್ನು ಸದುಪಯೋಗಪಡಿಸಿಕೊಂಡ ಕೆಎಸ್ಆರ್ಟಿಸಿ ಪ್ರತಿ ಶುಕ್ರವಾರ ಹಾಲಿ ಟಿಕೆಟ್ ದರಕ್ಕಿಂತ ಶೇ.10ರಷ್ಟು ಹೆಚ್ಚಳ ಮಾಡಿದೆ. ಈ ನೌಕರರು ಮತ್ತೆ ಬೆಂಗಳೂರಿಗೆ ಮರಳುವುದು ಭಾನುವಾರ ರಾತ್ರಿ.
ಪ್ರತಿ ಭಾನುವಾರ ರಾತ್ರಿ ಬೆಂಗಳೂರಿಗೆ ತೆರಳಬೇಕಾದರೆ ಟಿಕೆಟ್ ದರ ಶೇ.10ರಷ್ಟು ಜಾಸ್ತಿ ತೆರಬೇಕು. ಒಂದು ವೇಳೆ ಸೋಮವಾರವೂ ರಜೆ ಇದ್ದರೆ ಭಾನುವಾರ ಬದಲು ಸೋಮವಾರಕ್ಕೆ ಈ ಅಧಿಕ ದರ ಅನ್ವಯ. ವಾರಾಂತ್ಯ ಮತ್ತು ವಾರಾರಂಭಕ್ಕೆ ಸೀಸನ್ ಕಂಡುಬಂದರೆ ದಿಢೀರ್ ದರ ಹೆಚ್ಚಳ. ಹೀಗೆ ದರ ಹೆಚ್ಚಳ ಮಾಡುವ ದುರಾಲೋಚನೆ ಬಂದದ್ದೇ ತಡ ಮಾ.28ರಿಂದ ಸದ್ದಿಲ್ಲದೆ ಜಾರಿಗೆ ಬಂದಿದೆ.
ಎಲ್ಲರೂ ಗಮನಿಸೋದಿಲ್ಲ: ಐಟಿ, ಬಿ.ಟಿ ಮಂದಿ ಇತರೆ ಪ್ರಯಾಣಿಕರಂತೆ ಸರತಿ ಸಾಲಲ್ಲಿ ನಿಂತು ಮುಂಗಡ ಬುಕ್ಕಿಂಗ್ ಮಾಡುವುದಿಲ್ಲ. ಏನಿದ್ದರೂ ಆನ್ಲೈನ್ ಬುಕ್ಕಿಂಗ್. ಟಿಕೆಟ್ ಕಾಯ್ದಿರಿಸುವ ಗೋಜಿನಲ್ಲಿ ವಿಪರೀತ ದರ ಹೆಚ್ಚಳವನ್ನು ಇವರು ಅಷ್ಟಾಗಿ ಗಮನಿಸುವುದಿಲ್ಲ. ಊರಿಗೆ ತ್ವರಿತವಾಗಿ ಹೋಗಲೇಬೇಕಾದವರು ದರ ಹೆಚ್ಚಳವಾದರೂ ಅನಿವಾರ್ಯತೆಗೆ ಸಿಲುಕಿ ಸುಮ್ಮನಾಗುತ್ತಾರೆ. ಇದನ್ನೇ ಕೆಎಸ್ಆರ್ಟಿಸಿ ಬಂಡವಾಳ ಮಾಡಿಕೊಂಡಿದೆ.
ನಷ್ಠ ಸರಿದೂಗಿಸಲು 'ದುಬಾರಿ ದರ'!
ಕೆಎಸ್ಆರ್ಟಿಸಿಯಲ್ಲಿ ಸೀಸನ್ ಸಮಯದಲ್ಲಿ ದರ ಏರಿಕೆ ಬಿಟ್ಟರೆ ನಂತರ ಸಾಮಾನ್ಯ ಅವಧಿಯಲ್ಲಿ ಮಿತ ದರ ಇರುತ್ತದೆ. ವಾರಾಂತ್ಯದಲ್ಲಿ ಎರಡು ಟ್ರಿಪ್ಗೆ ಯಾಕೆ ದುಬಾರಿ ದರ ಎಂದು ಸಂಸ್ಥೆಯ ನೌಕರರ ಸಂಘಟನೆಗಳು ಪ್ರಶ್ನಿಸಿದರೆ ಅಧಿಕಾರಿಗಳು ನೀಡುವ ಸಮಜಾಯಿಷಿ-'ವಾರದ ಎಲ್ಲ ದಿನ ಬಸ್ ಭರ್ತಿಯಾಗುತ್ತದೆ ಎನ್ನುವಂತಿಲ್ಲ. ಹಾಗಾಗಿ ಪ್ರಯಾಣಿಕರು ಇಲ್ಲದಿದ್ದರೂ ಸಂಚರಿಸಬೇಕು. ಇಲ್ಲವೇ ಟ್ರಿಪ್ ಕಡಿತ ಮಾಡಬೇಕು. ಈ ನಷ್ಟ ಸರಿದೂಗಿಸಲು ವಾರಾಂತ್ಯದ ಎರಡು ಟ್ರಿಪ್ಗಳಲ್ಲಿ ದುಬಾರಿ ದರ ವಸೂಲು ಮಾಡುತ್ತೇವೆ. ಇದರಿಂದ ತಪ್ಪೇನಿಲ್ಲ' ಎನ್ನುತ್ತಾರೆ.
ವಾರದ ಬೇರೆ ದಿನಗಳಲ್ಲಿ ಪ್ರಯಾಣಿಸಿದರೆ ಸೀಸನ್ ದರ ತೆಗೆದುಕೊಳ್ಳುವ ಕೆಎಸ್ಆರ್ಟಿಸಿ ವಾರಾಂತ್ಯಕ್ಕೆ ಖಾಸಗಿಯವರಂತೆ ದುಬಾರಿ ದರ ವಸೂಲಿ ಮಾಡಿ ಪ್ರಯಾಣಿಕರನ್ನು ದೋಚುತ್ತಿದೆ. ಬುಕ್ಕಿಂಗ್ ಕೌಂಟರ್ಲ್ಲಿ ಪ್ರಶ್ನಿಸಿದರೆ ಬೆಂಗಳೂರು ಕೇಂದ್ರ ಕಚೇರಿಯಿಂದಲೇ ಕಂಪ್ಯೂಟರ್ಗೆ ಅಳವಡಿಸಲಾಗಿದೆ. ನಾವು ಏನೂ ಮಾಡುವಂತಿಲ್ಲ ಎನ್ನುತ್ತಾರೆ. ಈ ರೀತಿ ಪ್ರಯಾಣಿಕರನ್ನು ದರೋಡೆ ಮಾಡುವುದು ಸರಿಯಲ್ಲ.
ಟಿ ಶಂಕರನಾರಾಯಣ, ವೋಲ್ವೋ ಪ್ರಯಾಣಿಕ, ಬಂಟ್ವಾಳ
ವಾರಾಂತ್ಯಕ್ಕೆ 2 ಟ್ರಿಪ್ಗೆ ವಸೂಲಿ ಮಾಡುವ ದರ, (ಮಂಗಳೂರು-ಬೆಂಗಳೂರು)
ಸಾರಿಗೆ ವಾಹನ ಸಾಮಾನ್ಯ ದರ ಸೀಸನ್ ಹೆಚ್ಚಳ ದುಬಾರಿ ದರ
ರಾಜಹಂಸ 433 540 590
ಐರಾವತ್, ವೋಲ್ವೋ 535 640 700
ಅಂಬಾರಿ, ಸ್ಲೀಪರ್ 611 765 839
ನಾನ್ ಎಸಿ ಸ್ಲೀಪರ್ 528 590 646
ಮಲ್ಟಿ ಎಕ್ಸೆಲ್ 670 740 811
ಆತ್ಮಭೂಷಣ್