ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಾಜ್ಯಸಭೆ, ಪರಿಷತ್ ಸ್ಥಾನಕ್ಕೆ ಬಿಜೆಪಿಯಲ್ಲಿ ಲಾಬಿ

ರಾಜ್ಯಸಭೆ ಹಾಗೂ ವಿಧಾನಪರಿಷತ್‌ನ ತಲಾ ಒಂದು ಸ್ಥಾನಗಳಿಗೆ ಬಿಜೆಪಿಯಲ್ಲಿ ಲಾಬಿ...

Mainashree
Updated On : 29 Apr 2014, 4:07 am

ಕ.ಪ್ರ.ವಾರ್ತೆ  ಬೆಂಗಳೂರು  ಏ. 28
ರಾಜ್ಯಸಭೆ ಹಾಗೂ ವಿಧಾನಪರಿಷತ್‌ನ ತಲಾ ಒಂದು ಸ್ಥಾನಗಳಿಗೆ ಬಿಜೆಪಿಯಲ್ಲಿ ಲಾಬಿ ಪ್ರಾರಂಭವಾಗಿದೆ.
ಇದೇ ಜೂನ್ ತಿಂಗಳಾಂತ್ಯಕ್ಕೆ ಬಿಜೆಪಿ ತೆಕ್ಕೆಯಲ್ಲಿರುವ 2 ರಾಜ್ಯಸಭೆ ಹಾಗೂ 9 ವಿಧಾನಪರಿಷತ್ ಸ್ಥಾನಗಳು  ತೆರವಾಗಲಿವೆ. ಆದರೆ ಇದರಲ್ಲಿ ಕೇವಲ ಆಗ್ನೇಯ ಪದವೀಧರ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಸ್ಥಾನಗಳು ನಾಮನಿರ್ದೇಶನ ಅಥವಾ ವಿಧಾನಸಭೆಯಿಂದ ನೇರವಾಗಿ ಆಯ್ಕೆಯಾಗಲಿವೆ.
ವಿಧಾನಸಭೆಯಲ್ಲಿ ಬಿಜೆಪಿಗೆ ಹಾಲಿ ಇರುವ ಸ್ಥಾನಗಳಲ್ಲಿ ಕೇವಲ ಒಬ್ಬರನ್ನು ಮಾತ್ರ ಮೇಲ್ಮನೆಗೆ ಕಳುಹಿಸಲು ಅವಕಾಶವಿದೆ. ಇದೇ ರೀತಿ ರಾಜ್ಯಸಭೆಗೂ ಕೂಡ ಒಬ್ಬರನ್ನು ಮಾತ್ರ ಕಳುಹಿಸಬಹುದಾಗಿದೆ. ಇವೆರಡು ಸ್ಥಾನಗಳಿಗೆ ಬಿಜೆಪಿಯಲ್ಲಿ ತುರುಸಿನ ಲಾಬಿ ಪ್ರಾರಂಭವಾಗಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸಂಸತ್‌ಗೆ ಪ್ರವೇಶಿಸಲು ತವಕಿಸುತ್ತಿರುವ ಡಿ.ವಿ.ಸದಾನಂದಗೌಡರ ಅವಧಿ ಜೂನ್‌ನಲ್ಲಿ ಅಂತ್ಯಗೊಳ್ಳಲಿದೆ. ಗೆದ್ದರೆ ಅದಕ್ಕೂ ಮೊದಲೇ ಜಾಗ ತೆರವಾಗಲಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗುತ್ತದೆ ಎಂಬ ನಿರೀಕ್ಷೆಯಿಂದ ಸ್ಥಾನ ಒಂದಾದರೂ ನಿರೀಕ್ಷೆ ಹೆಚ್ಚಿದೆ. ಪಕ್ಷದ ಹಿರಿಯ ನಾಯಕರುಗಳೇ ಈ ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದಾರೆ.
ಜಾತಿ ಲೆಕ್ಕಾಚಾರದ ತಲೆಬಿಸಿಯಲ್ಲಿ ಬಿಜೆಪಿ: ರಾಜ್ಯಸಭೆಯಿಂದ ನ್ಯಾ.ಎಂ.ರಾಮಾ ಜೋಯಿಸ್ ಹಾಗೂ ಪ್ರಭಾಕರ್ ಕೋರೆ ಅವರು ನಿವೃತ್ತಿಯಾಗುತ್ತಿದ್ದಾರೆ. ಆದರೆ ಇಬ್ಬರು ಹಿರಿಯ ಮುಖಂಡರನ್ನು ಸಂಸತ್‌ನ ಮೇಲ್ಮನೆಗೆ ಕಳುಹಿಸಲು ಸಾಧ್ಯವಿಲ್ಲ. ಆರ್‌ಎಸ್‌ಎಸ್ ವಲಯದಿಂದ ರಾಮಾ ಜೋಯಿಸ್ ಅವರನ್ನೇ ಕಳುಹಿಸಲು ಒತ್ತಡ ಬರುತ್ತಿದೆ.
ಆದರೆ ಪಕ್ಷದ ವಲಯದಲ್ಲಿ ಪ್ರಭಾಕರ್ ಕೋರೆ ಅವರನ್ನೇ ಮುಂದುವರಿಸುವ ಲೆಕ್ಕಾಚಾರ ನಡೆಯುತ್ತಿದೆ. ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ ಮುಖಂಡರಲ್ಲಿ ಒಬ್ಬರಾದ ಕೋರೆ ಅವರನ್ನು ಕಡೆಗಣಿಸಿದರೆ ಪಕ್ಷ ಬದಲಿಸುವ ಸಾಧ್ಯತೆ ಇರುತ್ತದೆ ಎಂಬ ಕಾರಣದಿಂದ ಕೋರೆ ಅವರ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಆದರೆ ಮೇ 16ರ ಫಲಿತಾಂಶದ ಬಳಿಕ ಈ ಒಂದು ಸೀಟಿನ ಬಗ್ಗೆ ಪಕ್ಕಾ ಮಾಹಿತಿ ಹೊರಬೀಳಲಿದೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಹಾಗೂ ಯಾವುದಾದರೂ ಹಿರಿಯ ಮುಖಂಡರಿಗೆ ರಾಜ್ಯಸಭೆ ಪ್ರವೇಶ ಅನಿವಾರ್ಯವಾದರೆ ಕರ್ನಾಟಕದ ಒಂದು ಸೀಟು ಅವಶ್ಯ ಕೂಡ ಆಗಬಹುದು. ಆಗ ಪಕ್ಷದ ವರಿಷ್ಠರ ನಿಲುವು ಪ್ರಮುಖವಾಗುತ್ತದೆ.
ಇನ್ನು ಸದಾನಂದಗೌಡರ ಅವಧಿ ಮುಗಿಯುತ್ತಿರುವುದರಿಂದ ವಿಧಾನಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕರ ಹುದ್ದೆಯೂ ಖಾಲಿಯಾಗುತ್ತದೆ. ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಸದಾನಂದಗೌಡ ಜಾಗಕ್ಕೆ ಪ್ರಬಲ ಸಮುದಾಯದ ನಾಯಕರನ್ನೇ ತರುವ ಬಗ್ಗೆ ಚರ್ಚೆಯಾಗುತ್ತಿದೆ. ಮತ್ತೊಂದೆಡೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರನ್ನು ಮೇಲ್ಮನೆಗೆ ತಂದು ಪ್ರತಿಪಕ್ಷ ನಾಯಕರನ್ನಾಗಿ ಮಾಡುವ ಚಿಂತನೆಯನ್ನು ತೇಲಿಬಿಡಲಾಗಿದೆ. ಆದರೆ ಇದು ಲೋಕಸಭೆ ಚುನಾವಣೆ ಫಲಿತಾಂಶವನ್ನು ಅವಲಂಬಿಸಿದೆ.
ಜೂನ್ ತಿಂಗಳಲ್ಲಿ ಈ ಸ್ಥಾನಗಳಿಗೆ ಚುನಾವಣೆ ನಡೆಯುವುದು ಖಾತ್ರಿಯಾಗಿದೆ. ಇದೇ ಸಂದರ್ಭದಲ್ಲಿ ಇನ್ನು 4 ಕ್ಷೇತ್ರಗಳು ಕೂಡ ತೆರವಾಗಲಿದ್ದು, ಇದರಲ್ಲಿ ಜೆಡಿಎಸ್‌ನ 3 ಹಾಗೂ ಕಾಂಗ್ರೆಸ್‌ನ 1 ಶಾಸಕರಿದ್ದಾರೆ.
ಎರಡು ಕ್ಷೇತ್ರಗಳಿಗೆ ನೇರ ಚುನಾವಣೆ: ಬಿಜೆಪಿಯ ಡಾ.ಎ.ಎಚ್.ಶಿವಯೋಗಿಸ್ವಾವು ಹಾಗೂ ಜೆಡಿಎಸ್‌ನ ಪುಟ್ಟಣ್ಣ ಮಾತ್ರ ನೇರ ಚುನಾವಣೆ ಎದುರಿಸಲಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರದಿಂದ ಶಿವಯೋಗಿಸ್ವಾವು ಅವರು ಮತ್ತೆ ಸ್ಪರ್ಧಿಸುತ್ತಿದ್ದು, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನ ಪುಟ್ಟಣ್ಣ ವಿರುದ್ಧ ಅಭ್ಯರ್ಥಿಯನ್ನು ಇನ್ನು ಅಂತಿಮ ಮಾಡಲಾಗಿಲ್ಲ. ಪ್ರಸ್ತುತ ಶಿವಯೋಗಿಸ್ವಾವು ಅವರು ಪ್ರತಿಪಕ್ಷದ ಮುಖ್ಯ ಸಚೇತಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜೆಡಿಎಸ್‌ನಲ್ಲಿ ಇನ್ನೂ ನಿಧಾನ!
ವಿಧಾನಪರಿಷತ್‌ನಲ್ಲಿ ಜೆಡಿಎಸ್‌ನ ಇಬ್ಬರು ಸದಸ್ಯರ ಅವಧಿ ಜೂನ್ 30ರಂದು ಅಂತ್ಯಗೊಳ್ಳಲಿದ್ದು, ವಿಧಾನಸಭೆಯಲ್ಲಿ 40 ಸ್ಥಾನಗಳನ್ನು ಹೊಂದಿರುವ ಜೆಡಿಎಸ್ ಒಬ್ಬರನ್ನು ಆಯ್ಕೆ ಮಾಡುವ ಸಾಮರ್ಥ್ಯ ಹೊಂದಿದೆ. ಎಂ.ಸಿ. ನಾಣಯ್ಯ ಹಾಗೂ ಕೆ. ನಾರಾಯಣಸ್ವಾಮಿ ಅವಧಿ ಮುಕ್ತಾಯವಾಗಲಿದೆ. ಹಿರಿಯ ಮುಖಂಡ ನಾಣಯ್ಯ ಅವರು ಮರು ಆಯ್ಕೆ ಬಯಸಿಲ್ಲ. ಒಬ್ಬರನ್ನು ಆಯ್ಕೆ ಮಾಡುವ ಮತಗಳು ಜೆಡಿಎಸ್ ಬಳಿ ಇದ್ದರೂ, ಇನ್ನೂ ಈ ಬಗ್ಗೆ ಚಟುವಟಿಕೆಗಳು ಆರಂಭವಾಗಿಲ್ಲ. ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ಅವರ ನಿಧನದಿಂದಾಗಿ ಯಾವುದೇ ರೀತಿಯ ಚಟುವಟಿಕೆಗಳು ಇನ್ನೂ ಆರಂಭವಾಗಿಲ್ಲ. ಲೋಕಸಭೆ ಚುನಾವಣೆ ಫಲಿತಾಂಶದ ನಂತರವೇ ಪ್ರಕ್ರಿಯೆಗೆ ಚಾಲನೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement