ಮರಣ ಪ್ರಮಾಣಪತ್ರ ರದ್ದತಿಗೆ ಹೋರಾಡಿದ್ರು, ಅದಾಗೋದ್ರೊಳಗೆ ಚಿಂತೇಲಿ ಪ್ರಾಣಾನೇ ಬಿಟ್ರು!
ಮಂಗಳೂರು: ಬದುಕಿರುವಾಗಲೇ ಡೆತ್ ಸರ್ಟಿಫಿಕೇಟ್. ಇದನ್ನು ರದ್ದು ಮಾಡಲು ಜೀವಂತ ವ್ಯಕ್ತಿ ಭಗೀರಥನಂತೆ ಹೋರಾಟ ನಡೆಸಿದರೂ ಬದುಕಿರುವರೆಗೂ ಡೆತ್ ಸರ್ಟಿಫಿಕೆಟ್ ರದ್ದಾಗಲೇ ಇಲ್ಲ!
12 ವರ್ಷಗಳ ಹಿಂದೆ ಮುಂಬೈಯಲ್ಲಿ ಅಪಘಾತವಾಗಿ ನೆನಪಿನ ಶಕ್ತಿ ಕಳೆದುಕೊಂಡು ಅನಾಥಾಶ್ರಮದಲ್ಲಿ ಜೀವಚ್ಛವವಾಗಿ ಬದುಕಿ, ನೆನಪು ಮರುಕಳಿಸಿದ ಬಳಿಕ ಊರಿಗೆ ಬಂದ ಬಂಟ್ವಾಳದ ರಾಮಣ್ಣ ಶೆಟ್ಟಿ ಎಂಬ ನತದೃಷ್ಟ ವ್ಯಕ್ತಿಯ ದುರಂತ ಕತೆ ಇದು.
ನಡೆದಿದ್ದು ಏನು?: ಬಂಟ್ವಾಳ ಭಂಡಾರಿಬೆಟ್ಟು ಕನ್ನಡಿಗುತ್ತು ಮನೆ ರಾಮಣ್ಣ ಶೆಟ್ಟಿಗೆ 35 ವರ್ಷದ ಹಿಂದೆ ಮದುವೆಯಾಗಿದ್ದು, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು. ಬದುಕು ಸುಸೂತ್ರವಾಗಿ ಸಾಗುತ್ತಿತ್ತು. ಚಾಲಕರಾಗಿದ್ದ ರಾಮಣ್ಣ ಶೆಟ್ಟರು 2002ರಲ್ಲಿ ಮುಂಬೈಗೆ ಹೋಗುತ್ತಿದ್ದಾಗ ಲಾರಿ ಅಪಘಾತವಾಯಿತು. ಯಾರೋ ಆಸ್ಪತ್ರೆಗೆ ದಾಖಲಿಸಿದರು. ಪ್ರಜ್ಞೆ ಬಂದರೂ ನೆನಪಿನ ಶಕ್ತಿ ಕಳೆದುಹೋಗಿದ್ದ ರಾಮಣ್ಣ ಶೆಟ್ಟರನ್ನು ಮದರ್ ಥೆರೆಸಾ ಆಶ್ರಮಕ್ಕೆ ದಾಖಲಿಸಲಾಯಿತು.
ಮುನ್ನಾಬಾಯಿ ಎಂಬಿಬಿಎಸ್ ಸಿನಿಮಾದಲ್ಲಿ ಕುರ್ಚಿಗಂಟಿ ಕುಳಿತ ಕೋಮಾ ಪಾತ್ರಧಾರಿಯಂತೆ ಹತ್ತು ವರ್ಷ ಕಾಲ ತಾನು ಯಾರು ಎಂಬ ಬಗ್ಗೆ ಪರಿವೆಯೇ ಇರದೆ ಶೆಟ್ಟರು ಆಶ್ರಮದಲ್ಲಿದ್ದರು. ಎರಡು ವರ್ಷದ ಹಿಂದೆ ನೆನಪು ಶಕ್ತಿ ಮರುಕಳಿಸತೊಡಗಿತ್ತು. ಮಂಗಳೂರಿನ ಎನ್ಜಿಒ ಸಂಸ್ಥೆಯ ಸದಸ್ಯರು ಮುಂಬೈ ಆಶ್ರಮಕ್ಕೆ ಬಂದಿದ್ದ ವೇಳೆ ಅವರು ತುಳುವಿನಲ್ಲಿ ಮಾತನಾಡುತ್ತಿದ್ದಾಗ ಅಲ್ಲಿಗೆ ತೆರಳಿದ ರಾಮಣ್ಣ ಶೆಟ್ಟಿ ತನ್ನೆಲ್ಲ ವಿವರ ಹೇಳಿದರು.
ಪುನರ್ ಮಿಲನ: ಎನ್ಜಿಒ ನೆರವಿನಿಂದ ಬಂಟ್ವಾಳದ ಮನೆಗೆ 2013ರ ಜ.13ರಂದು ಕಾಲಿಟ್ಟರು. ಮಕ್ಕಳೆಲ್ಲ ಬೆಳೆದು ದೊಡ್ಡವರಾಗಿದ್ದರು. '11 ವರ್ಷದ ಬಳಿಕ ತಂದೆಯನ್ನು ನೋಡುವಾಗ ನನಗೆ ಶಾಕ್ ಆಗಿತ್ತು. ಸ್ವಲ್ಪಹೊತ್ತು ನಾವ್ಯಾರು ಮಾತನಾಡಿಲ್ಲ, ಅತ್ತೆವು. ತಂದೆ ಕೆಲಸಕ್ಕೆಂದು ಮನೆ ಬಿಟ್ಟು ಹೋದಾಗ ನನಗೆ 22 ವರ್ಷ. ಇಬ್ಬರು ತಂಗಿ ಮತ್ತು ತಮ್ಮ, ತಮ್ಮನಿಗೆ 15 ವರ್ಷ. ಚಿಕ್ಕಪ್ಪ, ಚಿಕ್ಕಮ್ಮ, ಸಹೋದರತ್ತೆಯರು ನಮ್ಮನ್ನು ಮನೆಯಿಂದ ಹೊರ ಹಾಕಿದ್ದರು' ಎನ್ನುತ್ತಾರೆ ರಾಮಣ್ಣ ಶೆಟ್ಟರ ಹಿರಿಮಗ ಸತೀಶ.
ತಂದೆ ಬಂದ ಖುಷಿಯಲ್ಲಿ ತಂಗಿಗೆ 2013 ಮೇ 31ಕ್ಕೆ ಮದುವೆ ಇಟ್ಟುಕೊಂಡೆವು. ಮದುವೆಗೆ ಜಾಗ ಅಡವಿಟ್ಟು ಸಾಲ ಮಾಡಲು ಹೋದಾಗ ತಂದೆ ಹೆಸರಲ್ಲಿ ಜಾಗವೇ ಇಲ್ಲ. ಅದನ್ನು ತಂದೆ ಸಹೋದರ, ಸಹೋದರಿಯರು ಪಾಲು ಮಾಡಿಕೊಂಡಿದ್ದರು. ರಾಮಣ್ಣ ಶೆಟ್ಟಿ ಅವಿವಾಹಿತ, ಅವನಿಗೆ ಮಕ್ಕಳಿಲ್ಲ ಎಂದು ಅಳಿಯ ಶ್ರೀನಿವಾಸ ಶೆಟ್ಟಿ ಮೂಲಕ 2004ರಲ್ಲಿ ಬಂಟ್ವಾಳ ಪುರಸಭೆಯಲ್ಲಿ ಡೆತ್ ಸರ್ಟಿಫಿಕೆಟ್ ಮಾಡಿ ಜಾಗ ಅತಿಕ್ರಮಿಸಿದ್ದರು.
ಸತ್ತಿಲ್ಲ ಎಂದು ಮನವಿ: ಮಗಳ ಮದುವೆಗೆ ಸಾಲ ತೆಗೆಯಲು ಆಗಿಲ್ಲ ಎಂಬ ಚಿಂತೆಯಲ್ಲಿದ್ದ ರಾಮಣ್ಣ ಶೆಟ್ಟಿ, ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಬಳಿ ಹೋಗಿ, 'ನಾನು ಬದುಕಿದ್ದೇನೆ, ಮರಣಪ್ರಮಾಣ ಪತ್ರ ರದ್ದು ಮಾಡಿ' ಎಂದು ವಿನಂತಿಸಿದರು. ಆಡಳಿತ ಸುಧಾರಣೆ ಅಧಿಕಾರಿ ಶಾಲಿನಿ ರಜನೀಶ್ಗೂ ಮನವಿ ಸಲ್ಲಿಸಿದ್ದರು.
ಮದುವೆ ಹತ್ತಿರವಾದರೂ ಡೆತ್ ಸರ್ಟಿಫಿಕೇಟ್ ರದ್ದಾಗಲೇ ಇಲ್ಲ. ಸಾಲ ಸಿಗಲೇ ಇಲ್ಲ. ಇದೇ ಚಿಂತೆಯಲ್ಲಿದ್ದ ರಾಮಣ್ಣ ಶೆಟ್ಟಿಗೆ ರಕ್ತದೊತ್ತಡ ಹೆಚ್ಚಾಗಿ ಮಗಳ ಮದುವೆಗೆ 20 ದಿನ ಇರುವಾಗಲೇ ಹೃದಯಾಘಾತವಾಗಿ ತೀರಿಕೊಂಡರು.
'ತಂದೆ ವೈಕುಂಠ ಸಮಾರಾಧನೆ ಮಾಡಿದ ಮೂರೇ ದಿನದಲ್ಲಿ ಈ ದುಃಖದಲ್ಲಿಯೇ ತಂಗಿ ಮದುವೆಯನ್ನು ಮಾಡಿ ಮುಗಿಸಿದೆವು. ತಂದೆ ಸತ್ತ 6 ತಿಂಗಳ ಬಳಿಕ ಅಕ್ಟೋಬರ್ನಲ್ಲಿ ಡೆತ್ ಸರ್ಟಿಫಿಕೆಟ್ ರದ್ದಾಯಿತು' ಎನ್ನುತ್ತಾರೆ ಮಗ ಸತೀಶ್.
ವಿಪರ್ಯಾಸವೆಂದರೆ ಹಳೆ ಮರಣ ಪ್ರಮಾಣ ಪತ್ರ ರದ್ದು ಆಗುವ ಮುಂಚಿತವಾಗಿಯೇ ಸಹಜವಾಗಿ ಮೃತಪಟ್ಟಾಗ ರಾಮಣ್ಣ ಶೆಟ್ಟರಿಗೆ ಇನ್ನೊಂದು ಮರಣಪ್ರಮಾಣ ಪತ್ರವನ್ನು ಪುರಸಭೆ ನೀಡಿತ್ತು!
ತಂದೆಯ ಜಾಗ ಇನ್ನು ಮಕ್ಕಳಿಗೆ ಸಿಕ್ಕಿಲ್ಲ. ಈ ಜಾಗ ಸಿಗಬೇಕಾದರೆ ಮರಣಪ್ರಮಾಣ ಪತ್ರ ನಕಲಿ ಮಾಡಿಸಿದ ಅಳಿಯ ಮತ್ತು ಸಹೋದರರ ವಿರುದ್ಧ ಕೇಸ್ ಆಗಬೇಕು. ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರು, ಜಿಲ್ಲಾ ಸಾಂಖ್ಯಿಕ ಅಧಿಕಾರಿಗೆ ಫೆ.3ರಂದು ಪತ್ರ ಬರೆದಿದ್ದಾರೆ.
'ಜನನ ಮರಣ ನೋಂದಣಿ ಕಾಯ್ದೆ ಸೆಕ್ಷನ್ 23, 25 ಸುಳ್ಳು ಮಾಹಿತಿ ನೀಡಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಅಭಿಯೋಜಕರನ್ನು ಸಂಪರ್ಕಿಸಿ ವರದಿ ನೀಡಿದ್ದೇವೆ. ಅವರು ನ್ಯಾಯಾಲಯಕ್ಕೆ ಮಂಡಿಸಬೇಕು. ಕೋರ್ಟ್ ಆದೇಶದ ಮೇರೆಗೆ ಕೇಸ್ ದಾಖಲಾಗಬೇಕು. ಈಗ ಚುನಾವಣೆ ಕರ್ತವ್ಯದಿಂದಾಗಿ ವಿಳಂಬವಾಗಿದೆ' ಎಂದು ಜಿಲ್ಲಾ ಸಾಂಖ್ಯಿಕ ಇಲಾಖೆ ಅಧಿಕಾರಿ ನಾಗೇಂದ್ರ ಹೇಳುತ್ತಾರೆ.
ಅಧಿಕಾರಿಗಳಿಂದಾಗಿ ಎರೆಡೆರಡು ಬಾರಿ ಮೃತಪಟ್ಟರೂ, ಆತ್ಮಕ್ಕೆ ಶಾಂತಿ ನೀಡಲು ಸರ್ಕಾರದಿಂದ ಇನ್ನೂ ಸಾಧ್ಯವಾಗದೆ ಇರುವುದು ವಿಪರ್ಯಾಸ!
ಜಿತೇಂದ್ರ ಕುಂದೇಶ್ವರ