ಆಹಾರ ಪರೀಕ್ಷೆಗೆ ರಾಜ್ಯದಲ್ಲಿ ಪ್ರಯೋಗವೇ'ಲಯ'
ಬೆಂಗಳೂರು : ರಾಜ್ಯದಲ್ಲಿ ನಾವು ಸೇವಿಸುತ್ತಿರುವ ಹಣ್ಣು, ತರಕಾರಿ ಅಥವಾ ಆಹಾರದಲ್ಲಿ ಎಷ್ಟು ಸುರಕ್ಷಿತ?
ಇದನ್ನು ಪ್ರಮಾಣೀಕರಿಸಲು ರಾಜ್ಯದಲ್ಲಿ ಪ್ರಯೋಗಾಲಯವೇ ಇಲ್ಲ. ಅಷ್ಟೇ ಅಲ್ಲ, ಸುರಕ್ಷಿತ ಅಲ್ಲ ಎಂದು ಮೊಕದ್ದಮೆ ದಾಖಲಿಸಲು ಸಿಬ್ಬಂದಿಯೂ ಇಲ್ಲ.
ನಾಗರಿಕರಿಗೆ ಆಹಾರದ ಸುರಕ್ಷತೆ ನೀಡಲು ಆರೋಗ್ಯ ಇಲಾಖೆಗೆ 'ಅಸ್ತ್ರ'ವೇ ಇಲ್ಲ. ಅದರಲ್ಲೂ ಕ್ರಿಮಿನಾಶಕವನ್ನೇ ಅತಿಹೆಚ್ಚು ಬಳಸಿ ಬೆಳೆಯಲಾಗುವ ಹಣ್ಣುಗಳ ಸುರಕ್ಷಿತ ಮಟ್ಟ ಪ್ರಮಾಣೀಕರಿಸಲು ರಾಜ್ಯದಲ್ಲಿ ಪ್ರಯೋಗಾಲಯ ಇಲ್ಲ.
ದೇಶದಿಂದ ರಫ್ತಾಗುವ ಆಲ್ಫಾನ್ಸೋ ಮಾವಿನಹಣ್ಣಿನಲ್ಲಿ ಅತಿಹೆಚ್ಚಿನ ಕ್ರಿಮಿನಾಶಕವಿದೆ ಎಂದು ಇಂಗ್ಲಂಡ್ನಲ್ಲಿ ಅದನ್ನು ನಿಷೇಧಿಸಲಾಗಿದೆ. ವಿದೇಶಕ್ಕೆ ರಫ್ತಾಗುವ ಹಣ್ಣಿಗೆ ಹೆಚ್ಚಿನ ಜಾಗ್ರತೆ ವಹಿಸಲಾಗುತ್ತದೆ. ಅದರಲ್ಲೇ ಇಷ್ಟು ಕ್ರಿಮಿನಾಶಕ ಇದ್ದರೆ ಇನ್ನು ದೇಶೀಯವಾಗಿ ಪೂರೈಕೆಯಾಗಿರುವ ಹಣ್ಣಿನಲ್ಲಿ ಇನ್ನೆಷ್ಟು ಕ್ರಿಮಿನಾಶಕ ಪ್ರಮಾಣವಿರಬಹುದು?
ಇಂತಹದ್ದೇ ಆರೋಗ್ಯಕ್ಕೆ ಹಾನಿಕಾರಕವಾದ ಹಣ್ಣು ರಾಜ್ಯದ ಎಲ್ಲ ಭಾಗಗಳಲ್ಲೂ ಪೂರೈಕೆಯಾಗಿದೆ. ಆದರೆ, ಇದನ್ನು ಪರಿಶೀಲಿಸಲು, ತಪಾಸಣೆ ನಡೆಸಲು ರಾಜ್ಯದಲ್ಲಿ ಒಂದೇ ಒಂದು ಪ್ರಯೋಗಾಲಯ ಇಲ್ಲ!
ಹಣ್ಣು ಹಾಗೂ ತರಕಾರಿ ಬೆಳೆಯಲು ಬಳಸುವ ಕ್ರಿಮಿನಾಶಕ ಹಾಗೂ ಕಾಯಿ ಬೇಗ ಹಣ್ಣಾಗಲು ಬಳಸಲಾಗುವ ಕ್ಯಾಲ್ಸಿಯಂ ಕಾರ್ಬೊನೇಟ್ ಪ್ರಮಾಣವನ್ನು ಅರಿಯುವ, ತಪಾಸಣೆ ಮಾಡುವ ಪ್ರಯೋಗಾಲಯ ರಾಜ್ಯದಲ್ಲಿ ಇಲ್ಲ. ಅಷ್ಟೇ ಅಲ್ಲ, ದೇಶದಲ್ಲಿ ಇರುವುದು ಒಂದೇ. ಅದೂ ಪುಣೆಯಲ್ಲಿ.
ಇದನ್ನು ಹಣ್ಣುಗಳಲ್ಲಿ ಕ್ರಿಮಿನಾಶಕ ತಪಾಸಣೆ ಮಾಡಲೆಂದೇ ಸ್ಥಾಪಿಸಲಾಗಿದೆ. ರಾಜ್ಯದ ಬೆಂಗಳೂರು, ಮೈಸೂರು, ಗುಲ್ಬರ್ಗ, ಬೆಳಗಾವಿಯಲ್ಲಿ ಪ್ರಯೋಗಾಲಯವಿದ್ದು, ಅದರಲ್ಲಿ ಸಾಮಾನ್ಯ ಆಹಾರದಲ್ಲಿನ ಕಲಬೆರಕೆಯನ್ನು ಮಾತ್ರ ತಪಾಸಣೆ ಮಾಡಬಹುದು. ಉತ್ಕೃಷ್ಟ ರೀತಿಯ ಪ್ರಯೋಗವಾಗಬೇಕಾದರೆ ಖಾಸಗಿ ಪ್ರಯೋಗಾಲಯಗಳನ್ನೇ ನಂಬಿಕೊಳ್ಳಬೇಕಾಗಿದೆ.
ಕಲಬೆರಕೆ ತಪಾಸಣೆ: ದೇಶದಲ್ಲಿ ಆಹಾರ ಸುರಕ್ಷೆ ಕಾಯಿದೆ 2013ರಲ್ಲಿ ಜಾರಿಗೆ ಬಂದ ಮೇಲೆ ಬಿಬಿಎಂಪಿ ಸೇರಿದಂತೆ ಎಲ್ಲ ಪಾಲಿಕೆ ಹಾಗೂ ನಗರಸಭೆಗಳು ಆಹಾರದಲ್ಲಿನ ಕಲಬೆರಕೆ ತಪಾಸಣೆಯನ್ನು ಕೈಬಿಟ್ಟವು. ಇದಕ್ಕಾಗಿ 'ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆ' (ಕೆಎಚ್ಎಸ್ಡಿಆರ್ಪಿ) ಸ್ಥಾಪಿಸಲಾಯಿತು. 2013ರ ಅಕ್ಟೋಬರ್ನಲ್ಲಿ ಇದು ಪ್ರಾರಂಭವಾಗಿದ್ದರೂ ಈವರೆಗೆ ಅದಕ್ಕೆ ಅಗತ್ಯ ಸಿಬ್ಬಂದಿಯೇ ಇಲ್ಲ.
ಆರೋಗ್ಯ ಇಲಾಖೆಯ ನಿರ್ದೇಶಕರೇ ಈ ಸಂಸ್ಥೆಗೆ ನಿರ್ದೇಶಕರಾಗಿದ್ದಾರೆ. ಇವರಲ್ಲದೆ ಜಂಟಿ ಆಯುಕ್ತ, ಜಂಟಿ ನಿರ್ದೇಶಕ, ಇಬ್ಬರು ಉಪ ನಿರ್ದೇಶಕರ ಹುದ್ದೆಗಳನ್ನು ರಚಿಸಲಾಗಿದೆ. ಇದರಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವುದು ಒಬ್ಬ ಉಪ ನಿರ್ದೇಶಕರು ಮಾತ್ರ!
ಕೆಎಚ್ಎಸ್ಡಿಆರ್ಪಿಗೆ ಪ್ರತಿ ಜಿಲ್ಲೆಯಲ್ಲೂ ಒಬ್ಬರು ಆರೋಗ್ಯಾಧಿಕಾರಿಗಳು ಇರಬೇಕು. ಆದರೆ ಈವರೆಗೆ 20 ಜನರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ತಾಲೂಕಿಗೆ ಆಹಾರ ಸುರಕ್ಷತಾ ಅಧಿಕಾರಿ ಇದ್ದು, ಆ ಭಾಗದಲ್ಲಿನ ಆಹಾರದ ಸುರಕ್ಷೆ ಬಗ್ಗೆ ನಿಗಾವಹಿಸಬೇಕು. ದೂರು ಅಥವಾ ಅನುಮಾನ ಬಂದರೆ ಅವರ ಮೇಲೆ ದೂರು ದಾಖಲಿಸಿ, ಮೊಕದ್ದಮೆ ದಾಖಲಿಸಬೇಕು. ಆಹಾರ ಸುರಕ್ಷೆ ದೃಷ್ಟಿಯಲ್ಲಿ ಈ ಅಧಿಕಾರಿಯ ಪಾತ್ರವೇ ಅಧಿಕ. ಇಂತಹ ಅಧಿಕಾರಿ ಪ್ರತಿ ತಾಲೂಕಿನಲ್ಲಿ ಒಬ್ಬರಿರಬೇಕು. ಆದರೆ, ರಾಜ್ಯದಲ್ಲಿ ಜಿಲ್ಲೆ ಒಬ್ಬರು ಅಥವಾ ಇಬ್ಬರು ಮಾತ್ರ ಇದ್ದಾರೆ. ಹೀಗಾದರೆ ಇನ್ನೆಲ್ಲಿಂದ ಬರಬೇಕು ಆಹಾರ ಸುರಕ್ಷೆ?
ನೋಂದಣಿ ಅಷ್ಟೇ ಆಗಿದೆ: ಕೆಎಚ್ಎಸ್ಡಿಆರ್ಪಿ ಕಳೆದ ಆರು ತಿಂಗಳಲ್ಲಿ ಮಾಡಿರುವ ಕೆಲಸ ಅಂದರೆ ರಾಜ್ಯದಲ್ಲಿರುವ ಆಹಾರ ಉದ್ದಿಮೆದಾರರನ್ನು ನೋಂದಣಿ ಮಾಡಿಸುವುದು. ನಗರ ಪ್ರದೇಶದಲ್ಲಿ ಶೇ.1 ಹಾಗೂ ಗ್ರಾಮೀಣ ಭಾಗದಲ್ಲಿ ಶೇ.0.5 ಸೇರಿದಂತೆ ರಾಜ್ಯದಲ್ಲಿ 3 ಲಕ್ಷ ಉದ್ಯಮದಾರರಿಬಹುದು. ಅವರಲ್ಲಿ ಒಂದು ಲಕ್ಷ ಉದ್ಯಮಿಗಳನ್ನು ನೋಂದಣಿ ಮಾಡಿಸಿಕೊಳ್ಳಲಿದೆ. ಹೊಟೇಲ್ ಉದ್ಯಮಿದಾರರು ನಾವು ಈ ಕಾಯಿದೆಗೆ ಬರುವುದಿಲ್ಲ ಎಂದು ನ್ಯಾಯಾಲಯಕ್ಕೆ ಹೋಗಿದ್ದಾರೆ.
ನೋಂದಣಿಯಾದ ಉದ್ಯಮಿದಾರರು ಕೆಎಚ್ಎಸ್ಡಿಆರ್ಪಿನ ದಾಖಲೆಗೆ ಬರಲಿದ್ದು, ಅವರಿಗೆ ಮಾನದಂಡಗಳನ್ನು ನಿಗದಿಗೊಳಿಸಲಾಗುತ್ತದೆ. ಆದ್ದರಿಂದ ರಾಜ್ಯದಲ್ಲಿ ಆಹಾರ ಸುರಕ್ಷೆ ಕಾಯಿದೆ ಸಂಪೂರ್ಣ ಜಾರಿಯೇ ಆಗಿಲ್ಲ. ರಾಜ್ಯದ ಜನ ಸೇವಿಸುತ್ತಿರುವ ಆಹಾರದಲ್ಲಿ ಎಷ್ಟು ಕಲಬೆರಕೆ ಅಥವಾ ವಿಷಪೂರಿತ ಎಂಬುದು ಅದರ ದುಷ್ಪರಿಣಾಮ ಆದ ನಂತರವಷ್ಟೇ ಬಹಿರಂಗವಾಗುವುದು
12ನೇ ಪಂಚವಾರ್ಷಿಕ ಯೋಜನೆ, ವಿಶ್ವಬ್ಯಾಂಕ್ ನೆರವು ಯೋಜನೆಯಲ್ಲಿ ರಾಜ್ಯದಲ್ಲಿರುವ ನಾಲ್ಕು ಪ್ರಯೋಗಾಲಯಗಳನ್ನು ಉನ್ನತೀಕರಿಸಲಾಗುತ್ತಿದೆ. ಬೆಂಗಳೂರಿನ ಪ್ರಯೋಗಾಲಯ ಇನ್ನಾರು ತಿಂಗಳಲ್ಲಿ ಸಿದ್ಧಗೊಳ್ಳಲಿದೆ. ಮಂಗಳೂರು, ಚಿತ್ರದುರ್ಗದಲ್ಲಿ ಹೊಸ ಪ್ರಯೋಗಾಲಯ ಪ್ರಾರಂಭವಾಗಲಿದೆ. ಇನ್ನಾರು ತಿಂಗಳಲ್ಲಿ ಈ ಸಂಸ್ಥೆ ಸಮಗ್ರವಾಗಿ ಕಾರ್ಯನಿರ್ವಹಿಸಲಿದೆ. ವಿದೇಶ ಮತ್ತು ಇಲ್ಲಿನ ಮಾನದಂಡ ಬೇರೆ. ಸದ್ಯಕ್ಕೆ ಕ್ರಿಮಿನಾಶಕ ತಪಾಸಣೆ ಮಾಡುವ ವ್ಯವಸ್ಥೆ ನಮ್ಮಲ್ಲಿಲ್ಲ.
- ಡಾ. ಜಯಕುಮಾರ್
ಉಪ ನಿರ್ದೇಶಕ, ಕೆಎಚ್ಎಸ್ಡಿಆರ್ಪಿ
ಕೆರೆ ಮಂಜುನಾಥ್