ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಿಇಟಿ ಕೌನ್ಸೆಲಿಂಗ್: ಹೈ-ಕ ಸೌಲಭ್ಯಕ್ಕೆ ಕೊಕ್ಕೆ?

Mainashree
Updated On : 27 Apr 2014, 9:43 am

ಬಳ್ಳಾರಿ: ಹಿಂದುಳಿದಿರುವ ಹೈದರಾಬಾದ್-ಕರ್ನಾಟಕ ಅಭಿವೃದ್ಧಿಗೆ ಪೂರಕವಾಗಿ ಸಂವಿಧಾನದ ಕಲಂ 371ಜೆ ತಿದ್ದುಪಡಿ ಮಾಡಿದರೂ, ಈ ವರ್ಷದ ಎಂಜಿನಿಯರಿಂಗ್, ಮೆಡಿಕಲ್ ಕೋರ್ಸ್‌ನ ಸಿಇಟಿ ಕೌನ್ಸೆಲಿಂಗ್ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಸೌಲಭ್ಯ ತಪ್ಪಿ ಹೋಗುವ ಆತಂಕ ಎದುರಾಗಿದೆ.
ಮೇ 8ರಿಂದ 12ರ ವರೆಗೆ ಹೈ-ಕ ಅರ್ಹತಾ ಪತ್ರದ ದಾಖಲೆಗಳ ಕೌನ್ಸೆಲಿಂಗ್ ನಡೆಯುತ್ತಿದೆ. ಆದರೆ, ಈ ವ್ಯಾಪ್ತಿಯ ಜಿಲ್ಲೆಗಳಲ್ಲಿ ತಹಸೀಲ್ದಾರ್ ಕಚೇರಿಯಲ್ಲೇ ವಾಸಸ್ಥಳ ಪ್ರಮಾಣಪತ್ರ ಪಡೆಯಲು ತಿಂಗಳುಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ. ಅರ್ಹತಾ ಪತ್ರ ಸಿಗುವುದೇ ಅನುಮಾನ ಎಂಬಂತಾಗಿದೆ. ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕೋರ್ಸ್‌ಗೆ ಸೇರ ಬಯಸುವ ಹೈ-ಕ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಮೀಸಲು ಪಡೆಯಲು ಸಂವಿಧಾನದ 371 ಜೆ ತಿದ್ದುಪಡಿ ಅನುಕೂಲಕರ ಎಂದು ಹೈ-ಕ ಭಾಗದ ಬೀದರ್, ಗುಲ್ಬರ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ಜಿಲ್ಲೆಯ ವಿದ್ಯಾರ್ಥಿಗಳು ಸಂಭ್ರಮಿಸಿದ್ದರು. ಆದರೆ, ಹೈ-ಕ ಅರ್ಹತಾ ಪತ್ರ ಪಡೆಯಲು ವಾಸಸ್ಥಳ ಪ್ರಮಾಣ ಪತ್ರ ಅಗತ್ಯ. ಆದರೀಗ ಇದಕ್ಕಾಗಿ ತಿಂಗಳುಗಟ್ಟಲೆ ಅಲೆಯಬೇಕಾಗಿದೆ.
ಅರ್ಹತಾ ಪತ್ರಕ್ಕೆ ಅಲೆದಾಟ: ಹೈ-ಕ ಅರ್ಹತಾ ಪ್ರಮಾಣಪತ್ರ ತೋರಿಸಿದರೆ ಮಾತ್ರ ಈ ಭಾಗದ ವಿದ್ಯಾರ್ಥಿಗಳಿಗೆ 371 ಜೆ ಸೌಲಭ್ಯ ಪ್ರಾಪ್ತವಾಗುತ್ತದೆ. ಈ ಪ್ರಮಾಣಪತ್ರ ಪಡೆಯಲು ವಿದ್ಯಾರ್ಥಿಗಳು 1ರಿಂದ 10ನೇ ತರಗತಿವರೆಗೆ ಹೈ-ಕ ಪ್ರದೇಶದಲ್ಲಿ ವ್ಯಾಸಂಗ ಮಾಡಿರಬೇಕು. ತಹಸೀಲ್ದಾರ್ ಕಚೇರಿಯಿಂದ ವಾಸಸ್ಥಳ ಪ್ರಮಾಣಪತ್ರ ಪಡೆದ ಮೇಲೆ ಉಪ ವಿಭಾಗಾಧಿಕಾರಿಗಳು ಹೈ-ಕ ಅರ್ಹತಾ ಪ್ರಮಾಣಪತ್ರ ನೀಡುತ್ತಾರೆ. ಕೌನ್ಸೆಲಿಂಗ್ ದಿನಾಂಕ ಸಮೀಪಿಸುತ್ತಿದ್ದರೂ ವಾಸಸ್ಥಳ ಪ್ರಮಾಣಪತ್ರ ಸಿಗದಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.
ಕೌನ್ಸೆಲಿಂಗ್ ಮುಂದೂಡಿಕೆ ಅಗತ್ಯ: ಹೈ-ಕ ಅರ್ಹತಾ ಪ್ರಮಾಣ ಪತ್ರ ಪಡೆಯಲು ವಿಳಂಬವಾಗುತ್ತಿರುವುದರಿಂದ, ಸಿಇಟಿ ಹೈದರಾಬಾದ್ ಕರ್ನಾಟಕ ಅರ್ಹತಾ ಪತ್ರ ಕೌನ್ಸೆಲಿಂಗ್ ಮುಂದೂಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಪ್ರಮಾಣಪತ್ರ ನೀಡಲು ಅಗತ್ಯ ಕ್ರಮ
ಹೈ-ಕ ಅರ್ಹತಾ ಪತ್ರ ಪಡೆಯಲು ಎಲ್ಲರೂ ವಾಸಸ್ಥಳ ಪ್ರಮಾಣಪತ್ರಕ್ಕೆ ಅರ್ಜಿ ಹಾಕುತ್ತಿದ್ದಾರೆ.  ಪ್ರತಿದಿನ 100ರಿಂದ 150 ಅರ್ಜಿಗಳು ಬರುತ್ತಿವೆ. ಪರಿಶೀಲಿಸಿ, ಅರ್ಹರಿಗೆ ಮಾತ್ರ ಪ್ರಮಾಣಪತ್ರ ನೀಡಲಾಗುತ್ತಿದೆ. ಚುನಾವಣೆ ಕರ್ತವ್ಯ ಹಾಗೂ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ನಿತ್ಯ ಸಂಜೆ 6ರ ವರೆಗೆ ಹಾಗೂ ಭಾನುವಾರವೂ ಕೆಲಸ ಮಾಡುತ್ತಿದ್ದೇವೆ.
-ನಾಗರಾಜ್ ಪಾಟೀಲ್, ತಹಸೀಲ್ದಾರ್, ಬಳ್ಳಾರಿ
ವಿಳಂಬವಾಗುತ್ತಿದೆ
ಮೇ 8ರಿಂದ ಸಿಇಟಿ ಕೌನ್ಸೆಲಿಂಗ್ ಇದೆ. ಅಲ್ಲಿ ಹೈ-ಕ ಅರ್ಹತಾ ಪ್ರಮಾಣಪತ್ರ ತೋರಿಸಬೇಕು. ಇಲ್ಲದಿದ್ದರೆ, ನಮ್ಮನ್ನು ಮೀಸಲಿಗೆ ಪರಿಗಣಿಸುವುದಿಲ್ಲ. ಆದರೆ, ಪ್ರಮಾಣ ಪತ್ರ ನೀಡಿಕೆಯಲ್ಲಿ ವಿಳಂಬವಾಗುತ್ತಿದೆ.
- ಅಶ್ರತ್, ಸಿಇಟಿ ಕೌನ್ಸೆಲಿಂಗ್ ವಿದ್ಯಾರ್ಥಿ

 ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement