ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೋಲಾರ ಬದಾಮಿಗೂ ಬಂತೇ ಆತಂಕ?

ಮಾವು ಮಂಡಳಿಯಿಂದ ಗುಣಮಟ್ಟ ಪರೀಕ್ಷೆ | ರಾಸಾಯನಿಕ ವಸ್ತುಗಳ ಹೆಚ್ಚು ಬಳಸಬೆಡಿ

Mainashree
Updated On : 29 Apr 2014, 10:37 am

ಮಾವು ಮಂಡಳಿಯಿಂದ ಗುಣಮಟ್ಟ ಪರೀಕ್ಷೆ | ರಾಸಾಯನಿಕ ವಸ್ತುಗಳ ಹೆಚ್ಚು ಬಳಸದಿರಲು ಸಲಹೆ

ಕೋಲಾರ:
ವಿಶ್ವಕ್ಕೆ ವಿವಿಧ ತಳಿಗಳ ಮಾವಿನ ರುಚಿ ತೋರಿಸಿ ಖ್ಯಾತಿ ಹೊಂದಿರುವ ಕೋಲಾರ ಜಿಲ್ಲೆಯ ಮಾವು ಬೆಳೆಗಾರರಿಗೆ ಮತ್ತೊಂದು ಸಂತಸದ ಸುದ್ದಿ ಜೊತೆ ಆತಂಕವೂ ಎದುರಾಗಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಶೇ. 80ರಷ್ಟು ರೈತರು ಮಾವು ಬೆಳೆಗಾರರಾಗಿದ್ದಾರೆ. ಇಲ್ಲಿ ಬೆಳೆಯುವ ಮಲ್ಲಿಕಾ, ತೊತಾಪುರಿ, ನೀಲಂ, ಬ್ಯಾನಿಷ್ ಹಾಗೂ ಆಲ್ಫೋನ್ಸೋ (ಬದಾಮಿ) ಇನ್ನಿತರ ತಳಿಗಳು ರೈತರ ಜೇಬು ತುಂಬಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಕಳೆದ ಎರಡು, ಮೂರು ವರ್ಷಗಳಿಂದೀಚೆ ಮಾತ್ರ ಮಾವು ಬೆಳೆಗಾರರು ಬೆಳೆಗಳಿಗೆ ಕಾಣಿಸಿಕೊಳ್ಳುತ್ತಿರುವ ರೋಗ- ರುಜಿನ, ಮಳೆ ಅಭಾವ, ಮಾರುಕಟ್ಟೆಯ ಕೊರತೆ ಇನ್ನಿತರ ಕಾರಣಗಳಿಂದ ಸ್ವಲ್ಪ ಮಟ್ಟಿಗೆ ಸಂಕಷ್ಟಕ್ಕೆ ಗುರಿಯಾಗಿದ್ದರೂ ಮಾವು ಬೆಳೆಯುವುದನ್ನು ಬಿಟ್ಟಿಲ್ಲ.
ಶ್ರೀನಿವಾಸಪುರಕ್ಕೆ ಮಾತ್ರ ಸೀಮಿತವಾಗಿದ್ದ ಮಾವು ಈಗ ಕೋಲಾರ ಜಿಲ್ಲೆಯ ಮುಳಬಾಗಿಲು, ಮಾಲೂರು,ಬಂಗಾರಪೇಟೆ ತಾಲೂಕಿನವರೆಗೆ ವ್ಯಾಪಿಸಿದೆ. ಕೋಲಾರ ತಾಲೂಕಿನಲ್ಲೂ ರೈತರು ಕೊಂಚ ಮಟ್ಟಿಗೆ ಮಾವು ಬೆಳೆಯುತ್ತಿದ್ದಾರೆ. ಅನೇಕ ರೈತರು ರಾಸಾಯನಿಕ ಗೊಬ್ಬರಗಳನ್ನು ಹಾಕಿ ಮಾವು ಬೆಳೆಯುತ್ತಿದ್ದರೆ, ಇನ್ನು ಕೆಲವರು ಸಾವಯವ ಗೊಬ್ಬರಕ್ಕೆ ಮಾರು ಹೋಗಿದ್ದಾರೆ.
ವಿದೇಶಕ್ಕೆ ರಫ್ತು: ಕೋಲಾರ ಜಿಲ್ಲೆಯಲ್ಲಿ ಬೆಳೆಯುವ ಬದಾಮಿ, ಮಲ್ಲಿಕಾ, ತೊತಾಪುರಿ, ನೀಲಂ, ರಸಪುರಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೂ ಮಳೆಯ ಅಭಾವದಿಂದಾಗಿ ರೈತರು ಹೆಚ್ಚು ಉತ್ಪಾದನೆ ಮಾಡಲಾಗುತ್ತಿಲ್ಲ. ಜಿಲ್ಲೆಯ ಬಹುತೇಕ ರೈತರು ಅದರಲ್ಲೂ ಶ್ರೀನಿವಾಸಪುರ ತಾಲೂಕಿನವರು ಬದಾಮಿ ಮತ್ತು ಮಲ್ಲಿಕಾ ಮಾವನ್ನು ದೇಶದ ಹಲವು ಭಾಗಗಳಿಗೆ ಮಾತ್ರವಲ್ಲದೆ ಸೌದಿ ಅರೇಬಿಯಾಕ್ಕೆ ರಫ್ತು ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ರಚನೆ ಆಗಿರುವ ಮಾವು ಮಂಡಳಿಯು ವಿದೇಶಗಳಲ್ಲಿ ಬದಾಮಿ (ಆಲ್ಫೋನ್ಸೋ)ಗೆ ಹೆಚ್ಚಿನ ಬೇಡಿಕೆ ಇರುವುದರಿಂದ ರೈತರನ್ನು ಹುರಿದುಂಬಿಸಿ ಗುಣಮಟ್ಟದ ಬದಾಮಿ ಬೆಳೆಯಲು ಉತ್ತೇಜನ ನೀಡುತ್ತಿದೆ.
ಗುಣಮಟ್ಟ ತಿಳಿದರೆ ಇನ್ನಷ್ಟು: ಈಗಾಗಲೇ ಶ್ರೀನಿವಾಸಪುರ ತಾಲೂಕಿನಲ್ಲಿ ಆಯ್ದ ಮಾವಿನ ತೋಟಗಳಲ್ಲಿ ಬದಾಮಿಯ ಗುಣಮಟ್ಟ ಹೆಚ್ಚಳಕ್ಕೆ ಕಾರ್ಯಕ್ರಮ ರೂಪಿಸಿದ್ದು, ಮೇ ತಿಂಗಳಲ್ಲಿ ಗುಣಮಟ್ಟದ ವರದಿ ಪ್ರಕಟವಾದ ಬಳಿಕ ವಿದೇಶಕ್ಕೆ ಬದಾಮಿ ಬ್ರಾಂಡಿನ ಮಾವು ರಫ್ತು ಮಾಡಲು ರೈತರಿಗೆ ಅನುಮತಿ ದೊರಕಿಸಿಕೊಡುವ ಸಾಧ್ಯತೆ ಇದೆ.
ಜಿಲ್ಲೆಯ ರೈತರು ಈಗ ಶೇ.20ರಷ್ಟು ಪ್ರಮಾಣದಲ್ಲಿ ಮಾತ್ರ ಬದಾಮಿ, ಮಾವು ಬೆಳೆಯುತ್ತಿದ್ದು ಗುಣಮಟ್ಟದ ಬಗ್ಗೆ ಖಾತರಿ ಆದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಸಾಧ್ಯತೆಗಳಿವೆ.
ಆತಂಕ: ರೈತರು ಸಾವಿರಾರು ರುಪಾಯಿ ಖರ್ಚು ಮಾಡಿ ಗುಣಮಟ್ಟದ ಗೊಬ್ಬರ, ಔಷಧಿಗಳನ್ನು ಉಪಯೋಗಿಸಿ ಬದಾಮಿ ಬೆಳೆಯಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಆದರೆ, ಲಂಡನ್ ಸೇರಿದಂತೆ ಕೆಲವು ದೇಶಗಳು ಆಲ್ಫೋನ್ಸೋ (ಬದಾಮಿ), ಮಾವು ಭಾರತದಿಂದ ರಫ್ತು ಮಾಡಿಕೊಳ್ಳಲು ಒಪ್ಪದಿರುವುದು ರೈತರಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಆಲ್ಫೋನ್ಸೋ ಬಗ್ಗೆ
-    ಆಲ್ಫೋನ್ಸೋವನ್ನು ಹಣ್ಣುಗಳ ರಾಜ ಎನ್ನುತ್ತಾರೆ. ಇದನ್ನು 'ಹಪೂಸ್‌', 'ಆಪೂಸ್‌' ಎಂದೂ ಕರೆಯುತ್ತಾರೆ.
-     ಇದು ಅತ್ಯಂತ ಸ್ವಾದಭರಿತ, ನಾರಿರದ, ಕಂಪುಬೀರುವ ಮಾವು
-     ಪ್ರತಿ ಮಾವು 150ರಿಂದ 300 ಗ್ರಾಂ ತೂಕವಿರುತ್ತದೆ
-     ಮಾರ್ಚ್ ಅಂತ್ಯದಿಂದ ಮೇ ಅಂತ್ಯದವರೆಗೆ(2 ತಿಂಗಳು) ಮಾತ್ರವೇ ಇದನ್ನು ಬೆಳೆಯಲಾಗುತ್ತದೆ
-     ಮಹಾರಾಷ್ಟ್ರದ ರತ್ನಗಿರಿ, ಸಿಂಧುದುರ್ಗ, ಗುಜರಾತ್‌ನ ವಲ್ಸಾಡ್, ನವಸಾರಿ ಹಾಗೂ ಕರ್ನಾಟಕದ ಕಾರವಾರದಲ್ಲಿ ಇದು ಹೆಚ್ಚಾಗಿ ಬೆಳೆಯುತ್ತದೆ
-     ಇದು ಮಾವುಗಳಲ್ಲೇ ಅತ್ಯಂತ ದುಬಾರಿ ಮಾವು
-   ಹಪೂಸ್ ಮಾವನ್ನು ಸಿಹಿತಿಂಡಿಗಳು, ಕ್ಯಾಂಡಿಗಳು, ಮ್ಯಾಂಗೋ ಮಿಲ್ಕ್‌ಶೇಕ್, ಲಸ್ಸಿ, ಪಲ್ಪ್, ಜಾಮ್, ಬರ್ಫಿಗಳನ್ನು ಮಾಡಲು ಬಳಸಲಾಗುತ್ತದೆ

ಕೋಲಾರ ಜಿಲ್ಲೆಯಲ್ಲಿ ಬೆಳೆಯುವ ಬದಾಮಿ ಮಾವು ವಿದೇಶಗಳಿಗೆ ರಫ್ತು ಆಗಿಲ್ಲ. ಕಾರಣ ನಮ್ಮಲ್ಲಿ ಬೆಳೆಯುವ ಬದಾಮಿಯ ಗುಣಮಟ್ಟದ ಪ್ರಮಾಣ ವಿದೇಶಿ ಮಾರುಕಟ್ಟೆಯಲ್ಲಿ ಇನ್ನೂ ತೃಪ್ತಿದಾಯಕವಾಗಿಲ್ಲ. ಗುಣಮಟ್ಟ ಖಾತರಿಯಾದಲ್ಲಿ ವಿದೇಶಕ್ಕೆ ಕಳುಹಿಸಬಹುದು. ರೈತರು ನೈಸರ್ಗಿಕ ಗೊಬ್ಬರ ಬಳಸುವ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಲಾಭ ಪಡೆಯಬಹುದು.
- ಚಂದ್ರಶೇಖರ್
ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ, ಕೋಲಾರ

ಗುಣಮಟ್ಟದ ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುವ ಸಾಮರ್ಥ್ಯ ರೈತರಿಗಿದೆ. ಆದರೆ ಸರ್ಕಾರ ರೈತರಿಗೆ ಸೌಕರ್ಯ ಒದಗಿಸಬೇಕು. ಬದಾಮಿ ಮಾವು ವಿದೇಶಕ್ಕೆ ಕಳುಹಿಸಬೇಕಾದರೆ ಗುಣಮಟ್ಟ ಅತಿಮುಖ್ಯ. ಮಾವು ಮಂಡಳಿಯು ಈಗಾಗಲೇ ಇದಕ್ಕಾಗಿ ಕಾರ್ಯಕ್ರಮ ರೂಪಿಸಿದೆ.
- ಬಲ್ಲಂ ಶ್ರೀನಿವಾಸರೆಡ್ಡಿ,
ಮಾವು ಬೆಳೆಗಾರರು, ಶ್ರೀನಿವಾಸಪುರ


 ಪಾ.ಶ್ರೀ.ಅನಂತರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement