ಹೇಳುವುದು ಒಂದು... ಮಾಡುವುದು ಇನ್ನೊಂದು..!
ವೃತ್ತಿ ಶಿಕ್ಷಣ ಕೋರ್ಸ್ಗಳ ಶುಲ್ಕದಲ್ಲಿ ಬದಲಾವಣೆ ಇಲ್ಲ ಎಂದಿರುವ ರಾಜ್ಯ ಸರ್ಕಾರ, ಗುಟ್ಟಾಗಿ...
ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್ಗಳ ಶುಲ್ಕದಲ್ಲಿ ಬದಲಾವಣೆ ಇಲ್ಲ ಎಂದಿರುವ ರಾಜ್ಯ ಸರ್ಕಾರ, ಗುಟ್ಟಾಗಿ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡಿಕೊಳ್ಳಲು ತೆರೆಮರೆಯಲ್ಲಿ ಸಮ್ಮತಿಸಿದೆ.
ಇದೇ ಷರತ್ತಿನ ಮೇಲೆಯೇ ಶುಲ್ಕ ಹೆಚ್ಚಳ ಪ್ರಸ್ತಾವನೆಯಿಂದ ಖಾಸಗಿ ಕಾಲೇಜುಗಳು ಹಿಂದೆ ಸರಿದಿವೆ. ಉದ್ದೇಶಿತ ಶುಲ್ಕ ಏರಿಕೆಯನ್ನು ಹೆಚ್ಚುವರಿ ಶುಲ್ಕದ ರೂಪದಲ್ಲಿ ವಸೂಲಿ ಮಾಡಬಹುದೆಂಬ ಲೆಕ್ಕಾಚಾರದಲ್ಲಿ ಖಾಸಗಿ ಕಾಲೇಜುಗಳಿವೆ. ಹಿಂದಿನ ಪ್ರವೇಶ ಪರೀಕ್ಷೆ ಸಂದರ್ಭದಲ್ಲಿ ಎಂಜಿನಿಯರಿಂಗ್ ಹಾಗೂ ವೈದ್ಯ ಕಾಲೇಜುಗಳು ಪ್ರತಿ ವಿದ್ಯಾರ್ಥಿಯಿಂದ 5 ಸಾವಿರದಿಂದ 94 ಸಾವಿರದವರೆಗೂ ಹೆಚ್ಚುವರಿ ಶುಲ್ಕ ಪಡೆದಿದ್ದವು. ಯಥಾವತ್ ಪ್ರವೇಶ ನಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ದೂರು ಆಲಿಸಿ ಪ್ರಕರಣಗಳಿಗೆ ತೇಪೆ ಸಾರಿಸಲಾಗಿತ್ತು. ಈ ಬಾರಿಯೂ ಅದೇ ಮುಂದುವರಿಯಲಿದೆ.
ರಾಜಕೀಯ ಕಾರಣಗಳಿಗಾಗಿ ಶುಲ್ಕ ಏರಿಸದೆ ತೆರೆಯ ಹಿಂದೆ ನಾಟಕವಾಡುತ್ತಿರುವ ಸರ್ಕಾರ, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ. ಈ ಹೆಚ್ಚುವರಿ ಶುಲ್ಕ ವಿವಾದಕ್ಕೆ ಅಂತ್ಯ ಹಾಡುತ್ತೇವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳ ಸುಳ್ಳಿನ ಮಾತು ಮುಂದುವರಿಯುತ್ತಲೇ ಇದೆ. 4 ವರ್ಷದಿಂದ ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿಯಾಗಿ ಬಹುತೇಕ ಖಾಸಗಿ ಕಾಲೇಜುಗಳು ಶುಲ್ಕ ವಸೂಲಿ ಮಾಡುತ್ತಿವೆ.
ದೂರು ನೀಡಲಿ: ಕೌನ್ಸೆಲಿಂಗ್ ಸಂದರ್ಭದಲ್ಲಿ ವಿವಾದವಾದಾಗ, 'ವಿದ್ಯಾರ್ಥಿಗಳು ದೂರು ನೀಡಲಿ, ಕಾಲೇಜುಗಳ ವಿರುದ್ಧ ಕ್ರಮ ಜರುಗಿಸುತ್ತೇವೆ' ಎಂಬ ಸಬೂಬುಗಳನ್ನು ಉನ್ನತ ಹಾಗೂ ವೈದ್ಯ ಶಿಕ್ಷಣ ಸಚಿವರು ನೀಡುತ್ತಲೇ ಇದ್ದಾರೆ. ಯಾವ ಸರ್ಕಾರ ಕೂಡ ಖಾಸಗಿ ಕಾಲೇಜುಗಳ ಸದ್ದಡಗಿಸುವ ಪ್ರಯತ್ನಕ್ಕೆ ಕೈಹಾಕಲಿಲ್ಲ. ರಾಜ್ಯ ಸರ್ಕಾರ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಈ ನಡೆಗಳನ್ನು ನೋಡಿದರೆ ಮ್ಯಾಚ್ ಫಿಕ್ಸಿಂಗ್ ಆದಂತೆ ಕಾಣಿಸುತ್ತದೆ. ಶುಲ್ಕ ಹೆಚ್ಚಳ ಮಾಡಿಲ್ಲ ಎಂದು ನಾವು ಜನರಿಂದ ಶಹಬಾಸ್ಗಿರಿ ಪಡೆಯುತ್ತೇವೆ. ನೀವು ನಿಮ್ಮ ಪಾಡಿಗೆ ಹೆಚ್ಚುವರಿ ಶುಲ್ಕ ಪಡೆದು ಕಾಲೇಜು ನಡೆಸಿ ಎಂಬ ಸಂದೇಶವನ್ನು ಸರ್ಕಾರ ನೀಡಿದೆ.
ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದ ಕಾಲೇಜುಗಳು: ಹೆಚ್ಚುವರಿ ಶುಲ್ಕ ಪಡೆದ ಕಾಲೇಜುಗಳ ಬಗ್ಗೆ ದೂರು ಬಂದರೆ ಕ್ರಮ ಜರುಗಿಸುತ್ತೇವೆ ಎಂದು ವಿಧಾನಸಭೆಯಲ್ಲೂ ರಾಜ್ಯ ಸರ್ಕಾರ ಲಿಖಿತ ಹೇಳಿಕೆ ನೀಡಿತ್ತು. ಇದಾದ ಬಳಿಕ ಕಳೆದ ಅಕ್ಟೋಬರ್ನಲ್ಲಿ ರಾಜ್ಯದ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳು ತಾವು ಪಡೆದ ಹೆಚ್ಚುವರಿ ಶುಲ್ಕವನ್ನು ತಾಂತ್ರಿಕ ಶಿಕ್ಷಣ ಇಲಾಖೆಯ ವೆಬ್ಸೈಟ್ನಲ್ಲಿ ದಾಖಲಿಸಿದ್ದವು. ಕೆಲ ಕಾಲೇಜುಗಳು 60 ಸಾವಿರಕ್ಕೂ ಅಧಿಕ ಶುಲ್ಕ ಪಡೆದಿರುವುದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದವು. ವಿದ್ಯಾರ್ಥಿಗಳ ದೂರಿಗೆ ಕಾಯುತ್ತಿದ್ದ ಸರ್ಕಾರಕ್ಕೆ ಕಾಲೇಜುಗಳು ದಾಖಲೆ ನೀಡಿದರೂ ಕ್ರಮ ಜರುಗಿಸಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ವೈದ್ಯ ಕಾಲೇಜುಗಳಲ್ಲಿ 90 ಸಾವಿರದ ಆಸುಪಾಸಿನಲ್ಲಿ ಹೆಚ್ಚುವರಿ ಶುಲ್ಕ ಪಡೆದಿದ್ದರೂ ಯಾವುದೇ ತನಿಖೆಯಾಗಲಿಲ್ಲ. ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದು ಲ್ಯಾಪ್ಟಾಪ್ ಹೆಸರಲ್ಲಿ ಟಾಪ್-5 ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಂದಲೇ 94 ಸಾವಿರ ಅಧಿಕ ಶುಲ್ಕ ಪಡೆದಿತ್ತು.
ಒಪ್ಪಂದದಲ್ಲಿ ಅವಕಾಶ?
ಹೆಚ್ಚುವರಿ ಅಥವಾ ಅಧಿಕ ಶುಲ್ಕವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಏಕರೂಪ ಶುಲ್ಕ ವ್ಯವಸ್ಥೆ ತರಬಹುದು. ಆಯಾ ಕಾಲೇಜುಗಳ ಸವಲತ್ತುಗಳನ್ನು ಆಧರಿಸಿ ಅಧಿಕ ಶುಲ್ಕ ನಿಗದಿಮಾಡಬಹುದು ಎಂದು ಹಿಂದೆ ಪ್ರೊ.ವೆಂಕಟರಾಮಯ್ಯ ಸಮಿತಿ ಶಿಫಾರಸು ಮಾಡಿತ್ತು. ಈ ವರದಿಯನ್ನು ಕಸದ ಬುಟ್ಟಿಗೆ ಹಾಕಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು ಏಕರೂಪ ಶುಲ್ಕ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಿಲ್ಲ. ಅದಕ್ಕೆ ಅವಶ್ಯವಿದ್ದ ಸಮಿತಿ ಕೂಡ ರಚಿಸಲಿಲ್ಲ. ಈಗ ಯಾವುದೇ ಸ್ಪಷ್ಟ ಶುಲ್ಕವನ್ನು ದಾಖಲಿಸದೆ ಹೆಚ್ಚುವರಿ ಶುಲ್ಕ ಪಡೆಯಬಹುದು ಎಂದು ಒಪ್ಪಂದದಲ್ಲಿಯೇ ಸಹಿ ಹಾಕಲು ಸರ್ಕಾರ ಒಪ್ಪಿದೆ ಎಂದು ಮೂಲಗಳು ತಿಳಿಸಿವೆ.
ಹಿಂದಿನ ವರ್ಷದ ಶುಲ್ಕವನ್ನು ಮುಂದುವರಿಸಲು ಅನುಮತಿ ನೀಡುವಾಗ ಹೆಚ್ಚುವರಿ ಶುಲ್ಕವನ್ನು ಹಿಂದಿನಂತೆ ಪಡೆಯಬಹುದು ಎಂದು ಸರ್ಕಾರ ಹೇಳಿದೆ. ಇದಕ್ಕೆ ಯಾವುದೇ ಷರತ್ತು ಅಥವಾ ಲಗಾಮು ಹಾಕಲಾಗಿಲ್ಲ.
- ಪಾಂಡುರಂಗ ಶೆಟ್ಟಿ, ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಒಕ್ಕೂಟದ ಅಧ್ಯಕ್ಷ
ರಾಜೀವ ಹೆಗಡೆ