ಕೆರೆ ಮಣ್ಣು ಕೆರೆಗೆ, ಲಕ್ಷ ಲಕ್ಷ ಜೇಬಿಗೆ
ಕೊಪ್ಪಳ: ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಿದ್ದಾರೆ. ಆದರೆ, ಇಲ್ಲಿ ಕೆರೆಯ ಮಣ್ಣನ್ನು ಕೆರೆಗೆ ಚೆಲ್ಲಿ ಕಾಸು ಮಾಡಿಕೊಳ್ಳುತ್ತಿದ್ದಾರೆ!
ತಾಲೂಕಿನ ಅಳವಂಡಿ ಕೆರೆಯಲ್ಲಿ ಹೂಳು ತೆಗೆಯುವ ಕಾರ್ಯ ಭರದಿಂದ ಸಾಗಿದೆ. ಆದರೆ, ತೆಗೆದ ಹೂಳನ್ನು ದೂರ ಸಾಗಿಸಿದರೆ ಕೆರೆಯಾದರೂ ಆಳವಾಗುತ್ತದೆ, ಹೂಳು ತೆಗೆದಿದ್ದಕ್ಕೂ ಸಾರ್ಥಕವಾಗುತ್ತದೆ. ಆದರೆ, ಇಲ್ಲಿ ಹೂಳು ತೆಗೆದು ಕೆರೆ ಪಕ್ಕದಲ್ಲೇ ಹಾಕುತ್ತಿದ್ದಾರೆ. ಕೆರೆ ಆಳ ಹೆಚ್ಚಾಗುವ ಬದಲು ಮತ್ತೆ ಮಣ್ಣು ತುಂಬಿಕೊಳ್ಳುತ್ತಿದೆ. ಇದ್ದ ಕೆರೆಯೂ ಮುಚ್ಚುವ ಹಂತ ತಲುಪುತ್ತಿದೆ. ಇದಕ್ಕೆ ಖರ್ಚು ಮಾಡಿದ ಹಣ ಕಂಡವರ ಪಾಲಾಗುತ್ತಿದೆ.
ಖಾತ್ರಿಯಲ್ಲಿ ಖರ್ಚು: ತಿಂಗಳ ಹಿಂದೆ ಅಳವಂಡಿ ಗ್ರಾಮದ ಕೆರೆ ಹೂಳು ತೆಗೆಯುವುದಕ್ಕೆ ಸ್ಥಳೀಯ ಗ್ರಾಪಂ ತೀರ್ಮಾನಿಸಿತು. ಉದ್ಯೋಗ ಖಾತ್ರಿ ಯೋಜನೆಯಿಂದ ಲಕ್ಷಾಂತರ ರುಪಾಯಿ ಅನುದಾನ ಬಳಸಲು ಆದೇಶ ಮಾಡಲಾಯಿತು. ಅದರಂತೆ ಕಾಮಗಾರಿಯೂ ಪ್ರಾರಂಭವಾಗಿ ನಿತ್ಯವೂ ನೂರಾರು ಕಾರ್ಮಿಕರು ಹೂಳು ತೆಗೆಯುವ ಕಾಯಕದಲ್ಲಿ ತೊಡಗಿದ್ದಾರೆ. ಇದರಿಂದ ಅಳವಂಡಿ, ಸುತ್ತಲಿನ ಗ್ರಾಮಗಳ ಜನರು ಸಂತೋಷ ಪಟ್ಟರು. ನಮ್ಮೂರ ಕೆರೆಗೆ ಅಂತೂ ಯೋಗ ಕೂಡಿ ಬಂತು. ಕೆರೆಯ ಹೂಳು ತೆಗೆಯುವ ಕಾರ್ಯ ನಡೆದಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಆದರೆ, ತೆಗೆಯುವ ಹೂಳನ್ನು ಕೆರೆಯಿಂದ ಹೊರಸಾಗಿಸುವುದನ್ನೇ ಗ್ರಾಪಂ ಮರೆತಂತಿದೆ. ಈ ಅವಾಂತರದ ಕುರಿತು 'ಕನ್ನಡಪ್ರಭ'ಕ್ಕೆ ಗ್ರಾಮಸ್ಥರೊಬ್ಬರು ಮಾಹಿತಿ ನೀಡಿದರು.
'ಕನ್ನಡಪ್ರಭ' ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಕೆರೆಯ ಹೂಳು ಸಾಗಿಸಲು ಗ್ರಾಪಂ ಕ್ರಮಕೈಗೊಂಡಿಲ್ಲ. ಲಕ್ಷಾಂತರ ವೆಚ್ಚ ಮಾಡಿ ತೆಗೆಯುತ್ತಿರುವ ಹೂಳನ್ನು ಹೊರ ಸಾಗಿಸುತ್ತಿಲ್ಲ. ಹೀಗಾಗಿ, ಕಾಮಗಾರಿ ಕೈಗೊಂಡಿದ್ದು ನಿರುಪಯುಕ್ತ ಎಂಬ ಸತ್ಯ ಬೆಳಕಿಗೆ ಬಂತು.
ಸಂಪೂರ್ಣ ಹಾಳು: ಕೆರೆಯಿಂದ ತೆಗೆದ ಹೂಳನ್ನು ಆಗಲೇ ಹೊರಗೆ ಸಾಗಿಸಬೇಕು. ಇಲ್ಲದಿದ್ದರೆ, ಮಳೆ ಸುರಿದಾಗ ಹೂಳು ತೆಗೆದಿದ್ದು ಮತ್ತೆ ಕೆರೆ ಸೇರುತ್ತದೆ. ಇಡೀ ಕಾಮಗಾರಿ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಆದರೆ, ಇಲ್ಲಿ ಹಣ ದುರ್ಬಳಕೆ ಮಾಡಿಕೊಳ್ಳುವುದಕ್ಕಾಗಿಯೇ ಇಂಥ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹೂಳೆತ್ತುವ ನೆಪದಲ್ಲಿ ಲಕ್ಷ ಲಕ್ಷ ಹಣ ನುಂಗಲು ಸಿದ್ಧತೆ ನಡೆದಿದೆ. ಸಮಗ್ರ ತನಿಖೆ ಮಾಡಿದರೆ ಎಲ್ಲವೂ ಬಯಲಾಗಲಿದೆ.
ತಪ್ಪಿತಸ್ಥರ ವಿರುದ್ಧ ಕ್ರಮ..
ಕೆರೆಯ ಹೂಳು ತೆಗೆಯುತ್ತಿದ್ದಂತೆ ಅದನ್ನು ಹೊರ ಸಾಗಿಸಬೇಕು. ಇಲ್ಲದಿದ್ದರೇ ವ್ಯರ್ಥವಾಗುತ್ತದೆ ಎಂದು ಹೇಳಿದ್ದೇನೆ. ಆದರೂ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಈ ಬಗ್ಗೆ ಕೆಡಿಪಿ ಸಭೆಯಲ್ಲಿ ಚರ್ಚಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
- ಟಿ. ಜನಾರ್ದನ, ಕೊಪ್ಪಳ ಜಿಪಂ ಅಧ್ಯಕ್ಷ
ನನಗೇನೂ ಗೊತ್ತಿಲ್ಲ...
ನಾನು ಈಗ ಕೇವಲ ಉಸ್ತುವಾರಿ ನೋಡಿಕೊಳ್ಳುತ್ತಿದ್ದೇನೆ. ಇಲ್ಲಿರುವ ಪಿಡಿಒ ರಜೆಯ ಮೇಲಿರುವುದರಿಂದ ಹೆಚ್ಚುವರಿಯಾಗಿ ಈ ಕೆಲಸ ಮಾಡುತ್ತಿದ್ದೇನೆ. ಕೆರೆಯ ಹೂಳು ತೆಗೆಯುವುದು, ಅದಕ್ಕೆ ವೆಚ್ಚ ಮಾಡುತ್ತಿರುವುದು ನನಗೇನೂ ಗೊತ್ತಿಲ್ಲ.
-ಹನುಮಂತರಾವ್, ಪಿಡಿಒ
ಸೋಮರಡ್ಡಿ ಅಳವಂಡಿ