18004258666ಗೆ ಕರೆ ಉಚಿತ , 8 ಗಂಟೆ ಒಳಗೆ ನೀರು ಖಚಿತ
ನಿಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯೇ? ಹಾಗಾದರೆ, ಶುಲ್ಕರಹಿತ ಸಂಖ್ಯೆಗೆ ಕರೆ ಮಾಡಿ...
ಕನ್ನಡಪ್ರಭ ವಾರ್ತೆ ಬೆಂಗಳೂರು ಏ.28-
ನಿಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯೇ? ಹಾಗಾದರೆ, ಶುಲ್ಕರಹಿತ ಸಂಖ್ಯೆಗೆ ಕರೆ ಮಾಡಿ. 8 ಗಂಟೆಯೊಳಗೆ ನಿಮಗೆ ನೀರು ಲಭ್ಯ.
ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ರ ಆಶ್ವಾಸನೆ ಇದು. ನೀರಿಲ್ಲದ ಗ್ರಾಮಕ್ಕೆ, ದೂರು ಬಂದ 8 ಗಂಟೆ ಒಳಗೆ ಟ್ಯಾಂಕರ್ ಮೂಲಕವಾದರೂ ನೀರೊದಗಿಸಬೇಕು. ಇಲ್ಲದಿದ್ದರೆ ಅಧಿಕಾರಿ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ರವಾನಿಸಿದ್ದಾರೆ.
ರಾಜ್ಯದ 702 ಗ್ರಾಮಗಳಲ್ಲಿ ಸಮಸ್ಯೆ ಇದ್ದು, ಅಲ್ಲಿಗೆ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಇನ್ನಷ್ಟು ಗ್ರಾಮಗಳಲ್ಲಿಯೂ ಸಮಸ್ಯೆ ಇದೆ. ಹೀಗಾಗಿ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದರೆ ಶುಲ್ಕರಹಿತ1800-425-8666 ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಬಹುದು.
ನೀರು ಸಮಸ್ಯೆ ನಿವಾರಣೆಗೆ ಸಂಬಂಧಿಸಿದ ಯಾವುದೇ ಅಧಿಕಾರಿಗೆ ಜೂನ್ 15ರವರೆಗೆ ರಜೆ ನೀಡುವಂತಿಲ್ಲ. ರಜೆ ಹೋಗಿದ್ದರೂ ಅವರನ್ನು ವಾಪಸ್ ಕರೆಯಿಸಿಕೊಳ್ಳಲಾಗುತ್ತದೆ. ಗ್ರಾಮಗಳಲ್ಲಿ ಜನರಿಗಷ್ಟೇ ಅಲ್ಲ, ಜಾನುವಾರುಗಳಿಗೂ ನೀರು ಪೂರೈಸಲು ಸೂಚಿಸಲಾಗಿದೆ.
ತಾಲೂಕು ಮಟ್ಟದಲ್ಲಿಯೂ ನಿಯಂತ್ರಣ ಕೊಠಡಿಗಳಿದ್ದು ಅವುಗಳೂ ಚುರುಕುಗೊಳ್ಳಲಿವೆ. ತಾಲೂಕು ನಿಯಂತ್ರಣ ಕೊಠಡಿಗಳ ಮಾಹಿತಿ ಆಧರಿಸಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರತಿ ವಾರ ಸಮನ್ವಯ ಸಭೆ ನಡೆಸಲಾಗುತ್ತದೆ. ಪ್ರತಿ ಹತ್ತು ದಿನಕ್ಕೊಮ್ಮೆ ಬಂದಿರುವ ಎಲ್ಲ ದೂರುಗಳು, ಅದಕ್ಕೆ ಸ್ಪಂದನೆ ಕುರಿತಂತೆ ಒಂಬುಡ್ಸ್ಮನ್ಗಳು ಮಾಹಿತಿ ರವಾನೆ ಮಾಡಲಿದ್ದಾರೆ. ಶಾಸಕರು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಅಧ್ಯಕ್ಷರ ಕಾರ್ಯಪಡೆಯೂ ಸಲಹೆ ನೀಡಿ, ಕ್ರಮ ಕೈಗೊಳ್ಳಲಿದೆ ಎಂದು ವಿವರಿಸಿದರು.
3487 ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ
ರಾಜ್ಯದಲ್ಲಿ 3487 ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕವಿಲ್ಲದ ಕಾರಣ ಕಾರ್ಯನಿರ್ವವಹಿಸುತ್ತಿಲ್ಲ. ಈ ಬಗ್ಗೆ ಇಂಧನ ಇಲಾಖೆಗೆ ಪತ್ರಬರೆಯಲಾಗಿದೆ. ಸಚಿವರೊಂದಿಗೂ ಮಾತನಾಡಿದ್ದೇನೆ. ಹೀಗಾಗಿ, ಇನ್ನು 15 ದಿನದೊಳಗಾಗಿ ಈ ಎಲ್ಲ ಕೊಳವೆಬಾವಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಸಚಿವರು ಆಶ್ವಾಸನೆ ನೀಡಿದರು.
516 ಕೋಟಿ ಇಷ್ಟು ಹಣ ಕುಡಿಯುವ ನೀರು ಯೋಜನೆಗೆ ಮೀಸಲು
176.55 ಕೋಟಿ ಎಲ್ಲ 30 ಜಿ.ಪಂ.ಗಳಿಗೆ ಅನುಮೋದನೆಯಾದ ಅನುದಾನದಲ್ಲಿ ಪ್ರಥಮ ಕಂತಿನ ಹಣ
240 ಕೋಟಿಜಿಲ್ಲಾ ಪಂಚಾಯಿತಿಗಳಲ್ಲಿ ಒಟ್ಟಾರೆ ಲಭ್ಯ ಹಣ.
100 ಕೋಟಿ ವಿಶೇಷ ಅನುದಾನ ರೂಪದಲ್ಲಿ ಬಿಡುಗಡೆಯಾದ ಮೊತ್ತ