'ಕಲಾಕೃತಿ ಮಾರಾಟ' ಹೇಳಿಕೆಗೆ ಮಮತಾ ಬೆಂಬಲಿಗರು ಗರಂ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲಿನ ಆರೋಪದಿಂದ ಕೆರಳಿರುವ ತೃಣಮೂಲ...
ನವದೆಹಲಿ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲಿನ ಆರೋಪದಿಂದ ಕೆರಳಿರುವ ತೃಣಮೂಲ ಕಾಂಗ್ರೆಸ್ ಮುಖಂಡರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮೇಲೆ ಮತ್ತೊಂದು ಸುತ್ತಿನ ವಾಗ್ದಾಳಿ ನಡೆಸಿದ್ದಾರೆ. ಗುಜರಾತ್ ಮುಖ್ಯಮಂತ್ರಿಯನ್ನು ಕಟುಕ ಎಂದು ಕರೆದಿದ್ದ ತೃಣಮೂಲ ಕಾಂಗ್ರೆಸ್ ಮುಖಂಡ ಡೆರೆಕ್ ಒ'ಬ್ರಿಯಾನ್ ಅವರು ಮೋದಿ ವಿರುದ್ಧ ಮತ್ತೊಮ್ಮೆ ಕುಟುಕಿದ್ದಾರೆ. 'ಗುಜರಾತ್ ಕಟುಕನ ಕೈಯ ರಕ್ತ ಇನ್ನೂ ಹಸಿ ಹಸಿಯಾಗಿದೆ' ಎಂದು ಆರೋಪಿಸಿದ್ದಾರೆ.
ಒಂದು ವೇಳೆ ಮೋದಿ ಮಮತಾ ಬ್ಯಾನರ್ಜಿ ವಿರುದ್ಧ ವೈಯಕ್ತಿಕ ದಾಳಿ ನಡೆಸಿದರೆ ನಮಗೂ ಅವರ ವಿರುದ್ಧ ವಾಗ್ದಾಳಿ ನಡೆಸಲು ಗೊತ್ತು ಎಂದಿದ್ದಾರೆ ಡೆರೆಕ್.
ಮಮತಾಗೆ ದಿಗ್ವಿಜಯ್ ಬೆಂಬಲ
ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಆಧಾರರಹಿತ ಆರೋಪದಲ್ಲಿ ಹೊಸದೇನೂ ಇಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಈ ರೀತಿಯ ಆಧಾರರಹಿತ, ಕೆಳಮಟ್ಟದ ಆರೋಪ ಮಾಡುವುದು ಮೋದಿ ತಂತ್ರ. ಇದರಲ್ಲಿ ಹೊಸದೇನೂ ಇಲ್ಲ. ಮೋದಿ ಅವರ ಈ ತಂತ್ರಕ್ಕೆ ಮಮತಾ ಹೊಸ ಬಲಿಪಶು. ನಮಗೆ ಇದು ಅಭ್ಯಾಸವಾಗಿ ಬಿಟ್ಟಿದೆ ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
ಕ್ಷಮೆ ಕೋರಿ ಅಥವಾ ಮಾನನಷ್ಟ ಮೊಕದ್ದಮೆ ಎದುರಿಸಿ
ಕೋಲ್ಕತಾ: ಮಮತಾ ಬ್ಯಾನರ್ಜಿ ಅವರ ಕಲಾಕೃತಿ ಕುರಿತಾಗಿ ನೀಡಿದ ಹೇಳಿಕೆಗೆ ಸಂಬಂಧಿಸಿ ನರೇಂದ್ರ ಮೋದಿ ಅವರು ಕ್ಷಮೆ ಕೋರದಿದ್ದರೆ ಮಾನನಷ್ಟ ಮೊಕದ್ದಮೆ ಎದುರಿಸಬೇಕಾದೀತು ಎಂದು ತೃಣಮೂಲ ಕಾಂಗ್ರೆಸ್ ಎಚ್ಚರಿಸಿದೆ. ಹಣಕ್ಕಾಗಿ ಮಮತಾ ಕಲಾಕೃತಿ ಮಾರಾಟ ಮಾಡಿದ್ದಾರೆ ಎನ್ನುವುದನ್ನು ಸಾಬೀತುಪಡಿಸಬೇಕು. ತಪ್ಪಿದಲ್ಲಿ ನಾವು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದು ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್ ರಾಯ್ ಹೇಳಿದ್ದಾರೆ.
ಗುಜರಾತ್ ಗಲಭೆಯಲ್ಲಿ ಕೈಗೆ ರಕ್ತ ಮೆತ್ತಿಕೊಂಡ ವ್ಯಕ್ತಿ ನಮ್ಮ ನಾಯಕರ ಸಮಗ್ರತೆ ಮತ್ತು ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದ್ದಾರೆ. ಅವರ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ ಎಂದು ರಾಯ್ ಆರೋಪಿಸಿದ್ದಾರೆ. ಇನ್ನೊಬ್ಬ ತೃಣಮೂಲ ನಾಯಕ, ರಾಜ್ಯ ವಿತ್ತ ಸಚಿವ ಅಮಿತ್ ಮಿತ್ರಾ ಕೂಡ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಮೋದಿ ಅವರು ತೀರಾ ಕೆಳಮಟ್ಟದ ವೈಯಕ್ತಿಕ ದಾಳಿ ನಡೆಸಿದ್ದಾರೆ. ಆ ಕಲಾಕೃತಿ ಮಾರಾಟದಿಂದ ಬಂದ ಹಣ ಚಾರಿಟಿ ಅಥವಾ ಪಕ್ಷದ ಮುಖವಾಣಿ ಜಾಗೋ ಬಾಂಗ್ಲಾಕ್ಕಾಗಿ ನೀಡಲಾಗಿದೆಂದು ಸ್ಪಷ್ಟನೆ ನೀಡಿದ್ದಾರೆ.
ಈ ವಾಗ್ಯುದ್ಧಕ್ಕೆ ಕಾರಣವೇನು?
ಸೇರಾಂಪೋರ್‌ನಲ್ಲಿ ಭಾನುವಾರ ನಡೆದ ಮೋದಿ ರ್ಯಾಲಿ ಬಳಿಕ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ತಿಕ್ಕಾಟ ತೀವ್ರಗೊಂಡಿತ್ತು. ಮಮತಾ ಶಾರದಾ ಚಿಟ್‌ಫಂಡ್ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ. ಮಮಲಾ ಅವರ ಕಲಾಕೃತಿ 4 ಲಕ್ಷ, 8 ಲಕ್ಷ, 14 ಲಕ್ಷಕ್ಕೆ ಮಾರಾಟವಾಗುತ್ತಿತ್ತು. ನಾನು ಕಲೆಗೆ ಗೌರವ ಕೊಡುತ್ತೇನೆ. ಆದರೆ, ಒಂದು ಕಲಾಕೃತಿ 1.80 ಕೋಟಿಗೆ ಮಾರಾಟವಾಗಿದೆ. ಈ ಕಲಾಕೃತಿಯನ್ನು ಕೊಂಡ ವ್ಯಕ್ತಿ ಯಾರು? ಎಂದು ಮೋದಿ ಪ್ರಶ್ನಿಸಿದ್ದರು. ಈ ಮೂಲಕ ಕಲಾಕೃತಿ ಮೂಲಕ ಚಿಟ್‌ಫಂಡ್ ಹಗರಣ ಆರೋಪಿಗಳ ರಕ್ಷಣೆಗೆ ಹಣ ಪಡೆದಿದ್ದಾರೆ ಎಂದು ಮೋದಿ ಪರೋಕ್ಷವಾಗಿ ಆರೋಪಿಸಿದ್ದರು.
ಮೋದಿಯೊಬ್ಬ ರಾಕ್ಷಸ: ಮಮತಾ
ಕೋಲ್ಕತಾ: ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವಿನ ವಾಗ್ಯುದ್ಧ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದೆ. ಟಿಎಂಸಿ ನಾಯಕ ಒಬ್ರಿಯಾನ್ ಬಳಿಕ ಈಗ ಸ್ವತಃ ಪಶ್ಚಿಮ ಬಂಗಾಳ ಸಿಎಂ ಮಮತಾ ಅವರೇ ಮೋದಿ ವಿರುದ್ಧ ವಾಗ್ಬಾಣ ಬಿಟ್ಟಿದ್ದಾರೆ. ಮೋದಿ ಅವರೊಬ್ಬ 'ರಾಕ್ಷಸ' ಹಾಗೂ 'ಅಪಾಯಕಾರಿ ವ್ಯಕ್ತಿ' ಎಂದಿದ್ದಾರೆ ದೀದಿ. ಮೋದಿ ಅಧಿಕಾರಕ್ಕೆ ಬಂದರೆ ದೇಶವು ಕತ್ತಲಿಗೆ ನೂಕಲ್ಪಡಲಿದೆ. ದೇಶದಲ್ಲಿರುವ ಬಾಂಗ್ಲಾ ವಲಸಿಗರನ್ನು ಇಲ್ಲಿಂದ ಅಟ್ಟಿಸುತ್ತಾರೆ ಎಂದೂ ಮಮತಾ ಹೇಳಿದ್ದಾರೆ. ಜತೆಗೆ, ಮೋದಿ ಅವರಂತಹ ಗಲಭೆಗಳ ರೂವಾರಿಯಿಂದ ನಾವು ಅಭಿವೃದ್ಧಿಯ ಪಾಠ ಕಲಿಯಬೇಕಾಗಿಲ್ಲ ಎಂದೂ ದೀದಿ ಹೇಳಿದ್ದಾರೆ.
ನಾನು ಖರೀದಿಸಿಲ್ಲ: ಇದೇ ವೇಳೆ, ಮಮತಾರ ಯಾವುದೇ ಕಲಾಕೃತಿಯನ್ನೂ ನಾನು ಖರೀದಿಸಿಲ್ಲ ಎಂದು ಬಹುಕೋಟಿ ಶಾರದಾ ಚಿಟ್ ಹಗರಣದ ಪ್ರಮುಖ ಆರೋಪಿ ಸುದೀಪ್ತ ಸೇನ್ ಸ್ಪಷ್ಟಪಡಿಸಿದ್ದಾರೆ.