ಪುನರ್ವಸತಿ ಕೇಂದ್ರ ವಿರೋಧಿಸಿ ರೈತರ ಪ್ರತಿಭಟನೆ
ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀ ಗೆ ಹೆಚ್ಚಿಸುವುದರಿಂದ...
ಜಮಖಂಡಿ: ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀ ಗೆ ಹೆಚ್ಚಿಸುವುದರಿಂದ ಮುಳುಗಡೆಯಾಗಲಿರುವ ಸನಾಳ ಮತ್ತು ಕುಂಬಾರಹಳ್ಳ ಗ್ರಾಮಸ್ಥರಿಗೆ ಜಮಖಂಡಿ ಸರ್ವೆ ಸಮೀಪ ಸರ್ಕಾರ ಪುನರ್ವಸತಿ ಕಲ್ಪಿಸುತ್ತಿರುವುದು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಜಮಖಂಡಿಯ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
ಪುನರ್ವಸತಿ ಕೇಂದ್ರಕ್ಕೆ ಗುರುತಿಸಲಾದ ಜಮೀನಿನಲ್ಲಿ ಸೇರಿದ ನೂರಾರು ರೈತರು, ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಆಲಮಟ್ಟಿ ಜಲಾಶಯವನ್ನು 524 ಮೀ.ಗೆ ಎತ್ತರಿಸುವ ಹಿನ್ನೆಲೆಯಲ್ಲಿ ಜಮಖಂಡಿ ಸರ್ವೆ ವ್ಯಾಪ್ತಿಯಲ್ಲಿ ಬರುವ ಭೂ ಮಾಲೀಕರಿಗೆ ಕೃಷ್ಣಾ ಮೇಲ್ದಂಡೆ ಯೋಜನೆ ಇಲಾಖೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿ ತಮ್ಮ ಜಮೀನು ಭೂ ಸ್ವಾಧೀನಗೊಳಿಸಲಾಗುವುದೆಂದು ತಿಳಿಸಿದ್ದಾರೆ. ಅಣೆಕಟ್ಟೆ ಎತ್ತರಿಸುವುದರಿಂದ ಈ ಪ್ರದೇಶದ ಸಮೀಪದವರೆಗೂ ಹಿನ್ನೀರು ವ್ಯಾಪಿಸಲಿದೆ. ಸ್ವಲ್ಪವೇ ದೂರದಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸುವುದರಿಂದ ಮಲೇರಿಯಾ ಪೀಡಿತ ಪ್ರದೇಶವಾಗಿ ಇಲ್ಲಿ ವಾಸಿಸುವ ಜನರಿಗೆ ರೋಗ-ರುಜಿನ ಅಂಟಿಕೊಳ್ಳುವ ಸಾಧ್ಯತೆ ಇದೆ. ಈ ಪ್ರದೇಶದ ಜಮೀನಿನಲ್ಲಿ ಮನೆ ಕಟ್ಟಲು ಅಡಿಪಾಯ ಹಾಕುವುದು ದುಸ್ತರವಾಗಿದೆ. ಇಲ್ಲಿನ ನೀರು ಉಪ್ಪು ಮಿಶ್ರಿತವಾಗಿದ್ದು, ಅನುಕೂಲಕ್ಕಿಂತ ಅನಾನೂಕೂಲವೇ ಹೆಚ್ಚಾಗಿವೆ.ಜಿಲ್ಲಾಡಳಿತ ಈ ಸಮಸ್ಯೆಗಳನ್ನು ಅರಿತು ನಿರ್ಧಾರ ಕೈಗೊಳ್ಳಬೇಕು. ಕೂಡಲೇ ಭೂ ಸ್ವಾಧೀನ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಕಡಕೋಳ, ಆಲಗೂರ, ಮುತ್ತೂರ, ಜಮಖಂಡಿ, ಕುಂಬಾರಹಳ್ಳ ಗ್ರಾಮಗಳಲ್ಲಿ ಪುನರ್ವಸತಿ ಕೇಂದ್ರಗಳಲ್ಲಿ ನೂರಾರು ಎಕರೆ ಫಲವತ್ತಾದ ಭೂಮಿ ಕಳೆದುಕೊಂಡು ಸಂಪೂರ್ಣ ನಿರಾಶ್ರಿತರಾಗಿರುವ ನಮಗೆ ಸಂಸಾರ ನಿರ್ವಹಣೆ ಕಠಿಣವಾಗಿದೆ. ಇಂತಹದ್ದರಲ್ಲಿ ತಾಲೂಕಾಡಳಿತ ಮತ್ತು ಜಿಲ್ಲಾಡಳಿತ ನಮಗೆ ನೋಟಿಸ್ ನೀಡಿ, ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದು ಖೇದಕರ.ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸಿ, ಸರ್ವಾಧಿಕಾರ ನಡೆಸುತ್ತಿದ್ದಾರೆ. ನಮ್ಮ ಪ್ರಾಣ ಕೊಟ್ಟೇವು ಆದರೆ, ಭೂಮಿ ಬಿಟ್ಟುಕೊಡುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.