ಕಾಶ್ಮೀರಿ ಪಂಡಿತರನ್ನು ಓಡಿಸಿದ್ದೇ ಫಾರೂಕ್ ಕುಟುಂಬ: ಮೋದಿ
ನರೇಂದ್ರ ಮೋದಿ ಬೆಂಬಲಿಸುವವರು ಸಮುದ್ರಕ್ಕೆ...
ನವದೆಹಲಿ: ನರೇಂದ್ರ ಮೋದಿ ಬೆಂಬಲಿಸುವವರು ಸಮುದ್ರಕ್ಕೆ ಹಾರಲಿ ಎನ್ನುವ ಕೇಂದ್ರ ಸಚಿವ ಫಾರುಕ್ ಅಬ್ದುಲ್ಲಾ ಹೇಳಿಕೆಗೆ ಬಿಜೆಪಿ ಪ್ರಧಾನಿ ಖಾರವಾದ ಉತ್ತರ ನೀಡಿದ್ದಾರೆ. ಸೂಫಿಸಂತರ ನಾಡಿನಿಂದ ಕಾಶ್ಮೀರಿ ಪಂಡಿತರನ್ನು ಓಡಿಸಿದ್ದೇ ಫಾರುಕ್ ಕುಟುಂಬ. ಕಾಶ್ಮೀರದ ಈಗಿನ ದುಸ್ಥಿತಿಗೆ ಫಾರುಕ್ ಕುಟುಂಬವೇ ಕಾರಣ ಎಂದು ಮೋದಿ ಟ್ವಿಟರ್ನಲ್ಲಿ ಆರೋಪಿಸಿದ್ದಾರೆ. ಜತೆಗೆ, ಈ ಕುರಿತು ಗುಜರಾತ್ ಸಿಎಂ ಕಚೇರಿಯಿಂದ ಬಿಡುಗಡೆ ಮಾಡಿರುವ ವಿಡಿಯೋ ಸಂದೇಶದಲ್ಲೂ ಮೋದಿ ಅಬ್ದುಲ್ಲಾ ಕುಟುಂಬವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಶ್ಮೀರ ಪಂಡಿತರ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ವಿಡಿಯೋ ಕುರಿತು ಚು. ಆಯೋಗ ವಿವರ ಕೇಳಿದೆ.
ಮೋದಿ ಹೇಳಿದ್ದೇನು?
- ಮೋದಿಗೆ ಮತಹಾಕುವವರು ಸಮುದ್ರಕ್ಕೆ ಹಾರಲಿ ಎಂದು ಹೇಳುವ ಡಾ. ಅಬ್ದುಲ್ಲಾ ಹಾಗೂ ಅವರ ಕುಟುಂಬ ಮೊದಲು ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಲಿ. ಅವರು ಜಮ್ಮು ಮತ್ತು ಕಾಶ್ಮೀರವನ್ನು ಹೇಗೆ ಹಾಳು ಮಾಡಿದ್ದಾರೆ ಎನ್ನುವುದನ್ನು ಅರಿತುಕೊಳ್ಳಲಿ.
- ದೇಶದ ವೈಭವದ ಇತಿಹಾಸದಲ್ಲಿ ಜಾತ್ಯತೀತಗೆ ಯಾರಾದರೂ ಅತಿ ಹೆಚ್ಚಿನ ಹಾನಿ ಆಗಿದ್ದರೆ ಅದು ನಿಮ್ಮ ಕುಟುಂಬದವರಿಂದ. ಸಂವಿಧಾನದಲ್ಲಿ ಹೇಳಲಾಗಿದೆ ಎನ್ನುವ ಕಾರಣಕ್ಕೆ ನಾವು ಜಾತ್ಯತೀತರಲ್ಲ.
- ಜಾತ್ಯತೀತನೆ ನಮ್ಮ ರಕ್ತದಲ್ಲೇ ಇದೆ.
- ಡಾ. ಅಬ್ದುಲ್ಲಾರ ಬೇಜವಾಬ್ದಾರಿ ಹೇಳಿಕೆಗಳಿಂದ ಭಾರತದ ಉದ್ದೇಶ ಹಾದಿ ತಪ್ಪುವುದಿಲ್ಲ. ಧರ್ಮವನ್ನು ಆಧಾರವಾಗಿಟ್ಟುಕೊಂಡು ಕಾಶ್ಮೀರ ಪಂಡಿತರನ್ನು ಓಡಿಸಲಾಯಿತು. ಕಾಶ್ಮೀರವು ಸೂಫಿ ಸಂಪ್ರದಾಯ, ಸಾಮರಸ್ಯದ ನಾಡು. ಆದರೆ, ಅದಕ್ಕೀಗ ಕೋಮು ಬಣ್ಣ ಹಚ್ಚಲಾಗಿದೆ. ಇದಕ್ಕೆ ಡಾ. ಅಬ್ದುಲ್ಲಾ ಕುಟುಂಬದ ಕೋಮುವಾದಿ ರಾಜಕೀಯವೇ ಕಾರಣ.
-ಭಾರತದ ಸಾವಿರಾರು ವರ್ಷಗಳಷ್ಟು ಹಳೆಯ ಜಾತ್ಯತೀತವಾದಕ್ಕೆ ಕಾಶ್ಮೀರದಲ್ಲಿ ದೊಡ್ಡ ಮತ್ತು ಆಳವಾದ ಹೊಡೆದ ಬಿದ್ದಿದೆ. ಇದಕ್ಕೆಲ್ಲ ನೀವು, ನಿಮ್ಮ ತಂದೆ ಮತ್ತು ಪುತ್ರನ ರಾಜಕಾರಣವೇ ಕಾರಣ.
- ಈವರೆಗೆ ಸಾರುತ್ತಾ ಬಂದಿರುವ ಜೈ ಜಗತ್ ಮತ್ತು ವಸುದೈವ ಕುಟುಂಬಕಂ ಮೌಲ್ಯಗಳಿಂದ ದೇಶ ಹಾದಿ ಬದಲಾಯಿಸುವುದಿಲ್ಲ.
ಒಮರ್ ಹೇಳಿದ್ದೇನು?
ನರೇಂದ್ರ ಮೋದಿ ಮಾಡಿದ ಟೀಕೆಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೂಡ ಟಾಂಗ್ ನೀಡಿದ್ದಾರೆ. ಕಾಶ್ಮೀರಿ ಪಂಡಿತರು ಓಡಿ ಹೋಗಲು ಬಿಜೆಪಿಯೇ ಕಾರಣ ಎಂದು ಆರೋಪಿಸಿದ್ದಾರೆ.
- ಫಾರೂಕ್ ಅಬ್ದುಲ್ಲಾ ಸರ್ಕಾರದ ಅವಧಿಯಲ್ಲಿ ಕಾಶ್ಮೀರಿ ಪಂಡಿತರು ಓಡಿ ಹೋಗಿಲ್ಲ. ಬಿಜೆಪಿ ಹಾಗೂ ಅವರ ಮಿತ್ರಪಕ್ಷಗಳಿಂದಾಗಿ ಅವರು ಕಾಶ್ಮೀರ ತೊರೆದರು.
- ದೇಶದ ಪ್ರಧಾನಿಯಾಗುವ ಕನಸುಕಾಣುತ್ತಿರುವ ಮೋದಿ ಅವರಿಗೆ ಕಾಶ್ಮೀರಕ್ಕೆ ಕಾಲಿಡುವಷ್ಟು ಧೈರ್ಯವಿಲ್ಲ. ಕಾಶ್ಮೀರದ ಜನರ ಹೃದಯದಲ್ಲಿ ಮೋದಿ ಅವರಿಗೆ ಸ್ಥಾನ ಇದೆ ಎಂದು ನನಗನಿಸುವುದಿಲ್ಲ.
- ಶೇಖ್ ಅಬ್ದುಲ್ಲಾ ಮುಸ್ಲಿಂ ಪಾಕಿಸ್ತಾನದ ಬದಲು ಜಾತ್ಯತೀತ ಭಾರತವನ್ನು ಆಯ್ಕೆ ಮಾಡಿಕೊಂಡಿದ್ದರು ಎನ್ನುವುದನ್ನು ಮೋದಿ ಮರೆತಂತಿದೆ. 20 ವರ್ಷ ಸೆರೆಯಲ್ಲಿದ್ದರೂ ಅವರು ಮನಸ್ಸು ಬದಲಿಸಲಿಲ್ಲ.
-ಕಾಶ್ಮೀರ ಹಾಗೂ ಕಾಶ್ಮೀರಿಗಳು ಮೋದಿಯಿಂದ ಬಯಸುವುದು ಒಂದೇ ವಿಚಾರ. ಮೋದಿ ಜಾತ್ಯತೀತನೆ ಕುರಿತು ಭಾಷಣ ಬಿಗಿಯಬಾರದು. ಇಡೀ ವಿಶ್ವಕ್ಕೆ ಸಹಿಷ್ಣುತೆಯ ಸಂದೇಶವನ್ನು ರವಾನಿಸಿದ ಕೀರ್ತಿ ಕಾಶ್ಮೀರಕ್ಕಿದೆ. ಮೋದಿ ಜಮ್ಮು ಮತ್ತು ಕಾಶ್ಮೀರದ ಕುರಿತು ಸಾಕಷ್ಟು ಸುಳ್ಳು ಹೇಳುತ್ತಾರೆ.
ಮೋದಿ ವಿರುದ್ಧ ವೈಯಕ್ತಿಕ ದ್ವೇಷ ಇಲ್ಲ: ಫಾರೂಕ್
ಮೋದಿ ಬೆಂಬಲಿಸುವವರನ್ನು ಸಮುದ್ರಕ್ಕೆ ಎಸೆಯಿರಿ ಎಂದು ಹೇಳಿದ ಮರುದಿನವೇ ಕೇಂದ್ರ ಸಚಿವ ಫಾರೂಕ್ ಅಬ್ದುಲ್ಲಾ ಅವರು ತಮ್ಮ ಹೇಳಿಕೆಗೆ ಸಂಬಂಧಿಸಿ ಸ್ಪಷ್ಟನೆ ನೀಡಿದ್ದಾರೆ. ಮೋದಿ ವಿರುದ್ಧ ತಮಗೆ ವೈಯಕ್ತಿಕ ದ್ವೇಷವೇನೂ ಇಲ್ಲ ಎಂದು ತಿಳಿಸಿದ್ದಾರೆ.
ಫಾರೂಕ್ ಹೇಳಿದ್ದು
- ಒಬ್ಬ ವ್ಯಕ್ತಿಯಾಗಿ ನಾವು ಮೋದಿ ಅವರ ವಿರುದ್ಧವಾಗಿಲ್ಲ. ನಮ್ಮ ವಿರೋಧವೇನಿದ್ದರೂ ಅವರ ಉದ್ದೇಶದ ಕುರಿತು.
- ಮೋದಿ ಅವರ ಮೊದಲ ಗುರಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕಲಂ 370 ಅನ್ನು ರದ್ದು ಮಾಡುವುದು. ಇದರರ್ಥ ನಮ್ಮ ಧ್ವಜವನ್ನು ಕೆಳಗಿಳಿಸಲಾಗುತ್ತದೆ. ನಮ್ಮನ್ನು ಅವರ ದಾಸರನ್ನಾಗಿ ಮಾಡಲಾಗುತ್ತದೆ. ಇದನ್ನು ಜಮ್ಮು ಮತ್ತು ಕಾಶ್ಮೀರದ ಜನ ಯಾವತ್ತೂ ಒಪ್ಪಿಕೊಳ್ಳುವುದಿಲ್ಲ.